ಕಾಶ್ಮೀರ ಸಮಸ್ಯೆ ಮೋದಿ ಸರಕಾರದ ಘೋರ ವೈಫಲ್ಯ: ಕಾಂಗ್ರೆಸ್

Update: 2018-06-17 14:51 GMT

ಹೊಸದಿಲ್ಲಿ, ಜೂ.17: ಕಾಶ್ಮೀರ ಸಮಸ್ಯೆ ಕುರಿತು ಪ್ರಧಾನಿ ನರೇಂದ್ರ ಮೋದಿ ಸರಕಾರವನ್ನು ಟೀಕಿಸಿರುವ ಕಾಂಗ್ರೆಸ್ ಪಕ್ಷ, ಕೇಂದ್ರ ಸರಕಾರದ ಘೋರ ವೈಫಲ್ಯಗಳಲ್ಲಿ ಇದು ಒಂದಾಗಿದೆ . ಕಾಶ್ಮೀರದಲ್ಲಿ ಮಾನವಹಕ್ಕು ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿರುವ ವಿಶ್ವಸಂಸ್ಥೆಯ ನಿರಾಶಜನಕ ವರದಿಯನ್ನು ತಡೆಯಲೂ ಆಗದಿದ್ದ ಮೇಲೆ ಪ್ರಧಾನಿ ಮೋದಿಯವರ ನಿರಂತರ ವಿದೇಶ ಪ್ರವಾಸದಿಂದ ದೇಶಕ್ಕೆ ಆಗಿರುವ ಲಾಭವಾದರೂ ಏನು ಎಂದು ಪ್ರಶ್ನಿಸಿದೆ. ಕಾಶ್ಮೀರದಲ್ಲಿ ನೆಲೆಸಿರುವ ಪರಿಸ್ಥಿತಿ ಕುರಿತು ಕಳವಳ ವ್ಯಕ್ತಪಡಿಸಿದ ಕಾಂಗ್ರೆಸ್ ವಕ್ತಾರ ಪವನ್ ಖೇರ, ಅಮರನಾಥ್ ಯಾತ್ರೆಗೆ ತೆರಳುವ ಯಾತ್ರಾರ್ಥಿಗಳ ಸುರಕ್ಷತೆಗೆ ಸರಕಾರ ಕೈಗೊಂಡಿರುವ ಕ್ರಮಗಳನ್ನು ಬಹಿರಂಗಗೊಳಿಸುವಂತೆ ಸರಕಾರವನ್ನು ಒತ್ತಾಯಿಸಿದರು. ಯಾತ್ರಾರ್ಥಿಗಳಿಗೆ ರಕ್ಷಣೆ ಒದಗಿಸಲು ಸರಕಾರಕ್ಕೆ ಸಾಧ್ಯವಿದೆಯೇ ಎಂದವರು ಸುದ್ದಿಗೋಷ್ಟಿಯಲ್ಲಿ ಪ್ರಶ್ನಿಸಿದರು. ಕಾಶ್ಮೀರ ಸಮಸ್ಯೆಯ ಬಗ್ಗೆ ಚರ್ಚಿಸಲು ಸರ್ವಪಕ್ಷಗಳ ಸಭೆ ನಡೆಯಬೇಕೆಂದು ಕಳೆದ ನಾಲ್ಕು ವರ್ಷಗಳಿಂದ ಕಾಂಗ್ರೆಸ್ ಕಾಯುತ್ತಿದೆ ಎಂದ ಅವರು, ಬಿಜೆಪಿಯು ಕಳೆದ ನಾಲ್ಕು ವರ್ಷಗಳಲ್ಲಿ ಕಾಶ್ಮೀರವನ್ನು ಕೋಮು ರಾಜಕೀಯದ ಅಸಹ್ಯಕರ ಪ್ರಯೋಗಶಾಲೆಯನ್ನಾಗಿ ಪರಿವರ್ತಿಸಿದೆ. ಕಾಶ್ಮೀರ ಕಣಿವೆಯ ಪರಿಸ್ಥಿತಿ ಕೇಂದ್ರ ಸರಕಾರದ ಆಂತರಿಕ ನೀತಿಯ ವೈಫಲ್ಯದ ಜೊತೆಗೆ ವಿದೇಶಿ ನೀತಿಯ ವೈಫಲ್ಯವೂ ಆಗಿದೆ ಎಂದು ಆರೋಪಿಸಿದರು.

 ಕಾಶ್ಮೀರದ ಈಗಿನ ಪರಿಸ್ಥಿತಿ 1990ರಲ್ಲಿ ಇದ್ದ ಪರಿಸ್ಥಿತಿಗಿಂತಲೂ ಕೆಟ್ಟದಾಗಿದೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿರುವ ಕಾರಣ ಚುನಾವಣಾ ಆಯೋಗಕ್ಕೆ ಅನಂತ್‌ನಾಗ್ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆ ನಡೆಸಲು ಸಾಧ್ಯವಾಗಲಿಲ್ಲ . ಯುಪಿಎ ಸರಕಾರವಿದ್ದ ಸಂದರ್ಭ ಕಾಶ್ಮೀರದಲ್ಲಿ ನಡೆದ ಚುನಾವಣೆಯಲ್ಲಿ ಶೇ.71ರಷ್ಟು ಮತದಾನವಾಗಿದ್ದರೆ ಈಗಿನ ಸರಕಾರದಡಿ ನಡೆದ ಉಪಚುನಾವಣೆಯಲ್ಲಿ ಕೇವಲ ಶೇ.7ರಷ್ಟು ಮತದಾನವಾಗಿದೆ. ಇದು ಕಾಶ್ಮೀರದ ಈಗಿನ ಪರಿಸ್ಥಿತಿಗೆ ಹಿಡಿದಿರುವ ಕೈಗನ್ನಡಿಯಾಗಿದೆ ಎಂದರು.

ಕಳೆದ 27 ದಿನಗಳಲ್ಲಿ ಕಾಶ್ಮೀರದಲ್ಲಿ 57 ಪ್ರಮುಖ ದಾಳಿ ಪ್ರಕರಣ ವರದಿಯಾಗಿದೆ. ಇದೊಂದು ಪ್ರಾದೇಶಿಕ ಸಮಸ್ಯೆ ಎಂದು ವಿಶ್ವದ ರಾಷ್ಟ್ರಗಳು ವಿಶ್ಲೇಷಿಸಿದರೆ ಬಿಜೆಪಿ ಸರಕಾರ ಇದಕ್ಕೆ ಕೋಮು ಬಣ್ಣ ನೀಡಲು ಪ್ರಯತ್ನಿಸುತ್ತಿದೆ. ಕಥುವಾ ಸಾಮೂಹಿಕ ಅತ್ಯಾಚಾರ ಪ್ರಕರಣ ಇದಕ್ಕೊಂದು ಉದಾಹರಣೆಯಾಗಿದೆ. ಆಡಳಿತ ಪಕ್ಷದ ಸಚಿವರು ಈ ಪ್ರಕರಣವನ್ನು ರಾಜಕೀಯಗೊಳಿಸಿದರು ಎಂದು ಖೇರಾ ಹೇಳಿದರು.

ಕಾಶ್ಮೀರದ ಕುರಿತು ವಿಶ್ವಸಂಸ್ಥೆ ಪಕ್ಷಪಾತದ ವರದಿ ಪ್ರಕಟಿಸಲು ಅವಕಾಶ ಮಾಡಿಕೊಟ್ಟಿರುವುದು ಪ್ರಧಾನಿ ಮೋದಿ ನಡೆಸಿರುವ ಅಪರಾಧದ ಕೃತ್ಯವಾಗಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಇಂತಹ ವರದಿ ಬಹುಷಃ ಪ್ರಕಟಗೊಂಡಿಲ್ಲ. ನಿಮ್ಮಿಂದಾಗಿ ಭಾರತಕ್ಕೆ ಅವಮಾನವಾಗಿಲ್ಲವೇ ಮೋದೀಜಿ ಎಂದು ಪವನ್ ಖೇರಾ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News