ಹೃದಯದಲ್ಲಿ ರಂಧ್ರವಿರುವ ನಾಲ್ಕು ತಿಂಗಳ ಮಗುವನ್ನು ವೇಟಿಂಗ್ ಲಿಸ್ಟ್‌ನಲ್ಲಿಟ್ಟ ದಿಲ್ಲಿಯ ಏಮ್ಸ್ ಆಸ್ಪತ್ರೆ

Update: 2018-06-17 18:57 GMT

ಹೊಸದಿಲ್ಲಿ,ಜೂ.17: ದಿಲ್ಲಿಯ ಏಮ್ಸ್ ಆಸ್ಪತ್ರೆಯು ಹೃದಯದಲ್ಲಿ ರಂಧ್ರವನ್ನು ಹೊಂದಿದ್ದು, ತುರ್ತು ಶಸ್ತ್ರಚಿಕಿತ್ಸೆ ಅಗತ್ಯವಿರುವ ನಾಲ್ಕು ತಿಂಗಳ ಮಗುವನ್ನು ರೋಗಿಗಳ ವೇಟಿಂಗ್ ಲಿಸ್ಟ್‌ಗೆ ಸೇರಿಸಿದೆ. ಕಳೆದ ವಾರ ಉತ್ತರಾಖಂಡದ ಬಾಗೇಶ್ವರ ಜಿಲ್ಲೆಯ ನಿವಾಸಿ ರಾಮಕಿಶೋರ ತನ್ನ ಹೆಣ್ಣುಮಗುವನ್ನು ಆಸ್ಪತ್ರೆಗೆ ಕರೆತಂದಿದ್ದು, ಶಸ್ತ್ರಚಿಕಿತ್ಸೆಗಾಗಿ ಐದು ವರ್ಷಗಳ ಬಳಿಕ ಅಂದರೆ 2023ರಲ್ಲಿ ಮಗುವನ್ನು ಕರೆತರುವಂತೆ ವೈದ್ಯರು ಅವರಿಗೆ ಸೂಚಿಸಿದ್ದಾರೆ. ಹೃದಯ ಶಸ್ತ್ರಚಿಕಿತ್ಸೆಗಾಗಿ ಬಹಳಷ್ಟು ರೋಗಿಗಳು ಸರದಿಯಲ್ಲಿ ಕಾಯುತ್ತಿದ್ದಾರೆ ಎಂದು ಏಮ್ಸ್ ಹಿಂದೆ ಹೇಳಿತ್ತು. ದೇಶದಲ್ಲಿಯ ಇತರ ಆರು ಏಮ್ಸ್‌ಗಳಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ತಾನು ಬಡವನಾಗಿದ್ದು,ಖಾಸಗಿ ಆಸ್ಪತ್ರೆಯಲ್ಲಿ ಮಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸಲು ತನ್ನ ಬಳಿ ಹಣವಿಲ್ಲ. ತಾನೀಗ ಅಸಹಾಯಕನಾಗಿದ್ದೇನೆ. ತನ್ನ ಮಗಳನ್ನು ಉಳಿಸಿಕೊಳ್ಳಲು ಸಾಲ ಮಾಡಿಯಾದರೂ ತಾನು ಬೇರೆ ಆಸ್ಪತ್ರೆಗೆ ಹೋಗಬೇಕಾಗಿದೆ ಎಂದು ರಾಮಕಿಶನ್ ಸುದ್ದಿಗಾರರ ಬಳಿ ನೋವು ತೋಡಿಕೊಂಡರು.

ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು ಕಳೆದ ವರ್ಷ ಲೋಕಸಭೆಯಲ್ಲಿ ಮಾತನಾಡುತ್ತಿದ್ದಾಗ ದೇಶದಲ್ಲಿಯ ಏಮ್ಸ್ ಆಸ್ಪತ್ರೆಗಳಲ್ಲಿ ಕಂಡು ಬರುತ್ತಿರುವ ಜಡತೆಯನ್ನು ಮುಖ್ಯವಾಗಿ ಬೆಟ್ಟು ಮಾಡಿದ್ದರು. ಈಗಾಗಲೇ ಅಸ್ತಿತ್ವದಲ್ಲಿರುವ ಏಮ್ಸ್‌ಗಳು ಪೂರ್ಣ ಸಾಮರ್ಥ್ಯದಿಂದ ಕೆಲಸ ಮಾಡುತ್ತಿಲ್ಲ, ಮತ್ತೆ ಹೊಸದಾಗಿ 13 ಏಮ್ಸ್ ಆಸ್ಪತ್ರೆಗಳು ದೇಶದ ವಿವಿಧೆಡೆಗಳಲ್ಲಿ ತಲೆಯೆತ್ತಲಿವೆ. ಈ ಆಸ್ಪತ್ರೆಗಳಿಂದ ತಜ್ಞ ವೈದ್ಯಕೀಯ ಸೇವೆಯ ಅಗತ್ಯವುಳ್ಳವರಿಗೆ ಲಾಭವಾಗುತ್ತದೆ ಎಂದು ಸರಕಾರವು ಆಶಿಸಿತ್ತು, ಆದರೆ ಅದು ಆಗಿಲ್ಲ. ಅಗತ್ಯ ವೈದ್ಯರ ಕೊರತೆ ಮತ್ತು ಮೂಲಸೌಕರ್ಯ ಒದಗಿಸುವಲ್ಲಿ ವಿಳಂಬ ಇದಕ್ಕೆ ಕಾರಣಗಳಾಗಿವೆ. ಪೂರಕ ಸಿಬ್ಬಂದಿಗಳು ಮತ್ತು ಅಗತ್ಯ ಉಪಕರಣಗಳ ಕೊರತೆಯೂ ಈ ಆಸ್ಪತ್ರೆಗಳ ಕ್ಷಮತೆಯನ್ನು ಕುಂದಿಸಿವೆ ಎಂದು ಹೃಷಿಕೇಶದ ಏಮ್ಸ್‌ನ ಹಿರಿಯ ವೈದ್ಯರೋರ್ವರು ವಿಷಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News