ವಿವಿ ಪ್ಯಾಟ್ ಯಾವ ಪುರುಷಾರ್ಥಕ್ಕಾಗಿ...?

Update: 2018-06-18 11:33 GMT

ದಕ್ಷಿಣ ಆಫ್ರಿಕಾದ ಪುಟ್ಟ ದೇಶ ಬೋಟ್ಸ ವಾನಾ ತನ್ನ ದೇಶದಲ್ಲಿ ಚುನಾವಣೆ ನಡೆಸಲು ಭಾರತದಿಂದ ಮತಯಂತ್ರಗಳನ್ನು ಆಮದು ಮಾಡಿಕೊಂಡಿತು. ‘‘ಅಲ್ಲಿ ಕೂಡ ಪ್ರತಿಪಕ್ಷವು ಆಡಳಿತಾರೂಢ ಬೋಟ್ಸ್ಸವಾನಾ ಡೆಮೋಕ್ರೆಟಿಕ್ ಪಕ್ಷದ ಮೇಲೆ ಮತಯಂತ್ರ ತಿರುಚಿ ಗೆದ್ದಿರುವ ಆರೋಪ ಹೊರಿಸಿ ಕೋರ್ಟಿಗೆ ಹೋಗಿತ್ತು’’ ಅಲ್ಲಿನ ಕೋರ್ಟ್‌ನ ಆದೇಶದಂತೆ ಅಲ್ಲಿನ ಚುನಾವಣಾ ಆಯೋಗ ವಿವಿಪ್ಯಾಟ್‌ನಲ್ಲಿ ಬಿದ್ದಿರುವ ಮತ ಚೀಟಿ ಎಣಿಸಿದಾಗ ಆಘಾತಕಾರಿ ವಿಷಯವೊಂದು ಬೆಳಕಿಗೆ ಬಂತು ಅಲ್ಲಿ ಇವಿಎಮ್ ಮತ್ತು ವಿವಿಪ್ಯಾಟ್‌ನಲ್ಲಿ ಸಿಕ್ಕಿದ ಪ್ರತ್ಯೇಕ ಫಲಿತಾಂಶಗಳಲ್ಲಿ ಭಾರೀ ಅಂತರವಿತ್ತು. ‘‘ ವಿವಿಪ್ಯಾಟ್ ಎಣಿಸಿದಾಗ ಗೆದ್ದ ಪಕ್ಷ ಸೋತಿತ್ತು, ಮತ್ತು ಸೋತ ಪಕ್ಷ ಗೆದ್ದಿತ್ತು’’.

ಪ್ರಜಾಪ್ರಭುತ್ವದ ಉಸಿರು, ಜೀವನಾಡಿ ಚುನಾವಣೆ. ಚುನಾವಣೆಗಳು, ಚುನಾವಣಾ ಪ್ರಕ್ರಿಯೆಗಳು ಸಂಪೂರ್ಣವಾಗಿ ಪಾರದರ್ಶಕವೂ, ಎಷ್ಟು ಸಾಧ್ಯವೋ ಅಷ್ಟು ಪರಿಪೂರ್ಣವೂ ಆಗಿದ್ದಾಗ ಮಾತ್ರ ಒಂದು ಪ್ರಜಾಪ್ರಭುತ್ವ ನಿಜವಾದ ಅರ್ಥದಲ್ಲಿ ‘ಜನರಿಂದ, ಜನರಿಗೋಸ್ಕರ, ಜನರಿಗಾಗಿ’ ಇರುವ ಸರಕಾರದ ಆಡಳಿತವಾಗುತ್ತದೆ. ಇದಕ್ಕೆ ಬದಲಾಗಿ ಚುನಾವಣೆಯ ಮತದಾನ ಪ್ರಕ್ರಿಯೆಯೇ ದೋಷ ಪೂರ್ಣವಾದರೆ ಆಗ ಮತದಾರರ ಉದ್ದೇಶ ಈಡೇರಿದಂತಾಗುವುದಿಲ್ಲ. ಇದೀಗ ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆಗಳೆಲ್ಲ ಮುಗಿದು ರಾಜಕಾರಣಿಗಳು, ರಾಜಕೀಯ ಪಕ್ಷಗಳು ಪರಸ್ಪರ ದೋಷಾರೋಪ, ಶಾಬ್ದಿಕ ದಾಳಿ-ಪ್ರತಿದಾಳಿ ಮತ್ತು ಕನ್ನಡ ಭಾಷೆಯ ಬೈಗುಳದ ಭಂಡಾರವನ್ನು ಯಥಾಶಕ್ತಿ ಸೂರೆ ಮಾಡಿದ ಬಳಿಕ ಒಂದು ರೀತಿಯ ರಾಜಕೀಯ ಶಾಂತಿ ತಾತ್ಕಾಲಿಕವಾಗಿಯಾದರೂ ನೆಲೆಸಿದೆ. ಹೀಗಿರುವಾಗ ಮುಂದಿನ ಚುನಾವಣೆಗಳು ನಡೆಯುವ ಮೊದಲು ನಮ್ಮ ಆಧುನಿಕ ಮತದಾನ ಪ್ರಕ್ರಿಯೆಯ ಜೀವಾಳವಾಗಿರುವ ಮತಯಂತ್ರಗಳ ವಿಶ್ವಾಸಾರ್ಹತೆಯ ಬಗ್ಗೆ ಪ್ರಜ್ಞಾವಂತ ಭಾರತೀಯರು ಸ್ವಲ್ಪ ಚಿಂತಿಸುವ ಔದಾರ್ಯ ತೋರಬೇಕಾಗಿದೆ.

ಈ ನಿಟ್ಟಿನಲ್ಲಿ ಈಗಾಗಲೇ ಇಬ್ಬರು ಮಹನೀಯರು ನಾಗರಿಕರ ಗಮನ ಸೆಳೆದಿರುವ ಕೆಲವು ಅಂಶಗಳಿಂದ ನಾನು ಈ ಬರಹವನ್ನು ಆರಂಭಿಸುತ್ತೇನೆ. ಮೊದಲನೆಯದಾಗಿ 26 ಮೇ, 2018ರಂದು ಕನ್ನಡದ ಹಿರಿಯ ವಿಮರ್ಶಕ ಹಾಗೂ ಸಾಹಿತಿ, ಸಮಕಾಲಿನ ಭಾರತದ ಶ್ರೇಷ್ಠ ವಿದ್ವಾಂಸರಲೊಬ್ಬರಾದ ಸಿ.ಎನ್.ರಾಮಚಂದ್ರನ್ ಪ್ರಜಾವಾಣಿಯಲ್ಲಿ ಬರೆದಿರುವ ಒಂದು ಪತ್ರ. ಯಾವುದೇ ರಾಜಕೀಯ ಆಸೆ , ಆಕಾಂಕ್ಷೆಗಳನ್ನು ಹೊಂದಿರದ, ತನ್ನ ವಸ್ತುನಿಷ್ಠ ಚಿಂತನೆಗೆ ಹೆಸರಾದ ಇವರು, ವ್ಯಕ್ತಪಡಿಸಿರುವ ಗಂಭೀರ ಅಭಿಪ್ರಾಯಗಳ ಬಗ್ಗೆ ರಾಷ್ಟ್ರಮಟ್ಟದಲ್ಲಿ ಚರ್ಚೆ ನಡೆದಲ್ಲಿ ಅದು ನಮ್ಮ ಸದ್ಯದ ಮತದಾನದ ಪ್ರಕ್ರಿಯೆಯನ್ನು ನೂರು ಶೇಕಡಾ ವಿಶ್ವಾಸಾರ್ಹವಾಗಿಸಬಹುದೆಂಬ ಕಾರಣಕ್ಕಾಗಿ ಅವರ ಪತ್ರದ ಮುಖ್ಯ ಭಾಗಗಳನ್ನು ಇಲ್ಲಿ ಕೊಡುತ್ತಿದ್ದೇನೆ. ಪ್ರಜಾವಾಣಿ ಪತ್ರಿಕೆಯಲ್ಲಿ ಬಂದ ಚುನಾವಣಾ ವಿವರಗಳಲ್ಲಿ ಮುಖ್ಯವಾದ ಎರಡು ಅಂಶಗಳನ್ನು ಅವರು ಉಲ್ಲೇಖಿಸಿದ್ದಾರೆ; ‘ಮೊದಲನೆಯದ್ದು ಹೆಬ್ಬಾಳ ಕ್ಷೇತ್ರದಮತಗಟ್ಟೆ 1582ರಲ್ಲಿ ನಡೆದ ಘಟನೆ. ಅದರಲ್ಲಿ ಮತದಾರರು ಒಂದು ಪಕ್ಷದ ಅಭ್ಯರ್ಥಿಗೆ ಮತ ಹಾಕಿದಾಗ ‘ವಿವಿ ಪ್ಯಾಟ್’ನಲ್ಲಿ ಬೇರೊಂದು ಪಕ್ಷದ ಅಭ್ಯರ್ಥಿಯ ಚಿತ್ರ ಬರುತ್ತಿತ್ತು. ಮತದಾರರು ಈ ಅಂಶವನ್ನು ಮತಗಟ್ಟೆ ಅಧಿಕಾರಿಗಳ ಗಮನಕ್ಕೆ ತಂದಾದ ಅಧಿಕಾರಿಗಳೇ ಖುದ್ದಾಗಿ ಪರಿಶೀಲಿಸಿದಾಗ ಮತಯಂತ್ರದಲ್ಲಿ ಲೋಪವಿದ್ದುದು ಖಚಿತವಾಯಿತು. ಬಳಿಕ ಮತದಾನ ಪ್ರಕ್ರಿಯೆಯನ್ನು ತಾತ್ಕಾಲಿಕ ಸ್ಥಗಿತಗೊಳಿಸಿ, ತಂತ್ರಜ್ಞರನ್ನು ಕರೆಯಿಸಿ ಮತಯಂತ್ರವನ್ನು ಸರಿಪಡಿಸಿದರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಆ ‘ದೋಷ ಪೂರಿತ’ ಯಂತ್ರದಲ್ಲಿ ಆಗುತ್ತಿದ್ದ ತಪ್ಪಿನ ಸ್ವರೂಪ. ‘ಚಲಾಯಿಸಿದ ಪ್ರತೀ ಐದು ಮತಗಳಲ್ಲಿ ಎರಡು ಮತಗಳು ಬೇರೆಯವರಿಗೆ ಚಲಾವಣೆಯಾಗುತ್ತಿದ್ದವು’ ಹೆಚ್ಚಿನ ಮತಗಳು ಬಿಲ್ಲು ಬಾಣದ ಗುರುತಿಗೇ ಹೋಗುತ್ತಿದ್ದವು. ಎಂದರೆ ಈ ದೋಷದಲ್ಲಿ ಒಂದು ಕ್ರಮವಿದೆ! ಪ್ರತಿ ಐದು ಮತಗಳಲ್ಲಿ ಎರಡು ಮತಗಳು ಬೇರೊಂದು ಪಕ್ಷಕ್ಕೆ ಹೋಗುತ್ತಿದ್ದವು ಎಂದಾದರೆ ಈ ದೋಷವು ಯಾರದೋ ಹಸ್ತಕ್ಷೇಪದಿಂದಾಗಿರಬಹುದು ಎಂಬ ಸಂದೇಹವು ಸಹಜವಾಗಿ ಏಳುತ್ತದೆ. ಇದು ಯಾಂತ್ರಿಕ ದೋಷ ಎಂದು ಭಾವಿಸಿದರೂ ಯಾವ ದೋಷ ಪೂರಿತ ಸ್ಥಿತಿಯಲ್ಲಿ ಯಂತ್ರಗಳು ಹೀಗೆ ಮಾಡುತ್ತವೆ ಎಂಬುದನ್ನು ಉನ್ನತ ತಂತ್ರಜ್ಞರು ತಿಳಿದುಕೊಳ್ಳುವುದು ಕಷ್ಟವೇನಲ್ಲ. ಅಂತಹ ಸ್ಥಿತಿಯಲ್ಲಿ ಇರುವ ಶೇ.20-30 ಮತಯಂತ್ರಗಳನ್ನು ಆಯಕಟ್ಟಿನ ಸೂಕ್ಷ್ಮ ಮತಗಟ್ಟೆಗಳಲ್ಲಿ ಇಟ್ಟರೆ ಸಾಕು ,ಒಟ್ಟಾರೆ ಮತದಾನದ ಫಲಿತಾಂಶ ಮತದಾರರ ಉದ್ದೇಶಕ್ಕೆ ವಿರುದ್ಧವಾಗುತ್ತದೆ.

 ‘ಅಯ್ಯೋ ! ಇಂತಹ ಹಸ್ತಕ್ಷೇಪವನ್ನು ತಪ್ಪಿಸುವುದಕ್ಕಾಗಿಯೇ ಸುಪ್ರೀಂ ಕೋರ್ಟ್ ವಿವಿ ಪ್ಯಾಟ್ ಕಡ್ಡಾಯ ಮಾಡಿರುವುದು, ಆದುದರಿಂದ ಈ ಚರ್ಚೆ ಅನವಶ್ಯಕ’ ಎಂಬ ಆಕ್ಷೇಪಕ್ಕೆ ಉತ್ತರ ಇದೇ ಪತ್ರಿಕೆಯಲ್ಲಿ ಬಂದ ಎರಡನೇ ಘಟನೆಯಲ್ಲಿದೆ ಉತ್ತರ. ಚೇತನ ಕೃಷ್ಣ ಎಂಬವರು ಮತದಾನ ಮಾಡಿದಾಗ ವಿವಿ ಪ್ಯಾಟ್‌ನಲ್ಲಿ ಬೇರೊಬ್ಬ ಅಭ್ಯರ್ಥಿಯ ಚಿಹ್ನೆ ಕಾಣಿಸಿತು. ಅವರು ಅಧಿಕಾರಿಗಳ ಗಮನಕ್ಕೆ ಈ ಅಂಶವನ್ನು ತಂದಾಗ, ‘ನಿಮಗೆ ಇನ್ನೊಂದು ಮತ ಹಾಕಲು ಅವಕಾಶ ಕೊಡಲಾಗುತ್ತದೆ. ಆದರೆ ನೀವು ಯಾರಿಗೆ ಮತ ಹಾಕುತ್ತೀರಿ ಎಂದು ಹೇಳಿ ನಮ್ಮ ಸಮ್ಮುಖದಲ್ಲೇ ಗುಂಡಿ ಒತ್ತಬೇಕು. ಒಂದು ವೇಳೆ ನೀವು ಹಾಕಿದ ಅಭ್ಯರ್ಥಿಯ ಚಿಹ್ನೆಯೇ ವಿವಿಪ್ಯಾಟ್‌ನಲ್ಲಿ ಕಾಣಿಸಿಕೊಂಡರೆ ನೀವು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ’ ಎಂದು ಅಧಿಕಾರಿಗಳು ಅವರನ್ನು ಎಚ್ಚರಿಸಿದರು. ಶಿಕ್ಷೆಯ ಭಯವಿದ್ದರೂ ಧೈರ್ಯವಾಗಿ ಚೇತನ ಕೃಷ್ಣ ಅಧಿಕಾರಿಗಳು ಹೇಳಿದಂತೆಯೇ ಮಾಡಿದಾಗ ಅವರ ಮತವು ಬೇರೊಬ್ಬರಿಗೆ ಹೋಯಿತು ಮತ್ತು ಅಧಿಕಾರಿಗಳು ಯಂತ್ರದಲ್ಲಿ ದೋಷವಿದೆ ಎಂದು ಒಪ್ಪಿಕೊಂಡರು. ಮುಂದೆ ಪ್ರೊ.ಸಿ.ಎನ್ ರಾಮಚಂದ್ರನ್ ಎತ್ತುವ ಪ್ರಶ್ನೆಗಳಿವು : ‘‘ಎಷ್ಟು ಜನ ಮತದಾರರಿಗೆ ಅಧಿಕಾರಿಗಳ ಈ ಸವಾಲನ್ನು ಎದುರಿಸುವ ಧೈರ್ಯವಿರುತ್ತದೆ? ಹಾಗೆ ನೋಡಿದರೆ, ಎಷ್ಟು ಮತದಾರರು ವಿವಿಪ್ಯಾಟ್‌ನ್ನು ಗಮನಿಸಿ, ತಮ್ಮ ಮತ ಸರಿಯಾಗಿ ಚಲಾವಣೆಯಾಗಿದೆಯೇ ಎಂದು ಗಮನಿಸುತ್ತಾರೆ? ಸದ್ಯ ಮತ ಹಾಕಿದರೆ ಸಾಕು ಇಲ್ಲದ ಉಸಾಬರಿ ನಮಗೇಕೇ ಎಂದೇ ಹೆಚ್ಚಿನ ಮತದಾರರು ಗುಂಡಿಯನ್ನು ಒತ್ತಿ ಕೂಡಲೇ ಮತ ಗಟ್ಟೆಯಿಂದ ಹೊರಬರುತ್ತಾರೆ.(ನಾನು ಮತವನ್ನು ಚಲಾಯಿಸಿದ್ದೇನೆ. ಆದರೆ,ನನ್ನ ಮುಂದೇನಾದರೂ ಚೇತನ ಕೃಷ್ಣ ಅವರು ಎದುರಿಸಿದ ಸವಾಲು ಬಂದಿದ್ದರೇ ಅವರಷ್ಟು ಧೈರ್ಯದಿಂದ ಮುಂದುವರಿಯುತ್ತಿದ್ದೆನೇ? - ಪ್ರಾಯಶ: ಇಲ್ಲ) ಆದರೆ ಶಿಕ್ಷೆಯ ಭೀತಿ ಇಲ್ಲದಿದ್ದರೆ ಕಿಡಿಗೇಡಿಗಳು ವಿನಾ ಕಾರಣ ಆಕ್ಷೇಪ ಎತ್ತಿ ಮತದಾನ ಪ್ರಕ್ರಿಯೆಯನ್ನೇ ನಿಲ್ಲಿಸಬಹುದು. ಈ ಇಬ್ಬಗೆಯ ಸಾಧ್ಯತೆಗಳನ್ನು ಸರಿಪಡಿಸುವುದು ಹೇಗೆ?
ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರವೆಂದರೆ ವಿದ್ಯುನ್ಮಾನ ಯಂತ್ರಗಳನ್ನು ದೂರವಿಟ್ಟು ಹಿಂದಿನಂತೆ ಬ್ಯಾಲೆಟ್ ಪೇಪರ್ ಪದ್ಧತಿಯನ್ನೇ ಮತ್ತೆ ಚಲಾವಣೆಗೆ ತರುವುದು. ನಿಜ, ಆ ಪದ್ಧತಿಯಲ್ಲಿ ಮತ ಎಣಿಕೆ ತುಂಬಾ ಸಮಯವನ್ನು (ದಿನಗಳನ್ನು) ತೆಗೆದುಕೊಳ್ಳುತ್ತದೆ ಮತ್ತು ಫಲಿತಾಂಶ ಘೋಷಣೆ ಬಹಳ ತಡವಾಗುತ್ತದೆ. ಆದರೂ, ಪ್ರಾಯ: ಆ ‘ಹಿಂದುಳಿದ’ ಪದ್ಧತಿಯೇ ಚುನಾವಣೆಗಳನ್ನು ಹೆಚ್ಚು ನ್ಯಾಯ ಸಮ್ಮತವಾಗಿಸುತ್ತದೆ ‘‘ಎಂದು ಕಾಣುತ್ತದೆ’’

ಇಲ್ಲಿ ನಾವು ಗಮನಿಸಬೇಕಾದ ಒಂದು ಸಂಗತಿ ಇದೆ ‘‘ನೀವು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ’’ ಎಂದು ಅಧಿಕಾರಿಗಳು ಎಚ್ಚರಿಸಿದ ಮೇಲೆ ಮತದಾರ ಹಾಕಿದ ಮತವು ಬೇರೊಬ್ಬರಿಗೆ ಹೋಯಿತು. ಅಂದರೆ ಚುನಾವಣಾ ಆಯೋಗದ ನಿಯಮದ ತರ್ಕದ ಪ್ರಕಾರ ಯಂತ್ರದಲ್ಲಿ ದೋಷವಿದೆ ಎಂದು ಒಪ್ಪಿಕೊಂಡ ಅಧಿಕಾರಿಗಳಿಗೆ ( ತಪ್ಪು ಮಾಡಿದವರಿಗೆ) ಶಿಕ್ಷೆಯಾಗಬೇಕಲ್ಲವೇ? ತಪ್ಪು ಮತದಾರನದ್ದಾದರೆ ತನಿಗೆ ಮಾತ್ರ ಶಿಕ್ಷೆ ತಪ್ಪು ಅಧಿಕಾರಿಗಳದ್ದು ಅಥವಾ ಮತಯಂತ್ರ ದೋಷಕ್ಕೆ ಕಾರಣವಾದರೆ ಅವರು ಶಿಕ್ಷೆಗೆ ಗುರಿಯಾಗುವುದು ಬೇಡವೇ? ಬೇಡ ಎಂದಾದರೆ ಇದ್ಯಾವ ರೀತಿಯ ಅರಣ್ಯ ನ್ಯಾಯ? ಮತಯಂತ್ರಗಳಲ್ಲಿ ದೋಷಗಳಿರಲು ಸಾಧ್ಯವೇ ಇಲ್ಲ ಎಂದು ಚುನಾವಣಾ ಆಯೋಗ ಘೋಷಿಸಿದ ಒಂದು ವರ್ಷದ ನಂತರ ನಮ್ಮ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣಾನೀತಿಯ ಮತದಾನದ ವೇಳೆ ನಡೆದ ಘಟನೆಗಳು ಮೇಲಿನವು ಎಂಬುದೂ ಗಮನಾರ್ಹ ಯಾಕೆಂದರೆ 16 ಮಾರ್ಚ್, 2017ರಂದು ಬಿಡುಗಡೆ ಮಾಡಿದ ತನ್ನ ಪತ್ರಿಕಾ ಹೇಳಿಕೆಯಲ್ಲಿ ಚುನಾವಣಾ ಆಯೋಗ ಹೀಗೆ ಹೇಳಿತ್ತು ‘ಗೋವಾ, ಮಣಿಪುರ, ಪಂಜಾಬ್, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಇತ್ತೀಚೆಗೆ ರಾಜ್ಯ ವಿಧಾನ ಸಭೆಗಳಿಗೆ ನಡೆದ ಚುನಾವಣೆಗಳ ಫಲಿತಾಂಶ ಪ್ರಕಟವಾದ ಬಳಿಕ ಕೆಲವು ರಾಜಕೀಯ ಪಕ್ಷಗಳು, ಚುನಾವಣೆಯ ವೇಳೆ ಮತಯಂತ್ರಗಳನ್ನು ತಿರುಚಲಾಗಿದೆ ಟ್ಯಾಂಪರ್ ಮಾಡಲಾಗಿದೆ.) ಎಂದು ಹೇಳಿ ಮತಯಂತ್ರಗಳ ವಿಶ್ವಾಸಾರ್ಹತೆಯ ವಿರುದ್ಧವಾಗಿ ಧ್ವನಿ ಎತ್ತಿವೆೆ. ಯಾವುದೇ ನಿರ್ದಿಷ್ಟ ಆಪಾದನೆ ಇಲ್ಲದೆ ಬಿ ಎಸ್‌ಪಿಯ ರಾಷ್ಟ್ರೀಯ ಮಹಾಕಾರ್ಯದರ್ಶಿಯವರಿಂದ 11-03-2017ರಂದು ಒಂದು ಅಹವಾಲು ಬಂದಿದೆ. ಆ ದೂರನ್ನು ತಳ್ಳಿ ಹಾಕಿ 11-03-2017ರಂದೇ ಭಾರತದ ಚುನಾವಣಾ ಆಯೋಗವು ಬಿಎಸ್‌ಪಿಗೆ ವಿವರವಾದ ಉತ್ತರ ನೀಡಿದೆ. ಈ ಹಿಂದೆ ಕೂಡ ಇಸಿಐ- ಇವಿಎಮ್ (ಮತಯಂತ್ರ)ದಲ್ಲಿ ಹಸ್ತಕ್ಷೇಪವಾಗಿದೆ ಎಂದು ಆಪಾದಿಸಿ ಎಚ್.ಸಿ./ಎಸ್ಪಿಯ ಮುಂದೆ ಕೂಡ ಅಂತಹ (ಆತಂಕಗಳನ್ನು) ಅಪಾದನೆಗಳನ್ನು ಎತ್ತಲಾಗಿತ್ತು. ಈ ಆಪಾದನೆಗಳನ್ನು ತಳ್ಳಿ ಹಾಕಲಾಗಿದೆ. ಸೂಕ್ತವಾದ ಪರಿಣಾಮಕಾರಿ ತಾಂತ್ರಿಕ ಹಾಗೂ ಆಡಳಿತಾತ್ಮಕ ಸುರಕ್ಷಾ ವ್ಯವಸ್ಥೆಗಳನ್ನು ಹೊಂದಿರುವ ಇವಿಯಂಗಳು ತಿರುಚಲು ಸಾಧ್ಯವಾಗಿವೆ ಮತ್ತು ಚುನಾವಣಾ ಪ್ರಕ್ರಿಯೆಯ ಪ್ರಮಾಣಿಕತೆಯನ್ನು ಮತ್ತು ನ್ಯಾಯಪರತೆಯನ್ನು ಸಂರಕ್ಷಿಸಲಾಗಿದೆ ಎಂದು ಚುನಾವಣಾ ಆಯೋಗವು ಅತ್ಯಂತ ಸ್ಪಷ್ಟವಾದ ಮಾತುಗಳಲ್ಲಿ ಮತ್ತೊಮ್ಮೆ ಸಾರಿ ಹೇಳುತ್ತದೆ’?
ಈಗ, ಕಳೆದ ತಿಂಗಳು ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯ ವೇಳೆ ಸಂಭವಿಸಿದ, ಮೇಲೆ ಉಲ್ಲೇಖಿಸಲಾಗಿರುವ ಎರಡು ಘಟನೆಗಳ ಬಳಿಕವೂ ಚುನಾವಣಾ ಆಯೋಗದ ಈ ಘೋಷಣೆ ಸ್ವೀಕಾರಾರ್ಹವೇ? ವಿಶ್ವಾಸಾರ್ಹವೇ?
ಆರ್.ಬಿ. ಶೇಣವರವರು ಇನ್ನೊಂದು ಪ್ರಸಂಗವನ್ನು ಉಲ್ಲೇಖಿಸಿದ್ದಾರೆ: ದಕ್ಷಿಣ ಆಫ್ರಿಕಾದ ಪುಟ್ಟ ದೇಶ ಬೋಟ್ಸ ವಾನಾ ತನ್ನ ದೇಶದಲ್ಲಿ ಚುನಾವಣೆ ನಡೆಸಲು ಭಾರತದಿಂದ ಮತಯಂತ್ರಗಳನ್ನು ಆಮದು ಮಾಡಿಕೊಂಡಿತು. ‘‘ಅಲ್ಲಿ ಕೂಡ ಪ್ರತಿಪಕ್ಷವು ಆಡಳಿತಾರೂಢ ಬೋಟ್ಸ್ಸವಾನಾ ಡೆಮೋಕ್ರೆಟಿಕ್ ಪಕ್ಷದ ಮೇಲೆ ಮತಯಂತ್ರ ತಿರುಚಿ ಗೆದ್ದಿರುವ ಆರೋಪ ಹೊರಿಸಿ ಕೋರ್ಟಿಗೆ ಹೋಗಿತ್ತು’’ ಅಲ್ಲಿನ ಕೋರ್ಟ್‌ನ ಆದೇಶದಂತೆ ಅಲ್ಲಿನ ಚುನಾವಣಾ ಆಯೋಗ ವಿವಿಪ್ಯಾಟ್‌ನಲ್ಲಿ ಬಿದ್ದಿರುವ ಮತ ಚೀಟಿ ಎಣಿಸಿದಾಗ ಆಘಾತಕಾರಿ ವಿಷಯವೊಂದು ಬೆಳಕಿಗೆ ಬಂತು ಅಲ್ಲಿ ಇವಿಎಮ್ ಮತ್ತು ವಿವಿಪ್ಯಾಟ್‌ನಲ್ಲಿ ಸಿಕ್ಕಿದ ಪ್ರತ್ಯೇಕ ಫಲಿತಾಂಶಗಳಲ್ಲಿ ಭಾರೀ ಅಂತರವಿತ್ತು. ‘‘ ವಿವಿಪ್ಯಾಟ್ ಎಣಿಸಿದಾಗ ಗೆದ್ದ ಪಕ್ಷ ಸೋತಿತ್ತು, ಮತ್ತು ಸೋತ ಪಕ್ಷ ಗೆದ್ದಿತ್ತು’’. ಇದು ಭಾರತವೇ ವಿದೇಶೀ ರಾಷ್ಟ್ರವೊಂದಕ್ಕೆ ಪೂರೈಸಿದ ಇವಿಎಮ್ ಮತ್ತು ವಿವಿಪ್ಯಾಟ್‌ಗಳ ಮಹಿಮೆ. ಈಗ ಅಲ್ಲಿಯ ಚುನಾವಣಾ ಆಯೋಗ ಭಾರತದ ಚುನಾವಣಾ ಆಯೋಗದ ತಜ್ಞರ ಮೊರೆ ಹೋಗಿದ್ದು ಇವಿಎಮ್ ಕಾರ್ಯಕ್ಷಮತೆಯನ್ನು ಬೋಟ್ಸವಾನಾದ ಕೋರ್ಟ್ ಎದುರು ಸಾಬೀತು ಪಡಿಸಲು ತಿಳಿಸಿದೆ. ಇಷ್ಟೇಲ್ಲ ಆದರೂ ಭಾರತದಲ್ಲಿ ಮಾತ್ರ ನಮ್ಮ ಚುನಾವಣಾ ಆಯೋಗ ಇವಿಎಮ್‌ನಲ್ಲಿ ಭಾರೀ ಅನ್ಯಾಯವಾಗಿದೆ ಎಂದು ಶಂಕೆ ವ್ಯಕ್ತಪಡಿಸಿರುವ ಮಂಗಳೂರಿನಲ್ಲಿ ಮಾತ್ರ ವಿವಿಪ್ಯಾಟ್ ಮತಚೀಟಿ ಎಣಿಸಲು ಸಹಕಾರ ಕೊಡುತ್ತಿಲ್ಲ ಎಂಬುದೇ ದೊಡ್ಡ ವಿಷರ್ಯಾಸ.
 ಈ ಎಲ್ಲ ಅಂಶಗಳನ್ನು ಗಮನಿಸುವಾಗ ಏಳುವ ತುಂಬ ಮುಖ್ಯವಾದ ಒಂದು ಪ್ರಶ್ನೆ : ವಿವಿಪ್ಯಾಟ್‌ನಲ್ಲಿ ಬಿದ್ದಿರುವ ಮತ ಚೀಟಿಗಳು ಮತ್ತು ಇವಿಎಮ್ ನೀಡುವ ಒಟ್ಟು ಮತಗಳ ಸಂಖ್ಯೆ ಒಂದಕ್ಕೊಂದು ಪರಸ್ಪರ ತಾಳೆಯಾಗದ ಹೊರತು ಮತ ಎಣಿಕೆ ವಿಶ್ವಾಸಾರ್ಹವಾದೀತೇ? ಖಂಡಿತ ಆಗಲಾರದು. ಅಂದ ಮೇಲೆ ಮತೆಣಿಕೆಯ ಸಂದಭದಲ್ಲಿ ಓರ್ವ ಚುನಾವಣಾ ಅಭ್ಯರ್ಥಿ ಅಥವಾ ಸಾರ್ವಜನಿಕ ಹಿತಾಸಕ್ತಿಯ ಒಂದು ಸಂಘಟನೆಯ ಪ್ರತಿನಿಧಿ, ವಿವಿಪ್ಯಾಟ್ ಮತಚೀಟಿ ಎಣಿಸಬೇಕೆಂಬ ಬೇಡಿಕೆ ಇಟ್ಟಲ್ಲಿ ಅದನ್ನು ನಿರಾಕರಿಸುವುದು ಸಂವಿಧಾನಾತ್ಮಕವಾಗಿ ಎಷ್ಟು ಸರಿ? ವಿವಿಪ್ಯಾಟ್ ಮತಚೀಟಿ ಎಣಿಸುವುದೇ ಇಲ್ಲವೆಂದಾದಲ್ಲಿ ಮತಯಂತ್ರದಲ್ಲಿ ಅದನ್ನು ಅಳವಡಿಸಿರುವುದು ಯಾವ ಉದ್ದೇಶಕ್ಕಾಗಿ? ಯಾವ ಪುರುಷಾರ್ಥಕ್ಕಾಗಿ?
ಮುಂದಿನ ಚುನಾವಣೆಗಳು ನಡೆಯುವ ಮೊದಲಾದರೂ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ದೊರಕುವುದು ದೇಶದ ಪ್ರಜಾಪ್ರಭುತ್ವದ ಆರೋಗ್ಯ ಮತ್ತು ಆಯುಷ್ಯದ ದೃಷ್ಟಿಯಿಂದ ಒಳ್ಳೆಯದು ಮರೆತು ಎಲ್ಲಾ ರಾಜಕೀಯ ಪಕ್ಷಗಳ ಹಿತಾಸಕ್ತಿಗಳ ದೃಷ್ಟಿಯಿಂದಲೂ ಅನಿವಾರ್ಯ.

Writer - ಡಾ.ಬಿ.ಭಾಸ್ಕರ್ ರಾವ್

contributor

Editor - ಡಾ.ಬಿ.ಭಾಸ್ಕರ್ ರಾವ್

contributor

Similar News

ಜಗದಗಲ
ಜಗ ದಗಲ