ದನ ಮಾರಿದವನ ಮೇಲೂ ಕೊಲೆ ಪ್ರಕರಣ ದಾಖಲಾಗಲಿ

Update: 2018-06-18 04:21 GMT

ಉಡುಪಿಯಲ್ಲಿ ನಡೆದ ಹುಸೇನಬ್ಬ ನಿಗೂಢ ಸಾವಿನ ಪ್ರಕರಣ ಇದೀಗ ಇನ್ನೊಂದು ತಿರುವನ್ನು ಪಡೆದುಕೊಂಡಿದೆ. ಮರಣೋತ್ತರ ಪರೀಕ್ಷೆ ವರದಿಯಲ್ಲಿ, ತಲೆಗೆ ಹೊಡೆದು ದನದ ವ್ಯಾಪಾರಿಯನ್ನು ಕೊಲೆಗೈದಿರುವುದು ಬಹಿರಂಗವಾಗಿದೆ. ತಲೆಗೆ ಹೊಡೆದು ಕೊಂದವರು ಯಾರು? ಪೊಲೀಸರೋ, ಸಂಘಪರಿವಾರ ಕಾರ್ಯಕರ್ತರೋ ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾಗಿದೆ. ಆರಂಭದಲ್ಲಿ ಹುಸೇನಬ್ಬ ಅವರ ಮೃತದೇಹ ಹಾಡಿಯೊಂದರಲ್ಲಿ ಪತ್ತೆಯಾಗಿತ್ತು. ‘ಸಂಘಪರಿವಾರ ಕಾರ್ಯಕರ್ತರು ದನ ಸಾಗಾಟ ಮಾಡುವ ವಾಹನಕ್ಕೆ ದಾಳಿ ಮಾಡಿದಾಗ ಹುಸೇನಬ್ಬ ಪರಾರಿಯಾಗಿದ್ದರು. ಬಳಿಕ ಹೃದಯಾಘಾತದಿಂದ ಮೃತಪಟ್ಟಿರಬೇಕು’ ಎಂದು ಆರಂಭದಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಆದರೆ ಸಾರ್ವಜನಿಕರ ಒತ್ತಡ ತೀವ್ರವಾದಂತೆ, ಇಡೀ ಪ್ರಕರಣವನ್ನು ಮರುತನಿಖೆಗೆ ಒಳಪಡಿಸಲಾಯಿತು. ಆಗ, ಹುಸೇನಬ್ಬ ಅವರ ಸಾವಿನಲ್ಲಿ ಪೊಲೀಸರ ಕೈವಾಡವಿರುವುದು ಪತ್ತೆಯಾಯಿತು. ಪೊಲೀಸರ ಸಮ್ಮುಖದಲ್ಲೇ ದುಷ್ಕರ್ಮಿಗಳು ಹುಸೇನಬ್ಬರಿಗೆ ಮಾರಣಾಂತಿಕವಾಗಿ ಥಳಿಸಿದ್ದಾರೆ. ಬಳಿಕ ಅವರನ್ನು ಪೊಲೀಸ್ ಜೀಪಿಗೆ ಹಾಕಿದ್ದಾರೆ.

ಪೊಲೀಸರು ಠಾಣೆಗೆ ಕರೆದೊಯ್ದು ನೋಡುವಾಗ, ಹುಸೇನಬ್ಬ ಮೃತಪಟ್ಟಿದ್ದರು. ಬಳಿಕ ಸಂಘಪರಿವಾರ ಕಾರ್ಯಕರ್ತರ ಮೂಲಕ ಪೊಲೀಸರು ಮೃತ ದೇಹವನ್ನು ಹಾಡಿಗೆ ಎಸೆದು, ಹೃದಯಾಘಾತದ ಕತೆ ಕಟ್ಟಿದ್ದಾರೆ ಎನ್ನುವುದು ತನಿಖೆಯಿಂದ ಬಹಿರಂಗವಾಗಿದೆ. ಆದರೆ ಹಲ್ಲೆಯಿಂದ ಮೃತರಾಗಿದ್ದರೋ, ಹೃದಯಾಘಾತದಿಂದ ಮೃತರಾಗಿದ್ದರೋ ಎನ್ನುವುದನ್ನು ಮರಣೋತ್ತರ ವರದಿಯೇ ಹೇಳಬೇಕಾಗಿತ್ತು. ಇದೀಗ ಮರಣೋತ್ತರ ವರದಿಯಲ್ಲಿ ತಲೆಗೆ ಹೊಡೆದು ಹುಸೇನಬ್ಬರನ್ನು ಕೊಲ್ಲಲಾಗಿದೆ ಎನ್ನುವುದು ಬಹಿರಂಗವಾಗಿದೆ. ತಲೆಗೆ ಹೊಡೆದವರು ಸಂಘಪರಿವಾರದ ಕಾರ್ಯಕರ್ತರೋ, ಅಥವಾ ಠಾಣೆಯಲ್ಲಿ ಅವರ ಮೇಲೆ ಪೊಲೀಸರೂ ಹಲ್ಲೆ ನಡೆಸಿದ್ದಾರೆಯೇ ಎನ್ನುವುದು ಗೊತ್ತಾಗಬೇಕಾಗಿದೆ. ಒಟ್ಟಿನಲ್ಲಿ ಕೊಲೆಯಲ್ಲಿ ಪೊಲೀಸರ ಪಾಲು ಖಂಡಿತಾ ಇದೆ. ಇಲ್ಲವಾದರೆ ಮೃತದೇಹವನ್ನು ಕದ್ದು ಮುಚ್ಚಿ ಹಾಡಿಯಲ್ಲಿ ಎಸೆಯುವ ಅಗತ್ಯ ಪೊಲೀಸರಿಗೇನಿತ್ತು? ತಮ್ಮ ಸಹೋದ್ಯೋಗಿಗಳೇ ಪ್ರಕರಣದಲ್ಲಿ ಭಾಗಿಯಾಗಿದ್ದರೂ ಅವರನ್ನು ರಕ್ಷಿಸದೆ, ಆರೋಪಿಗಳನ್ನು ಬಂಧಿಸಲು ಯಶಸ್ವಿಯಾದ ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳನ್ನು ಈ ಸಂದರ್ಭದಲ್ಲಿ ಅಭಿನಂದಿಸಬೇಕಾಗಿದೆ.

ಇದೇ ಹೊತ್ತಿನಲ್ಲಿ, ಪ್ರಕರಣವನ್ನು ಸರಕಾರ ಸಿಐಡಿಗೆ ಒಪ್ಪಿಸಿದೆ. ಪೊಲೀಸರೂ ಈ ಕೊಲೆ ಪ್ರಕರಣದಲ್ಲಿ ಶಾಮೀಲಾಗಿದ್ದುದರಿಂದ ಇದನ್ನು ಪೊಲೀಸೇತರ ಸಂಸ್ಥೆ ತನಿಖೆ ನಡೆಸುವುದು ಅತ್ಯಗತ್ಯ. ಆದರೆ ಪೊಲೀಸ್ ತನಿಖೆಯಲ್ಲಿ ಬಹುತೇಕ ಸತ್ಯ ಹೊರ ಬಿದ್ದಿದೆ ಮತ್ತು ಆರೋಪಿಗಳ ಬಂಧನವೂ ಆಗಿದೆ. ಹೀಗಿರುವಾಗ, ಮತ್ತೊಂದು ಸಿಐಡಿ ತನಿಖೆಯ ಅಗತ್ಯವಿದೆಯೇ? ಇಂತಹದೊಂದು ಪ್ರಶ್ನೆ ಹುಟ್ಟಲು ಕಾರಣವಿದೆ. ಆದಿ ಉಡುಪಿ ಬೆತ್ತಲೆ ಪ್ರಕರಣದಲ್ಲಿ ಸಿಐಡಿ ಪೊಲೀಸರು ತೋರಿಸಿರುವ ಬೇಜವಾಬ್ದಾರಿ, ಪಕ್ಷಪಾತ ಅಂತಿಮವಾಗಿ ದುಷ್ಕರ್ಮಿಗಳು ನಿರಪರಾಧಿಗಳಾಗಿ ಬಿಡುಗಡೆಯಾಗಲು ಸಹಾಯವಾಯಿತು. ಆದಿ ಉಡುಪಿ ಬೆತ್ತಲೆ ಪ್ರಕರಣದಲ್ಲಿ ಯಾರೆಲ್ಲ ಭಾಗವಹಿಸಿದ್ದರು ಎನ್ನುವುದು ಜಗಜ್ಜಾಹೀರಾಗಿದ್ದರೂ ಸಿಐಡಿ ಪೊಲೀಸರಿಗೆ ಸರಿಯಾದ ಸಾಕ್ಷಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಒದಗಿಸಲು ಸಾಧ್ಯವಾಗಲಿಲ್ಲ. ವಿಪರ್ಯಾಸವೆಂದರೆ ಇರುವ ಪ್ರಮುಖ ಸಾಕ್ಷಗಳನ್ನೇ ತನಿಖಾಧಿಕಾರಿಗಳು ನಾಶ ಮಾಡಿದರು. ಅಂತಿಮವಾಗಿ ಈ ಪ್ರಕರಣಕ್ಕೆ ಸಂಬಂಧಿಸಿ ಯಾರೊಬ್ಬರೂ ಶಿಕ್ಷಿಸಲ್ಪಡಲಿಲ್ಲ. ಹುಸೇನಬ್ಬ ಕೊಲೆ ಪ್ರಕರಣದಲ್ಲಿ ಕನಿಷ್ಠ ಸ್ಥಳೀಯ ಪೊಲೀಸ್ ಇಲಾಖೆ ಸತ್ಯ ಏನು ಎನ್ನುವುದನ್ನು ಕಂಡು ಹಿಡಿಯುವಲ್ಲಿ ಯಶಸ್ವಿಯಾಗಿದೆ.

ತನ್ನದೇ ಇಲಾಖೆಯೊಳಗಿನ ಅಧಿಕಾರಿಗಳು ಭಾಗಿಯಾಗಿದ್ದರೂ ಅವರನ್ನು ರಕ್ಷಿಸಲು ಹವಣಿಸಲಿಲ್ಲ. ಇದೀಗ ಪ್ರಕರಣ ಪೊಲೀಸರಿಂದ ಸಿಐಡಿಗೆ ಹಸ್ತಾಂತರವಾಗಲು ಕಾರಣವೇನು? ಸಿಐಡಿಗೆ ಒಪ್ಪಿಸಲು ಒತ್ತಾಯಿಸಿದವರು ಯಾರು? ಎನ್ನುವ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರಗಳಿಲ್ಲ. ಪೊಲೀಸ್ ಇಲಾಖೆಯೊಳಗೆ ಸಂಘಪರಿವಾರದ ಜನರಿರುವುದು ಹುಸೇನಬ್ಬ ಪ್ರಕರಣದಲ್ಲಿ ಸಾಬೀತಾಗಿದೆ. ಇದೇ ಸಂದರ್ಭದಲ್ಲಿ ಸಿಐಡಿ ಪೊಲೀಸರೊಳಗೆ ಸಂಘಪರಿವಾರದವರಿರುವುದು ಈ ಹಿಂದಿನ ಬೆತ್ತಲೆ ಪ್ರಕರಣದಲ್ಲಿ ಸಾಬೀತಾಗಿದೆ. ಹೀಗಿರುವಾಗ, ಒಂದು ವೇಳೆ ತನಿಖೆ ನಡೆಯುವುದಾದರೆ ಯಾವುದಾದರೂ ಸ್ವತಂತ್ರ ಸಂಸ್ಥೆಗೆ ಒಪ್ಪಿಸುವುದೇ ಮೇಲು. ಕರಾವಳಿಯಲ್ಲಿ ನಕಲಿ ಗೋರಕ್ಷಕರು ಬಹಿರಂಗವಾಗಿಯೇ ದರೋಡೆ, ಕೊಲೆಯಂತಹ ಕೃತ್ಯಗಳಿಗೆ ಇಳಿಯಲು ಪೊಲೀಸ್ ಇಲಾಖೆಯ ಕುಮ್ಮಕ್ಕು ಕಾರಣ. ಪೊಲೀಸರು ಮತ್ತು ಗೋರಕ್ಷಕರ ನಡುವೆ ಕೊಡುಕೊಳ್ಳುವಿಕೆಯಿದೆ. ಮೊದಲು ಇಲಾಖೆಯೊಳಗೇ ಪೊಲೀಸ್ ವೇಷದಲ್ಲಿರುವ ಸಂಘಪರಿವಾರದ ಸಿಬ್ಬಂದಿಯನ್ನು. ಸರಿದಾರಿಗೆ ತರಬೇಕಾಗಿದೆ. ಬಳಿಕ ರೌಡಿಗಳ ಮೇಲೆ ಪ್ರಕರಣ ದಾಖಲಿಸಬೇಕು. ಇದೇ ಸಂದರ್ಭದಲ್ಲಿ ಇನ್ನೊಂದು ಅಂಶವನ್ನು ನಾವು ಗಮನಿಸಬೇಕು. ಹುಸೇನಬ್ಬರಿಗೆ ದನವನ್ನು ಮಾರಿದಾತ ಸ್ಥಳೀಯನೇ ಆಗಿದ್ದಾನೆ. ಹುಸೇನಬ್ಬ ದುಡ್ಡು ಕೊಟ್ಟು ದನವನ್ನು ಖರೀದಿಸಿದ್ದಾರೆಯೇ ಹೊರತು, ಆತನ ಹಟ್ಟಿಯಿಂದ ಕದ್ದುಸಾಗಿಸಿಲ್ಲ. ಮಾರಿದ ವ್ಯಕ್ತಿ ಬಳಿಕ ಸಂಘಪರಿವಾರಕ್ಕೆ ದನ ಸಾಗಾಟದ ಮಾಹಿತಿಯನ್ನು ನೀಡಿದ್ದಾನೆ.

ಒಂದು ರೀತಿಯಲ್ಲಿ ತಾವೇ ದನ ಮಾರಿ, ಬಳಿಕ ಸಂಘಪರಿವಾರದ ದುಷ್ಕರ್ಮಿಗಳಿಗೆ ಮಾಹಿತಿ ನೀಡುತ್ತಾರೆ ಎಂದರೆ, ದುಷ್ಕೃತ್ಯದಲ್ಲಿ ಅವರೂ ಭಾಗೀದಾರರು ಎಂದು ಅರ್ಥ. ದನ ಸಾಗಾಟ ಮಾಡುವುದು ತಪ್ಪು ಎಂದಾದರೆ, ದನವನ್ನು ಮಾರುವುದೂ ತಪ್ಪೇ ಅಲ್ಲವೆ? ಸಾಕಿದ ದನದ ಮೇಲೆ ಅಷ್ಟೂ ಗೌರವವಿದ್ದರೆ ಅದನ್ನು ಮಾರಕೂಡದು. ಮಾರುವವರಿರುವುದರಿಂದ ತಾನೆ ಕೊಳ್ಳುವವರಿರುವುದು? ದನಸಾಗಾಟಗಾರರ ಮೇಲೆ ಪ್ರಕರಣ ದಾಖಲಿಸುವಾಗ ಪೊಲೀಸರು, ಅದನ್ನು ಮಾರಿದ ಮಾಲಕರ ಮೇಲೆ ಯಾಕೆ ಪ್ರಕರಣ ದಾಖಲಿಸುವುದಿಲ್ಲ? ಹುಸೇನಬ್ಬ ಪ್ರಕರಣದಲ್ಲಿ ದನ ಮಾರಿದವನೇ ಸಂಘಪರಿವಾರಕ್ಕೆ ಮಾಹಿತಿ ನೀಡಿದ್ದಾನೆ ಎಂದರೆ, ಕೊಲೆ ಪ್ರಕರಣದಲ್ಲಿ ಮಾರಿದಾತನೂ ಶಾಮೀಲಾಗಿದ್ದಾನೆ ಎಂದೇ ಆಯಿತು. ಮಾರಾಟ ಮಾಡಿದವನ ಪಾತ್ರ ಕೊಲೆಯಲ್ಲಿ ಬಹುದೊಡ್ಡದಿದೆ.

ಆದುದರಿಂದ ಆತನ ಮೇಲೆ ಪ್ರಕರಣ ದಾಖಲಿಸಿ, ಬಂಧಿಸುವ ಕೆಲಸ ನಡೆಯಬೇಕು. ಇದು ನಡೆದರೆ ಮುಂದಿನ ದಿನಗಳಲ್ಲಿ, ದನಗಳನ್ನು ಮಾರಿ ದುಡ್ಡನ್ನು ಕಿಸೆಗೆ ಹಾಕಿ, ಬಳಿಕ ಗೋಮಾತೆಯ ಮೇಲೆ ಕಪಟ ಪ್ರೀತಿತೋರಿಸುವವರ ಸಂಖ್ಯೆ ಇಳಿಮುಖವಾದೀತು. ಇಂತಹ ಮಾಹಿತಿದಾರರೇ ಕರಾವಳಿಯಲ್ಲಿ ಹೆಚ್ಚುತ್ತಿರುವ ಹಿಂಸೆಗೆ ಮುಖ್ಯ ಕಾರಣರು. ಮೇಲ್ನೋಟಕ್ಕೆ ಸಭ್ಯ, ಗಣ್ಯ ವೇಷದಲ್ಲಿರುವ ಇವರು ಆಳದಲ್ಲಿ ರೌಡಿಗಳೇ ಆಗಿರುತ್ತಾರೆ. ಅವರಿಗೆ ತಮ್ಮ ದನವೂ ಮಾರಾಟವಾಗಬೇಕು, ಹಾಗೆಯೇ ಕರಾವಳಿಯಲ್ಲಿ ಹಿಂಸಾಚಾರವೂ ನಡೆಯಬೇಕು. ಈ ಗೋಮುಖ ವ್ಯಾಘ್ರಗಳಿಗೆ ತಡೆಯಾದರೆ, ಗೋರಕ್ಷಣೆಯ ಹೆಸರಿನಲ್ಲಿ ನಡೆಯುವ ಹಲ್ಲೆಗಳು ಬಹುತೇಕ ಕಡಿಮೆಯಾಗಬಹುದು. ಒಟ್ಟಿನಲ್ಲಿ ಹುಸೇನಬ್ಬ ಪ್ರಕರಣದಲ್ಲಿ ಸಿಐಡಿ ಪೊಲೀಸರಿಗೆ ದೊಡ್ಡ ಜವಾಬ್ದಾರಿಯಿದೆ. ಮುಖ್ಯವಾಗಿ, ಈ ಪ್ರಕರಣದಲ್ಲಿ ಪೊಲೀಸರು ಶಾಮೀಲಾಗಿರುವುದರಿಂದ ಆರೋಪಿಗಳಿಗೆ ಶಿಕ್ಷೆ ಕೊಡಿಸುವುದು ಅಷ್ಟು ಸುಲಭವಿಲ್ಲ. ಸ್ವಜನಪಕ್ಷಪಾತ ಹೊಂದಿರದ, ಸಮಾಜದ ಮೇಲೆ ಕಾಳಜಿಯುಳ್ಳ ಪ್ರಾಮಾಣಿಕ ಅಧಿಕಾರಿಗಳಿಂದಷ್ಟೇ ಹುಸೇನಬ್ಬರಿಗೆ ನ್ಯಾಯ ದೊರಕಲು ಸಾಧ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News