ನಮ್ಮ ನಡುವೆ ಹುಟ್ಟಿಕೊಂಡ ನರಹಂತಕರು

Update: 2018-06-18 06:39 GMT

ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂದಗಿಯ ಶ್ರೀರಾಮ ಸೇನೆಯ ಕಾರ್ಯಕರ್ತ ಪರಶುರಾಮ ವಾಗ್ಮೋರೆ ಬಂಧನದ ವರದಿ ಗೊತ್ತಾಗುತ್ತಿದ್ದಂತೆ ನನಗೆ ನಲವತ್ತು ವರ್ಷಗಳ ಹಿಂದಿನ ಬಿಜಾಪುರ ಜಿಲ್ಲೆ ಒಮ್ಮೆಲೇ ನೆನಪಿಗೆ ಬಂತು. ನಾವೆಲ್ಲ ಓಡಾಡಿದ, ಒಡನಾಡಿದ, ರಂಜಾನ್ ದರ್ಗಾ ಮತ್ತು ನನ್ನಂಥವರ ವ್ಯಕ್ತಿತ್ವ ರೂಪಿಸಿದ ಅಡಿಪಾಯವಾದ ಈ ಜಿಲ್ಲೆ ಒಂದು ಕಾಲದಲ್ಲಿ ವಿಚಾರವಾದಿಗಳ ಸ್ವಾತಂತ್ರ ಹೋರಾಟಗಾರರ, ದೇಶ ಪ್ರೇಮಿಗಳ ಜಿಲ್ಲೆಯಾಗಿತ್ತು. ಹಿಂದೂ ಮುಸ್ಲಿಂ ಸೌಹಾರ್ದಕ್ಕೆ ಇದು ಹೆಸರಾದ ಜಿಲ್ಲೆ. ಈಗಲೂ ಪೂರ್ಣ ಹಾಳಾಗಿಲ್ಲ.

ಹನ್ನೆರಡನೇ ಶತಮಾನದಲ್ಲಿ ಸಮಾನತೆಯ ಕ್ರಾಂತಿ ಕಹಳೆಯನ್ನೂದಿದ, ಅದಕ್ಕಾಗಿ ಬಲಿದಾನ ಮಾಡಲು ಹಿಂಜರಿಯದ ಬಸವಣ್ಣನವರು ಜನಿಸಿದ, ನಡೆದಾಡಿದ ಜಿಲ್ಲೆ ಇದು. ಹಿಂದೂ ಮುಸ್ಲಿಂ ಸೌಹಾರ್ದವನ್ನು ಸಾಕಾರಗೊಳಿಸಿದ ಆದಿಲ್‌ಶಾಹಿಗಳು ಆಳಿದ ಭೂ ಪ್ರದೇಶವಿದು. ಮಹಾ ಕವಿ ರನ್ನ ಇದೇ ಅವಿಭಜಿತ ಬಿಜಾಪುರ ಜಿಲ್ಲೆಯ ಮುಧೋಳದಲ್ಲಿ ಜನಿಸಿದ ಹೆಮ್ಮೆಯ ಹಿರಿಮೆ ಇದಕ್ಕಿದೆ. ಕಲ್ಯಾಣ ಕ್ರಾಂತಿ ಮಾಡಿದ ಬಸವಣ್ಣ ಕೊನೆಯ ದಿನಗಳನ್ನು ಕಳೆದು ಸಂಶಯಾಸ್ಪದ ಸಾವಿಗೊಳಗಾಗಿದ್ದು ಕೂಡಲ ಸಂಗಮದಲ್ಲಿ.

ಇಂಥ ಬಿಜಾಪುರ ಜಿಲ್ಲೆಯ ಸಿಂದಗಿಯಲ್ಲಿ ಗೌರಿ ಲಂಕೇಶ್ ಹತ್ಯೆಯ ಸಂಚು ಎಳೆಯೊಂದು ಸಿಕ್ಕು ಬಯಲಾಗಿದೆ. ಹಂತಕ ಪರಶುರಾಮನ ಬಂಧನದ ನಂತರವೂ ಆತನನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳು ವೈರಲ್ ಆಗುತ್ತಲೇ ಇವೆ. ಆತನ ಫೋಟೊ ಹಾಕಿ ‘‘ಮಾತೃ ಭೂಮಿಯ ರಕ್ಷಣೆಗಾಗಿ ಮುಡಿಪಾಗಿದೆ ನನ್ನ ಪ್ರಾಣ’’ ಎಂದು ಫೋಟೊದ ಮೇಲ್ಭಾಗದಲ್ಲಿ ಬರೆಯಲಾಗಿದೆ. ‘‘ಧರ್ಮಕ್ಕಾಗಿ ಪ್ರಾಣ ತ್ಯಾಗಕ್ಕೂ ಸಿದ್ಧ’’ ಎಂದು ಕೆಳಗೆ ಬರೆಯಲಾಗಿದೆ.

ಶ್ರೀರಾಮ ಸೇನೆಯ ರಾಜ್ಯ ಕಾರ್ಯದರ್ಶಿ ನೀಲಕಂಠ ಕಂದಗಲ್ ಎಂಬಾತ ಹಾಕಿದ ಈ ಪೋಸ್ಟ್ ಫೇಸ್‌ಬುಕ್‌ನಲ್ಲಿ ಕಾಣಿಸಿಕೊಂಡ ಒಂದೇ ತಾಸಿನಲ್ಲಿ 240 ಮಂದಿ ಲೈಕ್ ಮಾಡಿದ್ದಾರೆ, 115 ಮಂದಿ ಕಾಮೆಂಟ್ ಮಾಡಿದ್ದಾರೆ, 11 ಮಂದಿ ಹಂಚಿಕೊಂಡಿದ್ದಾರೆ. ಅನೇಕರು ‘‘ದೇಶಭಕ್ತನಿಂದ ದೇಶದ್ರೋಹಿಯ ಕೊಲೆ’’ ಎಂದು ಕಾಮೆಂಟ್ ಮಾಡಿದ್ದಾರೆ. ಇವರೆಲ್ಲ ಬಹುತೇಕ ಮೂವತ್ತರ ಕೆಳಗಿನ ತರುಣರು.

ಬಿಜಾಪುರದ ಬಿಜೆಪಿ ಯುವ ಮೋರ್ಚಾ ನಾಯಕಿ ಮಂಚಾಲೇಶ್ವರಿ ತೊನಶ್ವಾಳ ಎಂಬಾಕೆ ‘‘ಮನೆಮನೆಯಲ್ಲೂ ಪರಶುರಾಮರು ಹುಟ್ಟಿಕೊಳ್ಳುತ್ತಾರೆ’’ ಎಂದು ಬುದ್ಧಿ ಜೀವಿಗಳಿಗೆ ಬೆದರಿಕೆ ಹಾಕಿದ್ದಾಳೆ. ಪರಶುರಾಮರ ಕುಟುಂಬಕ್ಕೆ ನಿಧಿ ಸಂಗ್ರಹಣೆಗಾಗಿ ಸಾಮಾಜಿಕ ಜಾಲ ತಾಣದಲ್ಲಿ ಮಾಡಿಕೊಳ್ಳಲಾದ ಮನವಿಗೆ 308 ಮಂದಿ ಲೈಕ್ ಒತ್ತಿದ್ದಾರೆ. 20 ಮಂದಿ ಕಾಮೆಂಟ್ ಹಾಕಿದ್ದಾರೆ. 192 ಮಂದಿ ಶೇರ್ ಮಾಡಿಕೊಂಡಿದ್ದಾರೆ. ಇದು ಇಂದಿನ ಉತ್ತರ ಕರ್ನಾಟಕ.

 ಈ ಸಿಂದಗಿ ಒಂದು ಕಾಲದಲ್ಲಿ ಕಮ್ಯುನಿಸ್ಟ್ ಚಳವಳಿಯ ಕೇಂದ್ರವಾಗಿತ್ತು. ಎಪ್ಪತ್ತರ ದಶಕದಲ್ಲಿ ಕಮ್ಯುನಿಸ್ಟ್ ನಾಯಕ ಯಮನಪ್ಪ ಹಡಪದರ ನೇತೃತ್ವದಲ್ಲಿ ಹಲವಾರು ಚಳವಳಿಗಳು ಇಲ್ಲಿ ನಡೆದಿದ್ದವು. ನಾನೂ ಅನೇಕ ಬಾರಿ ಅಲ್ಲಿ ಹೋಗಿ ಬಂದಿದ್ದೇನೆ. ಈ ಸಿಂದಗಿ ಕರ್ನಾಟಕದ ಪ್ರಗತಿಪರ ಸ್ವಾಮೀಜಿ ಎಂದೇ ಹೆಸರಾದ ಗದುಗಿನ ತೋಂಟದಾರ್ಯ ಸ್ವಾಮೀಜಿಗಳ ತವರೂರು. ಕವಯಿತ್ರಿ ಶಶಿಕಲಾ ವಸ್ತ್ರದ, ರಾಜ್ಯದ ಐಎಎಸ್ ಹಿರಿಯ ಅಧಿಕಾರಿಯಾಗಿದ್ದ ಬಿ.ಎ. ಕುಲಕರ್ಣಿ ಇದೇ ತಾಲೂಕಿಗೆ ಸೇರಿದವರು.

ನಾವೆಲ್ಲ ಚಿಕ್ಕವರಿದ್ದಾಗ ಬಿಜಾಪುರ ಜಿಲ್ಲೆಯಲ್ಲಿ ಅಲ್ಲಲ್ಲಿ ಆರೆಸ್ಸೆಸ್ ಶಾಖೆಗಳಿದ್ದರೂ ಪರಿಸ್ಥಿತಿ ಹೀಗಿರಲಿಲ್ಲ. ಹಿಂದೂ-ಮುಸಲ್ಮಾನರು ಕೂಡಿಯೇ ಮೊಹರಂ ಆಚರಿಸುತ್ತಿದ್ದರು. ಸ್ವಾತಂತ್ರ ಚಳವಳಿಯ ಪ್ರಭಾವ ಈ ಜಿಲ್ಲೆಯ ಮೇಲೆ ಗಾಢವಾಗಿತ್ತು. ಹಿಂದೂ ಮುಸಲ್ಮಾನರು ಸೇರಿದಂತೆ ಎಲ್ಲ ಸಮುದಾಯದವರು ಸೇರಿ ನಡೆಸಿದ ಹೋರಾಟದ ಪರಂಪರೆ ಈ ಜಿಲ್ಲೆಗಿತ್ತು. ಎನ್.ಕೆ .ಉಪಾಧ್ಯಾಯರಂಥ ಕಮ್ಯುನಿಸ್ಟ್ ನಾಯಕರಿದ್ದರು. ಟಿ.ಎಸ್. ಪಾಟೀಲ, ನರಸಿಂಹರಾವ್ ಕುಲಕರ್ಣಿ ಅವರಂಥ ಚಿಂತಕರು ನಮಗೆಲ್ಲ ಮಾರ್ಕ್ಸ್‌ವಾದದ ಪಾಠ ಮಾಡಿದರು. ಇವೆಲ್ಲಕ್ಕಿಂತ ಮಿಗಿಲಾಗಿ ಇಂಚಗೇರಿ ಮಠದ ಮಹಾದೇವರು ಇದ್ದರು. ನಾನು ಬಾಲ್ಯದಲ್ಲಿ ಆಟ ಆಡಲು ಆರೆಸ್ಸೆಸ್ ಶಾಖೆಗೆ ಹೋಗಿದ್ದು ಗೊತ್ತಾಗಿ ಈ ಮಹಾದೇವರು ನನ್ನನ್ನು ಕರೆಸಿ ಇಡೀ ದಿನ ಬೈದಿದ್ದರು. ‘‘ಅವರು ಗಾಂಧೀಜಿಯನ್ನು ಕೊಂದವರು. ನೀನು ಅಂಥಲ್ಲಿ ಹೋಗ್ತಿಯಾ?’’ ಎಂದು ನನಗೆ ತರಾಟೆಗೆ ತೆಗೆದುಕೊಂಡಿದ್ದರು. ಅವರಿಂದ ಮನುಷ್ಯತ್ವದ ಪಾಠ ಕಲಿತ ನಾನು ಮುಂದೆ ಕಮ್ಯುನಿಸ್ಟ್ ಚಳವಳಿಗೆ ಬಂದು ಇನ್ನೂ ಉನ್ನತ ಮಾನವತ್ವದ ದೀಕ್ಷೆ ಪಡೆದೆ.

ಬಿಜಾಪುರದಲ್ಲಿ ಆಗ ನಿತ್ಯವೂ ನಮಗೆ ತಪ್ಪಿದರೆ ತಿದ್ದಿ ಹೇಳುವ ಹಿರಿಯರಿದ್ದರು. ಜಿ.ಎಸ್. ಪಾಟೀಲರ(ವಕೀಲರು) ಮನೆಗೆ ಹೋದರೆ ದ್ವಂದ್ವಾತ್ಮಕ ಭೌತಿಕ ವಾದದ ಪಾಠ, ನರಸಿಂಹರಾವ್ ಕುಲಕರ್ಣಿ ಅವರ ಸಂಗೀತ ವಿದ್ಯಾಲಯಕ್ಕೆ ಹೋದರೆ ಅವರ ಸಂಗೀತ ಪಾಠ ಮಾಡುವುದನ್ನು ಬಿಟ್ಟು ನಮಗೆ ಮಾರ್ಕ್ಸ್ ವಾದದ ಪಾಠ ಮಾಡಲು ಕೂರುತ್ತಿದ್ದರು. ಸಂಜೆಯಾಗುತ್ತಿದ್ದಂತೆ ಕಮ್ಯುನಿಸ್ಟ್ ನಾಯಕ ಎನ್.ಕೆ. ಉಪಾಧ್ಯಾಯರ ಬಹಿರಂಗ ಸಭೆ, ಆರ್.ಪಿ.ಪಿ. ಪಕ್ಷ ಅಂಬೇಡ್ಕರ್ ವಾದಿ ಮೂಕಿಹಾಳ, ಚಂದ್ರಶೇಖರ ಹೊಸಮನಿ ಅವರ ಒಡನಾಟವಿತ್ತು. ಇವರಷ್ಟೇ ಅಲ್ಲ ನಿತ್ಯವೂ ನಮ್ಮಾಂದಿಗೆ ಮಾರ್ಕ್ಸ್ ಮಾತ್ರವಲ್ಲ, ಕಲೆ-ಸಾಹಿತ್ಯ, ಸಂಗೀತದ ಚರ್ಚೆ ಮಾಡುತ್ತ ಮಾರ್ಕ್ಸ್ ವಾದದ ವಿಕಾಸಕ್ಕೆ ನೆರವಾದ ಪ್ರಕಾಶ ಹಿಟ್ಟಿನಹಳ್ಳಿ ಅಂಥ ಮನಗೂಳಿ ಅವರಂಥ ಸಂಗಾತಿಗಳಿದ್ದರು...

 ಹೀಗೆ ಬೆಳೆದ ನಮಗೆ ಕೋಮುವಾದದ ಕೆಟ್ಟ ಬ್ಯಾಕ್ಟೀರಿಯಾ ಅಂಟಿಕೊಳ್ಳಲಿಲ್ಲ. ಅಂಟಿಕೊಳ್ಳದಂತೆ ತಡೆಯುವ ಆ್ಯಂಟಿ ಬ್ಯಾಕ್ಟೀರಿಯಾ ಸಿದ್ಧಾಂತ ನಮ್ಮಲ್ಲಿ ಇತ್ತು. ಹೀಗೆ ಬಾಲ್ಯ ಕಳೆದ ನಾವು ಬದುಕಿಗಾಗಿ ಊರನ್ನು ಬಿಟ್ಟು ಬೆಂಗಳೂರು-ಹುಬ್ಬಳ್ಳಿ ಸೇರಿದೆವು. ನಾವು ಎಲ್ಲೇ ಇದ್ದರೂ ಕೋಮು ಕ್ರಿಮಿಗಳ ವಿರುದ್ಧ ನಮ್ಮ ನಮ್ಮ ಕ್ಷೇತ್ರದಲ್ಲಿ ಕೈಲಾದಷ್ಟು ಕೆಲಸ ಮಾಡುತ್ತಾ ಬಂದೆವು. ಈಗಲೂ ಮಾಡುತ್ತಿದ್ದೇವೆ. ಆದರೆ ನಾವು ಬಿಟ್ಟು ಬಂದ ಬಿಜಾಪುರ ಕ್ರಮೇಣ ಬದಲಾಗುತ್ತಾ ಬಂತು. ಇದೆಲ್ಲಾ ಒಂದೇ ದಿನದಲ್ಲಿ ಆಗಲಿಲ್ಲ. ತೊಂಬತ್ತರ ಜಾಗತಿಕ ಐಟಿ ಕೊಚ್ಚೆಯಲ್ಲಿ ಬೆಳೆದ ಹಿಂದುತ್ವ ಕೋಮುವಾದ ವ್ಯಾಪಿಸುತ್ತಾ ಬಂತು. ಇಪ್ಪತ್ತರ ಕೆಳಗಿನ ತರುಣರಿಗೆ ಮುತಾಲಿಕ್, ತೊಗಾಡಿಯಾ ಭಾಷಣಗಳು ಮತಾಂಧತೆಯ ಮತ್ತನ್ನೇರಿಸಿದವು. ಈ ಮತ್ತನ್ನು ಇಳಿಸಿ ತರುಣರನ್ನು ಸರಿದಾರಿಗೆ ತರುವ ಚಟುವಟಿಕೆಗಳು ಕ್ಷೀಣವಾದವು. ಸಿದ್ದೇಶ್ವರ ಸ್ವಾಮೀಜಿ ಅಂಥವರಿದ್ದರೂ ಅವರು ಇಂತಹ ವಿಷಯಗಳ ಬಗ್ಗೆ ಮಾತನಾಡುವುದಿಲ್ಲ.

ಕಾಂಗ್ರೆಸ್ ಜೆಡಿಎಸ್‌ನಂತಹ ಜಾತ್ಯತೀತ ಎಂದು ಹೇಳಿಕೊಳ್ಳುವ ಪಕ್ಷಗಳು ಬರೀ ಚುನಾವಣಾ ರಾಜಕಾರಣಕ್ಕೆ ಸೀಮಿತಗೊಂಡವು. ಈ ಪಕ್ಷಗಳ ನಾಯಕರಿಗೆ ಕೋಮುವಾದದ ಅಪಾಯದ ಅರಿವಾಗಲಿ ಅದರ ವಿರುದ್ಧ ಹೋರಾಡುವ ಬದ್ಧತೆಯಾಗಲಿ ಇರಲಿಲ್ಲ. ಈಗಲೂ ಇಲ್ಲ. ಇನ್ನು ಎಡಪಕ್ಷಗಳು ಕೇವಲ ಕಾರ್ಮಿಕರ ಆರ್ಥಿಕ ಬೇಡಿಕೆಗಳ ಹೋರಾಟಗಳಿಗೆ ಸೀಮಿತವಾದವು. ಬಿಜಾಪುರದಲ್ಲಿ ಸೋಶಿಯಲಿಸ್ಟ್ ಯೂನಿಟಿ ಸೆಂಟರ್‌ನ ಭಗವಾನ್‌ರೆಡ್ಡಿಯವರು ಮಾತ್ರ ಕೆಲವು ಯುವಕರನ್ನು ತನ್ನ ಸಂಘಟನೆ ಮೂಲಕ ಸರಿ ಹಾದಿಗೆ ತಂದರು.

ಹೀಗಾಗಿ ಸಿಂದಗಿಯಂತಹ ಊರುಗಳಲ್ಲಿ ಪರಶುರಾಮ್ ವಾಗ್ಮೋರೆ, ಸುನೀಲ್ ಅಗಸರ ಅವರಂತಹ ಹುಡುಗರು ಅಡ್ಡ ಹಾದಿ ಹಿಡಿದರು. ಇವರೆಲ್ಲಾ ಹಿಂದುಳಿದ, ಬಡ ಕುಟುಂಬಗಳ ಯುವಕರು. ಇವರನ್ನು ಯಾವ ಪರಿ ಬ್ರೈನ್‌ವಾಶ್ ಮಾಡಲಾಗಿದೆ ಎಂಬುದು ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇದೆ. ಗೌರಿ ಹತ್ಯೆ ಮಾತ್ರವಲ್ಲ ಇನ್ನೂ ನಲವತ್ತು ಮಂದಿ ಪ್ರಗತಿಪರ ಚಿಂತಕರನ್ನು ಕೊಲ್ಲುವ ಹಿಟ್‌ಲಿಸ್ಟ್ ಇವರಲ್ಲಿದೆಯಂತೆ. ‘‘ಗೌರಿ ಲಂಕೇಶ್ ಯಾರೆಂದು ನನಗೆ ಗೊತ್ತಿರಲಿಲ್ಲ. ಹಿಂದೂ ಧರ್ಮದ ಉಳಿವಿಗಾಗಿ ಈ ಮಹತ್ವದ ಕೆಲಸ ಮಾಡು ಎಂದು ಕೆಲವರು ನನ್ನ ತಲೆ ತುಂಬಿದರು. ಧರ್ಮ ರಕ್ಷಣೆಗಾಗಿ ಕೊಲ್ಲಲು ಪ್ರಚೋದಿಸಿದರು. ಈಗ ಪಶ್ಚಾತ್ತಾಪವಾಗಿದೆ’’ ಎಂದು ಪರಶುರಾಮ್ ಎಸ್‌ಐಟಿ ಪೋಲಿಸರ ಎದುರು ಬಾಯಿ ಬಿಟ್ಟಿದ್ದಾನೆೆ. ಈತನ ಬ್ರೈನ್‌ವಾಶ್ ಮಾಡಿದವರ ಪರಿಚಯ ಆತನಿಗಿಲ್ಲವಂತೆ.. ಈತನ ತಾಯಿಗೆ ಬಡತನದ ಹಿನ್ನೆಲೆಯಿದೆ.

 ಈತನ ಮಿತ್ರರಿಗೆ ಈಗಲೂ ಪಶ್ಚಾತ್ತಾಪವಿಲ್ಲ. ತಾವು ಮಾಡುತ್ತಿದ್ದುದೆಲ್ಲ ದೇಶಕ್ಕಾಗಿ ಹಿಂದೂ ಧರ್ಮದ ಉಳಿವಿಗಾಗಿ ಎಂದು ಅಚಲವಾಗಿ ನಂಬಿಕೊಂಡಿದ್ದಾನೆ. ಸಿಂದಗಿಯಲ್ಲಿ ಹಿಂದೂ ಮುಸ್ಲಿಮರು ಸೋದರಂತೆ ಇರುವುದನ್ನು ಸಹಿಸದ ಈತ ತಹಶೀಲ್ದಾರರ ಕಚೇರಿಯಲ್ಲಿ ಪಾಕಿಸ್ತಾನ ಬಾವುಟ ಹಾರಿಸಲು ಹೋಗಿ ಸಿಕ್ಕಿಬಿದ್ದರು. ಹೀಗೆ ಮಾಡಲು ಈತನಿಗೆ ಪ್ರಚೋದನೆ ಮಾಡಿದವರು ತೆರೆಮರೆಯಲ್ಲಿದ್ದಾರೆ.

ಗೌರಿ ಲಂಕೇಶ್, ಕಲಬುರ್ಗಿ, ಭಗವಾನ್, ದ್ವ್ವಾರಕಾನಾಥ್ ಮುಂದೆ ಯಾರೆಂದು ಇವರಿಗೆ ಗೊತ್ತಿಲ್ಲ, ಅವರು ಬರೆದ ಪುಸ್ತಕಗಳನ್ನು ಇವರು ಓದಿಲ್ಲ. ಅವರ ಭಾಷಣಗಳನ್ನು ಕೇಳಿಲ್ಲ. ಆದರೆ ಇವರೆಲ್ಲ ಹಿಂದೂ ವಿರೋಧಿಗಳು, ದೇಶ ವಿರೋಧಿಗಳು, ನಕ್ಸಲ್ ಬೆಂಬಲಿಗರು, ರಾಕ್ಷಸರು ಎಂದೆೆಲ್ಲ ಇವರ ಮೆದುಳಲ್ಲಿ ವಿಷ ತುಂಬಲಾಗಿದೆ, ವಿವೇಕಕ್ಕೆ ಅವಸ್ಥೆಯನ್ನು ನೀಡಲಾಗಿದೆ. ಈ ಮತ್ತೇರಿದ ಇವರು ಅವರನ್ನೆಲ್ಲ ಮುಗಿಸಲು ಹೊರಟರು. ಈಗಲೂ ಈ ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸಿದರೆ ತಾವು ಹಿಂದೂ ಪರ ಸಂಘಟನೆಯವರು ಕಿರುಕುಳ ನೀಡಬೇಡಿ ಎಂದು ಹೇಳುತ್ತಾರೆ. ಹಿಂದೂ ಪರ ಅಂದರೆ ಯಾವುದಾದರೂ ಶ್ಲೋಕ ಇಲ್ಲವೇ ಭಕ್ತಿಗೀತೆ ಹೇಳಿರಿ ಅಂದರೆ ತಡಬಡಾಯಿಸುತ್ತಾರೆ. ಇವರಿಗೆ ವಹಿಸಿದ ಕೆಲಸ ಪ್ರಗತಿಪರರನ್ನು, ಚಿಂತಕರನ್ನು ಕೊಲ್ಲುವುದೆಂದು ಕಾಣುತ್ತದೆ.

ಈಗ ಸಿಕ್ಕವರು ಪರಶುರಾಮ, ನವೀನ್ ಕುಮಾರ ಮತ್ತಿತರರು. ಆದರೆ ಈ ಸಂಚಿನ ಜಾಲ ಇವರಷ್ಟೇ ಅಲ್ಲ, ಇನ್ನೂ ವ್ಯಾಪಕವಾಗಿರುವಂತೆ ಕಾಣುತ್ತದೆ. ದಾಭೋಳ್ಕರ್, ಗೋವಿಂದ ಪನ್ಸಾರೆ ಹತ್ಯೆ, ಗೋವಾದ ಸನಾತನ ಸಂಸ್ಥೆ, ಶ್ರೀರಾಮ ಸೇನೆ, ಟೈಗರ್ ಪಡೆ ಏನೇನೋ ಹೆಸರುಗಳು ಕೇಳಿ ಬರುತ್ತಿವೆ. ಈಗ ಗೊತ್ತಾಗಿರುವುದು ಸ್ವಲ್ಪ ಮಾತ್ರ ಇನ್ನು ಮಹಾ ಪಿತೂರಿ ಇದ್ದಂತೆ ಕಾಣುತ್ತದೆ.

ಉತ್ತರ ಕರ್ನಾಟಕದ ಬಾಗಲಕೋಟೆ, ಬಿಜಾಪುರ, ಬೆಳಗಾವಿ ಜಿಲ್ಲೆಗಳಲ್ಲಿ ಕೋಮುವಾದಿ ಸಂಘಟನೆಯೊಂದು ಯುವಕರಿಗೆ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿದೆ ಎಂಬ ವರದಿಗಳು ಆಗಾಗ ಸ್ಥಳೀಯ ಪತ್ರಿಕೆಗಳಲ್ಲಿ ಬರುತ್ತಿದ್ದವು. ಜನ ಆಡಿಕೊಳ್ಳುತ್ತಿದ್ದರು. ಆದರೆ ಈ ಬಗ್ಗೆ ರಾಜ್ಯವನ್ನಾಳಿದ ಯಾವ ಸರಕಾರವೂ ಗಂಭೀರವಾಗಿ ಪರಿಗಣಿಸಲಿಲ್ಲ. ಸಿದ್ದರಾಮಯ್ಯ ಸಿಎಂ ಆದ ನಂತರ ಈ ನಿಟ್ಟಿನಲ್ಲಿ ಸರಕಾರ ಒಂದಿಷ್ಟು ಚುರುಕಾಯಿತು.

ದೇಶ ಭಕ್ತಿಯ ಬಗ್ಗೆ ಮಾತಾಡುವ ಇವರು ಯಾವುದೇ ಉಗ್ರಗಾಮಿಯನ್ನು ಭಯೋತ್ಪಾದಕರನ್ನು ಈವರೆಗೆ ಕೊಂದಿಲ್ಲ. ಗಡಿಯಲ್ಲಿ ಹೋಗಿ ಹೋರಾಡಿಲ್ಲ. ಇವರು ಕೊಂದಿದ್ದು ಮೂಢನಂಬಿಕೆ ವಿರೋಧಿ ಹೋರಾಟಗಾರ ನರೇಂದ್ರ ದಾಭೋಳ್ಕರ್ ಅವರನ್ನು, ಶಿವಾಜಿ ಜೀವನ ಚರಿತ್ರೆ ಮೇಲೆ ಬೆಳಕು ಚೆಲ್ಲಿದ ಕಮ್ಯುನಿಸ್ಟ್ ನಾಯಕ ಗೋವಿಂದ ಪನ್ಸಾರೆ ಅವರನ್ನು, ಸತ್ಯ ಶೋಧಕ, ಬಸವ ಭಕ್ತ ಕಲಬುರ್ಗಿ ಅವರನ್ನು, ದಿಟ್ಟ ಪತ್ರಕರ್ತೆ ಗೌರಿಲಂಕೇಶ್‌ರನ್ನು.

ಗೌರಿ ಹತ್ಯೆಗಾಗಿ ಒಂದು ವರ್ಷದಿಂದ ಸಂಚು ರೂಪಿಸಿ ನಾಲ್ಕು ತಂಡಗಳಾಗಿ ಕಾರ್ಯಾಚರಣೆಗೆ ಇಳಿದಿದ್ದವು. ಇವರ ಸೂತ್ರಧಾರ ಮಹಾರಾಷ್ಟ್ರದ ಪುಣೆಯ ಅಮೋಲ್ ಕಾಳೆ ಎಂಬುದು ಬಯಲಿಗೆ ಬಂದಿದೆ. ಆದರೆ ಕೇಂದ್ರದ ಇಲ್ಲವೇ ರಾಜ್ಯದ ಗುಪ್ತಚರ ಇಲಾಖೆ ಬಳಿ ಈ ಹಂತಕ ಪಡೆಯ ಬಗ್ಗೆ ಮುಂಚೆ ಯಾವ ಮಾಹಿತಿಯೂ ಇರಲಿಲ್ಲ. ಕರ್ನಾಟಕದ ಎಸ್‌ಐಟಿ ಈಗಲಾದರೂ ಇವರನ್ನೆಲ್ಲ ಬಯಲಿಗೆಳೆದಿರುವುದು ಸ್ವಾಗತಾರ್ಹವಾಗಿದೆ. ಗೌರಿ ಹತ್ಯೆ ಸಂಚು ಬಯಲಿಗೆ ಬಂದಂತೆ ಸತ್ಯಶೋಧಕ ಕಲಬುರ್ಗಿ, ದಾಭೋಳ್ಕರ್, ಗೋವಿಂದ ಪನ್ಸಾರೆ ಅವರ ಹತ್ಯೆಯ ಪಿತೂರಿ ಬಯಲಿಗೆ ಬರಬೇಕಾಗಿದೆ. ಹಿಂದುತ್ವದ ಹೆಸರಿನಲ್ಲಿ ನಡೆಯುವ ಭಯೋತ್ಪಾದನಾ ಚಟುವಟಿಕೆಗಳ ಬಗ್ಗೆ ನಿಗಾ ವಹಿಸಲು ನಮ್ಮ ದೇಶದ ಗುಪ್ತಚರ ಇಲಾಖೆಯಲ್ಲಿ ಪ್ರತ್ಯೇಕ ವಿಭಾಗವಿಲ್ಲ. ಆದರೆ ಎಡ ಪಂಥೀಯ ಸಂಘಟನೆಗಳ ಬಗ್ಗೆ ನಿಗಾ ವಹಿಸಲು ವಿಶೇಷ ವಿಭಾಗಗಳಿವೆ. ಇದರ ಜೊತೆಗೆ ಆಡಳಿತಾಂಗದಲ್ಲಿ ಕೋಮುವಾದಿ ಶಕ್ತಿಗಳು ನುಸುಳಿರುವ ಅಪಾಯವಿದೆ. ಹೀಗಾಗಿ ಈ ಶಕ್ತಿಗಳ ದುಷ್ಕೃತ್ಯಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಜಾತ್ಯತೀತ ಪ್ರಗತಿಪರ ಶಕ್ತಿಗಳ ಮುಂದೆ ಈಗ ಉಳಿದಿರುವ ಒಂದೇ ದಾರಿ ಪ್ರಭುತ್ವದಿಂದ ಕೋಮುವಾದಿ ಶಕ್ತಿಗಳನ್ನು ದೂರವಿಡಬೇಕಾಗಿದೆ. ಆಡಳಿತಾಂಗದಲ್ಲಿ ನುಸುಳಿದ ಕೋಮು ಕ್ರಿಮಿಗಳ ಮೇಲೆ ನಿಗಾ ಇಡಬೇಕಾಗಿದೆ. ಇದಕ್ಕಾಗಿ ಸುದೀರ್ಘ ಚಿಂತನೆ ನಡೆಯಬೇಕಾಗಿದೆ.

ನಮ್ಮ ಹಿಂದುಳಿದ ಬಡ ಸಮುದಾಯದ ಯುವಕರು ಕೋಮುವಾದ ಫ್ಯಾಶಿಸ್ಟ್ ಶಕ್ತಿಗಳ ಬಲೆಗೆ ಬಿದ್ದು ಕೊಲೆಗಡುಕರಾಗುತ್ತಿರುವುದು ಆತಂಕದ ಸಂಗತಿಯಾಗಿದೆ. ಸಂಘ ಪರಿವಾರದ ನಾಯಕರ ಮಕ್ಕಳು ವಿದೇಶಗಳಲ್ಲಿ ವ್ಯಾಸಂಗ ಮಾಡಿ ಒಳ್ಳೆಯ ಉದ್ಯೋಗದಲ್ಲಿದ್ದಾರೆ. ಮೇಲ್ಜಾತಿ, ಮೇಲ್ವರ್ಗಗಳ ನಾಯಕರು, ಅವರ ಮಕ್ಕಳು ವಿಧಾನಸಭೆ, ಲೋಕಸಭೆಗೆ ಹೋಗಿ ಶಾಸಕರು, ಸಂಸದರು ಆಗುತ್ತಿದ್ದಾರೆ. ಪರಶುರಾಮನಂಥ ಬಡ ಹುಡುಗರು ಕೊಲೆಗಡುಕರಾಗಿ ಜೈಲು ಸೇರುತ್ತಿದ್ದಾರೆ. ನಮ್ಮ ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲಿ ನುಸುಳಿರುವ ಕೋಮುಕ್ರಿಮಿಗಳನ್ನು ಅಲ್ಲಿಂದ ತೊಲಗಿಸಿ ಅಲ್ಲಿ ಭಗತ್ ಸಿಂಗ್, ಬಸವಣ್ಣ, ಬುದ್ಧ, ಅಂಬೇಡ್ಕರ್ ಜ್ಯೋತಿ ಬಾಫುಲೆ ಸಂದೇಶಗಳನ್ನು, ವಿಚಾರಗಳನ್ನು ನಮ್ಮ ಯುವ ವಿದ್ಯಾರ್ಥಿಗಳ ಮೆದುಳಿಗೆ ತಲುಪಿಸಬೇಕಾಗಿದೆ. ಇದೊಂದೇ ಈಗ ಉಳಿದ ದಾರಿಯಾಗಿದೆ.

ಈ ದೇಶದ ಸಂಘಟಿತ ಕಾರ್ಮಿಕ ವರ್ಗ ಆರ್ಥಿಕ ಬೇಡಿಕೆಗಳ ಹೋರಾಟದಲ್ಲಿ ಮುಳುಗಿದೆ. ಅನೇಕ ಬಾರಿ ಫ್ಯಾಶಿಸ್ಟ್ ಶಕ್ತಿಗಳಿಗೆ ನೆರವಾದ ಉದಾಹರಣೆಗಳಿವೆ. ಈ ಫ್ಯಾಶಿಸಂ ಪಡೆಯು ಬೇಕಾದರೆ ವಿದ್ಯಾರ್ಥಿಯುವಜನರ ನಡುವೆ ವೈಚಾರಿಕ ಜ್ಯೋತಿ ಹೊತ್ತಿಸಬೇಕು. ಎಲ್ಲಾ ವಿಶ್ವವಿದ್ಯಾನಿಲಯಗಳು, ಶಾಲಾ-ಕಾಲೇಜುಗಳು ಜೆಎನ್‌ಯುವಿನಂತೆ ಆಗಬೇಕು. ಇದೊಂದೇ ಉಳಿದ ದಾರಿಯಾಗಿದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News