ಪ್ರೊ ಕಬಡ್ಡಿ ಹರಾಜಿನಲ್ಲಿ ದಾಖಲೆ ಮಾಡಿದ ಪುತ್ತೂರಿನ ಪ್ರಶಾಂತ್ ರೈ

Update: 2018-06-18 06:15 GMT

ಪ್ರೊ ಕಬಡ್ಡಿ ಲೀಗ್‌ನ ಮೂಲಕ ಹುಟ್ಟೂರಿನ ಹೆಸರನ್ನು ಎತ್ತರಕ್ಕೇರಿಸಿದ ಹಿರಿಮೆ ಪುತ್ತೂರಿನ ಪ್ರಶಾಂತ್ ರೈ ಅವರದ್ದು. ಕಬಡ್ಡಿ ಆಟಗಾರರ ಹರಾಜಿನಲ್ಲಿ ಅತೀ ಹೆಚ್ಚು ದಾಖಲೆಯ ರೂ. 79 ಲಕ್ಷದ ಸೊತ್ತು ಎಂಬ ಹೆಗ್ಗಳಿಕೆಗೂ ಪ್ರಶಾಂತ್ ರೈ ಪಾತ್ರವಾಗಿದ್ದಾರೆ.

ಪುತ್ತೂರು ತಾಲೂಕಿನ ಒಳಮೊಗರು ಗ್ರಾಮದ ಕೈಕಾರ ನಿವಾಸಿ ದಿ.ಸೀತಾರಾಮ ರೈ ಮತ್ತು ದಿ.ಸತ್ಯವತಿ ದಂಪತಿಯ ಪುತ್ರರಾದ ಪ್ರಶಾಂತ್ ರೈ ಅವರದು ಪತ್ನಿ ವಜ್ರೇಶ್ವರಿ ರೈ ಮತ್ತು ಪುತ್ರ ಶತಾಯು ರೈ ಅವರನ್ನು ಒಳಗೊಂಡ ಸಂತೃಪ್ತ ಕುಟುಂಬ. ತಂದೆ ಸೀತಾರಾಮ ರೈ ಅವರು ಕೆಎಸ್ಸಾರ್ಟಿಸಿ ಸಿಬ್ಬಂದಿಯಾಗಿದ್ದರು. ಕಾಲೇಜು ದಿನಗಳಲ್ಲಿಯೇ ಕಬಡ್ಡಿ ಆಟಗಾರರಾಗಿದ್ದ ಪ್ರಶಾಂತ್ ರೈ ಅವರು ಕರ್ನಾಟಕ ಕಬಡ್ಡಿ ತಂಡದ ನಾಯಕ. ವಿಜಯ ಬ್ಯಾಂಕ್ ಕಬಡ್ಡಿ ತಂಡದ ಕ್ಯಾಪ್ಟನ್ ಆಗಿದ್ದು, ಇದೀಗ ಪ್ರೊ. ಕಬಡ್ಡಿ ಲೀಗ್‌ನ ಸ್ಟಾರ್ ಆಟಗಾರರಾಗಿ ಮೆರೆದಿದ್ದಾರೆ. 3 ಬಾರಿ ತೆಲುಗು ಟೈಟಾನ್ಸ್ ಹಾಗೂ ಬೆಂಗಾಲ್ ವಾರಿಯರ್ಸ್‌ ತಂಡಕ್ಕೆ ಆಯ್ಕೆ ತಂಡದ ಪರವಾಗಿ ಒಂದೊಂದು ಬಾರಿ ಆಟವಾಡಿರುವ ಅವರು 6ನೇ ಅವೃತ್ತಿಯಲ್ಲಿ ಯುಪಿ ಯೋಧಾಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಪುತ್ತೂರಿನ ಸಂತ ಫಿಲೋಮಿನಾ ಕಾಲೇಜ್‌ನಲ್ಲಿ ವಿದ್ಯಾರ್ಥಿಯಾಗಿರುವಾಗಲೇ ಕಬಡ್ಡಿ ಬಗ್ಗೆ ಒಲವು ಬೆಳೆಸಿಕೊಂಡ ಅವರು ಸತತ 3 ವರ್ಷಗಳ ಕಾಲ ಮಂಗಳೂರು ಅಂತರ್ ಕಾಲೇಜ್ ಟೂರ್ನಿಯಲ್ಲಿ ಕಾಲೇಜ್‌ಗೆ ಗೆಲುವು ತಂದು ಕೊಟ್ಟಿದ್ದರು. ಅಂತರ ವಿಶ್ವವಿದ್ಯಾನಿಲಯ ಕಬಡ್ಡಿ ಟೂರ್ನಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ್ದರು. ವಿಜಯ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿರುವ ಪ್ರಶಾಂತ್ 2014ರಲ್ಲಿ ಪ್ರೊ. ಕಬಡ್ಡಿ ಲೀಗ್ ಆರಂಭ ಗೊಂಡಾಗಲೇ ತಂಡದಲ್ಲಿ ಆಟವಾಡಲು ಆರಂಭಿಸಿದ್ದರು. ತೆಲುಗು ಟೈಟಾನ್ಸ್, ದಬಾಂಗ್ ದಿಲ್ಲಿ, ಹರಿಯಾಣ ಸ್ಟೀಲರ್ಸ್ ತಂಡದಲ್ಲಿ ಆಟವಾಗಿ ಇದೀಗ ಯುಪಿ ಯೋಧಾಸ್ ಪರ ಆಟಕ್ಕಿಳಿಯಲಿದ್ದಾರೆ. ಫಿಲೋಮಿನಾದಲ್ಲಿ ಪದವಿ ಪಡೆದ ಬಳಿಕ ಪ್ರತಿಷ್ಠಿತ ವಿಜಯ ಬ್ಯಾಂಕ್‌ನಲ್ಲಿ ಹುದ್ದೆ ಪಡೆದು ತನ್ನ ಕರ್ತವ್ಯವನ್ನು ಮುಂದುವರಿಸಿದರು. ವಿಜಯ ಬ್ಯಾಂಕ್‌ನಲ್ಲಿ ಉದ್ಯೋಗ ದಲ್ಲಿದ್ದ ಸಂದರ್ಭದಲ್ಲಿ ಪ್ರಶಾಂತ್‌ರವರಿಗೆ ಭಾರತ ತಂಡದಲ್ಲಿ ಆಡಬೇಕು ಎನ್ನುವ ಉತ್ಸಾಹಕ್ಕೆ ಇನ್ನಷ್ಟು ಪ್ರೋತ್ಸಾಹ ಸಿಕ್ಕಿತು. ವೈಟ್ ಲಿಫ್ಟರ್ ಆಗಬೇಕು ಎಂಬ ತನ್ನಲ್ಲಿದ್ದ ಆಸೆಯು ಕೈಗೂಡಲಿಲ್ಲ ಎಂಬ ನಿರಾಶೆಯಿದ್ದರೂ ಧೃತಿಗೆಡದೆ, ಕಬಡ್ಡಿ ಆಟದ ಮೇಲಿನ ಪ್ರೀತಿಯಿಂದ ಮತ್ತು ಕಬಡ್ಡಿ ಆಟವು ತನ್ನ ಬದುಕಿಗೆ ಆಸರೆಯಾಗಿದೆ ಎಂಬುದನ್ನು ಮಾತ್ರ ಅವರು ಎಂದಿಗೂ ಮರೆಯೋದಿಲ್ಲ. ವಿಜಯ ಬ್ಯಾಂಕ್‌ನ ಉದ್ಯೋಗಿ ಹಾಗೂ ಜಯ ಕರ್ನಾಟಕ ಪುತ್ತೂರು ತಾಲೂಕಿನ ಗೌರವಾಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ ಅವರು ಪ್ರಶಾಂತ್‌ರವರ ಆಟವನ್ನು ಮನಗಂಡು, ಜಯಕರ್ನಾಟಕ ಸಂಸ್ಥಾಪಕ ಎನ್.ಮುತ್ತಪ್ಪ ರೈ ಅವರ ಆಶೀರ್ವಾದೊಂದಿಗೆ ಪ್ರಶಾಂತ್‌ರವರು ವಿಜಯ ಬ್ಯಾಂಕ್‌ನಲ್ಲಿ ಉದ್ಯೋಗವನ್ನು ನಿರ್ವಹಿಸುತ್ತಿದ್ದಾರೆ. ಪ್ರಶಾಂತ್‌ರವರಲ್ಲದೆ ಇಂತಹ ಅನೇಕ ಕ್ರೀಡಾಪಟುಗಳು ವಿಜಯ ಬ್ಯಾಂಕ್‌ನಲ್ಲಿ ಇಂದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಾಲೇಜು ಮೈದಾನವೇ ಬೆಳವಣಿಗೆಯ ಮೂಲ:

ಫಿಲೋಮಿನಾ ಕಾಲೇಜು ಮೈದಾನದಲ್ಲಿ ಸ್ವಯಂಪ್ರೇರಿತರಾಗಿ ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆ ಕಬಡ್ಡಿ ಅಂಕಣದ ಧೂಳಿನೊಂದಿಗೆ ಕಬಡ್ಡಿ ಆಟವನ್ನು ಅಭ್ಯಸಿಸುತ್ತಾ ಬಂದವರು ಪ್ರಶಾಂತ್. ಅವರ ಆಟಕ್ಕೆ ಮತ್ತಷ್ಟು ಪುಷ್ಟಿ ನೀಡಿದ್ದು ಕೋಚ್ ಹಬೀಬ್ ಮಾಣಿ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾಗಿದ್ದ ಎಲ್ಯಾಸ್ ಪಿಂಟೋರವರು. ಇವರಿಂದ ಅಭ್ಯಸಿಸಿದ ಪ್ರಶಾಂತ್ ಮತ್ತೇ ಹಿಂದಿರುಗಿ ನೋಡದೆ ಇದೀಗ ಈ ಅಗ್ರಮಾನ್ಯ ಸ್ಥಾನಕ್ಕೆ ಏರಿದ್ದಾರೆ. ಬೆಳವಣಿಗೆಯ ಏಣಿ:
ಫಿಲೋಮಿನಾ ಕಾಲೇಜ್‌ನಲ್ಲಿ ಮೂರು ವರ್ಷಗಳ ಪದವಿ ವಿದ್ಯಾಭ್ಯಾಸದ ಸಂದರ್ಭದಲ್ಲಿ ಕಬಡ್ಡಿಯಲ್ಲಿ ಅಂತರ್-ಟೂರ್ನಿಯನ್ನು ಗೆಲ್ಲಿಸಿಕೊಟ್ಟ ಪ್ರಶಾಂತ್, ಬಳಿಕ ಅಂತರ್-ವಿಶ್ವವಿದ್ಯಾನಿಲಯ ಕಬಡ್ಡಿ ಟೂರ್ನಿಯಲ್ಲಿ ಮಂಗಳೂರು ವಿ.ವಿಯನ್ನು ಪ್ರತಿನಿಧಿಸಿದ್ದರು. ಮಾತ್ರವಲ್ಲದೆ ಮಂಗಳೂರು ವಿ.ವಿಯ ಕಬಡ್ಡಿ ಟೂರ್ನಿಯ ನಾಯಕರೂ ಆಗಿದ್ದರು. ಕಾಲೇಜು ಹಂತದಲ್ಲಿಯೇ ತನ್ನ ಚಾಣಾಕ್ಷತೆ ಹಾಗೂ ಪಾದರಸದಿಂದ ಕೂಡಿದ ಮಿಂಚಿನಗತಿಯ ರೈಡಿಂಗ್ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದರು. ತನ್ನ ಕಬಡ್ಡಿ ಆಟದಿಂದಲೇ ಅವರು ಪ್ರತಿಷ್ಟಿತ ವಿಜಯ ಬ್ಯಾಂಕ್‌ನಲ್ಲಿ ಉದ್ಯೋಗಕ್ಕೆ ಸೇರಿದರು. ವಿಜಯ ಬ್ಯಾಂಕ್‌ನಲ್ಲಿ ಕರ್ತವ್ಯ ನಿರ್ವಹಿಸಿದ್ದ ಸಂದರ್ಭದಲ್ಲಿಯೇ ಪ್ರೊ. ಕಬಡ್ಡಿ ಆರಂಭಗೊಂಡಿದ್ದು, ಮಾತ್ರವಲ್ಲದೆ ಮೊದಲ ಆವೃತ್ತಿಯಿಂದಲೇ ಪ್ರೊ. ಕಬಡ್ಡಿಯು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆಯನ್ನು ಗಳಿಸತೊಡಗಿತು.

 ಕಬಡ್ಡಿ ಆಟ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ. ಕಬಡ್ಡಿ ಆಟಗಾರರನ್ನು ಜನರು ಸೆಲೆಬ್ರಿಟಿ ಥರಾ ನೋಡುತ್ತಿದ್ದಾರೆ. ಜೊತೆಗೆ ಆರ್ಥಿಕವಾಗಿಯೂ ಉದ್ದಾರವಾಗಿದ್ದಾರೆ. ಕ್ರಿಕೆಟಿಗರಂತೆ ಕಬಡ್ಡಿ ಆಟಗಾರರನ್ನೂ ಪ್ರಾಂಚೈಸಿ ಮಾಲಕರು ಖರೀದಿ ಮಾಡುತ್ತಿರುವುದು ಉತ್ತಮ ವಿಚಾರ.
- ಪ್ರಶಾಂತ್ ರೈ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ