"ನಾನೂ ಸೇನೆ ಸೇರುತ್ತೇನೆ" ಎಂದ ಔರಂಗಝೇಬ್ ಸಹೋದರ 15 ವರ್ಷದ ಆಸಿಮ್

Update: 2018-06-18 10:35 GMT

ಜಮ್ಮು, ಜೂ.18: ಇತ್ತೀಚೆಗೆ ಕಾಶ್ಮೀರದಲ್ಲಿ ಉಗ್ರರಿಂದ ಅಪಹರಣಕ್ಕೊಳಗಾಗಿ ಹತ್ಯೆಗೀಡಾದ ಸೇನಾ ರೈಫಲ್ ಮ್ಯಾನ್ ಔರಂಗ್‍ಜೇಬ್  ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ. ಆದರೆ ತನ್ನ ಹಿರಿಯ ಸೋದರನ ಸಾವಿನಿಂದ 15 ವರ್ಷದ ಆಸಿಮ್ ಅಧೀರನಾಗಿಲ್ಲ. ಸೇನೆಯನ್ನು ಸೇರುವ ನಿರ್ಧಾರದಿಂದಲೂ ಆತ ಹಿಂದೆ ಸರಿದಿಲ್ಲ, ಬದಲಾಗಿ ತನ್ನ ನಿರ್ಧಾರದಲ್ಲಿ ಇನ್ನಷ್ಟು ಅಚಲನಾಗಿದ್ದಾನೆ. ಔರಂಗ್‍ಜೇಬ್ ಕುಟುಂಬವಿರುವ ಸಲಾನಿ ಗ್ರಾಮದಲ್ಲಿ ಸೇನೆಯನ್ನು ಸೇರುವುದು ಮಾಮೂಲಾಗಿದೆ. ಔರಂಗ್‍ಜೇಬ್ ಮತ್ತು ಆಸಿಮ್ ಅವರ ತಂದೆ ಮುಹಮ್ಮದ್ ಹನೀಫ್ ಕೂಡ ಜಮ್ಮು ಕಾಶ್ಮೀರ ಲೈಟ್ ಇನ್ಫೆಂಟ್ರಿಯಲ್ಲಿ ಈ ಹಿಂದೆ ಸಿಪಾಯಿಯಾಗಿದ್ದರು.

ಅಪಹರಣಕ್ಕೊಳಗಾಗುವ ಕೆಲವೇ ನಿಮಿಷಗಳ ಮುಂಚೆ ಔರಂಗ್‍ಜೇಬ್ ತನ್ನ ಕಿರಿಯ ಸೋದರ ಆಸಿಮ್ ಜತೆ ಫೋನಿನಲ್ಲಿ ಮಾತನಾಡಿ ಆತನಿಗೆ ಈದ್ ಹಬ್ಬಕ್ಕಾಗಿ ಹೊಸ ಬಟ್ಟೆಗಳು, ಉಡುಗೊರೆಗಳು ಹಾಗೂ ಕ್ರಿಕೆಟ್ ಬ್ಯಾಟ್ ತರುವುದಾಗಿ ಹೇಳಿದ್ದರು. "ಆದರೆ ಆತ ಬಂದು ನನ್ನನ್ನು ಅಪ್ಪಿಕೊಳ್ಳಲಿಲ್ಲ, ಬದಲಾಗಿ ಶವಪೆಟ್ಟಿಗೆಯಲ್ಲಿ ಹಿಂದಿರುಗಿದ. ನನಗೆ ಯಾವುದೇ ಉಡುಗೊರೆ ಯಾ ಹೊಸ ಬಟ್ಟೆ ಬೇಕಾಗಿಲ್ಲ, ನನಗೆ ನನ್ನ ಸೋದರ ಬೇಕು. ನಿಶ್ಶಸ್ತ್ರ ವ್ಯಕ್ತಿಯೊಬ್ಬನನ್ನು ಅವರು ಕೊಂದಿದ್ದಾರೆ'' ಎಂದು ಆಸಿಮ್ ಹೇಳುತ್ತಾನೆ.

"ನನ್ನ ಸೋದರರು ಹಾಗೂ ತಂದೆಯಂತೆ ನಾನು ಕೂಡ ಸೇನೆ ಸೇರುತ್ತೇನೆ'' ಎಂದು ಹೇಳುವಾಗ ಆತ ಆತ್ಮವಿಶ್ವಾಸದ ಪ್ರತೀಕದಂತೆ ಕಾಣುತ್ತಾನೆ.

44 ರಾಷ್ಟ್ರೀಯ ರೈಫಲ್ಸ್ ಭಾಗವಾಗಿದ್ದ ಔರಂಗ್‍ಜೇಬ್ ಈದ್ ಆಚರಣೆಗಾಗಿ ಮನೆಯತ್ತ ಹೊರಟಿದ್ದಾಗ ಪುಲ್ವಾಮ ಜಿಲ್ಲೆಯಲ್ಲಿ ಉಗ್ರರು ಅವರನ್ನು ಅಪಹರಿಸಿ ನಂತರ ಗುಂಡಿಕ್ಕಿ ಸಾಯಿಸಿದ್ದರು. ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಮೀರ್ ಟೈಗರ್ ನನ್ನು ಹತ್ಯೆಗೈದ ಮೇಜರ್ ರೋಹಿತ್ ಶುಕ್ಲಾ ತಂಡದಲ್ಲಿ ಔರಂಗ್‍ಜೇಬ್ ಒಬ್ಬನಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News