ಹುದೈದಾ: ಹೌದಿ ನೆಲೆಗಳ ಮೇಲೆ ಮುಂದುವರಿದ ಸೌದಿ ಮಿತ್ರಕೂಟದ ವಾಯುದಾಳಿ

Update: 2018-06-18 17:14 GMT

ಏಡನ್ (ಯಮನ್), ಜೂ. 18: ಯಮನ್‌ನ ಪ್ರಮುಖ ಬಂದರು ನಗರ ಹುದೈದಾದ ವಿಮಾನ ನಿಲ್ದಾಣದಲ್ಲಿ ಅಡಗಿಕೊಂಡಿರುವ ಹೌದಿ ಬಂಡುಕೋರರ ವಿರುದ್ಧದ ವಾಯು ದಾಳಿಯನ್ನು ಸೌದಿ ಅರೇಬಿಯ ನೇತೃತ್ವದ ಮಿತ್ರಕೂಟ ಸೋಮವಾರ ಮುಂದುವರಿಸಿದೆ.

ಅದೇ ವೇಳೆ, ಹಾಲಿ ಸಂಘರ್ಷದ ಅತಿ ದೊಡ್ಡ ಕಾಳಗದಿಂದ ತಪ್ಪಿಕೊಳ್ಳುವುದಕ್ಕಾಗಿ ನಾಗರಿಕರು ಪಲಾಯನಗೈಯುತ್ತಿದ್ದಾರೆ.

ವಿಮಾನ ನಿಲ್ದಾಣ ಆವರಣಕ್ಕೆ ಹೊಂದಿಕೊಂಡಿರುವ ಮಂಝರ್ ಪಟ್ಟಣದ ಶಾಲೆಗಳು ಮತ್ತು ಮನೆಗಳ ಮೇಲ್ಛಾವಣಿಗಳಲ್ಲಿ ಅಡಗಿರುವ ಹೌದಿ ಸ್ನೈಪರ್‌ಗಳು ಮತ್ತು ಯೋಧರ ಮೇಲೆ ಅಪಾಚೆ ಹೆಲಿಕಾಪ್ಟರ್‌ಗಳು ದಾಳಿ ನಡೆಸಿವೆ.

 ಭೀಕರ ಕಾಳಗದಲ್ಲಿ ಡಝನ್‌ಗಟ್ಟಳೆ ನಾಗರಿಕರು ಗಾಯಗೊಂಡಿದ್ದಾರೆ ಹಾಗೂ ನೆರವು ಗುಂಪುಗಳಿಗೆ ನಗರದ ಅಗತ್ಯವಿರುವ ಭಾಗಗಳಿಗೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.

ಬಂಡುಕೋರರು ಹುದೈದಾ ನಗರವನ್ನು ಕಳೆದುಕೊಂಡರೆ, ಅವರಿಗೆ ತೀವ್ರ ಹಿನ್ನಡೆಯಾಗಲಿದೆ. ಅದು ಅವರ ಸಾಮಗ್ರಿ ಪೂರೈಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.

ಯಮನ್ ಸಂಘರ್ಷದಲ್ಲಿ ಈವರೆಗೆ 10,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

ಕೆಎಸ್‌ರಿಲೀಫ್‌ನಿಂದ ಹುದೈದಾ ನಗರ ನಿವಾಸಿಗಳಿಗಾಗಿ ತುರ್ತು ಯೋಜನೆ

  ಸೌದಿ ಅರೇಬಿಯ ನೇತೃತ್ವದ ಮಿತ್ರಕೂಟ ಬೆಂಬಲಿತ ಯಮನ್ ಸೇನೆಯು ಬಂದರು ನಗರ ಹುದೈದಾ ಮೇಲಿನ ಹಿಡಿತವನ್ನು ಬಿಗಿಗೊಳಿಸಿರುವಂತೆಯೇ, ದೊರೆ ಸಲ್ಮಾನ್ ಮಾನವೀಯ ನೆರವು ಮತ್ತು ಪರಿಹಾರ ಕೇಂದ್ರ (ಕೆಎಸ್‌ರಿಲೀಫ್)ವು ಸಿಕ್ಕಿಹಾಕಿಕೊಂಡಿರುವ ನಿವಾಸಿಗಳಿಗಾಗಿ ತುರ್ತು ಪ್ರತಿಕ್ರಿಯೆ ಯೋಜನೆಯೊಂದನ್ನು ಸಿದ್ಧಪಡಿಸಿದೆ.

ಈ ಯೋಜನೆಯ ಪ್ರಕಾರ, ಹುದೈದಾ ನಗರಕ್ಕೆ ಪರಿಣತ ವೈದ್ಯಕೀಯ ತಂಡಗಳನ್ನು ಕಳುಹಿಸಲಾಗುವುದು ಹಾಗೂ ಮಾನವೀಯ ಮತ್ತು ಪರಿಹಾರ ನೆರವು ವಿತರಣೆಯನ್ನು ತೀವ್ರಗೊಳಿಸಲಾಗುವುದು ಎಂದು ಕೆಎಸ್‌ರಿಲೀಫ್‌ನಲ್ಲಿ ಆರೋಗ್ಯ ಮತ್ತು ಪರಿಸರ ನೆರವು ನಿರ್ದೇಶಕರಾಗಿರುವ ಡಾ. ಅಬ್ದುಲ್ಲಾ ಅಲ್-ಮುಅಲ್ಲಿಮ್ ತಿಳಿಸಿದರು.

ಯಮನ್ ಸೇನೆಯು ಶನಿವಾರ ಹುದೈದಾ ನಗರದ ವಿಮಾನ ನಿಲ್ದಾಣವನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ ಹಾಗೂ ಇರಾನ್ ಬೆಂಬಲಿತ ಹೌದಿ ಬಂಡುಕೋರರಿಂದ ನಗರವನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಮುಂದುವರಿಯುತ್ತಿದೆ.

‘‘ನಮ್ಮ ಸಮಗ್ರ ಯೋಜನೆ ಸಿದ್ಧವಾಗಿದೆ. ನಗರವು ಬಂಡುಕೋರರಿಂದ ಬಿಡುಗಡೆ ಹೊಂದಿದ ಕ್ಷಣ ಜನರಿಗೆ ನಾವು ವೈದ್ಯಕೀಯ ಸಲಕರಣೆಗಳು ಮತ್ತು ಸೇವೆಯನ್ನು ನೀಡುತ್ತೇವೆ ಹಾಗೂ ಅಲ್ಲಿನ ಸರಕಾರಿ ಆಸ್ಪತ್ರೆಗಳಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ. ಈ ವಲಯದಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಜನರಿಗೆ ಬೇಕಾಗುವ ಅಗತ್ಯ ನೆರವನ್ನು ಒದಗಿಸುತ್ತೇವೆ’’ ಎಂದು ಅಲ್-ಮುಅಲ್ಲಿಮ್ ‘ಅರಬ್ ನ್ಯೂಸ್’ಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News