ಆಡಿ ಕಾರು ಸಿಇಒ ಸ್ಟಾಡ್ಲರ್‌ ಬಂಧನ

Update: 2018-06-18 17:39 GMT

ಬರ್ಲಿನ್, ಜೂ. 18: ಡೀಸೆಲ್ ವಾಹನಗಳ ಹೊಗೆ ಹೊರಸೂಸುವಿಕೆಗೆ ಸಂಬಂಧಿಸಿದ ಹಗರಣದಲ್ಲಿ ಜರ್ಮನ್ ಕಾರು ತಯಾರಕ ಸಂಸ್ಥೆ ‘ಆಡಿ’ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೂಪರ್ಟ್ ಸ್ಟಾಡ್ಲರ್‌ರನ್ನು ಬಂಧಿಸಲಾಗಿದೆ.

ಆಡಿ ಕಾರುಗಳ ತಯಾರಕ ಸಂಸ್ಥೆ ಫೋಕ್ಸ್‌ವ್ಯಾಗನ್‌ನ ವಕ್ತಾರರೊಬ್ಬರು ಈ ಬಂಧನವನ್ನು ಖಚಿತಪಡಿಸಿದ್ದಾರೆ.

ಸ್ಟಾಡ್ಲರ್ ಪುರಾವೆಯನ್ನು ನಾಶಪಡಿಸಲು ಪ್ರಯತ್ನಿಸಬಹುದು ಎಂಬ ಶಂಕೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮ್ಯೂನಿಕ್ ಪ್ರಾಸಿಕ್ಯೂಟರ್‌ಗಳು ಹೇಳಿದ್ದಾರೆ.

 ಈ ಹಗರಣ 3 ವರ್ಷಗಳ ಹಿಂದೆ ಬಹಿರಂಗವಾಗಿತ್ತು. ಡೀಸಲ್ ವಾಹನಗಳ ಹೊಗೆ ತಪಾಸಣೆ ಪರೀಕ್ಷೆಯಲ್ಲಿ ಹಸ್ತಕ್ಷೇಪ ನಡೆಸುವ ಉದ್ದೇಶದ ಸಕಲರಣೆಗಳನ್ನು ಕಾರುಗಳಲ್ಲಿ ಪತ್ತೆಹಚ್ಚಲಾಗಿತ್ತು.

ಆರಂಭದಲ್ಲಿ ಫೋಕ್ಸ್‌ವ್ಯಾಗನ್ ಕಾರುಗಳಲ್ಲಿ ಈ ಸಲಕರಣೆಗಳನ್ನು ಪತ್ತೆಹಚ್ಚಲಾಗಿತ್ತು. ಬಳಿಕ ಆಡಿ ಕಾರುಗಳಲ್ಲಿಯೂ ಈ ಹಗರಣ ಬೆಳಕಿಗೆ ಬಂದಿತ್ತು.

ಡೀಸಲ್ ಇಂಜಿನ್ ಹೊಂದಿರುವ ಇನ್ನೂ 60,000 ಎ6 ಮತ್ತು ಎ7 ಮಾದರಿಗಳ ಹೊಗೆ ನಿಯಂತ್ರಣ ಸಾಫ್ಟ್‌ವೇರ್‌ನಲ್ಲಿ ದೋಷವಿರುವುದನ್ನು ಕಳೆದ ತಿಂಗಳು ಆಡಿ ಕಂಪೆನಿ ಒಪ್ಪಿಕೊಂಡಿತ್ತು.

ಇದಕ್ಕೂ ಮೊದಲು, ಕಳೆದ ವರ್ಷ ಕಂಪೆನಿಯು 8,50,000 ಕಾರುಗಳನ್ನು ಹಿಂದಕ್ಕೆ ಪಡೆದುಕೊಂಡಿತ್ತು. ಆ ಪೈಕಿ ಕೆಲವು ಕಾರುಗಳಿಗೆ ಮಾತ್ರ ಮಾರ್ಪಾಡುಗಳನ್ನು ಮಾಡಬೇಕಾಗಿ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News