ಭಾರತಕ್ಕಿಂತ ಹೆಚ್ಚು ಅಣ್ವಸ್ತ್ರಗಳು ಪಾಕ್‌ನಲ್ಲಿ

Update: 2018-06-19 17:38 GMT

ಲಂಡನ್, ಜೂ. 19: ಭಾರತಕ್ಕಿಂತ ಹೆಚ್ಚಿನ ಪರಮಾಣು ಬಾಂಬ್‌ಗಳನ್ನು ಪಾಕಿಸ್ತಾನ ಹೊಂದಿದೆ ಎಂಬುದಾಗಿ ಸ್ವೀಡನ್‌ನ ಸಂಸ್ಥೆಯೊಂದರ ವರದಿ ತಿಳಿಸಿದೆ. ಪಾಕಿಸ್ತಾನದ ಬಳಿ ಈ ವರ್ಷ 140-150 ಪರಮಾಣು ಬಾಂಬ್‌ಗಳು ಇವೆ ಎಂದು ನಂಬಲಾಗಿದೆ. ಇದು ಕಳೆದ ವರ್ಷಕ್ಕಿಂತ 10 ಹೆಚ್ಚು.

ಅದೇ ವೇಳೆ, ಭಾರತದ ಬಳಿ 130-140 ಪರಮಾಣು ಬಾಂಬ್‌ಗಳು ಇವೆ ಎಂದು ಭಾವಿಸಲಾಗಿದೆ ಎಂದು ಸ್ಟಾಕ್‌ಹೋಮ್ ಇಂಟರ್‌ನ್ಯಾಶನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಎಸ್‌ಐಪಿಆರ್‌ಐ)ನ ವಾರ್ಷಿಕ ಪರಮಾಣು ಅಸ್ತ್ರಗಳ ಮಾಹಿತಿ ತಿಳಿಸಿದೆ.

‘‘ಭಾರತ ಮತ್ತು ಪಾಕಿಸ್ತಾನಗಳೆರಡೂ ತಮ್ಮ ಪರಮಾಣು ಅಸ್ತ್ರಗಳ ಸಂಗ್ರಹಣೆಯನ್ನು ವಿಸ್ತರಿಸುತ್ತಿವೆ ಹಾಗೂ ನೂತನ ಭೂ, ಸಮುದ್ರ ಮತ್ತು ಆಕಾಶ ಆಧಾರಿತ ಕ್ಷಿಪಣಿ ಹಾರಾಟ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿವೆ’’ ಎಂದು ಅದು ಹೇಳಿದೆ.

‘‘ಚೀನಾ ತನ್ನ ಪರಮಾಣು ಅಸ್ತ್ರ ಸಾಗಾಟ ವ್ಯವಸ್ಥೆಯನ್ನು ಆಧುನೀಕರಿಸುವುದನ್ನು ಮುಂದುವರಿಸಿದೆ ಹಾಗೂ ತನ್ನ ಪರಮಾಣು ಆಯುಧಾಗಾರದ ಗಾತ್ರವನ್ನು ನಿಧಾನವಾಗಿ ಹೆಚ್ಚಿಸುತ್ತಿದೆ’’ ಎಂದು ಎಸ್‌ಐಪಿಆರ್‌ಐ ತಿಳಿಸಿದೆ. ರಶ್ಯ ಮತ್ತು ಅಮೆರಿಕಗಳು ಜಗತ್ತಿನ ಒಟ್ಟು ಪರಮಾಣು ಸಿಡಿತಲೆಗಳ 92 ಶೇಕಡದಷ್ಟನ್ನು ಹೊಂದಿವೆ.

2018ರ ಆರಂಭದಲ್ಲಿ ಅಮೆರಿಕ, ರಶ್ಯ, ಬ್ರಿಟನ್, ಫ್ರಾನ್ಸ್, ಚೀನಾ, ಪಾಕಿಸ್ತಾನ, ಇಸ್ರೇಲ್ ಮತ್ತು ಉತ್ತರ ಕೊರಿಯಗಳು ಒಟ್ಟು 14,465 ಪರಮಾಣು ಬಾಂಬ್‌ಗಳನ್ನು ಹೊಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News