ಡೆಹ್ರಾಡೂನ್‌ನಲ್ಲಿ 55,000 ಯೋಗಾಸಕ್ತರಿಗೆ ಪ್ರಧಾನಿ ಮೋದಿ ನೇತೃತ್ವ

Update: 2018-06-20 17:15 GMT

ಹೊಸದಿಲ್ಲಿ,ಜೂ.20: ಗುರುವಾರ ನಾಲ್ಕನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ದೇಶವು ಸರ್ವಸಜ್ಜಾಗಿದ್ದು,ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್‌ನಲ್ಲಿ ನಡೆಯಲಿರುವ ಅತ್ಯಂತ ಬೃಹತ್ ಕಾರ್ಯಕ್ರಮದಲ್ಲಿ 55,000 ಯೋಗಾಸಕ್ತರಿಂದ ವಿವಿಧ ಆಸನಗಳ ಪ್ರದರ್ಶನದ ನೇತೃತ್ವವನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಹಿಸಿಕೊಳ್ಳಲಿದ್ದ್ದಾರೆ.

ಅರಣ್ಯ ಸಂಶೋಧನಾ ಸಂಸ್ಥೆಯ ಆವರಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕಾಗಿ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಕಮಾಂಡೊಗಳನ್ನು ಮತ್ತು ಅರೆ ಮಿಲಿಟರಿ ಪಡೆಗಳನ್ನು ನಿಯೋಜಿಸಲಾಗಿದೆ. ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ದೇಶಾದ್ಯಂತ ಸುಮಾರು 5,000 ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಆಯುಷ್ ಸಚಿವಾಲಯದ ಹಿರಿಯ ಅಧಿಕಾರಿಯೋರ್ವರು ಬುಧವಾರ ಇಲ್ಲಿ ತಿಳಿಸಿದರು. ಇದೇ ವೇಳೆ ಮೋದಿ ಅವರು ಯೋಗವು ಶರೀರವನ್ನು ಫಿಟ್ ಆಗಿಡುವ ವ್ಯಾಯಾಮ ಮಾತ್ರವಲ್ಲ,ಅದು ಆರೋಗ್ಯದ ಭರವಸೆಗೆ ಪಾಸ್‌ಪೋರ್ಟ್ ಆಗಿದೆ ಎಂಬ ಸಂದೇಶದೊಂದಿಗೆ ಟ್ವಿಟರ್‌ನಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದಾರೆ.

ದಿಲ್ಲಿಯಲ್ಲಿ ಎಂಟು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು,ಮುಖ್ಯ ಕಾರ್ಯಕ್ರಮವು ರಾಜಪಥ್‌ನಲ್ಲಿ ನಡೆಯಲಿದೆ. ಬ್ರಹ್ಮಕುಮಾರಿಯರ ಸಂಸ್ಥೆಯು ಕೆಂಪುಕೋಟೆಯಲ್ಲಿ ಏರ್ಪಡಿಸಿರುವ ಯೋಗಕೂಟದಲ್ಲಿ ವಿವಿಧ ಅರೆ ಮಿಲಿಟರಿ ಪಡೆಗಳ ಮಹಿಳಾ ಸಿಬ್ಬಂದಿಗಳು ಸೇರಿದಂತೆ ಸುಮಾರು 50,000 ಜನರು ಭಾಗವಹಿಸಲಿದ್ದಾರೆ. ಆಯುಷ್ ಹಾಗೂ ಇತರ ಹಲವಾರು ಸಚಿವಾಲಯಗಳು ಯೋಗ ಕಾರ್ಯಕ್ರಮಗಳು ನಡೆಯುವ ಸ್ಥಳಗಳ ಬಗ್ಗೆ ಮಾಹಿತಿಗಳನ್ನು ನೀಡುವ ಆ್ಯಪ್‌ಗಳನ್ನು ಬಿಡುಗಡೆಗೊಳಿಸಿವೆ.

150ಕ್ಕೂ ಹೆಚ್ಚಿನ ದೇಶಗಳೂ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News