ಟಿಎಂಸಿ ಕಾರ್ಯಕರ್ತರ ಎನ್‌ಕೌಂಟರ್ ಮಾಡಲಾಗುವುದು: ಬಿಜೆಪಿ ನಾಯಕನ ವಿವಾದಾತ್ಮಕ ಹೇಳಿಕೆ

Update: 2018-06-20 17:14 GMT

ಕೋಲ್ಕತ್ತಾ, ಜೂ. 20: ಬಿಜೆಪಿ ಕಾರ್ಯಕರ್ತರಿಗೆ ಬೆದರಿಕ ಒಡ್ಡುತ್ತಿದ್ದಾರೆ ಎನ್ನಲಾದ ತೃಣಮೂಲ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರ ಎನ್‌ಕೌಂಟರ್ ನಡೆಸಲಾಗುವುದು ಎಂದು ಹೇಳುವ ಮೂಲಕ ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಮತ್ಮೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ.

ಉತ್ತರಬಂಗಾಳದ ಜಲ್‌ಪಾಗುರಿಯಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಘೋಷ್, ತೃಣಮೂಲ ಕಾಂಗ್ರೆಸ್‌ನ ಹಲವು ನಾಯಕರು ಹಾಗೂ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರಿಗೆ ಬೆದರಿಕೆ ಒಡ್ಡುತ್ತಿದ್ದಾರೆ. ಒಂದೋ ಅವರು ಜೈಲಿಗೆ ಹೋಗುತ್ತಾರೆ. ಇಲ್ಲವೇ ಅವರ ಎನ್‌ಕೌಂಟರ್ ನಡೆಯಲಿದೆ. ನಮ್ಮ ಕಾರ್ಯಕರ್ತರನ್ನು ಹತ್ಯೆಗೈದ ಬುಲೆಟ್‌ಗಳನ್ನು ನಾವು ಲೆಕ್ಕ ಹಾಕುತ್ತಿದ್ದೇವೆ. ನಾವು ಬುಲೆಟ್‌ಗಳು ಹಾಗೂ ಹೆಣಗಳನ್ನು ಲೆಕ್ಕ ಹಾಕುವ ಕಾಲ ಬರಲಿದೆ. ನಮ್ಮ ಮೇಲೆ ದಾಳಿ ನಡೆಸಿದರೆ, ರಸಗುಲ್ಲ ನೀಡುತ್ತೇವೆ ಎಂದು ನಾವು ತೃಣಮೂಲ ಕಾಂಗ್ರೆಸ್‌ನೊಂದಿಗೆ ಬಾಂಡ್‌ಗೆ ಸಹಿ ಹಾಕಿಲ್ಲ ಎಂದು ಅವರು ವ್ಯಂಗ್ಯವಾಗಿ ಹೇಳಿದ್ದಾರೆ.

ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ಮಾಡಬೇಡಿ ಎಂದು ನಾವು ಎಚ್ಚರಿಸಿದ್ದೇವೆ. ಒಂದು ವೇಳೆ ದಾಳಿ ನಡೆಸಿದರೆ, ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ದೇಹಕ್ಕೆ ಬ್ಯಾಂಡೇಜ್ ಸುತ್ತಲು ಜಾಗವಿಲ್ಲದಂತೆ ಸದೆಬಡಿಯಲಿದ್ದೇವೆ ಎಂದು ಅವರು ಹೇಳಿದ್ದಾರೆ.

ಪ್ರಚೋದಕ ಹೇಳಿಕೆ ನೀಡಿದ ಘೋಷ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪುರುಲಿಯಾದಲ್ಲಿ ಬಿಜೆಪಿ ಕಾರ್ಯಕರ್ತರಾದ ತ್ರಿಲೋಚನ ಮಹತೋ ಹಾಗೂ ದುಲಾಲ್ ಕುಮಾರ್ ಅವರನ್ನು ಹತ್ಯೆಗೈದಿರುವುದನ್ನು ಪ್ರತಿಭಟಿಸಿ ಪಕ್ಷ ನಡೆಸುತ್ತಿರುವ ರಾಜ್ಯವ್ಯಾಪಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಜಲ್‌ಪಾಗುರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದಿಲೀಪ್ ಘೋಷ್ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News