ಒಂದು ಪ್ಲಾಸ್ಟಿಕ್ ವಿಪತ್ತು

Update: 2018-06-20 18:34 GMT

1950ರ ನಂತರದಲ್ಲಿ ವಿಶ್ವದಲ್ಲಿ 830 ಕೋಟಿ ಟನ್ನುಗಳಷ್ಟು ಪ್ಲಾಸಿಕ್‌ಉತ್ಪಾದಿಸಲಾಗಿದ್ದು ಅದರಲ್ಲಿ ಕೇವಲ ಶೇ.20ರಷ್ಟನ್ನು ಮಾತ್ರ ಮರುಬಳಕೆ ಮಾಡಲಾಗಿದೆ ಅಥವಾ ಸುಟ್ಟುಹಾಕಲಾಗಿದೆ. ಉಳಿದದ್ದು ಸಾಗರದಲ್ಲಿ, ಪರ್ವತ ಶ್ರೇಣಿಗಳಲ್ಲಿ, ನದಿ-ತೊರೆಗಳಲ್ಲಿ, ಬಾವಿಗಳಲ್ಲಿ, ಮತ್ತು ಭಾರತದಂಥ ಕಡೆಗಳಲ್ಲಿ ನಗರೀಕರಣದ ಕಾಯಿಲೆಯ ಪ್ರತೀಕವಾಗಿ ನಿಂತಿರುವ ಬೆಟ್ಟದಂತಹ ಕಸದ ರಾಶಿಗಳಲ್ಲಿ ಸೇರಿಕೊಂಡಿದೆ.

ಪದೇಶಗಳು ಮತ್ತು ಘೋಷಣೆಗಳು ಬದಲಾವಣೆಗಳನ್ನು ತರುವುದಿಲ್ಲ; ಅವುಗಳ ಜೊತೆಗೆ ವಿವರವಾದ, ಪ್ರಾಯೋಗಿಕವಾದ ಮತ್ತು ಆಚರಣೆ ತರಬಲ್ಲ ಯೋಜನೆಗಳಿದ್ದಾಗ ಮಾತ್ರ ಬದಲಾವಣೆಗಳು ಸಾಧ್ಯ. ವಿಶ್ವ ಪರಿಸರ ದಿನದಂದು ಪ್ರಧಾನಿ ನರೇಂದ್ರ ಮೋದಿಯವರು 2022ರ ವೇಳೆೆಗೆ ಭಾರತವು ಬಳಸಿ-ಬಿಸಾಡುವ ಪ್ಲಾಸ್ಟಿಕ್‌ನಿಂದ ಸಂಪೂರ್ಣ ವಿಮುಕ್ತಿ ಸಾಧಿಸಲಿದೆಯೆಂದು ಘೋಷಿಸಿದರು.

ಆದರೆ ಈ ನಾಟಕೀಯ ಘೋಷಣೆಯನ್ನು ಅವಧಿಯೊಳಗೆ ಸಾಧಿಸುವ ಯಾವುದಾದರೂ ಯೋಜನೆಯಿದೆಯೇ ಎಂಬುದು ಈವರೆಗೆ ಸ್ಪಷ್ಟವಾಗಿಲ್ಲ. ನಾವು ಪ್ಲಾಸ್ಟಿಕ್ ಎಂದು ಕರೆಯುವ ಈ ಪಾಲಿಥೀನ್ ಅನ್ನು 1898ರಲ್ಲೇ ಆವಿಷ್ಕರಿಸಲಾಯಿತಾದರೂ ಅದರ ಸಾಮೂಹಿಕ ಉತ್ಪಾದನೆ ಶುರುವಾದದ್ದು ಮಾತ್ರ 1939ರಲ್ಲಿ. ಅಂದಿನಿಂದ ಅದು ಬಳಸಿ-ಬಿಸಾಡುವ ಪ್ಲಾಸ್ಟಿಕ್‌ನಿಂದ ಮೊದಲುಗೊಂಡು ಇತರ ಹಲವು ಬಗೆಯ ಬಳಕೆಗಳ ಮೂಲಕ ನಮ್ಮ ಜೀವನವನ್ನು ಆವರಿಸಿಕೊಂಡಿದೆ.

ಇದು ಅಗ್ಗ, ಹಗುರ ಮತ್ತು ಬೇಕೆಂದಂತೆ ಮಾರ್ಪಾಡಾಗಬಲ್ಲ ಬಳಕೆಯ ಸಾಮಗ್ರಿಯಾಗಿದೆ. ಹೀಗಾಗಿ ಅದರ ಬದಲಿಗೆ ಮತ್ತೊಂದರ ಬಳಕೆಯನ್ನು ಪರಿಚಯಿಸುವುದು ಅಷ್ಟು ಸುಲಭವಲ್ಲ. ಇದು ‘ಬಳಸಿ ಬಿಸಾಕು’ ತತ್ವವನ್ನಾಧರಿಸಿದ ಹಳೆಯ ಕೈಗಾರಿಕಾ ದೇಶಗಳಿಂದ ನಾವು ಆಮದು ಮಾಡಿಕೊಂಡಿರುವ ಆರ್ಥಿಕ ಅಭಿವೃದ್ಧಿ ಮಾದರಿಯ ಪ್ರತೀಕವೂ ಆಗಿದೆ. ಇಲ್ಲಿ ಯಾವುದೂ ಶಾಶ್ವತವಾಗುಳಿಯುವಂತಿಲ್ಲ. ಆಗ ಮಾತ್ರ ಕೈಗಾರಿಕೆಯ ಯಂತ್ರಗಳು ತಿರುಗುತ್ತಿರಲು ಸಾಧ್ಯ. ಈ ಮಾದರಿಯನ್ನು ಬದಲಾಯಿಸುವುದು ಊಹಿಸಲಸಾಧ್ಯವೆಂಬಂತೆ ಕಾಣುತ್ತದೆ. ಆದರೂ ಇದರಿಂದ ಉಂಟಾಗುತ್ತಿರುವ ಅನಾಹುತವನ್ನು ವಿಶ್ವಸಂಸ್ಥೆಯ ಪರಿಸರ ಯೋಜನೆಯು ‘ಪ್ಲಾಸ್ಟಿಕ್ ವಿಪತ್ತು’ ಎಂದು ಬಣ್ಣಿಸಿದ್ದು ಈ ‘ಬಳಸಿ ಬಿಸಾಡು’ ಸಂಸ್ಕೃತಿಯ ಬಗೆಗಿನ ನಮ್ಮ ಉಡಾಫೆಯ ಧೋರಣೆಯ ಮೂಲವೂ ಇದೇ ಆಗಿದೆ.

ಇಂದು ನಮ್ಮ ಮಹಾ ಸಾಗರಗಳು ಅಂದಾಜು 15 ಕೋಟಿ ಟನ್‌ನಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಒಳಗಿರಿಸಿಕೊಂಡಿವೆ ಎಂಬುದು ಸಾಬೀತಾಗಿದೆ; ಇದರಿಂದಾಗಿ ಸಮದ್ರ ಜೀವಿಗಳು, ಪಕ್ಷಿಗಳು ಮತ್ತು ಸಸ್ಯಗಳು ಉಸಿರುಗಟ್ಟಿ ಸಾಯುತ್ತಿವೆ; ದೊಡ್ಡ ಪ್ರಮಾಣದ ಜಮೀನುಗಳ ಮೇಲೆ ನಾಶವಾಗದ ಪ್ಲಾಸ್ಟಿಕ್ ಯುಕ್ತ ತ್ಯಾಜ್ಯಗಳನ್ನು ಸುರಿಯಲಾಗುತ್ತಿದ್ದು ಅವು ಮಣ್ಣಿನೊಳಗೆ ಕರಗಿಹೋಗದೆ ಹಾಗೆಯೇ ವಿಷಯುಕ್ತವಾಗುಳಿಯುತ್ತಿವೆ; ಮತ್ತು ಈ ತ್ಯಾಜ್ಯಗಳಿಂದ ಮೈಕ್ರೋ ಪ್ಲಾಸ್ಟಿಕ್‌ಗಳು ಜಲಸಂಪನ್ಮೂಲದೊಳಗೆ ಮತ್ತು ಆಹಾರ ಚಕ್ರದೊಳಗೆ ಬೆರೆತುಹೋಗುತ್ತಿರುವುದು ಮತ್ತೊಂದು ಗಾಬರಿಗೊಳಿಸುವ ವಿಷಯವಾಗಿದೆ.

ಇತ್ತೀಚೆಗೆ ಹಲವಾರು ದೇಶಗಳಲ್ಲಿನ ಕುಡಿಯುವ ನೀರಿನ ಸ್ಯಾಂಪಲ್ ಮಾದರಿಗಳ ಅಧ್ಯಯನಗಳು ನಡೆದಿದ್ದು ಮೈಕ್ರೋ ಪ್ಲಾಸ್ಟಿಕ್‌ನಿಂದ ಕುಡಿಯುವ ನೀರು ಕಲುಷಿತಗೊಂಡಿರುವ ದೇಶಗಳಲ್ಲಿ ಭಾರತವು ಅಮೆರಿಕ ಮತ್ತು ಲೆಬನಾನಿನ ನಂತರ ಮೂರನೇ ಸ್ಥಾನದಲ್ಲಿದೆ; ಪರೀಕ್ಷೆ ಮಾಡಲ್ಪಟ್ಟ ಶೇ.82.4ರಷ್ಟು ಮಾದರಿ ಸಂಗ್ರಹಗಳು ಪ್ಲಾಸ್ಟಿಕ್‌ಯುಕ್ತವಾಗಿತ್ತು. ನೀರು ಮತು ಆಹಾರಗಳ ಮೂಲಕ ಪ್ಲಾಸ್ಟಿಕ್‌ನ್ನು ಸೇವಿಸುವುದರಿಂದ ಆರೋಗ್ಯದ ಮೇಲಾಗುವ ಪರಿಣಾಮಗಳ ಬಗ್ಗೆ ಇನ್ನೂ ಗಂಭೀರವಾದ ಅಧ್ಯಯನ ನಡೆಯುತ್ತಿದೆ. ಆದರೆ ಪ್ಲಾಸ್ಟಿಕ್ ತ್ಯಾಜ್ಯಗಳಿಂದ ನೀರು ಸರಬರಾಜಿಗೇ ತೊಂದರೆಯಾಗುತ್ತಿದೆಯೆಂಬುದೇ ಸಾಕಷ್ಟು ಕಳವಳಕಾರಿಯಾದ ಸಂಗತಿಯಾಗಿದೆ. 1950ರ ನಂತರದಲ್ಲಿ ವಿಶ್ವದಲ್ಲಿ 830 ಕೋಟಿ ಟನ್ನುಗಳಷ್ಟು ಪ್ಲಾಸಿಕ್‌ಉತ್ಪಾದಿಸಲಾಗಿದ್ದು ಅದರಲ್ಲಿ ಕೇವಲ ಶೇ.20ರಷ್ಟನ್ನು ಮಾತ್ರ ಮರುಬಳಕೆ ಮಾಡಲಾಗಿದೆ ಅಥವಾ ಸುಟ್ಟುಹಾಕಲಾಗಿದೆ. ಉಳಿದದ್ದು ಸಾಗರದಲ್ಲಿ, ಪರ್ವತ ಶ್ರೇಣಿಗಳಲ್ಲಿ, ನದಿ-ತೊರೆಗಳಲ್ಲಿ, ಬಾವಿಗಳಲ್ಲಿ, ಮತ್ತು ಭಾರತದಂಥ ಕಡೆಗಳಲ್ಲಿ ನಗರೀಕರಣದ ಕಾಯಿಲೆಯ ಪ್ರತೀಕವಾಗಿ ನಿಂತಿರುವ ಬೆಟ್ಟದಂತಹ ಕಸದ ರಾಶಿಗಳಲ್ಲಿ ಸೇರಿಕೊಂಡಿದೆ.

ಈ ಸಮಸ್ಯೆಯು ಅಗಾಧ ಸ್ವರೂಪವನ್ನು ಪಡೆದುಕೊಂಡಿದೆ. ಇದು ಬಗೆಹರಿಯಬೇಕೆಂದರೆ ಉತ್ಪಾದನೆ ಮತ್ತು ಬಳಕೆಗಳ ಬಗ್ಗೆ ನಮ್ಮ ಧೋರಣೆಗಳನ್ನು ಹಿಂದುಮುಂದಾಗಿಸಿ ಪರಿಶೀಲಿಸುವ ಅಗತ್ಯವಿದೆ. ಸಮಸ್ಯೆಯನ್ನು ನಿವಾರಿಸಲು ಭಾರತವು ತೆಗೆದುಕೊಂಡಿರುವ ಕ್ರಮಗಳು ಸಮಸ್ಯೆಯ ತಲೆಗಿಂತ ಬಾಲವನ್ನು ಮಾತ್ರ ಪರಿಗಣಿಸುವಂತಿದೆ. ಇದೇ ರೀತಿಯ ಧೋರಣೆಯನ್ನು ವಾಹನಗಳು ಉಂಟು ಮಾಡುತ್ತಿರುವ ಮಾಲಿನ್ಯವನ್ನು ನಿಯಂತ್ರಣ ಮಾಡುವಲ್ಲೂ ಪ್ರದರ್ಶಿಸಲಾಗಿದೆ. ವಾಹನಗಳು ಬಳಸುತ್ತಿರುವ ಇಂಧನಗಳ ಗುಣಮಟ್ಟದ ಮೇಲೆ ನಿಯಂತ್ರಣವನ್ನು ಹೇರುವ ಬದಲಿಗೆ ಎಲ್ಲಾ ವಾಹನಗಳಿಗೂ ಪರಿಸರ ಮಾಲಿನ್ಯ ತಪಾಸಣೆಯನ್ನು ಮಾತ್ರ ಕಡ್ಡಾಯ ಮಾಡಲಾಗಿದೆ. ಈವರೆಗೆ ಭಾರತದ 18 ರಾಜ್ಯಗಳು ತಮ್ಮ ರಾಜ್ಯಗಳ ನಿರ್ದಿಷ್ಟ ನಗರಗಳಲ್ಲಿ ಮತ್ತು ಪ್ರದೇಶಗಳಲ್ಲಿ ಬಳಸಿ-ಬಿಸಾಕುವ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿವೆ. ಆದರೆ ಈ ಕ್ರಮಗಳು ಜಗತ್ತಿನಾದ್ಯಂತ ಎಲ್ಲೂ ಯಶಸ್ವಿಯಾಗಿಲ್ಲ. ಬಳಸಿ-ಬಿಸಾಕುವ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದರಲ್ಲಿ ಅತಿ ಹೆಚ್ಚು ಯಶಸ್ಸನ್ನು ಸಾಧಿಸಿರುವ ರಾಜ್ಯ ಸಿಕ್ಕಿಂ.

ಆ ರಾಜ್ಯದಲ್ಲಿ 1998ರಲ್ಲೇ ಬಳಸಿ-ಬಿಸಾಕುವ ಪ್ಲಾಸ್ಟಿಕ್‌ನ ಮೇಲೆ ನಿಷೇಧವನ್ನೂ ಹೇರಿದ್ದರೂ ಈವರೆಗೆ ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಸಾಧ್ಯವಾಗಿಲ್ಲ. ಆದರೂ ಆ ರಾಜ್ಯವು ತನ್ನ ಜನರಲ್ಲಿ ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿಯನ್ನು ಮೂಡಿಸಲು ಸಾಧ್ಯವಾಗಿದೆಯಲ್ಲದೆ ಅಗ್ಗದ ಬೆಲೆಯ ಪರ್ಯಾಯಗಳನ್ನು ಪರಿಚಯಿಸುವ ಪ್ರಯತ್ನಗಳನ್ನೂ ಮಾಡಿದೆ. 2014ರಲ್ಲಿ ಟಾಕ್ಸಿಕ್ ಲಿಂಕ್ ಎಂಬ ಸಂಸ್ಥೆಯು ‘ವಿಷಕಾರಿ ತ್ಯಾಜ್ಯಗಳು ಮತ್ತು ಪರಿಸರ’ ಎಂಬ ಬಗ್ಗೆ ನಡೆಸಿದ ಅಧ್ಯಯನದಲ್ಲಿ ದಿಲ್ಲಿ, ಚಂಡಿಗಡ ಮತ್ತು ಸಿಕ್ಕಿಮ್‌ಗಳೂ ಸೇರಿದ್ದವು. ಅದರ ಪ್ರಕಾರ ದಿಲ್ಲಿ ಮತ್ತು ಚಂಡಿಗಡಗಳು ಪ್ಲಾಸ್ಟಿಕ್ ಚೀಲಗಳ ಬಳಕೆಯ ಮೇಲೆ ನಿಷೇಧವನ್ನು ಹೇರಿದ್ದರೂ ಅದರ ಬಳಕೆಯನ್ನು ತಗ್ಗಿಸಲು ಅಥವಾ ಅದರ ಪರಿಣಾಮಗಳ ಬಗ್ಗೆ ಜನಜಾಗೃತಿಯನ್ನು ಮೂಡಿಸಲು ಯಶಸ್ವಿಯಾಗಿಲ್ಲ. ದಿಲ್ಲಿ ಮತ್ತು ಚಂಡಿಗಡದಂತಹ ಸಣ್ಣ ಸಣ್ಣ ರಾಜ್ಯಗಳಲ್ಲೇ ಪ್ಲಾಸ್ಟಿಕ್ ನಿಷೇಧದ ಅನುಷ್ಠಾನದ ಪರಿಸ್ಥಿತಿ ಹೀಗಿರುವಾಗ ಇತ್ತೀಚೆಗೆ ತಾನೇ ಪ್ಲಾಸ್ಟಿಕ್ ನಿಷೇಧ ಮಾಡಿದಂಥ ಮಹಾರಾಷ್ಟ್ರದಂಥ ದೊಡ್ಡ ರಾಜ್ಯಗಳಲ್ಲಿ ಇಂತಹ ನಿಷೇಧಗಳು ಸಫಲವಾಗುವ ಸಾಧ್ಯತೆ ಎಷ್ಟಿರಬಹುದು?

 ಕೃಪೆ: Economic and Political Weekly

Writer - ಅನು: ಶಿವಸುಂದರ್

contributor

Editor - ಅನು: ಶಿವಸುಂದರ್

contributor

Similar News

ಜಗದಗಲ
ಜಗ ದಗಲ