ಖಾಸಗಿತನ ಕಾಯ್ದೆಗೆ ಧಕ್ಕೆ ತಂದ ಆಧಾರ್

Update: 2018-06-20 18:34 GMT

ಆಧಾರ್ ಮೂಲಕ ಸಂಗ್ರಹಿಸಲಾಗಿರುವ ದತ್ತಾಂಶಗಳು ಪ್ರಸ್ತಾವಿತ ಕಾನೂನಿನ ವ್ಯಾಪ್ತಿಯಿಂದ ಹೊರಗಿರಲಿದೆ. ಇದರಿಂದಾಗಿ ದತ್ತಾಂಶಗಳ ಸಂಗ್ರಹ ಮತ್ತು ಅದರ ಬಹಿರಂಗಪಡಿಸುವ ಸಾಧ್ಯತೆಗಳಿರುವುದರ ನೆಲೆಯಲ್ಲಿ ಆಧಾರ್ ಅನ್ನು ವಿರೋಧಿಸುವವರಿಗೆ ಹಿನ್ನಡೆಯನ್ನುಂಟು ಮಾಡಲಿದೆ.

ತ್ತಾಂಶ ರಕ್ಷಣೆಯ ರೂಪುರೇಷೆಯನ್ನು ರಚಿಸುವಂತೆ ಸೂಚಿಸಿ ಸರ್ವೋಚ್ಚ ನ್ಯಾಯಾಲಯ ನೀಡಿದ ಖಾಸಗಿತನದ ಹಕ್ಕು ಕುರಿತ ತೀರ್ಪಿನ ಹಿನ್ನೆಲೆಯಲ್ಲಿ ರಚನೆ ಗೊಂಡಿರುವ ನ್ಯಾಯಾಧೀಶ ಬಿ.ಎನ್ ಶ್ರೀಕೃಷ್ಣ ಸಮಿತಿ ಇನ್ನೇನು ಪ್ರಸ್ತಾವಿತ ಕಾನೂನಿನ ಜಾರಿಗೂ ಹಿಂದೆ ಅನುಷ್ಠಾನಗೊಂಡಿರುವ ಯೋಜನೆಗಳಿಗೆ ಅನ್ವಯಿಸುವಂತಿಲ್ಲ ಎಂದು ಸಲಹೆ ನೀಡಲು ಮುಂದಾಗಿದೆ. ಇದನ್ನು ಸರಳವಾಗಿ ವಿವರಿಸುವುದಾದರೆ, ಆಧಾರ್ ಮೂಲಕ ಸಂಗ್ರಹಿಸಲಾಗಿರುವ ದತ್ತಾಂಶಗಳು ಈ ಕಾನೂನಿನ ವ್ಯಾಪ್ತಿಯಿಂದ ಹೊರಗಿರಲಿದೆ. ಇದರಿಂದಾಗಿ ದತ್ತಾಂಶಗಳ ಸಂಗ್ರಹ ಮತ್ತು ಅದರ ಬಹಿರಂಗಪಡಿಸುವ ಸಾಧ್ಯತೆಗಳಿರುವುದರ ನೆಲೆಯಲ್ಲಿ ಆಧಾರ್ ಅನ್ನು ವಿರೋಧಿಸುವವರಿಗೆ ಹಿನ್ನಡೆಯನ್ನುಂಟು ಮಾಡಲಿದೆ. ‘ದಿ ಪ್ರಿಂಟ್’ ಕೈ ಸೇರಿರುವ ಕರಡು ವರದಿಯಲ್ಲಿ, ಪರಿಣಾಮಕಾರಿ ಅನುಷ್ಠಾನ ಮತ್ತು ದತ್ತಾಂಶ ಪಾಲಕರ ವಿಶ್ವಾಸಾರ್ಹತೆಯ ಕಾರಣಕ್ಕಾಗಿ ದತ್ತಾಂಶ ಖಾಸಗಿತನ ರಕ್ಷಣೆ ಕಾಯ್ದೆಯು ಈ ಕಾನೂನು ಜಾರಿಗೆ ಬರುವ ಮುನ್ನ ಅನುಷ್ಠಾನಗೊಂಡು ಚಾಲನೆಯಲ್ಲಿರುವ ಯೋಜನೆಗಳಿಗೆ ಅನ್ವಯವಾಗುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿಯು ತಿಳಿಸಿದೆ. ಅಷ್ಟು ಮಾತ್ರವಲ್ಲ, ಕರಡು ಮಸೂದೆಯಲ್ಲಿ, ನೂತನ ಕಾನೂನನ್ನು ತಡೆರಹಿತವಾಗಿ ಅನುಷ್ಠಾನಗೊಳಿಸುವುದನ್ನು ಖಾತರಿಪಡಿಸಿಕೊಳ್ಳಲು ದತ್ತಾಂಶ ಪಾಲಕರಿಗೆ ಸಾಕಷ್ಟು ಸಮಯವನ್ನು ನೀಡುವ ಬಗ್ಗೆಯೂ ತಿಳಿಸಲಾಗಿದೆ. ಯಾಕೆಂದರೆ ದತ್ತಾಂಶ ರಕ್ಷಣೆ ಮಸೂದೆಯು ಹೊಸ ಕಾನೂನಾಗಲಿದ್ದು ನೂತನ ನಿಯಂತ್ರಕ ರೂಪುರೇಷೆಯನ್ನು ರಚಿಸುವ ಅಗತ್ಯವಿದೆ ಎಂದು ಕರಡು ಮಸೂದೆಯಲ್ಲಿ ತಿಳಿಸಲಾಗಿದೆ.

ಸಮಿತಿಯು ಅಪರಾಧ ಎಂದು ಪಟ್ಟಿ ಮಾಡಬೇಕು ಎಂದು ತಿಳಿಸಿರುವ ಕೆಲವು ವಿಷಯಗಳೆಂದರೆ, ವ್ಯಕ್ತಿಯ ವೈಯಕ್ತಿಕ ಮತ್ತು ಸೂಕ್ಷ್ಮ ದತ್ತಾಂಶಗಳನ್ನು ಪಡೆದು, ವರ್ಗಾಯಿಸಿ, ಬಹಿರಂಗಪಡಿಸಿ ಮತ್ತು ಮಾರಾಟ ಮಾಡುವ ಮೂಲಕ ಆ ವ್ಯಕ್ತಿಗೆ ಹಾನಿಯನ್ನುಂಟು ಮಾಡುವುದು ಮತ್ತು ಮೊದಲೇ ಡಿ-ಐಡೆಂಟಿಫೈ ಮಾಡಲಾದ ದತ್ತಾಂಶವನ್ನು ರಿ-ಐಡೆಂಟಿಫೈ ಮಾಡುವುದು. ಅಪರಾಧಕ್ಕೆ ಪ್ರೇರಣೆ ನೀಡುವ ಉದ್ದೇಶಪೂರ್ವಕ ಹಾಗೂ ಅಜಾಗರೂಕ ವರ್ತನೆಗೆ ಶಿಕ್ಷೆ ವಿಧಿಸಬೇಕು ಎಂದು ಶಿಫಾರಸು ಮಾಡಿರುವ ಕರಡು, ಈ ಅಪರಾಧವನ್ನು ಕಾನೂನು ವ್ಯಾಪ್ತಿಗೆ ತಂದು ಜಾಮೀನುರಹಿತವನ್ನಾಗಿಸಬೇಕು ಎಂದು ತಿಳಿಸಿದೆ. ಒಂದು ವೇಳೆ ಅಪರಾಧವನ್ನು ಯಾವುದೇ ಕಾರ್ಪೊರೇಟ್ ಸಂಸ್ಥೆ ಅಥವಾ ಸರಕಾರಿ ಇಲಾಖೆ ಮಾಡಿದರೆ ಆ ಸಂದರ್ಭದಲ್ಲಿ ಅದರ ಹೊಣೆಯು ಆ ಸಂಸ್ಥೆಯ ವ್ಯವಹಾರವನ್ನು ನೋಡಿಕೊಳ್ಳುವ ಅಥವಾ ಸರಕಾರಿ ಇಲಾಖೆಯ ಮುಖ್ಯಸ್ಥನ ಮೇಲೆ ಬೀಳುತ್ತದೆ ಎಂದು ತಿಳಿಸಲಾಗಿದೆ. ಒಂದು ವೇಳೆ ದತ್ತಾಂಶದ ಮಾಲಕರಿಗೆ ಯಾವುದೇ ರೀತಿಯ ಸಮಸ್ಯೆಯುಂಟಾದರೆ ಅದಕ್ಕೆ ಪರಿಹಾರವನ್ನು ನೀಡಬೇಕು ಎಂದು ಕರಡಿನಲ್ಲಿ ಶಿಫಾರಸು ಮಾಡಲಾಗಿದೆ. ಆದರೆ, ಕಠಿಣ ಖಾಸಗಿತನ ಮತ್ತು ದತ್ತಾಂಶ ರಕ್ಷಣೆ ಕಾನೂನು ಜಾರಿಗಾಗಿ ಹೋರಾಡುತ್ತಿರುವವರಿಗೆ ಆಕ್ರೋಶ ಉಂಟು ಮಾಡುವ ಕ್ರಮವೊಂದರಲ್ಲಿ, ಆರೋಪಿತ ವ್ಯಕ್ತಿಯು ಅಪರಾಧವು ತನಗೆ ಅರಿವಿಲ್ಲದಂತೆ ನಡೆದಿದೆ ಅಥವಾ ಅಪರಾಧ ನಡೆಯದಂತೆ ತಡೆಯಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸಾಬೀತುಪಡಿಸಿದರೆ ಆ ವ್ಯಕ್ತಿಯನ್ನು ನಿರ್ದೋಷಿಯೆಂದು ನಿರ್ಧರಿಸಿ ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಲಾಗುವುದು ಎಂದು ಕರಡು ತಿಳಿಸಿದೆ.

ಇತರ ಪ್ರಮುಖ ಸಲಹೆಗಳೆಂದರೆ:

ಗಡಿಯಾಚೆಗಿನ ಎಲ್ಲ ವೈಯಕ್ತಿಕ ದತ್ತಾಂಶ ವರ್ಗಾವಣೆಗಳನ್ನು ಸರಿಯಾದ ಒಪ್ಪಂದಗಳ ಮೂಲಕವೇ ನಡೆಸಬೇಕು ಮತ್ತು ಅಂಥ ದತ್ತಾಂಶಗಳಿಗೆ ಯಾವುದೇ ಹಾನಿ ಅಥವಾ ಸೋರಿಕೆಯಾದರೆ ಅದಕ್ಕೆ ಕಳುಹಿಸಿದವರನ್ನೇ ಹೊಣೆಯಾಗಿಸಬೇಕು. ಸೂಕ್ಷ್ಮ ಎಂದು ಪರಿಗಣಿಸಲಾಗುವ ವೈಯಕ್ತಿಕ ದತ್ತಾಂಶಗಳನ್ನು ಭಾರತದಿಂದ ಹೊರಗಡೆ ಕಳುಹಿಸುವಂತಿಲ್ಲ. ಆರ್ಥಿಕತೆ ಮತ್ತು ರಾಷ್ಟ್ರದ ಸುಸೂತ್ರ ಕಾರ್ಯಾಚರಣೆಗೆ ಅಗತ್ಯವಿರುವ ದತ್ತಾಂಶಗಳನ್ನು ಸೂಕ್ಷ್ಮ ಎಂದು ಪರಿಗಣಿಸಲಾಗುವುದು. ಈ ದತ್ತಾಂಶವು ಆಧಾರ್ ಸಂಖ್ಯೆ, ಅನುವಂಶಿಕ ದತ್ತಾಂಶ, ಬಯೋಮೆಟ್ರಿಕ್ ದತ್ತಾಂಶ ಹಾಗೂ ಆರೋಗ್ಯ ದತ್ತಾಂಶಗಳನ್ನು ಹೊಂದಲಿದೆ ಎಂದು ವರದಿಯು ಸ್ಪಷ್ಟಪಡಿಸುತ್ತದೆ. ದತ್ತಾಂಶ ರಕ್ಷಣಾ ಪ್ರಾಧಿಕಾರ (ಡಿಪಿಎ) ಎಂಬ ಸ್ವತಂತ್ರ ಸಂಸ್ಥೆಯನ್ನು ರಚಿಸಲಾಗುವುದು. ಈ ಸಂಸ್ಥೆಯ ಕಾರ್ಯ, ಪ್ರಸ್ತಾವಿತ ಕಾನೂನಿನ ನಿಗಾವಣೆ ಮತ್ತು ಅನುಷ್ಠಾನ ಹಾಗೂ ತನಿಖೆ ಮತ್ತು ದೂರುಗಳ ನಿಭಾವಣೆ. ಎಲ್ಲ ದತ್ತಾಂಶ ಸಂಗ್ರಾಹಕರು ಡಿಪಿಎ ಜೊತೆ ನೋಂದಾವಣೆ ಮಾಡಿಸಿಕೊಳ್ಳಬೇಕು. ದತ್ತಾಂಶ ಮಾಲಕರು ಮತ್ತು ದತ್ತಾಂಶ ಸಂಗ್ರಾಹಕರ ಮಧ್ಯೆ ಇರುವ ದೂರುಗಳನ್ನು ಆಲಿಸಲು ದತ್ತಾಂಶ ಒಂಬುಡ್ಸ್‌ಮನ್ ನೇಮಿಸಲಾಗುವುದು. ದತ್ತಾಂಶ ಓಂಬುಡ್ಸ್‌ಮನ್ ನೀಡಿದ ಆದೇಶದ ವಿರುದ್ಧ ಮೇಲ್ಮನವಿಯನ್ನು ಮೇಲ್ಮನವಿ ಪೀಠದಲ್ಲಿ ಮಾಡಬಹುದಾಗಿದೆ. ಈ ಮೇಲ್ಮನವಿ ಪೀಠದ ಆದೇಶದ ವಿರುದ್ಧದ ಮನವಿಗಳನ್ನು ಸರ್ವೋಚ್ಚ ನ್ಯಾಯಾಲಯ ಆಲಿಸಲಿದೆ.

ಯಾವುದೇ ರೀತಿಯ ವೈಯಕ್ತಿಕ ದತ್ತಾಂಶವನ್ನು ಪಡೆಯಲು ಅನುಮತಿ ಪಡೆಯುವುದು ಅಗತ್ಯವಾಗಿದೆ. ನಿಖರ, ಸ್ಪಷ್ಟ ಹಾಗೂ ಹಿಂಪಡೆಯಲು ಸಾಧ್ಯವಾಗದಂಥ ಆಯ್ಕೆಗಳ ಆಧಾರದಲ್ಲಿ ಪಡೆಯಲಾದ ಸಮ್ಮತಿಯನ್ನು ಅಸಿಂಧು ಎಂದು ಪರಿಗಣಿಸಲಾಗುವುದು. ಸೂಕ್ಷ್ಮ ವೈಯಕ್ತಿಕ ದತ್ತಾಂಶಗಳನ್ನು ಪಡೆಯಲು ನೀಡಲಾಗುವ ಒಪ್ಪಿಗೆ ಕೂಡಾ ಸ್ಪಷ್ಟ ಹಾಗೂ ವಿವರವಾಗಿರಬೇಕು. ದತ್ತಾಂಶದ ಮಾಲಕ ಹಾಗೂ ದತ್ತಾಂಶ ನಿಯಂತ್ರಕರ ಮಧ್ಯೆ ವಿಶ್ವಾಸಾರ್ಹ ಸಂಬಂಧವಿರಬೇಕು.

ಮರೆತುಬಿಡುವ ಹಕ್ಕು:

ದತ್ತಾಂಶ ಮಾಲಕರು ಓಂಬುಡ್ಸ್‌ಮನ್‌ನಲ್ಲಿ ಮರೆತುಬಿಡುವ ಹಕ್ಕಿಗೆ ಮನವಿ ಮಾಡಬಹುದು ಎಂದು ಕರಡು ಮಸೂದೆಯಲ್ಲಿ ತಿಳಿಸಲಾಗಿದೆ. ಈ ಹಕ್ಕನ್ನು ಕರಡು ಮಸೂದೆಯಲ್ಲಿ ತಿಳಿಸಲಾದ ನಿಯಮಗಳ ಆಧಾರದಲ್ಲಿ ನೀಡಲಾಗುವುದು. ಆದರೆ, ಇಂಥ ಮನವಿಯು ಯಾವುದೇ ಪ್ರಜೆಯ ವಾಕ್‌ಸ್ವಾತಂತ್ರ, ಅಭಿವ್ಯಕ್ತಿ ಸ್ವಾತಂತ್ರ ಅಥವಾ ಮಾಹಿತಿ ಹಕ್ಕಿಗೆ ಅಡ್ಡಿಯುಂಟುಮಾಡುತ್ತದೆ ಎಂದಾದರೆ ಅಂಥ ಮನವಿಯನ್ನು ದತ್ತಾಂಶ ಓಂಬುಡ್ಸ್‌ಮನ್ ನಿರಾಕರಿಸಬಹುದಾಗಿದೆ.

ನ್ಯಾಯಾಧೀಶ ಶ್ರೀಕೃಷ್ಣ ಸಮಿತಿ ಎಂದರೆ ಏನು?

ದತ್ತಾಂಶ ರಕ್ಷಣೆ, ಸಮಸ್ಯೆಗಳನ್ನು ಬಗೆಹರಿಸಲು ಸಲಹೆಗಳನ್ನು ನೀಡಲು ಮತ್ತು ದತ್ತಾಂಶ ರಕ್ಷಣಾ ಕರಡು ಮಸೂದೆಯನ್ನು ರಚಿಸಲು 2017ರ ಜುಲೈ 31ರಂದು ಭಾರತದ ದತ್ತಾಂಶ ರಕ್ಷಣಾ ರೂಪುರೇಷೆಯನ್ನು ಸಿದ್ಧಪಡಿಸಲು ತಜ್ಞರ ಸಮಿತಿಯೊಂದನ್ನು ರಚಿಸಲಾಯಿತು. ಈ ಬಗ್ಗೆ 2017ರ ನವೆಂಬರ್ 27ರಂದು ಶ್ವೇತಪತ್ರ ಹೊರಡಿಸಲಾಯಿತು. ನಂತರ ಈ ಸಮಿತಿಯು ಸಂಬಂಧಿತ ಅಧಿಕಾರಿಗಳ ಜೊತೆ ಹಲವು ಸುತ್ತಿನ ಮಾತುಕತೆಗಳನ್ನು ಹಾಗೂ ನಾಲ್ಕು ಪ್ರಾದೇಶಿಕ ಸಮಾವೇಶಗಳನ್ನು ನಡೆಸಿತು.

ಆದರೆ, ಈ ಶ್ವೇತಪತ್ರದ ವಿರುದ್ಧವೇ ಅನೇಕ ತಜ್ಞರಿಂದ ಟೀಕೆಗಳು ಕೇಳಿಬಂದಿದ್ದವು. ಈ ತಿಂಗಳ ಆರಂಭದಲ್ಲಿ ಕೆಲವು ವಕೀಲರು ಮತ್ತು ಖಾಸಗಿತನದ ಹಕ್ಕುಗಳ ಹೋರಾಟಗಾರರು ಖಾಸಗಿತನ ಮತ್ತು ದತ್ತಾಂಶ ರಕ್ಷಣೆ ಕಾನೂನಿನ ಕುರಿತ ಒಂದು ಮಾದರಿ ಕರಡು ಮಸೂದೆಯನ್ನು ಸಾರ್ವಜನಿಕಗೊಳಿಸಿದ್ದರು.

ಕೃಪೆ: ದಿ ಪ್ರಿಂಟ್

Writer - ಮನೀಶ್ ಚಿಬ್ಬರ್

contributor

Editor - ಮನೀಶ್ ಚಿಬ್ಬರ್

contributor

Similar News

ಜಗದಗಲ
ಜಗ ದಗಲ