ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು

Update: 2018-06-21 05:31 GMT

ಯಾವುದೇ ಹೊಸ ಸರಕಾರ ಅಸ್ತಿತ್ವಕ್ಕೆ ಬಂದಾಗ ಮಿತವ್ಯಯದ ಮಾತುಗಳು ಧಾರಾಳವಾಗಿ ಕೇಳಿಬರುತ್ತವೆ. ಆದರೆ ದಿನ ಕಳೆದಂತೆ ಆ ಮಾತುಗಳು ಗಾಳಿ ಪಾಲಾಗುತ್ತವೆ. ಇದು ಅಧಿಕಾರದಲ್ಲಿದ್ದವರ ಬದ್ಧತೆಯ ಪ್ರಶ್ನೆ ಎಂದು ಹೇಳುವುದಕ್ಕಿಂತ ವಾಸ್ತವ ರಾಜಕಾರಣದ ಕಟು ಸತ್ಯವಾಗಿದೆ. ರಾಜ್ಯದ ನೂತನ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಅಧಿಕಾರ ವಹಿಸಿಕೊಂಡ ತಕ್ಷಣ ಅನಗತ್ಯ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ. ಇದು ಸ್ವಾಗತಾರ್ಹ ಕ್ರಮವಾಗಿದೆ. ಅವರ ಪ್ರಾಮಾಣಿಕತೆಯೇ ಪ್ರಶ್ನಾತೀತವಾಗಿದೆ. ಆದರೆ ಹೊಸ ಸಚಿವರು ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಅಧಿಕೃತ ಮನೆ ಮತ್ತು ಕಚೇರಿಯ ನವೀಕರಣ, ಹೊಸ ಕಾರು, ಹೊಸ ಪೀಠೋಪಕರಣ, ಹೊಸ ಟಿವಿ ಖರೀದಿ ಇದೆಲ್ಲಾ ಸಾಮಾನ್ಯ ಸಂಗತಿಗಳಾಗಿವೆ. ಇದರೊಂದಿಗೆ ವಾಸ್ತು ಹೆಸರಿನಲ್ಲಿ ಕಚೇರಿ ಮತ್ತು ಮನೆಯ ಗೋಡೆಗಳನ್ನು ಕೆಡವಿ ಹೊಸದಾಗಿ ಕಟ್ಟುವ ಚಾಳಿಯೂ ಇತ್ತೀಚಿನದ್ದಾಗಿದೆ. ಇದರಿಂದ ಮುಖ್ಯಮಂತ್ರಿಯ ಮಿತವ್ಯಯ ಹಾದಿಗೆ ಧಕ್ಕೆ ಉಂಟಾಗುತ್ತದೆ.

ರಾಜ್ಯದಲ್ಲಿ ಸಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸಚಿವರ ಕೊಠಡಿಗಳ ನವೀಕರಣ ಕಾರ್ಯ ಆರಂಭವಾಯಿತು. ಒಟ್ಟು ಕಾಮಗಾರಿಗಳಿಗೆಂದು ಮೀಸಲಾಗಿರಿಸಿದ್ದ 20ಕೋಟಿ ರೂ.ಗಳನ್ನು ಇದಕ್ಕೆ ವ್ಯಯಿಸಲಾಯಿತು. ಈ ಸಮ್ಮಿಶ್ರ ಸರಕಾರದಲ್ಲಿ ಹಿಂದೆ ಸಚಿವರಾಗಿದ್ದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೂ ನೂತನ ಸಚಿವರಿಗೆ ಸಿದ್ಧಗೊಳಿಸುವಂತೆ ನವೀಕರಣ ಕಾರ್ಯವನ್ನು ಮಾಡಲಾಯಿತು. ಈ ನವೀಕರಣದ ನಂತರವೂ ವಾಸ್ತು ಪ್ರಕಾರ ಅನೇಕ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಆಡಳಿತ ಪಕ್ಷದ ಸಚೇತಕರು ವಿಧಾನ ಸೌಧದ ತನ್ನ ಕೊಠಡಿಯ ಗೋಡೆಯನ್ನು ಒಡೆದು ಹಾಕಿದ್ದರು. ವಾಸ್ತು ಶಾಸ್ತ್ರಜ್ಞರ ಸಲಹೆಯಂತೆ ಮತ್ತೆ ಗೋಡೆಯನ್ನು ನಿರ್ಮಿಸಿದ್ದರು. ಅದೇ ರೀತಿ ಅನೇಕ ಸಚಿವರು ಅಧಿಕಾರ ವಹಿಸಿಕೊಳ್ಳುವ ಮುನ್ನ ಕೊಠಡಿಗೆ ಪೂಜೆ, ಹೋಮ ಇವೆಲ್ಲಾ ಮಾಡುತ್ತಾರೆ. ಇದು ದೇಶದ ಸಂವಿಧಾನಕ್ಕೆ ಅಪಚಾರ ಮಾಡಿದಂತೆ. ತಮ್ಮ ನಂಬಿಕೆಗಳ ಪ್ರಕಾರ ಪೂಜೆ ಹೋಮಗಳನ್ನು ತಮ್ಮ ಸ್ವಂತ ಮನೆಯಲ್ಲಿ ಮಾಡಿಕೊಂಡರೆ ಯಾರ ಆಕ್ಷೇಪವೂ ಇಲ್ಲ. ಆದರೆ ವಿಧಾನ ಸೌಧ ಎಂಬ ಸರಕಾರಿ ಕಟ್ಟಡದಲ್ಲಿ ವಾಸ್ತು ಹೆಸರಿನಲ್ಲಿ ಪೂಜೆ, ಹೋಮ ಮಾಡುವುದು ಸರಿ ಎನಿಸುವುದಿಲ್ಲ. ಸಚಿವರು ಮಾತ್ರವಲ್ಲ ಅಧಿಕಾರಿಗಳೂ ಸರಕಾರ ಬದಲಾದಾಗ ತಮ್ಮ ಕೊಠಡಿಗಳ ನವೀಕರಣ ಮಾಡಿಸುತ್ತಾರೆ. ಆಂತರಿಕ ವಿನ್ಯಾಸ ಬದಲಿಸಿ ಹೈಟೆಕ್ ಸ್ಪರ್ಶ ನೀಡುತ್ತಾರೆ. ಆಲಂಕಾರಿಕ ವಿದ್ಯುತ್ ದೀಪಗಳು, ಆಧುನಿಕ ಶೌಚಾಲಯಗಳು, ಹೊಸ ಪೀಠೋಪಕರಣಗಳಿಗಾಗಿ ಕೋಟ್ಯಂತರ ರೂ. ಖರ್ಚು ಮಾಡುತ್ತಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ಸಾಲ ಮನ್ನಾದಂತಹ ಮಹತ್ವದ ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದಾರೆ. ಜನರಿಗೆ ನೀಡಿದ ಭರವಸೆಯನ್ನು ಈಡೇರಿಸಲು ಸಂಪನ್ಮೂಲ ಕ್ರೋಡೀಕರಣ ಮಾಡಿಕೊಳ್ಳುವುದು ಅಗತ್ಯವಾಗಿದೆ. ಕೃಷಿ ಸಾಲ ಮನ್ನಾ ಮಾಡುವುದರಿಂದ ಸರಕಾರದ ಬೊಕ್ಕಸಕ್ಕೆ 53,000 ಕೋಟಿ ರೂ. ಹೊರೆ ಬೀಳಲಿದೆ. ಅಷ್ಟು ದೊಡ್ಡ ಮೊತ್ತವನ್ನು ಹೊಂದಿಸುವುದು ಸುಲಭವಲ್ಲ. ಇದಕ್ಕಾಗಿ ಆಡಳಿತ ವೆಚ್ಚಕ್ಕೆ ಅವರು ಕಡಿವಾಣ ಹಾಕಲೇಬೇಕಾಗಿದೆ. ಯಾವ ಯಾವ ವೆಚ್ಚಗಳಿಗೆ ಕಡಿವಾಣ ಹಾಕಬೇಕೆಂಬ ಬಗ್ಗೆ ನಿರ್ದಿಷ್ಟ ಸೂಚನೆಯನ್ನು ಹೊರಡಿಸಬೇಕಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರೇನೂ ಸರಕಾರಿ ಬಂಗಲೆಗೆ ವಾಸ್ತವ್ಯವನ್ನು ಬದಲಿಸಿಕೊಂಡಿಲ್ಲ. ಜೆಪಿ ನಗರದ ಸ್ವಂತ ಮನೆಯಲ್ಲಿಯೇ ಇದ್ದಾರೆ. ದಿಲ್ಲಿ ಮುಂತಾದ ಕಡೆ ಪ್ರವಾಸ ಮಾಡಲು ವಿಶೇಷ ವಿಮಾನವನ್ನೂ ಬಳಸುತ್ತಿಲ್ಲ. ಏರ್ ಇಂಡಿಯ ವಿಮಾನದಲ್ಲೇ ಪ್ರವಾಸ ಮಾಡುತ್ತಿದ್ದಾರೆ. ಉಳಿದ ಸಚಿವರೂ ಉಳಿತಾಯದ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿದೆ.

ಸರಕಾರ ಸಚಿವರಿಗೆ ಮತ್ತು ಅಧಿಕಾರಿಗಳಿಗೆ ಹೊಸ ಕಾರು, ಕಚೇರಿ ಮತ್ತು ಮನೆಗಳ ನವೀಕರಣಕ್ಕಾಗಿ ಖರ್ಚು ಮಾಡುತ್ತಿರುವುದು ಜನತೆಯ ತೆರಿಗೆಯ ಹಣವಾಗಿದೆ. ಜನತೆ ತೆರಿಗೆಯ ಮೂಲಕ ನೀಡುವ ಹಣವನ್ನು ಅಧಿಕಾರದಲ್ಲಿರುವವರು ಧರ್ಮದತ್ತಿಗಳಂತೆ ಜೋಪಾನವಾಗಿ ಖರ್ಚು ಮಾಡಬೇಕಾಗುತ್ತದೆ. ಖರ್ಚು ಮಾಡುವ ಪ್ರತಿ ಪೈಸೆಗೂ ಲೆಕ್ಕ ನೀಡಬೇಕಾಗುತ್ತದೆ. ಸಾರ್ವಜನಿಕ ಜೀವನದಲ್ಲಿ ಪಾರದರ್ಶಕವನ್ನು ಕಾಪಾಡಿಕೊಂಡರೆ ಜನತೆಗೆ ಸರಕಾರದ ಮೇಲೆ ನಂಬಿಕೆ ಉಂಟಾಗುತ್ತದೆ. ಕಚೇರಿ ನವೀಕರಣದಂತಹ ಕೆಲಸಗಳಿಗೆ ಖರ್ಚು ಮಾಡುವ ಕೋಟ್ಯಂತರ ರೂ. ಜನ ಕಲ್ಯಾಣಕ್ಕೆ ವ್ಯಯಿಸಬೇಕಾಗಿದೆ.

ಸಚಿವರ ಬಂಗಲೆಗಳು ಮತ್ತು ಕಚೇರಿಗಳ ನವೀಕರಣ ಹಾಗೂ ಹೊಸ ಕಾರು ಖರೀದಿಗೆ ಕಡಿವಾಣ ಹಾಕಿದರೆ ಸಾಲದು, ಶಾಸಕರು ಮತ್ತು ರಾಜಕಾರಣಿಗಳ ಅಧಿಕಾರದ ಹಸಿವನ್ನು ಇಂಗಿಸಲು ನಿರ್ಮಿಸಲಾಗಿರುವ ಪುನರ್ವಸತಿ ಕೇಂದ್ರಗಳೆಂದೇ ಹೆಸರಾಗಿರುವ ನಿಗಮ ಮತ್ತು ಮಂಡಳಿಗಳ ಸಂಖ್ಯೆಯನ್ನು ಅರ್ಧಕ್ಕರ್ಧ ಕಡಿಮೆ ಮಾಡಬೇಕಾಗಿದೆ. ಒಂದು ಅಂದಾಜಿನ ಪ್ರಕಾರ ರಾಜ್ಯದಲ್ಲಿ 90 ನಿಗಮಗಳಿವೆ. ಇವು ಅತೃಪ್ತ ರಾಜಕಾರಣಿಗಳಿಗೆ ಪುನರ್ವಸತಿಯನ್ನು ಒದಗಿಸಲು ಸೃಷ್ಟಿಮಾಡಿಕೊಟ್ಟ ಬಿಳಿಯಾನೆಗಳಂತಾಗಿವೆ. ಇವುಗಳ ಪೈಕಿ ಶೇ.75 ರಷ್ಟು ನಿಗಮಗಳು ನಷ್ಟದಲ್ಲಿವೆೆ. ಇಂತಹ ನಿರುಪಯುಕ್ತ ನಿಗಮಗಳನ್ನು ಮುಚ್ಚಲು ಸರಕಾರ ಕ್ರಮ ಕೈಗೊಳ್ಳಬೇಕಾಗಿದೆ. ನಿಗಮಗಳಷ್ಟೇ ಅಲ್ಲದೆ ಅಕಾಡಮಿ ಮತ್ತು ಪ್ರಾಧಿಕಾರಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕಾಗಿದೆ. ಯಾಕೆಂದರೆ ಒಂದೇ ಕೆಲಸವನ್ನು ಹಲವು ಪ್ರಾಧಿಕಾರಗಳು ಬೇರೆ ಬೇರೆ ಹೆಸರಿನಿಂದ ಮಾಡುತ್ತವೆ. ಈ ಪ್ರತೀ ಪ್ರಾಧಿಕಾರಕ್ಕೂ ಅಧ್ಯಕ್ಷ, ಕಾರ್ಯದರ್ಶಿ ಸಹಿತ ನೂರಾರು ಸಿಬ್ಬಂದಿಗೆ ಸಂಬಳವನ್ನು ನೀಡಲಾಗುತ್ತದೆ.

ಕೇಂದ್ರದಲ್ಲಿ ಯುಪಿಎ ಸರಕಾರ ಅಸ್ತಿತ್ವದಲ್ಲಿದ್ದಾಗ ಅನಗತ್ಯ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕುವ ದಿಟ್ಟ ನಿರ್ಧಾರ ಕೈಗೊಳ್ಳಲಾಗಿತ್ತು. ಆ ನಂತರ ಬಂದ ಎನ್‌ಡಿಎ ಸರಕಾರವೂ ಅದನ್ನು ಮುಂದುವರಿಸಿತು. ಅಧಿಕಾರಿಗಳು ವಿಮಾನದಲ್ಲಿ ಪ್ರಥಮ ದರ್ಜೆಯಲ್ಲಿ ಪ್ರಯಾಣಿಸಬಾರದೆಂದು ಕಟ್ಟುಪಾಡು ವಿಧಿಸಲಾಗಿತ್ತು. ದುಂದುವೆಚ್ಚವನ್ನು ಕಡಿಮೆ ಮಾಡಿ ಜನಕಲ್ಯಾಣ ಕಾರ್ಯಕ್ರಮಗಳಿಗೆ ಸಂಪನ್ಮೂಲವನ್ನು ಒದಗಿಸಲು ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ. ಮಿತ ವ್ಯಯದ ಬಗ್ಗೆ ಮಾತನಾಡಿದರೆ ಸಾಲದು, ಅದು ಜಾರಿಗೆ ಬರಬೇಕು.

ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ 53,000ಕೋಟಿ ರೂ. ಸಾಲವನ್ನು ಮನ್ನಾ ಮಾಡುವ ಭರವಸೆಯನ್ನು ಈಡೇರಿಸಬೇಕಾದರೆ ಅರ್ಧದಷ್ಟು ಹಣವನ್ನು ಕೇಂದ್ರ ಸರಕಾರ ನೀಡಬೇಕಾಗುತ್ತದೆ. ಕೇಂದ್ರ ಸರಕಾರ ನೆರವು ನೀಡಲಿ ಅಥವಾ ಬಿಡಲಿ ರೈತರ ಸಾಲ ಮನ್ನಾ ಮಾಡುವ ಭರವಸೆಯನ್ನು ಈಡೇರಿಸಲು ಮುಖ್ಯಮಂತ್ರಿ ಕ್ರಮ ಕೈಗೊಳ್ಳಬೇಕಾಗಿದೆ. ಅದಕ್ಕಾಗಿ ಎಲ್ಲ ಆಡಳಿತ ವೆಚ್ಚಗಳನ್ನು ಕಡಿತಗೊಳಿಸಬೇಕಾಗಿದೆ. ಈ ಗುರಿ ಸಾಧಿಸಬೇಕಾದರೆ ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಇರಬೇಕಾಗುತ್ತದೆ. ಐಷಾರಾಮಿ ಜೀವನಕ್ಕೆ ಒಗ್ಗಿ ಹೋಗಿರುವ ರಾಜಕಾರಣಿಗಳು ಮತ್ತು ಅಧಿಕಾರಿಗಳು ಸರಳ ಬದುಕಿನ ಶೈಲಿಯನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News