​ಡಿಗೋ ಅದೃಷ್ಟದ ಗೋಲು: ಸ್ಪೇನ್‌ಗೆ ಗೆಲುವು

Update: 2018-06-22 10:24 GMT

ಕಝಾನ್ (ರಷ್ಯಾ), ಜೂ. 21: ಡಿಗೋ ಕೋಸ್ಟಾ ಹೊಡೆದ ಅದೃಷ್ಟದ ಗೋಲು ಮಾಜಿ ವಿಶ್ವ ಚಾಂಪಿಯನ್ ಸ್ಪೇನ್ ತಂಡಕ್ಕೆ 2018ರ ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಮೊದಲ ಜಯ ತಂದುಕೊಟ್ಟಿತು. ಪಂದ್ಯದುದ್ದಕ್ಕೂ ಸಮಬಲದ ಹೋರಾಟ ನೀಡಿದ ಇರಾನ್ ತಂಡ, ಟೂರ್ನಿಯಲ್ಲೇ ಅಚ್ಚರಿಯ ಫಲಿತಾಂಶಕ್ಕೆ ಕಾರಣವಾಗುವ ಅವಕಾಶದಿಂದ ವಂಚಿತವಾಯಿತು.

ಇರಾನ್ ತಂಡದ ವಿರುದ್ಧ 1-0 ಗೆಲುವಿನೊಂದಿಗೆ 2010ರ ಚಾಂಪಿಯನ್ನರು 16ರ ಘಟ್ಟಕ್ಕೆ ಮುನ್ನಡೆಯುವ ಆಸೆ ಜೀವಂತವಾಗಿ ಉಳಿಯಿತು. ಸೋಚಿಯಲ್ಲಿ ಎರಡು ಗೋಲು ಗಳಿಸುವ ಮೂಲಕ ಪೋರ್ಚ್‌ಗಲ್ ವಿರುದ್ಧ 3-3 ಡ್ರಾ ಸಾಧಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೋಸ್ಟಾ, ಇರಾನ್ ವಿರುದ್ಧದ ಗೆಲುವಿನಲ್ಲೂ ಅದೃಷ್ಟಶಾಲಿ ಎನಿಸಿದರು. ಬಿ ಗುಂಪಿನ ಪಂದ್ಯದಲ್ಲಿ ಚೆಂಡನ್ನು ಗೋಲಿನ ಆವರಣದಿಂದ ಹೊರಕ್ಕೆ ತಳ್ಳಲು ಕಾಯುತ್ತಿದ್ದ ಇರಾನ್ ತಂಡದ ಗೋಲ್‌ಕೀಪರ್ ಅಲಿ ಬಿರ್ನ್‌ವಂಡ್ ಅವರ ಕಾಲುಬೆರಳನ್ನು ಮೆಟ್ಟಿ ವಿವಾದಕ್ಕೆ ಸಿಕ್ಕಿಹಾಕಿಕೊಂಡರು.

ಆದರೆ ಕೋಸ್ಟ ಯಾವುದೇ ಶಿಕ್ಷೆ ಇಲ್ಲದೇ ಪಾರಾದರು. ಬಳಿಕ 54ನೇ ನಿಮಿಷದಲ್ಲಿ ಅಟ್ಲಾಂಟಿಕೊ ಮ್ಯಾಡ್ರಿಡ್ ಸ್ರೈಕರ್, ಪಂದ್ಯದ ಏಕೈಕ ಗೋಲು ಹೊಡೆಯುವಲ್ಲಿ ಯಶಸ್ವಿಯಾದರು.

ಕೆಲವೇ ನಿಮಿಷಗಳಲ್ಲಿ ಪರ್ಶಿಯನ್ ಲಯನ್ ತಂಡದ ಸಯೀದ್ ಎಜೋತಲಾಹಿ ಸಮಬಲದ ಗೋಲು ಬಾರಿಸಿದಾಗ ಇರಾನ್ ಅಭಿಮಾನಿಗಳು ಹುಚ್ಚೆದ್ದು ಕುಣಿದರು. ಆದರೆ ಅದು ಆಫ್‌ಸೈಡ್ ಎಂದು ತೀರ್ಪು ಬಂದಾಗ ಅಭಿಮಾನಿಗಳಲ್ಲಿ ನೀರವ ಮೌನ ಆವರಿಸಿತು.

ಇರಾನ್‌ನ ರಕ್ಷಣಾ ಆಟಗಾರರ ತಂತ್ರಗಾರಿಕೆಯಿಂದ ಹತಾಶರಾದ ಡಿಗೋ ಕೋಸ್ಟಾ ಒಂದು ಹಂತದಲ್ಲಿ ಗೋಲ್‌ಕೀಪರ್ ಬೀರನ್‌ವಂಡ್ ಅವರ ಕಾಲಬೆರಳನ್ನು ಮೆಟ್ಟಿ ಕೆಣಕಿದರು. ಇರಾನ್ ಗೋಲಿ ಮುಖದಲ್ಲಿ ನೊವಿನ ಛಾಯೆ ಕಂಡುಬಂತು.

ಉತ್ತರಾರ್ಧದಲ್ಲಿ ಸ್ಪೇನ್ ಆಟಗಾರರಲ್ಲಿ ಹೆಚ್ಚು ಆತ್ಮವಿಶ್ವಾಸ ಕಂಡುಬಂತು. ಆದರೆ ಸ್ಪೇನ್‌ನ ಎರಡು ಗೋಲು ಅವಕಾಶವನ್ನು ಇರಾನಿಯನ್ ಗೋಲ್‌ಕೀಪರ್ ವಿಫಲಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News