20 ಸಾವಿರ ರೂ.ಗೆ ಮಾರಾಟವಾದ ಬಾಲಕನ ರಕ್ಷಣೆ
ಕೃಷ್ಣಗಿರಿ (ತಮಿಳುನಾಡು), ಜೂ. 21: ಕೃಷ್ಣಗಿರಿ ಜಿಲ್ಲೆಯ ಗ್ರಾಮವೊಂದರಲ್ಲಿ ಆರು ತಿಂಗಳ ಹಿಂದೆ ತಂದೆಯೋರ್ವ ತನ್ನ ಪುತ್ರನನ್ನು 20 ಸಾವಿರ ರೂ. ಸಾಲಕ್ಕಾಗಿ ಒತ್ತೆ ಇರಿಸಿದ್ದು, ಬಾಲಕನನ್ನು ಬುಧವಾರ ರಕ್ಷಿಸಲಾಗಿದೆ.
ಆದರೆ, ಬಾಲಕನನ್ನು ಮಾರಾಟ ಮಾಡಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. 20 ಸಾವಿರ ರೂ. ಸಾಲ ಹಿಂದಿರುಗಿಸುವ ವರೆಗೆ ಬಾಲಕನನ್ನು ಭದ್ರೆತೆಯಾಗಿ ನೀಡಿರಬಹುದು ಎಂದು ಬಾಲ ಕಾರ್ಮಿಕ ಯೋಜನೆ ವರಿಷ್ಠೆ ಎಸ್. ಪ್ರಿಯಾ ಹೇಳಿದ್ದಾರೆ. ಗ್ರಾಮದಲ್ಲಿ 7 ವರ್ಷದ ಬಾಲಕ 50 ಕುರಿಗಳ ಮಂದೆಯನ್ನು ಮೇಯಿಸುತ್ತಿರುವುದನ್ನು ಗಮನಿಸಿದ ಸ್ಥಳೀಯರು ಸರಕಾರೇತರ ಸಂಸ್ಥೆ ಹಾಗೂ ಸ್ಥಳೀಯ ಮಕ್ಕಳ ಕಲ್ಯಾಣ ಪ್ರಾಧಿಕಾರಕ್ಕೆ ತಿಳಿಸಿದರು. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಪ್ರಿಯಾ ಹೇಳಿದ್ದಾರೆ.
ಈ ಕುಟುಂಬ ಧರ್ಮ ಪುರಿಯಿಂದ ವಲಸೆ ಬಂದಿದೆ. ಈ ಬಾಲಕ ಕುಡುಕ ತಂದೆ ಹಾಗೂ ಅತ್ತೆಯೊಂದಿಗೆ ಜೀವಿಸುತ್ತಿದ್ದ ಎಂದು ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ. ಬಾಲಕನನ್ನು ಬಾಲ ಮಂಡಳಿಗೆ ಕಳುಹಿಸಿಕೊಡಲಾಗಿದೆ. ಈಗ ಅಧಿಕಾರಿಗಳು ಈ ಬಾಲಕನ ಸಹೋದರಿ ಹಾಗೂ ಸಹೋದರನನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ. ‘‘ನಾವು ಬಾಲಕನ ಸಹೋದರ ಹಾಗೂ ಸಹೋದರಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದೇವೆ’’ ಎಂದು ಪ್ರಿಯಾ ಹೇಳಿದ್ದಾರೆ. ಇದು ಗುತ್ತಿಗೆ ಕಾರ್ಮಿಕ ಪ್ರಕರಣ ಎಂದು ಮಕ್ಕಳ ಕಲ್ಯಾಣ ಪ್ರಾಧಿಕಾರ ಹೇಳಿದೆ. ‘‘ಈ ಬಗ್ಗೆ ಪ್ರಕರಣ ದಾಖಲಾಗಿಲ್ಲ. ಸ್ಥಳೀಯ ಅಧಿಕಾರಿಗಳು ಇನ್ನಷ್ಟೆ ಕ್ರಮ ಕೈಗೊಳ್ಳಬೇಕಿದೆ’’ ಎಂದು ಪ್ರಿಯಾ ಹೇಳಿದ್ದಾರೆ.