ಬಿಜೆಪಿ ಉಗ್ರ ಸಂಘಟನೆ: ಮಮತಾ ಬ್ಯಾನರ್ಜಿ
ಕೋಲ್ಕತ್ತಾ, ಜೂ. 21: ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಬಿಜೆಪಿಯನ್ನು ಉಗ್ರ ಸಂಘಟನೆ ಎಂದು ಜರಿದಿದ್ದಾರೆ.
‘‘ನಮ್ಮದು ಬಿಜೆಪಿಯಂತೆ ಉಗ್ರ ಸಂಘಟನೆ ಅಲ್ಲ. ಬಿಜೆಪಿಯವರು ಕ್ರಿಶ್ಚಿಯನ್ನರು, ಮುಸ್ಲಿಮರ ನಡುವೆ ಮಾತ್ರವಲ್ಲದೆ, ಹಿಂದೂಗಳ ನಡುವೆ ಕೂಡ ಘರ್ಷಣೆಯನ್ನು ಸೃಷ್ಟಿಸುತ್ತಿದ್ದಾರೆ’’ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಎರಡು ಪಕ್ಷಗಳ ನಡುವೆ ಉದ್ವಿಗ್ನತೆ ಭುಗಿಲೆದ್ದಿರುವ ನಡುವೆ ಮಮತಾ ಬ್ಯಾನರ್ಜಿ ಅವರ ಈ ಹೇಳಿಕೆ ಹೊರಬಿದ್ದಿದೆ.
ಜೂನ್ 2ರಂದು ಪುರುಲಿಯಾ ಜಿಲ್ಲೆಯ ಬಲರಾಮಪುರದ ಕಂಬವೊಂದರಲ್ಲಿ ಬಿಜೆಪಿ ಕಾರ್ಯಕರ್ತನ ಮೃತದೇಹ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೇ 30ರಂದು ಇದೆ ಜಿಲ್ಲೆಯಲ್ಲಿ ಮರವೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಬಿಜೆಪಿಯ ಇನ್ನೋರ್ವ ಕಾರ್ಯಕರ್ತ ತ್ರಿಲೋಚನ ಮಹತೊ ಅವರ ಮೃತದೇಹ ಪತ್ತೆಯಾಗಿತ್ತು. ಈ ಘಟನೆಗಳ ಬಳಿಕ ಕನಿಷ್ಠ ಇಬ್ಬರು ಟಿಎಂಸಿ ಕಾರ್ಯಕರ್ತರ ಹತ್ಯೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಟಿಎಂಸಿ, ಬಿಜೆಪಿ ಹತ್ಯೆ ನಡೆಸುವುದರಲ್ಲಿ ತೊಡಗಿಕೊಂಡಿದೆ ಎಂದು ಆರೋಪಿಸಿತ್ತು. ಈ ಆರೋಪವನ್ನು ಬಿಜೆಪಿ ನಿರಾಕರಿಸಿತ್ತು.