ತನಿಖಾ ಸಂಸ್ಥೆಗಳ ರಾಜಕೀಯ ದುರ್ಬಳಕೆ ಎಷ್ಟು ಸರಿ?

Update: 2018-06-22 04:20 GMT

ಡಿ.ಕೆ. ಶಿವಕುಮಾರ್ ಅವರ ರಾಜಕೀಯ ನಿಂತಿರುವುದು ಜಾತಿ ಬಲಕ್ಕಿಂತಲೂ ಹಣದ ಬಲದ ಮೇಲೆ. ಪ್ರಬಲ ಜಾತಿ ಮತ್ತು ಹಣ ಜೊತೆ ಸೇರಿದರೆ ಡಿಕೆಶಿಯಂತಹ ನಾಯಕರು ಹುಟ್ಟುತ್ತಾರೆ. ಇವರ ಮೇಲೆ ಆರೋಪಗಳು ಬಂದಿರುವುದು ಇಂದು ನಿನ್ನೆಯೇನೂ ಅಲ್ಲ. ಸಿದ್ದರಾಮಯ್ಯ ಸರಕಾರ ರಚನೆಯಾದ ಆರಂಭದಲ್ಲಿ ಇವರಿಗೆ ಸಚಿವ ಸ್ಥಾನ ನಿರಾಕರಣೆಯಾದುದು ಇದೇ ಕಾರಣದಿಂದ. ಆದರೆ ತನ್ನ ಹಣ ಮತ್ತು ತೋಳ್ಬಲದ ಮೂಲಕ ‘ತಾನು ಕಾಂಗ್ರೆಸ್‌ಗೆ ಅನಿವಾರ್ಯ’ ಎನ್ನುವುದನ್ನು ಅವರು ಕಾಂಗ್ರೆಸ್ ವರಿಷ್ಠರಿಗೆ ಮನವರಿಕೆ ಮಾಡಿದರು. ಕೊನೆಗೂ ಸಿದ್ದರಾಮಯ್ಯ ತಮ್ಮ ಸಂಪುಟದಲ್ಲಿ ಡಿಕೆಶಿಯವರನ್ನು ಸೇರಿಸಲೇಬೇಕಾದಂತಹ ಸನ್ನಿವೇಶ ನಿರ್ಮಾಣವಾಯಿತು. ಇಂತಹ ಡಿ.ಕೆ. ಶಿವಕುಮಾರ್ ಮೇಲೆ ಐಟಿ ಅಧಿಕಾರಿಗಳು ಕಣ್ಣಿಡುವುದು, ಅವರ ವ್ಯವಹಾರಗಳ ಕುರಿತಂತೆ ತನಿಖೆ ನಡೆಸುವುದು ತೀರಾ ಸಹಜ. ‘ನಾನು ಅಮಾಯಕ’ ಎಂದು ಡಿಕೆಶಿಯವರು ಹೇಳಿಕೆ ನೀಡಿದರೆ ಅದನ್ನು ಅವರ ಪಕ್ಷದ ನಾಯಕರೇ ನಂಬುವುದು ಕಷ್ಟ. ಆದರೆ ಸದ್ಯದ ಸಂದರ್ಭದಲ್ಲಿ ಡಿಕೆಶಿಯವರ ಮೇಲೆ ನಡೆಯುತ್ತಿರುವ ಐಟಿ ದಾಳಿಯಲ್ಲಿ ಕೇಂದ್ರ ಸರಕಾರದ ಕೈವಾಡವಿದೆ ಎನ್ನುವ ಆರೋಪ, ಈ ಐಟಿ ದಾಳಿಯ ವಿಶ್ವಾಸಾರ್ಹತೆಗೆ ಕಳಂಕ ತಂದಿದೆ.

ನೋಟು ನಿಷೇಧದಂತಹ ಹೊತ್ತಿನಲ್ಲಿ, ಗಣಿ ರೆಡ್ಡಿಗಳು ತಮ್ಮ ಕುಟುಂಬದ ಮದುವೆಯನ್ನು ರಾಜವೈಭವದಲ್ಲಿ ಮಾಡುತ್ತಿರುವಾಗ, ಕೈ ಕಟ್ಟಿ ಕೂತಿದ್ದ ಐಟಿ ಅಧಿಕಾರಿಗಳು ಕಾಂಗ್ರೆಸ್ ನಾಯಕರನ್ನೇ ಗುರಿ ಮಾಡಿಕೊಂಡು ಯಾಕೆ ದಾಳಿ ನಡೆಸುತ್ತಿದ್ದಾರೆ? ಯಡಿಯೂರಪ್ಪ, ಈಶ್ವರಪ್ಪ ಸೇರಿದಂತೆ ಈ ರಾಜ್ಯವನ್ನು ಲೂಟಿ ಹೊಡೆದ ಬೃಹತ್ ಭ್ರಷ್ಟ ರಾಜಕಾರಣಿಗಳು ಇನ್ನೂ ಹಲವರಿರುವಾಗ, ಐಟಿ ಅಧಿಕಾರಿಗಳು ಒಂದು ನಿರ್ದಿಷ್ಟ ಪಕ್ಷದ ನಾಯಕರನ್ನಷ್ಟೇ ಗುರಿ ಮಾಡುವುದು ಸಂಶಯಕ್ಕೆ ಕಾರಣವಾಗಿದೆ. ಬಿಜೆಪಿಯಲ್ಲಿ ಭ್ರಷ್ಟರೇ ಇಲ್ಲ, ಕಾಂಗ್ರೆಸ್‌ನೊಳಗಷ್ಟೇ ಭ್ರಷ್ಟರಿದ್ದಾರೆ ಎನ್ನುವುದನ್ನು ಮಾಧ್ಯಮಗಳ ಮೂಲಕ ನಾಡಿಗೆ ತಿಳಿಸುವ ಪ್ರಯತ್ನವನ್ನು ಐಟಿ ಅಧಿಕಾರಿಗಳ ಮೂಲಕ ಕೇಂದ್ರ ಸರಕಾರ ಮಾಡುತ್ತಿದೆಯೇ? . ಬಿಜೆಪಿಯೊಳಗಿನ ಭ್ರಷ್ಟರನ್ನು ರಕ್ಷಿಸುತ್ತಾ, ಕೇವಲ ಕಾಂಗ್ರೆಸ್ ನಾಯಕರ ನಿವಾಸಗಳ ಮೇಲಷ್ಟೇ ದಾಳಿ ಮಾಡುವುದರಿಂದ, ಪರೋಕ್ಷವಾಗಿ ಭ್ರಷ್ಟರಿಗೆ ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಅಧಿಕಾರಿಗಳೇ ಕಾರಣವನ್ನು ಕೊಟ್ಟಂತಾಗುತ್ತದೆ.

 ಡಿಕೆಶಿಯವರ ಮೇಲೆ ಪದೇ ಪದೇ ನಡೆಯುತ್ತಿರುವ ದಾಳಿಗೂ ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಗೂ ನೇರ ಸಂಬಂಧವಿದೆ. ರಾಜ್ಯಸಭೆಗೆ ಅಹ್ಮದ್ ಪಟೇಲ್ ಸ್ಪರ್ಧಿಸಿದ ಸಂದರ್ಭದಲ್ಲಿ, ಗುಜರಾತ್‌ನ ಕಾಂಗ್ರೆಸ್ ಶಾಸಕರನ್ನು ಕುದುರೆ ವ್ಯಾಪಾರಕ್ಕೆ ಬಲಿಯಾಗದಂತೆ ನೋಡಿಕೊಂಡವರು ಡಿಕೆಶಿ. ಗುಜರಾತ್‌ನ ಬೆಳವಣಿಗೆ ಪ್ರಧಾನಿ ಮೋದಿ, ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರಿಗೆ ಭಾರೀ ಮುಖಭಂಗವನ್ನುಂಟು ಮಾಡಿತ್ತು. ಬಹುಶಃ ಡಿಕೆಶಿ ಗುಜರಾತ್ ಶಾಸಕರನ್ನು ರಕ್ಷಿಸುವ ಹೊಣೆ ಹೊತ್ತುಕೊಳ್ಳದೇ ಇದ್ದಿದ್ದರೆ ಅಹ್ಮದ್ ಪಟೇಲ್ ರಾಜ್ಯಸಭೆಗೆ ಆಯ್ಕೆಯಾಗುತ್ತಿರಲಿಲ್ಲ. ಒಂದು ವೇಳೆ ಆಯ್ಕೆಯಾಗದೇ ಇದ್ದಿದ್ದರೆ ಗುಜರಾತ್‌ನಲ್ಲಿ ಕಾಂಗ್ರೆಸ್‌ಗೆ ಅದು ದೊಡ್ಡ ಹಿನ್ನಡೆಯಾಗುತ್ತಿತ್ತು. ಆ ಬಳಿಕ ನಡೆದ ಚುನಾವಣೆಯಲ್ಲೂ ಕಾಂಗ್ರೆಸ್‌ಗೆ ಹಿನ್ನಡೆಯಾಗಿ ಬಿಡುತ್ತಿತ್ತು. ಈ ಸಂದರ್ಭದಲ್ಲಿ ಡಿಕೆಶಿಯವರು ನಿರ್ವಹಿಸಿದ ಪಾತ್ರ, ಅವರನ್ನು ರಾಷ್ಟ್ರಮಟ್ಟಕ್ಕೆ ಪರಿಚಯಿಸಿತು. ಇದೇ ಹೊತ್ತಲ್ಲಿ ಡಿಕೆಶಿಯವರ ಮೇಲೆ ಐಟಿ ದಾಳಿ ನಡೆಯಿತು. ‘ಬಚ್ಚಿಟ್ಟುಕೊಂಡಿರುವ ಗುಜರಾತ್‌ನ ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಲು ಕೇಂದ್ರ ಸರಕಾರ ಐಟಿ ಅಧಿಕಾರಿಗಳ ಮೂಲಕ ಪ್ರಯತ್ನಿಸಿತು’ ಎಂಬ ಆರೋಪವೂ ಇದೆ.

ಒಟ್ಟಿನಲ್ಲಿ ಅಲ್ಲಿಯವರೆಗೆ ಸುಮ್ಮನಿದ್ದ ಐಟಿ ಅಧಿಕಾರಿಗಳು ಗುಜರಾತ್ ಶಾಸಕರ ಕುದುರೆ ವ್ಯಾಪಾರದ ಸಂದರ್ಭದಲ್ಲೇ ಡಿಕೆಶಿ ಮೇಲೆ ಯಾಕೆ ದಾಳಿ ನಡೆಸಿದರು ಎನ್ನುವುದನ್ನು ಯಾರೂ ಅರ್ಥ ಮಾಡಿಕೊಳ್ಳಬಹುದಿತ್ತು. ಆ ದಾಳಿಯ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿ ಡಿಕೆಶಿ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ ಎಂದೆಲ್ಲ ಮಾಧ್ಯಮಗಳ ಮೂಲಕ ಹೇಳಿಸಲಾಯಿತು. ಆದರೆ ಇಂದಿಗೂ ವಶಪಡಿಸಿಕೊಂಡ ನಗದುಗಳ ಕುರಿತಂತೆ ಐಟಿ ಅಧಿಕಾರಿಗಳು ಸ್ಪಷ್ಟೀಕರಣ ನೀಡಿಲ್ಲ. ಇದೀಗ ಡಿಕೆಶಿಯವರ ಬೆನ್ನಿಗೆ ಮತ್ತೆ ಐಟಿ ಅಧಿಕಾರಿಗಳು ಬಿದ್ದಿದ್ದಾರೆ. ಇದರ ಕಾರಣವೂ ಸ್ಪಷ್ಟ. ರಾಜ್ಯದಲ್ಲಿ ನಡೆದ ಇತ್ತೀಚಿನ ರಾಜಕೀಯ ಬೆಳವಣಿಗೆ ಮತ್ತೆ ಡಿಕೆಶಿ ಅವರನ್ನು ಮುನ್ನೆಲೆಗೆ ತಂದಿತು. ಡಿಕೆಶಿ ಇಲ್ಲದೇ ಇದ್ದಿದ್ದರೆ ಮೈತ್ರಿ ಸರಕಾರ ರಚನೆ ಸುಲಭವಿದ್ದಿರಲಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಕುದುರೆ ವ್ಯಾಪಾರಕ್ಕೆ ಬಲಿಯಾಗದಂತೆ ನೋಡಿಕೊಂಡದ್ದು, ಯಾವುದೇ ಕಾರಣಕ್ಕೂ ಬಿಜೆಪಿಯ ಹಣದ ಬಲೆಗೆ ಸಿಲುಕದಂತೆ ಶಾಸಕರನ್ನು ಕೊನೆಯ ಕ್ಷಣದವರೆಗೆ ರಕ್ಷಿಸಿದ್ದು ಡಿಕೆಶಿ. ಇಲ್ಲವಾದರೆ ರಾಜ್ಯದಲ್ಲಿ ಇಷ್ಟು ಹೊತ್ತಿಗೆ ಬಿಜೆಪಿ ಅಧಿಕಾರದಲ್ಲಿರುತ್ತಿತ್ತು.

ಮುಂದಿನ ಲೋಕಸಭಾ ಚುನಾವಣೆಯ ಮೇಲೆ ಈ ಮೈತ್ರಿ ತನ್ನ ಪರಿಣಾಮವನ್ನು ಬೀರಲಿದೆ ಎನ್ನುವ ಭಯ ಬಿಜೆಪಿಗಿದೆ. ಸದ್ಯಕ್ಕೆ ಬಿಜೆಪಿ ಆರ್ಥಿಕವಾಗಿ ಸದೃಢ ಪಕ್ಷ. ಕಾಂಗ್ರೆಸ್ ಆರ್ಥಿಕ ಮುಗ್ಗಟ್ಟಿನಲ್ಲಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಹಣಕ್ಕಾಗಿ ಸಾಕಷ್ಟು ತಿಣುಕಾಡಿದೆ. ಕಾಂಗ್ರೆಸ್‌ನಲ್ಲಿರುವ ಕೆಲವೇ ಕೆಲವು ಆರ್ಥಿಕ ಬಲಾಢ್ಯ ಶಕ್ತಿಗಳಲ್ಲಿ ಡಿಕೆಶಿ ಪ್ರಮುಖರು. ಇವರನ್ನು ಮುಗಿಸಿದರೆ ಕಾಂಗ್ರೆಸ್‌ನ್ನು ದುರ್ಬಲಗೊಳಿಸಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದಾರೆ ಕೇಂದ್ರದ ಬಿಜೆಪಿ ನಾಯಕರು. ಇತ್ತೀಚಿನ ರಾಜಕೀಯ ಬೆಳವಣಿಗೆಗ ಹಿನ್ನೆಲೆಯಲ್ಲಿ ದಾಳಿ ನಡೆಯಬೇಕಾಗಿತ್ತು ಬಿಜೆಪಿ ಮುಖಂಡರ ನಿವಾಸಗಳಿಗೆ. ಯಾಕೆಂದರೆ, ವಿಧಾನಸಭಾ ಚುನಾವಣೆಯಲ್ಲಿ ‘ಕುದುರೆ ವ್ಯಾಪಾರ’ದ ಮೂಲಕ ಶಾಸಕರನ್ನು ಕೊಂಡು ಸರಕಾರ ರಚನೆ ಮಾಡಲು ಮುಂದಾಗಿರುವುದು ಬಿಜೆಪಿಯ ರಾಜ್ಯ ಮುಖಂಡರು. ಸುಪ್ರೀಂಕೋರ್ಟ್ ಮಧ್ಯೆ ಪ್ರವೇಶಿಸದೇ ಇದ್ದಿದ್ದರೆ ಈ ಕಾರ್ಯದಲ್ಲಿ ಬಿಜೆಪಿ ನಾಯಕರು ಯಶಸ್ವಿಯಾಗುತ್ತಿದ್ದರು. ಕನಿಷ್ಠ ಹತ್ತು ಸ್ಥಾನಗಳನ್ನು ಬಿಜೆಪಿ ನಾಯಕರು ಕೊಂಡುಕೊಳ್ಳಬೇಕಾಗಿತ್ತು.

ಒಬ್ಬ ಶಾಸಕನಿಗೆ 50 ಕೋಟಿ ರೂ.ಯಂತೆ ನೀಡಿದರೂ 500 ಕೋಟಿ ರೂ.ಗಳನ್ನು ಚೆಲ್ಲಬೇಕಾಗಿತ್ತು. ಅಷ್ಟೇ ಅಲ್ಲ, ಬಿಜೆಪಿಯ ಹಿರಿಯ ನಾಯಕರು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಗೆ ಆಮಿಷ ನೀಡುತ್ತಿರುವ ಆಡಿಯೋ ಕೂಡ ಬಹಿರಂಗವಾಗಿತ್ತು. ಇಷ್ಟೂ ಪ್ರಮಾಣದಲ್ಲಿ ಬಿಜೆಪಿಗೆ ಹಣ ಎಲ್ಲಿಂದ ಬರಬೇಕು? ಈ ನಿಟ್ಟಿನಲ್ಲಿ ಬಿಜೆಪಿಯ ಕೆಲವು ಪ್ರಮುಖ ನಾಯಕರ ನಿವಾಸಗಳ ಮೇಲೆ ದಾಳಿ ನಡೆದಿದ್ದರೆ, ಡಿಕೆಶಿ ವಿರುದ್ಧ ಈಗ ನಡೆಯುತ್ತಿರುವ ಐಟಿ ಸಮರ ವಿಶ್ವಾಸಾರ್ಹತೆಯನ್ನು ಪಡೆಯುತ್ತಿತ್ತು. ತನಿಖಾ ಸಂಸ್ಥೆಗಳನ್ನು, ಐಟಿ ಅಧಿಕಾರಿಗಳನ್ನು ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಂಡಂತೆ ಅದರ ಲಾಭಗಳನ್ನು ಅಪರಾಧಿಗಳು ತಮ್ಮದಾಗಿಸುತ್ತಾರೆ. ‘ರಾಜಕೀಯ ದ್ವೇಷ’ವೇ ದಾಳಿಗೆ ಕಾರಣ ಎಂದು ಆರೋಪಿಗಳು ತಮ್ಮನ್ನು ತಾವು ಸಾರ್ವಜನಿಕವಾಗಿ ಸಮರ್ಥಿಸಲು ಶುರು ಹಚ್ಚಿಕೊಳ್ಳುತ್ತಾರೆ. ಆ ಮೂಲಕ ಅವರು ಹುತಾತ್ಮರಾಗಲು ಯತ್ನಿಸುತ್ತಾರೆ. ಇಂದು ಡಿಕೆಶಿಯವರ ವಿಷಯದಲ್ಲೂ ಇದೇ ಆಗುತ್ತಿದೆ. ಕೇಂದ್ರದ ಬಿಜೆಪಿ ಸರಕಾರ ತನಿಖಾ ಸಂಸ್ಥೆಗಳನ್ನು ಗರಿಷ್ಠ ಪ್ರಮಾಣದಲ್ಲಿ ರಾಜಕೀಯ ದುರುದ್ದೇಶಕ್ಕಾಗಿ ಬಳಸಿಕೊಳ್ಳುತ್ತಿರುವುದು ನಿಜಕ್ಕೂ ಅಪಾಯಕಾರಿ ಬೆಳವಣಿಗೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News