ಬೀದಿ ನಾಟಕ ಪ್ರದರ್ಶಿಸಲು ತೆರಳಿದ್ದ 5 ಎನ್‍ಜಿಒ ಕಾರ್ಯಕರ್ತೆಯರ ಸಾಮೂಹಿಕ ಅತ್ಯಾಚಾರ: ಆರೋಪ

Update: 2018-06-22 07:13 GMT

ರಾಂಚಿ, ಜೂ.22: ಜಾರ್ಖಂಡ್ ರಾಜ್ಯದ ಖುಂಟಿ ಜಿಲ್ಲೆಯ ಗ್ರಾಮವೊಂದಕ್ಕೆ ಮಾನವ ಕಳ್ಳಸಾಗಣಿಕೆ ಬಗ್ಗೆ ಜನಜಾಗೃತಿ ಮೂಡಿಸುವ ಬೀದಿ ನಾಟಕ ಪ್ರದರ್ಶಿಸಲು ತೆರಳಿದ್ದ ಎನ್ ಜಿಒ ಒಂದರ ಐದು ಸದಸ್ಯೆಯರನ್ನು ಬಂದೂಕು ತೋರಿಸಿ ಅಪಹರಿಸಿದ ದುಷ್ಕರ್ಮಿಗಳ ಗುಂಪೊಂದು ನಂತರ ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ  ಘಟನೆ ತಡವಾಗಿ ಬೆಳಕಿಗೆ ಬಂದಿದೆ. 

ಸಂತ್ರಸ್ತೆಯರು ಸಾಮಾಜಿಕ ಕಾರ್ಯಕರ್ತರೊಬ್ಬರನ್ನು ಸಂಪರ್ಕಿಸಿ ತಮ್ಮ ಮೇಲಾದ ದೌರ್ಜನ್ಯವನ್ನು ವಿವರಿಸಿದ ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. ಆರೋಪಿಗಳನ್ನು ಈಗಾಗಲೇ ಗುರುತಿಸಲಾಗಿದ್ದು ಮೂರು ಪೊಲೀಸ್ ತಂಡಗಳು ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ರಾಂಚಿ ಡಿಐಜಿ ಅಮೋಲ್ ವಿ ಹೊಮ್ಕರ್ ಹೇಳಿದ್ದಾರೆ.

ರಾಜ್ಯದ ಆದಿವಾಸಿ ಗ್ರಾಮಗಳಲ್ಲಿ ಸಕ್ರಿಯವಾಗಿರುವ ಪಥಲ್‍ಘರಿ ಚಳುವಳಿಯ ಜನರು ಈ ಕೃತ್ಯದಲ್ಲಿ ಶಾಮೀಲಾಗಿರಬೇಕೆಂಬ ಶಂಕೆಯಿದೆ. ಈ ಪಥಲ್‍ಘರಿ ಚಳುವಳಿಕಾರರು ತಮ್ಮ ಗ್ರಾಮಗಳಲ್ಲಿ ದೊಡ್ಡ ಫಲಕ ಅಳವಡಿಸಿ ತಮ್ಮ ಗ್ರಾಮಸಭೆಗಳ ಸಾರ್ವಭೌಮತ್ವ ಸಾರುತ್ತಾರಲ್ಲದೆ ಹೊರಗಿನವರನ್ನು ತಮ್ಮ ಪ್ರದೇಶಗಳಿಗೆ ಅನುಮತಿ ನಿರಾಕರಿಸುತ್ತಾರೆ.

ಸರಕಾರದ ಅಜೆಂಡಾ ಜಾರಿಗೊಳಿಸಲು ತಮ್ಮ ಪ್ರದೇಶಗಳನ್ನು ಪ್ರವೇಶಿಸದಂತೆ ಆರೋಪಿಗಳು ಸ್ವಯಂಸೇವಕರಿಗೆ ಬೆದರಿಸಿದ್ದಾರೆನ್ನಲಾಗಿದೆ. ಆದರೂ ಕಾರ್ಯಕರ್ತರು ಬೀದಿ ನಾಟಕ ಪ್ರದರ್ಶಿಸಲು ತೆರಳಿದ್ದಾಗ ದುಷ್ಕರ್ಮಿಗಳು ಕಾರ್ಯಕರ್ತರ ವಾಹನದಲ್ಲಿಯೇ ಅವರನ್ನು  ಬಂದೂಕು ತೋರಿಸಿ ಬೆದರಿಸಿ ಅಪಹರಿಸಿ, ಪುರುಷ ಸಹೋದ್ಯೋಗಿಗಳಿಗೆ ಥಳಿಸಿ ಅವರ ಮೂತ್ರವನ್ನು ಅವರೇ ಕುಡಿಯುಂತೆ ಮಾಡಿ ಕಾರಿನೊಳಕ್ಕೆ ಅವರನ್ನು ಬಂಧಿಯಾಗಿಸಿದ್ದರೆಂದು ಆರೋಪಿಸಲಾಗಿದೆ.

ನಂತರ ಸಂತ್ರಸ್ತೆಯರನ್ನು ಕಾಡಿಗೆ ಕರೆದುಕೊಂಡು ಹೋಗಿ ಅಲ್ಲಿ ಅವರನ್ನು ಅತ್ಯಾಚಾರಗೈದು ಘಟನೆಯನ್ನು ತಮ್ಮ ಮೊಬೈಲ್ ಫೋನ್ ಗಳಲ್ಲಿ ದುಷ್ಕರ್ಮಿಗಳು ಸೆರೆ ಹಿಡಿದ್ದರು ಎಂದು ಆರೋಪಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News