ಯಾರು ಕಟ್ಟಿದರು ಜಲಕ್ಷಾಮ ಎನ್ನುವ ಈ ತೂಗುಕತ್ತಿ

Update: 2018-06-22 18:31 GMT

ನಮ್ಮೆಲ್ಲರ ಹಾಗೂ ಮುಂದಿನ ಪೀಳಿಗೆಯ ಆರೋಗ್ಯಕ್ಕೆ ನೆಲದ ನೀರಿನ ಗುಣಮಟ್ಟ ರಕ್ಷಣೆ ಸಮರೋಪಾದಿಯಲ್ಲಿ ನಡೆಯಬೇಕಾದ ಕೆಲಸ. ಈ ದಿಶೆಯಲ್ಲಿ ಇತ್ತೀಚಿನ ವರದಿಗಳು ಒಂದು ಎಚ್ಚರಿಕೆಯ ಘಂಟೆ. ಇದನ್ನು ಕೇವಲ ಬೆಂಗಳೂರು ನಗರಕ್ಕೆ ಸೀಮಿತಗೊಳಿಸದೆ ದೇಶಾದ್ಯಂತ ಅದರಲ್ಲೂ ಗ್ರಾಮೀಣ ಭಾಗಗಳಲ್ಲಿ ಸಾಧ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕಾದ್ದು ಸರಕಾರಗಳ ಆದ್ಯ ಕರ್ತವ್ಯ.

ಹಿಂದೊಮ್ಮೆ ಬೆಂಗಳೂರಿಗೆ ಏನು ಕೊರತೆ ಎಂದಾಗ ಬೆಂಗಳೂರಿನಲ್ಲಿ ಬೀಚ್ ಇಲ್ಲದಿರುವುದೊಂದೇ ಕೊರತೆ ಎಂದಿದ್ದೆ. ತದನಂತರ ಏನು ತೊಂದರೆ ಎಂದಾಗ ಅತಿಯಾದ ಟ್ರಾಫಿಕ್, ಗಾರ್ಬೆಜ್ ವ್ಯವಸ್ಥೆ ಎನ್ನುವಂತಾಗಿತ್ತು. ಈಗಷ್ಟೇ ಹೊರಬಿದ್ದ ನೀತಿ ಆಯೋಗದ ಸಂಯೋಜಿತ ನೀರು ನಿರ್ವಹಣಾ ಸೂಚ್ಯಂಕದ ವರದಿಯಲ್ಲಿ 2020ರ ವೇಳೆಗೆ ಬೆಂಗಳೂರಿನ ಅಂತರ್ಜಲ ಖಾಲಿಯಾಗಲಿದೆ ಎನ್ನುವ ಮಾಹಿತಿ ಎಲ್ಲರನ್ನ್ನೂ ಬೆಚ್ಚಿಬೀಳಿಸಿದೆ. ಇದು ಕೆಲವು ತಿಂಗಳುಗಳ ಹಿಂದೆ ಬಿಬಿಸಿಯು ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಜಲಕ್ಷಾಮ ಆವರಿಸಲಿದೆ ಎನ್ನುವ ವರದಿಗೆ ಪೂರಕವಾಗಿಯೇ ಇದೆ. ಈ ಸುದ್ದಿ ಜನಸಾಮಾನ್ಯರಲ್ಲಿ ಹಾಗೂ ಆಡಳಿತಾಧಿಕಾರಿಗಳ ನಿದ್ರೆ ಕೆಡಿಸಿರಲಾರದು. ತೀವ್ರವಾಗಿ ಹೆಚ್ಚುತ್ತಿರುವ ಬೆಂಗಳೂರಿನ ಜನಸಂಖ್ಯೆ ನೀರಿನ ಅವಶ್ಯಕತೆ ಹೆಚ್ಚಿಸುತ್ತಿದೆ. ಬೆಂಗಳೂರಿನ ನೀರಿನ ಬವಣೆ ನೀಗಿಸುತ್ತಿರುವುದರಲ್ಲಿ ಅಂತರ್ಜಲವು ಒಂದು ಮೂಲ. ಅತಿಯಾದ ಅಂತರ್ಜಲದ ಬಳಕೆ ಹಾಗೂ ಮಳೆಗಾಲದಲ್ಲಿ ನೀರು ಭೂಮಿಯಲ್ಲಿ ಹಿಂಗಲು ಅವಕಾಶ ಇಲ್ಲದಿರುವುದು ಅಂತರ್ಜಲದ ಮಟ್ಟ ಕುಸಿಯಲು ಕಾರಣ. ಸರಕಾರ ದೀರ್ಘಕಾಲದ ಗುರಿಯಾಗಿರಿಸಿ ಬೆಂಗಳೂರಿಗೆ ಬೇಕಾಗುವಷ್ಟು ನೀರು ತರಲು ಕೆಲವು ನದಿಗಳ ಕಡೆಗೆ ದೃಷ್ಟಿ ಹಾಯಿಸಿರುವುದೇನೋ ಸರಿ. ಹಾಗೆಯೇ, ಬಳಸಿ ಒಳಚರಂಡಿ ಸೇರುತ್ತಿರುವ ನೀರು ಮತ್ತೆ ಮರುಬಳಕೆಗೆ ಎಷ್ಟು ಸೂಕ್ತವಾಗಿದೆ ಹಾಗೂ ಆ ನಿಟ್ಟಿನಲ್ಲಿ ಏನು ಕೆಲಸ ನಡೆಯುತ್ತಿದೆ ಎನ್ನುವುದು ಗಂಭೀರ ವಿಷಯ. ನೀರು ಎಂದರೆ ಎಲ್ಲರೂ ಆಕಾಶದ ಕಡೆಗೆ ಕತ್ತು ತಿರುಗಿಸುವವರೇ, ಆದರೆ ನಮ್ಮ ಕಾಲ ಕೆಳಗಿರುವ ನೆಲದಲ್ಲಿ ಶೇಖರಣೆಗೊಂಡಿರುವ ಅಂತರ್ಜಲದ ಬಗ್ಗೆ ನಾವು ಕಾಳಜಿ ತೋರಲೇ ಇಲ್ಲ. ಜಾಗತಿಕವಾಗಿ ವಿಜ್ಞಾನಿಗಳು ಇಂದು ಅನ್ಯಗ್ರಹ ಅಥವಾ ಉಪಗ್ರಹಗಳಲ್ಲಿ ಮೊದಲು ಹುಡುಕುತ್ತಿರುವುದು ನೀರು ಇರುವ ಕುರುಹು ಬಗ್ಗೆಯೇ. ನಂತರ ಜೀವಿಗಳು ಇರಬೇಕಾದ ವಾತಾವರಣ, ತದನಂತರ ಜೀವಿಗಳ ಹುಡುಕಾಟ. ಇದರಿಂದಲಾದರೂ ನಮ್ಮನ್ನು ಸೇರಿದಂತೆ ಜೀವಿಗಳ ಉಳಿವಿಗೆ ನೀರಿನ ಮಹತ್ವ ಏನೆಂದು ತಿಳಿಯಬೇಕಿತ್ತು. ಆದರೆ ಹಾಗೆ ಆಗದಿರುವುದು ವಿಪರ್ಯಾಸ. ನಾವು ಚಿಕ್ಕವರಾಗಿದ್ದಾಗ ದನಗಳನ್ನು ಮೇಯಿಸಲು ಕಾಡಿಗೆ ಹೋದಾಗ ನೀರಿನ ಸೆಲೆಗಳಲ್ಲಿ ನೇರವಾಗಿ ಬಾಯಿ ಇಟ್ಟು ನೀರನ್ನು ಕುಡಿಯುತ್ತಿದ್ದೆವು. ಇಂದು ದನಗಾಹಿಗಳು ಮನೆಯಿಂದಲೇ ಬಾಟಲಿನಲ್ಲಿ ನೀರು ತುಂಬಿಸಿಕೊಂಡು ಹೋಗುತ್ತಿದ್ದಾರೆ. ಅಷ್ಟೇ ಏಕೆ ನಗರ ಪ್ರದೇಶಗಳಲ್ಲಿ ಸಾರ್ವಜನಿಕ ನಲ್ಲಿಗಳಿಂದ ಬರುತ್ತಿದ್ದ ನೀರನ್ನು ನೇರವಾಗಿ ಕುಡಿಯುತ್ತಿದ್ದರು. ಇಂದು ಪ್ರತಿಯೊಬ್ಬ ನಗರವಾಸಿಯೂ RO ನೀರನ್ನು ಉಪಯೋಗಿಸುವ ಹಂತಕ್ಕೆ ತಲುಪಿದ್ದೇವೆ. ಇದಕ್ಕೆ ಕಾರಣ ನೈಸರ್ಗಿಕವಾಗಿ ದೊರೆಯುತ್ತಿದ್ದ ನೀರಿನ ಮೂಲಗಳನ್ನು ನೇರವಾಗಿ ಕುಡಿಯಲು ಸಹ ಯೋಗ್ಯವಲ್ಲದ ಹಂತಕ್ಕೆ ನಾವು ಕಲುಷಿತಗೊಳಿಸಿದ್ದೇವೆ. ‘‘ಮೂರನೇ ವಿಶ್ವಯುದ್ಧವೇನಾದರೂ ನಡೆದರೆ ಅದು ನೀರಿಗಾಗಿ ಮಾತ್ರ’’ ಎನ್ನುವ ಕೋಫಿ ಅನ್ನಾನ್ ಅವರ ಎಚ್ಚರಿಕೆಯ ಮಾತುಗಳನ್ನು ಬಹುತೇಕ ಮರೆತುಬಿಟ್ಟಿದ್ದೇವೆ. ಇದಕ್ಕೆ ಪೂರಕವಾಗಿ ನೀರಿಗಾಗಿ ಅಂತರ್‌ರಾಜ್ಯ ಮತ್ತು ಅಂತರ್‌ದೇಶಗಳ ನಡುವೆ ಜಗಳಗಳು ನಮ್ಮ ಮುಂದೆ ಇವೆ. ಹಿಂದೊಮ್ಮೆ ನೀರಿಗೆ ಬರ ಬಂದು ನೆಂಟರು ಯಾರಾದರು ತಮ್ಮ ಮನೆಗೆ ಬರುವುದಾದರೆ ಒಂದು ಬಿಂದಿಗೆ ನೀರು ತನ್ನಿ ಎನ್ನುವ ಕಾಲ ಎದುರಾಗಿತ್ತು. ಅಂತಹ ಸಂದರ್ಭ ಎದುರಿಸಿಯೂ, ನೀರಿನ ಮಿತ ಹಾಗೂ ನ್ಯಾಯೋಚಿತ ಬಳಕೆಗೆ ಜನರು ಮುಂದಾಗಿಲ್ಲ.

 ಇದುವರೆಗೂ ಭಾರತದಲ್ಲಿ ಎದುರಾಗಿರುವ ಭೀಕರ ಬರಗಾಲಗಳು ಕೇವಲ ಒಂದು ವರ್ಷದ ಅವಧಿಯದು. ಅಂದರೆ ಅದು ಮಾರನೇ ವರ್ಷದಲ್ಲಿ ಬರಗಾಲ ಎದುರಾಗದೆ ಪರಿಸ್ಥಿತಿ ಸುಧಾರಿಸಿದೆ. ಭಾರತದಲ್ಲೇನಾದರೂ ಸತತವಾಗಿ ಎರಡು ವರ್ಷ ಭೀಕರ ಬರಗಾಲ ಎದುರಾದರೆ ಖಂಡಿತಾ ಅದರ ದುಷ್ಪರಿಣಾಮ ಊಹಿಸಿಕೊಳ್ಳಲೂ ಅಸಾಧ್ಯ ಎಂಬುದು ಹಲವು ವಿಜ್ಞಾನಿಗಳ ಅನಿಸಿಕೆ. ಅದು ನಿಜ ಕೂಡ. ಹಾಗೆಯೇ ಆ ರೀತಿಯ ಜಲಕ್ಷಾಮ ಎದುರಾಗದೆ ಇರಲಿ ಎಂಬುದು ಎಲ್ಲರ ಆಶಯ. ಆದರೆ ಪ್ರಕೃತಿ ನಮ್ಮ ಇಚ್ಛೆ-ಇಷ್ಟದಂತೆ ನಡೆಯುವುದಿಲ್ಲ ಎಂಬುದು ಕಹಿಸತ್ಯ. ಮಳೆಯ ವೈಪರೀತ್ಯಗಳು ಒಂದು ಕಡೆ ಆದರೆ ಕುಸಿಯುತ್ತಿರುವ ಅಂತರ್ಜಲ ಇನ್ನಷ್ಟು ಕಳವಳಕಾರಿ. ಒಂದು ಅಂದಾಜಿನ ಪ್ರಕಾರ ಬೆಂಗಳೂರಿನಲ್ಲಿ 3 ಲಕ್ಷ ಕೊಳವೆ ಬಾವಿಗಳಿದ್ದು ಅವುಗಳಲ್ಲಿ ಈಗಾಗಲೇ 10 ಸಾವಿರಕ್ಕೂ ಹೆಚ್ಚು ಬತ್ತಿ ಹೋಗಿವೆ. ಅಂತರ್ಜಲ ಕೆಳಕ್ಕೆ ಹೋದಷ್ಟು ಅದು ಕುಡಿಯಲು ಯೋಗ್ಯಕರವಲ್ಲ ಎನ್ನುವುದು ಕಟು ಸತ್ಯ. ಇಂತಹ ತುಂಬ ಆಳದ ಅಂತರ್ಜಲದ ನೀರಿನಿಂದ ಕೆಲವೊಂದು ಜಿಲ್ಲೆಗಳಲ್ಲಿ ಫ್ಲೋರೋಸಿಸ್‌ನಂತಹ ಕಾಯಿಲೆಗಳಿಗೆ ಜನರು ತುತ್ತಾಗುತ್ತಿರುವುದು ಕಾಣುತ್ತಿದ್ದೇವೆ. ಯಾವುದೇ ಅಡ್ಡಿ ಇಲ್ಲದೆ ಅಂತರ್ಜಲವನ್ನು ಉಪಯೋಗಿಸುತ್ತಿರುವುದು ಒಂದು ಕಡೆಯಾದರೆ ನೈಸರ್ಗಿಕವಾದ ನದಿ, ಸರೋವರಗಳ ಜೊತೆಗೆ ಕೆರೆ, ಕುಂಟೆ, ನಾಲೆಗಳಂತಹ ನೀರಿನ ಮೂಲಗಳನ್ನು ಕಲುಷಿತಗೊಳಿಸುತ್ತಿರುವುದು ಇನ್ನೊಂದು ಕಡೆ. ನಾವು ಕನ್ನಡಿಯ ಮುಂದೆ ನಿಂತು ವಾಶ್ ಬೇಸಿನ್ ನ ಕೊಳಾಯಿ ತಿರುವಿದಾಗ ನೀರು ಬರದೆ ಇದ್ದಾಗ ತಲೆ ಕೆಡಿಸಿಕೊಳ್ಳುವಷ್ಟು, ನಾವು ಸಾಬೂನು ಹಾಕಿ ಕೈತೊಳೆದ ನೀರು ಎಲ್ಲಿಗೆ ಹೋಗುತ್ತದೆ? ಪ್ರತಿ ಮನೆಯಿಂದ ಈ ರೀತಿ ಬರುವ ಸಾಬೂನಿನ ನೀರಿನಿಂದ ಪ್ರಕೃತಿಯ ನೀರಿನ ಮೂಲಗಳ ಮೇಲೆ ಆಗುವ ಪರಿಣಾಮಗಳೇನು? ಎಂದು ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಒಮ್ಮೆ ಅದು ಮನೆಯಿಂದ ಒಳಚರಂಡಿ ಸೇರಿದರೆ ಮುಗಿಯಿತು ನಮಗೂ ಅದಕ್ಕೂ ಸಂಬಂಧವೇ ಇಲ್ಲ ಎನ್ನುವ ಮನೋಭಾವ. ಅದರಿಂದ ತಕ್ಷಣಕ್ಕೆ ಯಾವುದೇ ಪರಿಣಾಮ ಆಗದೆ ಇರಬಹುದು ಆದರೇ ದೀರ್ಘಾವಧಿಯಲ್ಲಿ?
 ನೀರಿನ ಮೂಲಗಳಿಗೆ ಸೇರುತ್ತಿರುವ ಕಣ್ಣಿಗೆ ಗೋಚರಿಸುವ ವಸ್ತುಗಳಲ್ಲಿ ಪ್ಲಾಸ್ಟಿಕ್ ಸೇರಿದಂತೆ ಅನೇಕ ಘನತ್ಯಾಜ್ಯಗಳು ಒಂದೆಡೆಯಾದರೆ, ಮಾರ್ಜಕಗಳು, ಪೆಟ್ರೋಲಿಯಂ ಉಪಉತ್ಪನ್ನಗಳು, ಕಾರ್ಖಾನೆಗಳಿಂದ ಬರುವ ಇತರ ಹಾನಿಕಾರಕ ರಾಸಾಯನಿಕಗಳು ಮತ್ತೊಂದು ಕಡೆ. ನಾವು ನಿತ್ಯ ಬಳಸುವ ಸಾಬೂನುಗಳನ್ನೇ ಒಂದು ಉದಾಹರಣೆಯಾಗಿ ತೆಗೆದುಕೊಳ್ಳೋಣ, ಒಂದು ಅಂದಾಜಿನ ಪ್ರಕಾರ ಭಾರತದ ಒಟ್ಟು ಜನಸಂಖ್ಯೆಯ ಶೇ. 88.6ರಷ್ಟು ಜನರು ವಾರ್ಷಿಕವಾಗಿ ತಲಾ 2.7 ಕೆಜಿ ವಿವಿಧ ರೀತಿಯ ಸಾಬೂನು ಉತ್ಪನ್ನಗಳನ್ನು ಉಪಯೋಗಿಸುತ್ತಿದ್ದಾರೆ. ಇದರಲ್ಲಿ ಶೇ. 50ಕ್ಕಿಂತ ಹೆಚ್ಚು ಸಿಂಥೆಟಿಕ್ ಮೂಲದ್ದೇ ಆಗಿದೆ. ಅಂದರೆ ಅಷ್ಟು ಸಾಬೂನಿನ ಅಂಶಗಳು ವಿವಿಧ ರೀತಿಯ ನೀರಿನ ಮೂಲಗಳಿಗೆ ಸೇರುತ್ತಿದೆ.
 ಅಮೆರಿಕದಂತಹ ದೇಶಗಳಲ್ಲಿ ಪ್ರತಿಯೊಬ್ಬ ಉತ್ಪಾದಕರು ತಮ್ಮ ಉತ್ಪನ್ನಗಳು ತ್ಯಾಜ್ಯನೀರು, ನದಿ, ಸರೋವರಗಳ ಮೇಲೆ ಸುರಕ್ಷಿತವಾಗಿದೆಯೆಂದು ಖಚಿತಪಡಿಸಿರಬೇಕು. ನಮ್ಮಲ್ಲಿ ಸದ್ಯಕ್ಕೆ ಆ ವ್ಯವಸ್ಥೆ ಇಲ್ಲ. ಇದ್ದರೂ ಸಹ ಅದು ಕೇವಲ ದಾಖಲೆಗಷ್ಟೇ ಸೀಮಿತ. ಆಗೊಂದು ವೇಳೆ ಅದು ಪರಿಣಾಮಕಾರಿಯಾಗಿ ಇದ್ದಿದ್ದರೆ ಇಂದು ಬೆಂಗಳೂರಿನ ಕೆರೆಗಳ ನೀರು ಕೊನೆ ಪಕ್ಷ ಉದ್ಯಾನವನಗಳಿಗಾದರೂ ಯೋಗ್ಯವಾಗಿರುತ್ತಿದ್ದವು. ಬೆಳ್ಳಂದೂರಿನ ಕೆರೆ ಆಸುಪಾಸು ವಾಸಿಸುವವರು ಕೆರೆ ನೀರಿಂದ ಬರುವ ನೊರೆ ಬಗ್ಗೆ ಧ್ವನಿಮಾಡುವ ಅವಶ್ಯಕತೆ ಇರುತ್ತಿರಲಿಲ್ಲ. ಅಷ್ಟೇ ಅಲ್ಲ, ಈಗಾಗಲೇ ಕರ್ನಾಟಕದಿಂದ ಬರುತ್ತಿರುವ ಕಾವೇರಿ ನೀರು ಕಲುಷಿತವಾಗಿದೆ ಎಂದು ತಮಿಳುನಾಡು ಸರಕಾರ ಕೋರ್ಟ್ ಮೆಟ್ಟಿಲೇರಿದೆ. ಹೀಗೆಯೇ ಜಲಕ್ಷಾಮ ಎನ್ನುವುದು ನಾವೇ ನಿರ್ಮಿಸಿದ ಬ್ಲಾಕ್ ಹೋಲ್. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಈ ಬ್ಲಾಕ್ ಹೋಲ್‌ನಲ್ಲಿ ನಾವು ನಾಮಾವಶೇಷ ಆಗುವುದು ನಿಶ್ಚಿತ.
 ಐರೋಪ್ಯ ರಾಷ್ಟ್ರಗಳಲ್ಲಿ ತಾಂತ್ರಿಕ ಮತ್ತು ನಿಯಂತ್ರಕ ಸಮುದಾಯಗಳು ವೈಜ್ಞಾನಿಕ ತತ್ವಗಳನ್ನು ಆಧರಿಸಿ ಜನರು ಬಳಸಿದ ನೀರಿನಿಂದ ಪರಿಸರದ ಮೇಲೆ ಆಗುವ ಅಪಾಯವನ್ನು ನಿರ್ಣಯಿಸಿ ಅವುಗಳ ತಡೆಗೆ ಕ್ರಮ ಕೈಗೊಳ್ಳುತ್ತಾರೆ. ಆದರೆ ನಮ್ಮಲ್ಲಿ ಯಾವುದೇ ಪರಿಸರ ಅದರಲ್ಲೂ ನೀರಿಗೆ ಸಂಬಂಧಿಸಿದ ಕಾರ್ಯಕ್ರಮಗಳು ಜನಸಾಮಾನ್ಯರ ಕಾರ್ಯಕ್ರಮವಾಗಿ ಹೊರಹೊಮ್ಮದೆ ಇರುವುದು ವಿಷಾದನೀಯ. ಜನಸಾಮಾನ್ಯರು ಪ್ರತಿಯೊಂದಕ್ಕೂ ಸರಕಾರಗಳನ್ನು ದೂರುವುದಕ್ಕಿಂತ ನಾನು/ನಾವು ಹೇಗೆ ಇದನ್ನು ತಡೆಗಟ್ಟಬಹುದು ಅಥವಾ ಕಡಿಮೆ ಮಾಡಬಹುದು ಎನ್ನುವ ಆಲೋಚನೆಯೊಂದಿಗೆ ಕಾರ್ಯಪ್ರವೃತ್ತರಾಗದಿರುವುದು ದುರಂತವೇ ಸರಿ. ನಮ್ಮೆಲ್ಲರ ಹಾಗೂ ಮುಂದಿನ ಪೀಳಿಗೆಯ ಆರೋಗ್ಯಕ್ಕೆ ನೆಲದ ನೀರಿನ ಗುಣಮಟ್ಟ ರಕ್ಷಣೆ ಸಮರೋಪಾದಿಯಲ್ಲಿ ನಡೆಯಬೇಕಾದ ಕೆಲಸ. ಈ ದಿಶೆಯಲ್ಲಿ ಇತ್ತೀಚಿನ ವರದಿಗಳು ಒಂದು ಎಚ್ಚರಿಕೆಯ ಘಂಟೆ. ಇದನ್ನು ಕೇವಲ ಬೆಂಗಳೂರು ನಗರಕ್ಕೆ ಸೀಮಿತಗೊಳಿಸದೆ ದೇಶಾದ್ಯಂತ ಅದರಲ್ಲೂ ಗ್ರಾಮೀಣ ಭಾಗಗಳಲ್ಲಿ ಸಾಧ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕಾದ್ದು ಸರಕಾರಗಳ ಆದ್ಯ ಕರ್ತವ್ಯ. ನೀರಿನ ಸಂರಕ್ಷಣೆಯ ಮೂಲಕ ಲಭ್ಯವಿರುವ ನೀರಿನ ಸಂಪನ್ಮೂಲಗಳ ವರ್ಧನೆ, ಮಳೆ ಕೊಯ್ಲು, ಚೆಕ್ ಡ್ಯಾಮ್‌ಗಳ ನಿರ್ಮಾಣ, ಭೂಸವಕಳಿ ತಡೆಗಟ್ಟುವುದು, ರಾಜಕಾಲುವೆ ಒತ್ತುವರಿ ಬಿಡುಗಡೆ, ಒಳಚರಂಡಿ ನೀರು ನೈಸರ್ಗಿಕ ನೀರಿನ ಮೂಲಗಳು ಸೇರದಂತೆ ನೋಡಿಕೊಳ್ಳುವುದು. ಜನಸಾಮಾನ್ಯರು/ರೈತರಿಗೆ ಮಿತ ಹಾಗೂ ನ್ಯಾಯೋಚಿತ ನೀರಿನ ಬಳಕೆ, ಪರಿಸರ ಶಿಕ್ಷಣ ಮತ್ತು ಸ್ಥಳೀಯ ಸಮುದಾಯಗಳ ಸಬಲೀಕರಣ, ಸಾವಯವ ಬೇಸಾಯ ವಿಧಾನಗಳು ಇತ್ಯಾದಿಗಳ ಬಗ್ಗೆ ಪರಿಣಾಮಕಾರಿ ಜನ ಜಾಗೃತಿ ಹಾಗೂ ಯೋಜನೆಗಳ ಅಳವಡಿಕೆ ಅತ್ಯಂತ ಅವಶ್ಯಕ.

Writer - ಡಾ. ಎ. ಮಹಾದೇವ, ಲಕ್ನೋ

contributor

Editor - ಡಾ. ಎ. ಮಹಾದೇವ, ಲಕ್ನೋ

contributor

Similar News

ಜಗದಗಲ
ಜಗ ದಗಲ