ಸೆರ್ಬಿಯಾಕ್ಕೆ ಕೊನೆಕ್ಷಣದ ಆಘಾತ; ಸ್ವಿಡ್ಜರ್‌ಲೆಂಡ್ ಗೆ ಜಯ

Update: 2018-06-23 04:08 GMT

ಕಲಿನಿಂಗ್ರಾಡ್ (ರಶ್ಯ), ಜೂ.23: ಗ್ರನಿಟ್ ಗ್ಸಾಕಾ ಅವರ ಸಿಡಿಲಬ್ಬರದ ಗೋಲು ಮತ್ತು ಕ್ಸೆರ್ಡಾನ್ ಶಕೀರಿಯವರ ಕೊನೆ ನಿಮಿಷದ ಗೋಲು ಫಿಫಾ ವಿಶ್ವಕಪ್ ಪಂದ್ಯಾವಳಿಯ ಇ ಗುಂಪಿನ ಪಂದ್ಯದಲ್ಲಿ ಸೆರ್ಬಿಯಾವನ್ನು ನಾಟಕೀಯವಾಗಿ 2-1 ಅಂತರದಿಂದ ಸೋಲಿಸಲು ಸ್ವಿಡ್ಜರ್‌ಲೆಂಡ್‌ಗೆ ನೆರವಾಯಿತು.

ಪಂದ್ಯದ ಐದನೇ ನಿಮಿಷದಲ್ಲೇ ಸೆರ್ಬಿಯಾ ಪರ ಅಲೆಕ್ಸಾಂಡರ್ ಮಿಟ್ರೊವಿಕ್ ಗೋಲು ಬಾರಿಸುವ ಮೂಲಕ ಕಲಿನಿಂಗ್ರಾಡ್ ಸ್ಟೇಡಿಯಂನಲ್ಲಿ ಅಪಾರ ಅಭಿಮಾನಿಗಳಿಗೆ ರೋಮಾಂಚನ ಉಂಟು ಮಾಡಿದರು. ಆದರೆ 52ನೇ ನಿಮಿಷದಲ್ಲಿ ಗ್ಸಾಕಾ ಎಡಗಾಲಿನಿಂದ ಅದ್ಭುತವಾಗಿ ಒದ್ದ ಚೆಂಡು 25 ಮೀಟರ್ ಅಂತರದಿಂದ ನೆಟ್ ಸೇರಿ ಸೆರ್ಬಿಯಾ ಅಭಿಮಾನಿಗಳನ್ನು ದಂಗುಬಡಿಸಿದರು. ಕೊನೆ ನಿಮಿಷದಲ್ಲಿ ಶಕೀರಿ ಮತ್ತೊಂದು ಗೋಲು ಹೊಡೆದು ಸ್ವಿಡ್ಜರ್‌ಲೆಂಡ್‌ನ ಅವಿಸ್ಮರಣೀಯ ಜಯಕ್ಕೆ ಕಾರಣರಾದರು.

ಈ ಪಂದ್ಯದ ಫಲಿತಾಂಶದೊಂದಿಗೆ ಕೋಸ್ಟರಿಕಾ ವಿರುದ್ಧ 2-0 ಜಯ ಸಾಧಿಸಿದ ಬ್ರೆಝಿಲ್, ಸ್ವಿಡ್ಜರ್‌ಲೆಂಡ್ ವಿರುದ್ಧ ಗೋಲು ಅಂತರದಲ್ಲಿ ಮುಂದಿದ್ದು, ಗುಂಪಿನಲ್ಲಿ ಅಗ್ರಸ್ಥಾನಿಯಾಗಿದೆ. ಸೆರ್ಬಿಯಾ ಮೂರನೇ ಸ್ಥಾನದಲ್ಲಿದೆ. ಬ್ರೆಝಿಲ್ ಹಾಗೂ ಸೆರ್ಬಿಯಾ ತಮ್ಮ ಅಂತಿಮ ಪಂದ್ಯದಲ್ಲಿ ಪರಸ್ಪರ ಸೆಣಸಲಿದ್ದು, ಸ್ವಿಡ್ಜರ್‌ಲೆಂಡ್ ಈಗಾಗಲೇ ಎರಡು ಸೋಲಿನೊಂದಿಗೆ ಕೂಟದಿಂದ ಹೊರಬಿದ್ದಿರುವ ಕೋಸ್ಟರಿಕ ವಿರುದ್ಧ ಆಡಲಿದೆ.

ಅದ್ಭುತ ಆರಂಭ ನೀಡಿದ ಸೆರ್ಬಿಯಾ ಆಟಗಾರ ಮಿಟ್ರೊವಿಕ್ ತೀರಾ ಸಮೀಪದಿಂದ ಹೊಡೆದ ಹೆಡ್ಡರ್ ಅನ್ನು ತಡೆಯುವ ಮೂಲಕ ಸ್ವಿಸ್ ಗೋಲ್‌ಕೀಪರ್ ಯಾನ್ ಸೊಮ್ಮೆರ್ ತಂಡವನ್ನು ಆರಂಭಿಕ ಆಘಾತದಿಂದ ರಕ್ಷಿಸಿದರು. ಆದರೆ ಐದನೇ ನಿಮಿಷದಲ್ಲಿ ನೆಮಂಜಾ ಮ್ಯಾಟಿಕ್ ಚೆಂಡಿನ ನಿಯಂತ್ರಣ ಪಡೆದು ಮಿಟ್ರೊವಿಕ್ ಅವರಿಗೆ ವರ್ಗಾಯಿಸಿದರು. ಮಿಟ್ರೊವಿಕ್ ಅವರ ರಭಸದ ಹೆಡ್ಡರ್‌ಗೆ ಸೊಮ್ಮೆರ್ ಬಳಿ ಉತ್ತರವಿರಲಿಲ್ಲ. ಇದರೊಂದಿಗೆ ಸೆರ್ಬಿಯಾ 1-0 ಮುನ್ನಡೆ ಸಾಧಿಸಿತು.

ಪಂದ್ಯದುದ್ದಕ್ಕೂ ಸ್ವಿಸ್ ರಕ್ಷಣಾ ಗೋಡೆಯನ್ನು ಸೆರ್ಬಿಯಾ ಆಟಗಾರರು ಭೇದಿಸಿದರೂ ಗೋಲು ಗಳಿಸುವ ಅವಕಾಶಗಳನ್ನು ಕೈಚೆಲ್ಲಿದರು. ಅಂತಿಮ ನಿಮಿಷದಲ್ಲಿ ಗ್ಸಾಕಾ ಅವರ ಪಾಸನ್ನು ಗೋಲಾಗಿ ಪರಿವರ್ತಿಸಿದ ಶಕೀರಿ ಸೆರ್ಬಿಯಾಗೆ ಆಘಾತ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News