ಕಬಡ್ಡಿ ಮಾಸ್ಟರ್ಸ್‌ ದುಬೈ: ಪಾಕ್ ವಿರುದ್ಧ ಗೆದ್ದ ಭಾರತ

Update: 2018-06-23 03:53 GMT

ದುಬೈ, ಜೂ.23: ಆರು ದೇಶಗಳ ಕಬಡ್ಡಿ ಮಾಸ್ಟರ್ಸ್‌ ದುಬೈ-2018 ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಭಾರತ ತಂಡ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 36-20 ಅಂಕಗಳಿಂದ ಬಗ್ಗುಬಡಿದಿದೆ.

ನಾಯಕ ಅಜಯ್ ಠಾಕೂರ್ ನೇತೃತ್ವದ ಭಾರತ ತಂಡ ಎಲ್ಲ ವಿಭಾಗಗಳೂ ಪಾಕಿಸ್ತಾನ ವಿರುದ್ಧ ಅದ್ಭುತ ಪ್ರದರ್ಶನ ನೀಡಿತು. 32 ವರ್ಷದ ಠಾಕೂರ್ ಎಂಟು ಪಾಯಿಂಟ್ ಗಳಿಸಿ, ದೊಡ್ಡ ಮುನ್ನಡೆಗೆ ಕಾರಣರಾದರು.

ಎಚ್ಚರಿಕೆಯಿಂದ ಆಟ ಆರಂಭಿಸಿದ ಭಾರತ ತಂಡ ಕ್ರಮೇಣ ವೇಗ ಪಡೆಯಿತು. ಪದೇ ಪದೇ ರೈಡ್‌ಗಳಲ್ಲಿ ಅಂಕ ಬಾಚಿಕೊಂಡಿತು. ಅಜಯ್ ಠಾಕೂರ್ ಹಾಗೂ ರೋಹಿತ್ ಕುಮಾರ್ ಭಾರತಕ್ಕೆ ಅಮೋಘ ಮುನ್ನಡೆ ದೊರಕಿಸಿಕೊಟ್ಟರು. ರಕ್ಷಣಾ ವ್ಯವಸ್ಥೆಯಲ್ಲಿ ಪ್ರಬಲ ಎಂದು ಪರಿಗಣಿಸಲ್ಪಟ್ಟ ಪಾಕಿಸ್ತಾನ ತಂಡ ಭಾರತದ ಅಗ್ರ ಕ್ರಮಾಂಕದ ರೈಡರ್‌ಗಳನ್ನು ಕಟ್ಟಿ ಹಾಕುವಲ್ಲಿ ವಿಫಲವಾಯಿತು. ಮಧ್ಯಂತರ ವೇಳೆಗೆ ಭಾರತ 22-9 ಮುನ್ನಡೆ ಸಾಧಿಸಿತ್ತು.

ಉತ್ತರಾರ್ಧದಲ್ಲಿ ಕೂಡಾ ಭಾರತದ ರೈಡರ್‌ಗಳು ಪಾರಮ್ಯ ಮೆರೆದರು. ಅಜಯ್ ಠಾಕೂರ್ ಹಾಗೂ ರೋಹಿತ್ ಕುಮಾರ್, ಪಾಕ್ ರಕ್ಷಣಾ ಆಟಗಾರರನ್ನು ಅಂಕ ಬಾಚತೊಡಗಿದರು. ಪಾಕಿಸ್ತಾನದ ಪರ ಇಬ್ರಾರ್ ಹುಸೇನ್ ಹಾಗೂ ಮುದಸ್ಸರ್ ಅಲಿ ಅಂಕಗಳನ್ನು ಪಡೆದರೂ, ಭಾರತದ ಸನಿಹಕ್ಕೂ ಬರಲಾಗಲಿಲ್ಲ. ಪಾಕಿಸ್ತಾನದ ರೈಡರ್‌ಗಳನ್ನು ಸಮರ್ಥವಾಗಿ ಕಟ್ಟಿಹಾಕಿದ ಭಾರತೀಯರು ಎರಡು ಬಾರಿ ಆಲ್‌ಔಟ್ ಪಾಯಿಂಟ್ ಸಾಧಿಸಿದರು. ಕೊನೆಯ ನಿಮಿಷಗಳಲ್ಲಿ ಪಾಕಿಸ್ತಾನ ಕೆಲ ಅಂಕಗಳನ್ನು ಗಳಿಸಿದರೂ ಫಲಿತಾಂಶದ ಮೇಲೆ ಅದು ಪರಿಣಾಮ ಬೀರಲಿಲ್ಲ.

ವಿಶ್ವಚಾಂಪಿಯನ್ ಭಾರತ 15 ರೈಡ್‌ ಪಾಯಿಂಟ್ ಹಾಗೂ 12 ಟ್ಯಾಕಲ್ ಪಾಯಿಂಟ್‌ಗಳನ್ನು ಗಳಿಸಿದರೆ, ಈ ಎರಡು ವಿಭಾಗಗಳಲ್ಲಿ ಪಾಕಿಸ್ತಾನ ಕ್ರಮವಾಗಿ 9 ಹಾಗೂ 8 ಪಾಯಿಂಟ್‌ಗೆ ತೃಪ್ತಿಪಟ್ಟಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News