800ನೇ ಗೆಲುವಿನ ಮೈಲುಗಲ್ಲು ತಲುಪಿದ ಜೊಕೊವಿಕ್

Update: 2018-06-23 07:53 GMT

ಲಂಡನ್, ಜೂ.23: ವೃತ್ತಿಜೀವನದಲ್ಲಿ 800ನೇ ಗೆಲುವು ದಾಖಲಿಸಿ ಹೊಸ ಮೈಲುಗಲ್ಲು ತಲುಪಿದ ನೊವಾಕ್ ಜೊಕೊವಿಕ್ ಕ್ವೀನ್ಸ್ ಕ್ಲಬ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ.

 31ರ ಹರೆಯದ ಸರ್ಬಿಯಾ ಆಟಗಾರ ಜೊಕೊವಿಕ್ 2016ರಲ್ಲಿ ಫ್ರೆಂಚ್ ಓಪನ್ ಜಯಿಸುವ ಮೂಲಕ ಎಲ್ಲ ನಾಲ್ಕು ಗ್ರಾನ್‌ಸ್ಲಾಮ್ ಪ್ರಶಸ್ತಿಯನ್ನು ಗೆದ್ದ ಸಾಧನೆ ಮಾಡಿದ್ದರು. ಕಳೆದ 18 ತಿಂಗಳುಗಳಿಂದ ಜೊಕೊವಿಕ್ ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ.

ಕ್ವಾರ್ಟರ್ ಫೈನಲ್‌ನಲ್ಲಿ ಅಡ್ರಿಯಾನ್ ಮನರಿನೊರನ್ನು 7-5, 6-1 ಅಂತರದಿಂದ ಮಣಿಸಿರುವ ಜೊಕೊವಿಕ್ ಸೆಮಿ ಫೈನಲ್‌ನಲ್ಲಿ ಫ್ರಾನ್ಸ್‌ನ ಫಾರ್ಮ್‌ನಲ್ಲಿರುವ ಆಟಗಾರ ಜೆರೆಮಿ ಚಾರ್ಡಿ ಅವರನ್ನು ಎದುರಿಸಲಿದ್ದಾರೆ.

ನೀವು 40 ವಯಸ್ಸಿನ ತನಕ ಟೆನಿಸ್‌ನಲ್ಲಿ ಮುಂದುವರಿಯುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಜೊಕೊವಿಕ್,‘‘ನಾನು ಟೆನಿಸ್ ಆಡುವುದನ್ನು ಇಷ್ಟಪಡುವ ತನಕ ಆಡುವೆ. ಈ ಕ್ರೀಡೆಯನ್ನು ಆಡಲು ತುಂಬಾ ಇಷ್ಟಪಡುತ್ತಿರುವ ಕಾರಣ ಇನ್ನಷ್ಟು ಕಾಲ ಆಡುವ ವಿಶ್ವಾಸ ನನಗಿದೆ’’ ಎಂದರು.

ಜೊಕೊವಿಕ್ ವೃತ್ತಿಪರ ಯುಗದಲ್ಲಿ 800 ಹಾಗೂ ಅದಕ್ಕಿಂತ ಹೆಚ್ಚು ಪಂದ್ಯಗಳನ್ನು ಜಯಿಸಿರುವ 10ನೇ ಆಟಗಾರನಾಗಿದ್ದಾರೆ. ಜಿಮ್ಮಿ ಕೊನರ್ಸ್‌(1,256) ಅತ್ಯಂತ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ. ಈಗಲೂ ಸಕ್ರಿಯರಾಗಿರುವ ಸ್ವಿಸ್ ಸೂಪರ್ ಸ್ಟಾರ್ ರೋಜರ್ ಫೆಡರರ್ ಈಗಾಗಲೇ 1,156 ಪಂದ್ಯಗಳನ್ನು ಜಯಿಸಿದ್ದಾರೆ. ಜೊಕೊವಿಕ್ ಕಳೆದ ಒಂದು ವರ್ಷದಿಂದ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿಲ್ಲ. ಇತ್ತೀಚೆಗೆ ಫ್ರೆಂಚ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದ ಜೊಕೊವಿಕ್ ಮುಂದಿನ ತಿಂಗಳು ನಡೆಯಲಿರುವ ವಿಂಬಲ್ಡನ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News