ಅಶುದ್ಧ ರಕ್ತ ಈ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ ಎನ್ನುವುದು ನಿಮಗೆ ಗೊತ್ತೇ ?

Update: 2018-06-23 10:56 GMT

ಪ್ರಮುಖ ಪೋಷಕಾಂಶಗಳು ರಕ್ತದ ಮೂಲಕವೇ ನಮ್ಮ ಇಡೀ ಶರೀರವನ್ನು ತಲುಪುವುದರಿಂದ ರಕ್ತ ಪರಿಚಲನೆಯು ನಮ್ಮನ್ನು ಆರೋಗ್ಯಯುತವಾಗಿರಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.

ಅಶುದ್ಧ ರಕ್ತವು ಕಾಯಿಲೆಗಳು ಮತ್ತು ಉರಿಯೂತಕ್ಕೆ ಅತ್ಯಂತ ಮುಖ್ಯ ಕಾರಣವಾಗಿದೆ. ಅದು ನಮ್ಮ ಶರೀರಕ್ಕೆ ಹಲವಾರು ಹಾನಿಗಳನ್ನು ಮಾಡುವುದರಿಂದ ಅದನ್ನು ‘ವಿಷಪೂರಿತ ರಕ್ತ’ ಎಂದೂ ಕರೆಯಲಾಗುತ್ತದೆ. ಆಧುನಿಕ ಜೀವನಶೈಲಿಗಳಿಂದಾಗಿ ನಮ್ಮ ಆಹಾರಕ್ರಮದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ, ಜೊತೆಗೆ ಹೆಚ್ಚುತ್ತಿರುವ ವಾತಾವರಣ ಮಾಲಿನ್ಯವೂ ನಮ್ಮ ಶರೀರ ಮತ್ತು ಚರ್ಮದ ಮೇಲೆ ದುಷ್ಪರಿಣಾಮಗಳನ್ನುಂಟು ಮಾಡುತ್ತದೆ.
ನಾವು ಉಸಿರಾಡುವ ಗಾಳಿ,ಸೇವಿಸುವ ಆಹಾರ ಮತ್ತು ಕುಡಿಯುವ ನೀರು ಇವೆಲ್ಲವೂ ಮಾಲಿನ್ಯಪೂರಿತವಾಗಿದ್ದು,ಅವು ನಮ್ಮ ಶರೀರದಲ್ಲಿ ವಿಷವಸ್ತುಗಳು ಸಂಗ್ರಹಗೊಳ್ಳಲು ಕಾರಣವಾಗುತ್ತವೆ ಮತ್ತು ಅಂತಿಮವಾಗಿ ರಕ್ತವನ್ನು ಅಶುದ್ಧಗೊಳಿಸುತ್ತವೆ.

ಮೊಡವೆ,ದದ್ದುಗಳಂತಹ ಚರ್ಮರೋಗಗಳು,ಅಲರ್ಜಿ,ಅಕಾಲಿಕವಾಗಿ ವಯಸ್ಸಾಗುವಿಕೆ ಮತ್ತು ತಲೆಗೂದಲು ಉದುರುವಿಕೆ ಇವು ಅಶುದ್ಧ ರಕ್ತದ ಸಾಮಾನ್ಯ ಪರಿಣಾಮಗಳಾಗಿವೆ. 

ಅದು ಉಂಟು ಮಾಡುವ ಕೆಲವು ಗಂಭೀರ ರೋಗಗಳ ಕುರಿತು ಮಾಹಿತಿಯಿಲ್ಲಿದೆ....

* ಉರಿಯೂತ ಕಾಯಿಲೆಗಳು

ನಮ್ಮ ಶರೀರವನ್ನು ಪ್ರವೇಶಿಸುವ ವಿಷವಸ್ತುಗಳು ರಕ್ತವನ್ನು ಅಶುದ್ಧಗೊಳಿಸುತ್ತವೆ. ಸೋರಿಯಾಸಿಸ್,ಅಸ್ತಮಾ,ಹೃದಯರೋಗಗಳ ಬೆಳವಣಿಗೆಯೊಂದಿಗೆ ಗುರುತಿಸಿಕೊಂಡಿರುವ ಉರಿಯೂತಕ್ಕೆ ಅವು ಕಾರಣವಾಗುತ್ತವೆ. ಅಲ್ಜೀಮರ್ಸ್ ಕಾಯಿಲೆಗೂ ಅವು ನಾಂದಿ ಹಾಡುತ್ತವೆ.

* ಜಠರಗರುಳಿನ ಸಮಸ್ಯೆಗಳು

 ಜಠರಗರುಳಿನ ನಾಳವು ಶರೀರದಿಂದ ವಿಷವಸ್ತುಗಳನ್ನು ಹೊರಗೆ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ರಕ್ತದಲ್ಲಿ ಅಶುದ್ಧತೆ ಹೆಚ್ಚಾದರೆ ಅದು ಈ ಪ್ರಕ್ರಿಯೆಗೆ ವ್ಯತ್ಯಯವನ್ನುಂಟು ಮಾಡುತ್ತದೆ ಮತ್ತು ಅಜೀರ್ಣ,ಅಲ್ಸರ್,ಮಲಬದ್ಧತೆ,ಮೂಲವ್ಯಾಧಿ ಇತ್ಯಾದಿ ತೊಂದರೆಗಳಿಗೆ ಕಾರಣವಾಗುತ್ತದೆ.

* ಹಾರ್ಮೋನ್‌ಗಳಲ್ಲಿ ಬದಲಾವಣೆ

 ರಕ್ತವನ್ನು ಸೇರಿಕೊಳ್ಳುವ ವಾತಾವರಣದಲ್ಲಿನ ವಿಷವಸ್ತುಗಳು ಶರೀರದಲ್ಲಿಯ ಎಸ್ಟ್ರೊಜಿನ್‌ನಂತಹ ಹಾರ್ಮೋನ್‌ಗಳ ಮೇಲೆ ಪರಿಣಾಮವನ್ನುಂಟು ಮಾಡಿ ಮಹಿಳೆಯರಲ್ಲಿ ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗುತ್ತವೆ ಮತ್ತು ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯನ್ನು ಕುಂದಿಸುತ್ತವೆ.

* ಜ್ಞಾಪಕ ಶಕ್ತಿಯನ್ನು ಕುಂದಿಸುತ್ತದೆ.

ಮಿದುಳಿಗೆ ತಾಜಾ ಆಮ್ಲಜನಕವನ್ನು ಪೂರೈಸಲು ಶುದ್ಧರಕ್ತವು ಅಗತ್ಯವಾಗಿದೆ. ಶರೀರದಲ್ಲಿ ಅಶುದ್ಧ ರಕ್ತವು ಹೆಚ್ಚಾದರೆ ಅದು ಜ್ಞಾಪಕ ಶಕ್ತಿಯ ನಷ್ಟ,ಮನಃಸ್ಥಿತಿಯಲ್ಲಿ ಆಗಾಗ್ಗೆ ಬದಲಾವಣೆ, ಖಿನ್ನತೆ ಇತ್ಯಾದಿಗಳಿಗೆ ಕಾರಣವಾಗುತ್ತದೆ.

* ಅಂಗಾಂಗ ವೈಫಲ್ಯ

ಯಕೃತ್ತು ಮತ್ತು ಮೂತ್ರಪಿಂಡಗಳುನಮ್ಮ ಶರೀರದಿಂದ ತ್ಯಾಜ್ಯಗಳನ್ನು ಹೊರಗೆ ಹಾಕುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ರಕ್ತದಲ್ಲಿ ವಿಷವಸ್ತುಗಳು ಅತಿಯಾಗಿ ಸೇರಿಕೊಂಡಾಗ ಅವು ಈ ಅಂಗಾಂಗಗಳ ಮೇಲಿನ ಒತ್ತಡವನ್ನು ಹೆಚ್ಚಿಸುತ್ತವೆ ಮತ್ತು ಅವುಗಳ ಕಾರ್ಯಗಳಿಗೆ ಅಡ್ಡಿಯನ್ನುಂಟು ಮಾಡುತ್ತವೆ. ಅಂತಿಮವಾಗಿ ಈ ಒತ್ತಡವು ನಿರಂತರಗೊಂಡು,ಅವುಗಳ ಸಾಮರ್ಥ್ಯವನ್ನು ಕುಂದಿಸುತ್ತವೆ.

ಅಶುದ್ಧ ರಕ್ತವು ಹೆಚ್ಚಾದರೆ ಅದು ಉಂಟು ಮಾಡುವ ಹಾನಿ ಕೇವಲ ಯಕೃತ್ತು ಮತ್ತು ಮೂತ್ರಪಿಂಡಗಳಿಗೆ ಸೀಮಿತವಾಗಿಲ್ಲ. ಶರೀರದ ವಿವಿಧ ಅಂಗಾಂಗಗಳಿಗೆ ಶುದ್ಧ ರಕ್ತವನ್ನು ಪೂರೈಸುವುದು ಹೃದಯದ ಮುಖ್ಯ ಕಾರ್ಯವಾಗಿದ್ದು,ಅಶುದ್ಧ ರಕ್ತವು ಹೃದಯಕ್ಕೆ ವಾಪಸಾಗುತ್ತದೆ ಮತ್ತು ಅಲ್ಲಿ ಶುದ್ಧೀಕರಿಸಲ್ಪಡುತ್ತದೆ. ರಕ್ತದಲ್ಲಿ ಅಶುದ್ಧತೆ ಅತಿಯಾಗಿದ್ದರೆ ಅದು ಹೃದಯದ ಮೇಲೆ ಹೆಚ್ಚಿನ ಒತ್ತಡವನ್ನುಂಟು ಮಾಡುತ್ತದೆ. ಇದರಿಂದಾಗಿ ಸ್ನಾಯುಗಳು ದುರ್ಬಲಗೊಂಡು ಹೃದಯರೋಗಗಳಿಗೆ ಕಾರಣವಾಗುತ್ತದೆ.

* ಸ್ವ-ಪ್ರತಿರಕ್ಷಿತ ರೋಗಗಳು

ನಮ್ಮ ಶರೀರದ ರೋಗ ನಿರೋಧಕ ಶಕ್ತಿಯು ಶತ್ರು ಬ್ಯಾಕ್ಟೀರಿಯಾಗಳ ಬದಲು ನಮ್ಮ ಅಂಗಾಂಶಗಳ ಮೇಲೆ ದಾಳಿ ಮಾಡಿ ಸ್ವ-ಪ್ರತಿರಕ್ಷಿತ ರೋಗಗಳಿಗೆ ಕಾರಣವಾಗುತ್ತದೆ. ಮಲ್ಟಿಪಲ್ ಸೆಲೊರಿಸಿಸ್, ಲ್ಯುಪಸ್,ಹೈಪೊಥೈರಾಯ್ಡಿಸಂ,ಕರುಳಿನಲ್ಲಿ ಉರಿಯೂತ ಇತ್ಯಾದಿಗಳು ಇಂತಹ ಕಾಯಿಲೆಗಳಾಗಿವೆ. ನರಮಂಡಲ,ಸ್ನಾಯುಗಳು,ಚರ್ಮ ಮತ್ತು ಹೃದಯದ ಮೇಲೆ ದುಷ್ಪರಿಣಾಮವನ್ನುಂಟು ಮಾಡುವ ಇಂತಹ ಇತರ ರೋಗಗಳೂ ಇವೆ. ರೋಗ ನಿರೋಧಕ ಶಕ್ತಿಯು ಶರೀರದ ಅಂಗಾಂಶಗಳ ಮೇಲೆ ದಾಳಿ ಮಾಡುವುದಕ್ಕೆ ಅಶುದ್ಧ ರಕ್ತದಲ್ಲಿಯ ವಿಷವಸ್ತುಗಳು ಕಾರಣವಾಗುತ್ತವೆ.

* ಚರ್ಮರೋಗಗಳು

ವಿಷವಸ್ತುಗಳನ್ನು ಶರೀರದಿಂದ ಹೊರಗೆ ಹಾಕುವಲ್ಲಿ ಚರ್ಮವು ಇನ್ನೊಂದು ಮಾರ್ಗವಾಗಿದೆ. ರಕ್ತವು ಅಶುದ್ಧಗೊಂಡಾಗ ಅದು ಕಜ್ಜಿ,ಸೋರಿಯಾಸಿಸ್,ಮೊಡವೆ ಮತ್ತು ಇತರ ಚರ್ಮದ ಅಲರ್ಜಿಗಳಿಗೆ ಕಾರಣವಾಗುತ್ತದೆ.

* ಕ್ಯಾನ್ಸರ್

ಅನಾರೋಗ್ಯಕರ ಆಹಾರ,ಕೆಟ್ಟ ಜೀವನಶೈಲಿಯ ಚಟಗಳು,ಅತಿಯಾದ ಮಾನಸಿಕ ಒತ್ತಡ,ದೈಹಿಕ ಚಟುವಟಿಕೆಗಳ ಕೊರತೆ,ವಾತಾವರಣದಲ್ಲಿಯ ಮಾಲಿನ್ಯ,ಪ್ರಾಣಿಗಳ ಕೊಬ್ಬಿನ ಅತಿಯಾದ ಸೇವನೆ ಇವೆಲ್ಲ ಶರೀರದಲ್ಲಿ ಹೆಚ್ಚು ವಿಷವಸ್ತುಗಳು ಶೇಖರಗೊಳ್ಳಲು ಕಾರಣವಾಗುತ್ತವೆ ಮತ್ತು ಈ ವಿಷವಸ್ತುಗಳು ಅಂತಿಮವಾಗಿ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳನ್ನುಂಟು ಮಾಡುತ್ತವೆ.

ಅಶುದ್ಧ ರಕ್ತವನ್ನು ತಡೆಯಲು ಮುಂಜಾಗ್ರತೆ ಕ್ರಮಗಳು

ಆರೋಗ್ಯಕರವಾಗಿ ಬದುಕಬೇಕೆಂದರೆ ಆರೋಗ್ಯಕರ ಜೀವನಶೈಲಿ ನಮ್ಮದಾಗಿರಬೇಕು. ಇದರಿಂದಾಗಿ ರಕ್ತದಲ್ಲಿ ವಿಷವಸ್ತುಗಳ ಪ್ರಮಾಣ ಹೆಚ್ಚಾಗದಂತೆ ತಡೆಯಬಹುದು.

► ಜಂಕ್‌ಫುಡ್ ಸೇವನೆಯನ್ನು ನಿಲ್ಲಿಸಿ ಇಡಿಯ ಧಾನ್ಯಗಳು ಮತ್ತು ಬೇಳೆಕಾಳುಗಳು,ಹಸಿರು ಎಲೆಗಳ ತರಕಾರಿಗಳು,ಮೊಳಕೆ ಬರಿಸಿದ ಕಾಳುಗಳು, ಪ್ರೋಟಿನ್, ವಿಟಾಮಿನ್ ಮತ್ತು ನಾರಿನಿಂದ ಕೂಡಿದ ಆಹಾರವನ್ನು ಹೆಚ್ಚಾಗಿ ತಿನ್ನುವುದನ್ನು ರೂಢಿಸಿಕೊಳ್ಳಿ.

► ಧೂಮ್ರಪಾನ ಮತ್ತು ಮದ್ಯಪಾನವನ್ನು ವರ್ಜಿಸಿ ಹಾಗೂ ಕೆಫೀನ್ ಸೇವನೆ ಮಿತಿಯಲ್ಲಿರುವಂತೆ ನೋಡಿಕೊಳ್ಳಿ.

► ಸಮಯಕ್ಕೆ ಸರಿಯಾಗಿ ಊಟವನ್ನು ಮಾಡಿ.

► ಯಥೇಚ್ಛವಾಗಿ ನೀರನ್ನು ಸೇವಿಸಿ. ಶರೀರಕ್ಕೆ ಸಾಕಷ್ಟು ವಿಶ್ರಾಂತಿ ಮತ್ತು ನಿದ್ರೆ ದೊರೆಯುವಂತೆ ನೋಡಿಕೊಳ್ಳಿ.

► ಪ್ರತಿದಿನ ಕನಿಷ್ಠ 30 ನಿಮಿಷಗಳ ಬಿರುಸಿನ ನಡಿಗೆಯೊಂದಿಗೆ ಓಟ ಅಥವಾ ನಿಮಗೆ ಇಷ್ಟವಾದ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಿ.

► ಯೋಗ ಮತ್ತು ಧ್ಯಾನ ನಿಮ್ಮ ಒತ್ತಡವನ್ನು ಕಡಿಮೆ ಮಾಡುತ್ತವೆ. ಇವೆಲ್ಲ ನಿಮ್ಮ ಶರೀರದಲ್ಲಿ ರಕ್ತ ಪರಿಚಲನೆಯನ್ನು ಉತ್ತಮಗೊಳಿಸುತ್ತವೆ.

► ರಕ್ತ ಪರಿಚಲನೆ ವ್ಯವಸ್ಥೆ ಆರೋಗ್ಯಕರವಾಗಿದ್ದರೆ ಅದು ಶರೀರದ ಎಲ್ಲ ಅಂಗಾಂಗಗಳಿಗೆ ಶುದ್ಧ ರಕ್ತವನ್ನು ತಲುಪಿಸಲು ನೆರವಾಗುತ್ತದೆ.

► ಬೆಳ್ಳುಳ್ಳಿ, ಕಹಿಬೇವು, ತುಳಸಿ, ಅರಿಷಿಣ ಮತ್ತು ಆಮ್ಲಾದಂತಹ ರಕ್ತ ಪರಿಚಲನೆಗೆ ನೆರವಾಗುವ ನೈಸರ್ಗಿಕ ಉತ್ಪನ್ನಗಳು ನಿಮ್ಮ ಆಹಾರದಲ್ಲಿರಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News