ಬೆಳೆ ಸಾಲ ಬೇಕಿದ್ದರೆ ಲೈಂಗಿಕ ಸಹಕಾರದ ಬೇಡಿಕೆ: ಬ್ಯಾಂಕ್ ಮ್ಯಾನೇಜರ್ ವಿರುದ್ಧ ಪ್ರಕರಣ ದಾಖಲು

Update: 2018-06-23 15:18 GMT

ಮುಂಬೈ, ಜೂ.23: ಬೆಳೆಸಾಲ ಮಂಜೂರುಗೊಳಿಸಲು ಲೈಂಗಿಕವಾಗಿ ಸಹಕರಿಸಬೇಕೆಂದು ರೈತನ ಪತ್ನಿಗೆ ಬೇಡಿಕೆ ಇರಿಸಿದ್ದ ಆರೋಪದಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಬುಲ್ದಾನಾ ಜಿಲ್ಲಾ ಶಾಖಾ ಕಚೇರಿಯ ವ್ಯವಸ್ಥಾಪಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುಲ್ದಾನಾ ಜಿಲ್ಲೆಯ ಮಲಕಾಪುರ್ ತಾಲೂಕಿನ ದತಾಲಾ ಎಂಬ ಗ್ರಾಮದ ರೈತ ಬೆಳೆ ಸಾಲಕ್ಕಾಗಿ ಅರ್ಜಿ ಸಲ್ಲಿಸಲು ಬ್ಯಾಂಕಿಗೆ ತನ್ನ ಪತ್ನಿಯೊಂದಿಗೆ ತೆರಳಿದ್ದ. ಅರ್ಜಿಯ ಪರಿಷ್ಕರಣೆ ಸಂದರ್ಭ ಬ್ಯಾಂಕ್ ಮ್ಯಾನೇಜರ್ ರಾಜೇಶ್ ಹಿವಾಸೆ ರೈತನ ಪತ್ನಿಯ ದೂರವಾಣಿ ಸಂಖ್ಯೆಯನ್ನು ಪಡೆದಿದ್ದ. ಬಳಿಕ ಆಕೆಗೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿ, ಸಾಲ ಮಂಜೂರು ಮಾಡಬೇಕಿದ್ದರೆ ತನ್ನೊಂದಿಗೆ ಲೈಂಗಿಕವಾಗಿ ಸಹಕರಿಸುವಂತೆ ಬೇಡಿಕೆ ಮುಂದಿರಿಸಿದ್ದ ಎನ್ನಲಾಗಿದೆ.

ಮಹಿಳೆಯಿಂದ ಪ್ರತಿಕ್ರಿಯೆ ಬಾರದಿದ್ದಾಗ ಬ್ಯಾಂಕಿನ ಜವಾನನ್ನು ಆಕೆಯ ಮನೆಗೆ ಕಳುಹಿಸಿದ್ದ. ಮಹಿಳೆ ಒಪ್ಪಿದರೆ ಬೆಳೆ ಸಾಲವನ್ನು ಮಂಜೂರುಗೊಳಿಸುವುದಷ್ಟೇ ಅಲ್ಲ, ಅವರಿಗೆ ವಿಶೇಷ ಪ್ಯಾಕೇಜ್‌ನಡಿ ಹೆಚ್ಚುವರಿ ಸೌಲಭ್ಯ ಒದಗಿಸುವುದಾಗಿ ಮ್ಯಾನೇಜರ್ ಹೇಳಿರುವುದಾಗಿ ಜವಾನ ಆ ಮಹಿಳೆಗೆ ತಿಳಿಸಿದ್ದ ಎಂದು ಆರೋಪಿಸಲಾಗಿದೆ.

ಬ್ಯಾಂಕ್ ಮ್ಯಾನೇಜರ್ ತನ್ನೊಂದಿಗೆ ನಡೆಸಿದ್ದ ದೂರವಾಣಿ ಸಂಭಾಷಣೆಯನ್ನು ಮಹಿಳೆ ರೆಕಾರ್ಡ್ ಮಾಡಿಕೊಂಡು ಬಳಿಕ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಬ್ಯಾಂಕ್ ಮ್ಯಾನೇಜರ್ ಹಾಗೂ ಜವಾನನ ವಿರುದ್ಧ ಐಪಿಸಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇಬ್ಬರೂ ತಲೆಮರೆಸಿಕೊಂಡಿದ್ದು ಅವರ ಪತ್ತೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News