ತ್ರಿಪುರ: ಪತ್ರಕರ್ತರ ಹತ್ಯೆ ಪ್ರಕರಣದ ತನಿಖೆ ಸಿಬಿಐಗೆ

Update: 2018-06-23 15:25 GMT

ಅಗರ್ತಲ, ಜೂ.23: ತ್ರಿಪುರದಲ್ಲಿ ಕಳೆದ ವರ್ಷ ನಡೆದ ಇಬ್ಬರು ಪತ್ರಕರ್ತರ ಹತ್ಯೆ ಪ್ರಕರಣವನ್ನು ಸಿಬಿಐ ವಶಕ್ಕೆ ಒಪ್ಪಿಸಲಾಗುವುದು ಎಂದು ತ್ರಿಪುರ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ತಿಳಿಸಿದ್ದಾರೆ. ಕಳೆದ ವರ್ಷದ ಸೆಪ್ಟೆಂಬರ್ 21ರಂದು ಸ್ಥಳೀಯ ಟಿವಿ ಚಾನೆಲ್ ಒಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪತ್ರಕರ್ತ ಶಾಂತನು ಭೌಮಿಕ್ ಎಂಬವರು ಪಶ್ಚಿಮ ತ್ರಿಪುರ ಜಿಲ್ಲೆಯ ಮಂಡ್ವಾಯ್ ಪ್ರದೇಶದಲ್ಲಿ ನಡೆಯುತ್ತಿದ್ದ ರಸ್ತೆ ತಡೆ ಚಳವಳಿಯ ಬಗ್ಗೆ ವರದಿ ಮಾಡಲು ತೆರಳಿದ್ದಾಗ ಅವರನ್ನು ಹತ್ಯೆ ಮಾಡಲಾಗಿತ್ತು. ಜೊತೆಗೆ, ಕಳೆದ ನವೆಂಬರ್ 20ರಂದು ಸ್ಥಳೀಯ ದಿನಪತ್ರಿಕೆಯ ಕ್ರೈಂ ವರದಿಗಾರರಾಗಿದ್ದ ಸುದೀಪ್ ದತ್ತಾ ಭೌಮಿಕ್ ಎಂಬವರ ಶವ ಪಶ್ಚಿಮ ತ್ರಿಪುರ ಜಿಲ್ಲೆಯ ಆರ್.ಕೆ. ನಗರದಲ್ಲಿರುವ ತ್ರಿಪುರ ರಾಜ್ಯ ರೈಫಲ್ಸ್‌ನ 2ನೇ ಬಟಾಲಿಯನ್‌ನ ಕೇಂದ್ರ ಕಚೇರಿಯ ಒಳಗಡೆ ಪತ್ತೆಯಾಗಿತ್ತು.

ಈ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಕೋರ್ಟ್, ತ್ರಿಪುರ ಹೈಕೋರ್ಟ್‌ನ ಆದೇಶದ ಬಳಿಕ ವಿಚಾರಣೆ ಸ್ಥಗಿತಗೊಳಿಸಿದೆ. ಶಾಂತನು ಭೌಮಿಕ್ ಹತ್ಯೆ ಪ್ರಕರಣದ ತನಿಖೆ ನಡೆಸಿದ್ದ ರಾಜ್ಯ ಪೊಲೀಸರ ವಿಶೇಷ ತನಿಖಾ ತಂಡ (ಎಸ್‌ಐಟಿ) ಇದುವರೆಗೂ ಆರೋಪಪಟ್ಟಿ ದಾಖಲಿಸಿಲ್ಲ. ಈ ಹಿನ್ನೆಲೆಯಲ್ಲಿ, ಎರಡೂ ಪ್ರಕರಣಗಳ ತನಿಖೆಯನ್ನು ಸಿಬಿಐ ವಹಿಸಿಕೊಳ್ಳಬೇಕೆಂದು ಕೋರುವ ನಿರ್ಣಯವನ್ನು ಸಚಿವ ಸಂಪುಟದ ಸಭೆಯಲ್ಲಿ ಅಂಗೀಕರಿಸಲಾಗಿದೆ. ನಮ್ಮ ಕೋರಿಕೆಯನ್ನು ಸಿಬಿಐ ಸಮ್ಮತಿಸಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ರಾಜ್ಯದ ಮಾನ್ಯತೆ ಪಡೆದ ಪತ್ರಕರ್ತರ ಪಿಂಚಣಿಯನ್ನು 1,000 ರೂ.ನಿಂದ 10,000 ರೂ.ಗೆ ಹೆಚ್ಚಿಸುವ ಬಗ್ಗೆ ರಾಜ್ಯ ಸರಕಾರ ಈಗಾಗಲೇ ಕ್ರಮಗಳನ್ನು ಕೈಗೊಂಡಿದೆ. ಅಲ್ಲದೆ ಅಸ್ವಸ್ಥ ಪತ್ರಕರ್ತರು ಚಿಕಿತ್ಸೆ ಪಡೆಯಲು ಹಣಕಾಸಿನ ನೆರವು ನೀಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News