ಪ್ರತಿಪಕ್ಷ ಸುಳ್ಳು ಮತ್ತು ನಿರಾಶಾವಾದ ಹರಡುತ್ತಿದೆ: ಪ್ರಧಾನಿ ಮೋದಿ

Update: 2018-06-23 15:26 GMT

ರಾಜಗಢ(ಮ.ಪ್ರ),ಜೂ.23: ಶನಿವಾರ ಇಲ್ಲಿ ಕಾಂಗ್ರೆಸ್ ವಿರುದ್ಧ ಪರೋಕ್ಷ ದಾಳಿಯನ್ನು ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು,ಅದು ಸುಳ್ಳುಗಳು,ಗೊಂದಲ ಮತ್ತು ನಿರಾಶಾವಾದವನ್ನು ಹರಡುತ್ತಿದ್ದರೆ ತನ್ನ ಸರಕಾರವು ಜನತೆಯ ಏಳಿಗೆಗಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ರಾಜಗಢ ಜಿಲ್ಲೆಯ ಮೋಹನಪುರಾದಲ್ಲಿ ನೀರಾವರಿ ಯೋಜನೆಯನ್ನು ಉದ್ಘಾಟಿಸಿದ ಬಳಿಕ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು,ಜನರು ಬಿಜೆಪಿಯನ್ನು ಮತ್ತು ಅದರ ಸರಕಾರವನ್ನು ನಂಬಿದ್ದಾರೆ. ಸುಳ್ಳುಗಳನ್ನು,ಗೊಂದಲ ಮತ್ತು ನಿರಾಶಾವಾದವನ್ನು ಹರಡುತ್ತಿರುವವರು ವಾಸ್ತವತೆಯಿಂದ ದೂರವಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜನಸಂಘದ ಸ್ಥಾಪಕ ಶ್ಯಾಮಪ್ರಸಾದ ಮುಖರ್ಜಿಯವರಿಗೆ ಗೌರವಗಳನ್ನು ಸಲ್ಲಿಸಿದ ಮೋದಿ,ಶಿಕ್ಷಣ,ಆರೋಗ್ಯ,ಹಣಕಾಸು ಮತ್ತು ಭದ್ರತೆಯನ್ನು ಸದೃಢಗೊಳಿಸುವ ದೂರದೃಷ್ಟಿಯನ್ನು ಅವರು ಹೊಂದಿದ್ದರು. ಯುವಜನರು ದೇಶದ ಸೇವೆಗೆ ಸಮರ್ಥರಾಗಲು ಅವರಲ್ಲಿ ಕೌಶಲ್ಯಗಳನ್ನು ಮೈಗೂಡಿಸಿ ಅವರಿಗೆ ಅವಕಾಶ ಒದಗಿಸುವುದು ಮುಖರ್ಜಿಯವರ ದೂರದೃಷ್ಟಿಯಾಗಿತ್ತು. ಸ್ಟಾರ್ಟ್‌ಪ್,ಮೇಕ್ ಇನ್ ಇಂಡಿಯಾದಂತಹ ಕಾರ್ಯಕ್ರಮಗಳು ಅವರ ಪರಿಕಲ್ಪನೆಗಳನ್ನು ಪ್ರತಿಫಲಿಸುತ್ತಿವೆ ಎಂದರು. ಒಂದು ಕುಟುಂಬದ ವೈಭವೀಕರಣವು ದುರದೃಷ್ಟಕರವಾಗಿದೆ. ಈ ದೇಶದಲ್ಲಿಯ ಇತರ ಉನ್ನತ ನಾಯಕರ ಕೊಡುಗೆಗಳನ್ನು ಕಡೆಗಣಿಸುವ ಉದ್ದೇಶಪೂರ್ವಕ ಪ್ರಯತ್ನಗಳು ನಡೆದಿದ್ದವು ಎಂದರು.

ಈ ದೇಶವನ್ನು ಗರಿಷ್ಠ ಸಮಯ ಆಳಿದ್ದ ಕಾಂಗ್ರೆಸ್ ಪಕ್ಷವು ಜನರನ್ನು ಮತ್ತು ಅವರ ಕಠಿಣ ಪರಿಶ್ರಮಗಳನ್ನೆಂದೂ ನಂಬಿರಲಿಲ್ಲ. ಅವರು ದೇಶದ ಶಕ್ತಿಯಲ್ಲಿ ವಿಶ್ವಾಸವಿಟ್ಟಿರಲಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ನಾವೆಂದೂ ಹತಾಶೆಯ ಮಾತುಗಳನ್ನಾಡಲಿಲ್ಲ. ನಾವು ಆತ್ಮವಿಶ್ವಾಸದಿಂದ ಮುನ್ನಡೆಯುತ್ತಿದ್ದೇವೆ ಎಂದ ಅವರು,ಕೇಂದ್ರದಲ್ಲಿ ನಾಲ್ಕು ವರ್ಷಗಳ ಮತ್ತು ಮಧ್ಯಪ್ರದೇಶದಲ್ಲಿ 13 ವರ್ಷಗಳ ಅಧಿಕಾರಾವಧಿಯಲ್ಲಿ ಬಿಜೆಪಿಯು ಬಡವರು,ರೈತರು ಮತ್ತು ಶೋಷಿತ ವರ್ಗಗಳ ಉದ್ಧಾರಕ್ಕಾಗಿ ಮತ್ತು ಸಬಲೀಕರಣಕ್ಕಾಗಿ ಶ್ರಮಿಸಿದೆ ಎಂದರು.

ಮಧ್ಯಪ್ರದೇಶವನ್ನು ಕಾಂಗ್ರೆಸ್ ಆಳುತ್ತಿದ್ದಾಗ ಅದನ್ನು ಅಸ್ವಸ್ಥ ರಾಜ್ಯವೆಂದು ಕರೆಯಲಾಗುತ್ತಿತ್ತು. ಅದು ರಾಜ್ಯದ ಜನತೆಗೆ ಅವಮಾನ ಎಂದು ಕಾಂಗ್ರೆಸ್ ಎಂದಿಗೂ ಪರಿಗಣಿಸಿರಲಿಲ್ಲ. ಈ ಕಳಂಕವನ್ನು ನಿವಾರಿಸಲು ಬಿಜೆಪಿಯು ಕಠಿಣವಾಗಿ ಶ್ರಮಿಸಿದೆ ಎಂದು ಮೋದಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News