×
Ad

ದೇವಸ್ಥಾನದ ಮೆಟ್ಟಿಲು ಸ್ಪರ್ಶಿಸಿದ್ದೇ ತಪ್ಪಾಯ್ತು: 24 ದಲಿತ ಕುಟುಂಬಗಳನ್ನು ಗ್ರಾಮದಿಂದ ಹೊರದಬ್ಬಿದ ಸವರ್ಣೀಯರು

Update: 2018-06-23 21:33 IST

ಪುಣೆ,ಜೂ.23: ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಉದ್ಗೀರ್ ತಾಲೂಕಿನ ರುದ್ರವಾಡಿ ಗ್ರಾಮದಲ್ಲಿಯ ಪರಿಶಿಷ್ಟ ಜಾತಿಗೆ ಸೇರಿದ 24 ಕುಟುಂಬಗಳು ಮೇಲ್ಜಾತಿಗಳ ಸಾಮಾಜಿಕ ಬಹಿಷ್ಕಾರದಿಂದಾಗಿ ಅನಿವಾರ್ಯವಾಗಿ ಗ್ರಾಮವನ್ನು ತೊರೆದಿದ್ದಾರೆ. ಇವರ ಪೈಕಿ ಗ್ರಾಮದ ಸರಪಂಚರು ಕೂಡ ಸೇರಿದ್ದಾರೆ. ಅವರಿಗೆ ಅಂಗಡಿಗಳಲ್ಲಿ ವಸ್ತುಗಳ ಮಾರಾಟ,ಉದ್ಯೋಗಾವಕಾಶಗಳನ್ನು ನಿಲ್ಲಿಸಲಾಗಿತ್ತು. ಗ್ರಾಮದಲ್ಲಿ ಅವರ ಚಲನವಲನಗಳಿಗೂ ನಿರ್ಬಂಧ ಹೇರಲಾಗಿತ್ತು.

ಇದಕ್ಕೆ ಮೊದಲು ದೇವಸ್ಥಾನಕ್ಕೆ ಭೇಟಿ ನೀಡಿದ್ದಕ್ಕ್ಕಾಗಿ ದಲಿತರ ಮೇಲೆ ಗ್ರಾಮದ ಮೇಲ್ಜಾತಿಗಳ ಜನರು ಹಲ್ಲೆ ನಡೆಸಿದ್ದರು. ಹಲ್ಲೆಗೊಳಗಾದವರು ಅವರ ವಿರುದ್ಧ ಎಸ್‌ಇ/ಎಸ್‌ಟಿ ದೌರ್ಜನ್ಯ(ತಡೆ) ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದ್ದರು. ಇದು ಅವರ ವಿರುದ್ಧ ಬಹಿಷ್ಕಾರಕ್ಕೆ ಕಾರಣವಾಗಿರುವಂತಿದೆ.

ಮಾತಂಗ ಸಮುದಾಯಕ್ಕೆ ಸೇರಿದ 24 ಕುಟುಂಬಗಳ 40 ಮಹಿಳೆಯರು ಮತ್ತು 15 ಮಕ್ಕಳು ಸೇರಿದಂತೆ ನೂರಕ್ಕೂ ಅಧಿಕ ಜನರು ಈಗ ಉದ್ಗೀರ್‌ನ ಹೊರವಲಯದಲ್ಲಿ ಖಾಲಿ ಬಿದ್ದಿದ್ದ ಸರಕಾರಿ ಹಾಸ್ಟೆಲೊಂದರಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಯಾವುದೇ ಜೀವನೋಪಾಯವಿಲ್ಲದೆ ತಾವು ಹೇಗೆ ಬದುಕಬಲ್ಲೆವು ಎನ್ನುವುದು ಅವರಿಗೆ ತೋಚದೇ ಕಂಗಾಲಾಗಿದ್ದಾರೆ. ಆದರೆ ತಮ್ಮ ಗ್ರಾಮದ ಸವರ್ಣೀಯರು ಮತ್ತೆ ತಮ್ಮ ಮೇಲೆ ದಾಳಿ ನಡೆಸುವ ಭೀತಿ ಅವರನ್ನು ಪ್ರಮುಖವಾಗಿ ಕಾಡುತ್ತಿದೆ.

“ಮೇ 8ರಂದು ನಮ್ಮ ಸಮುದಾಯದ ಮದುಮಗ ಮತ್ತು ಆತನ ಬಂಧುಗಳು ಗ್ರಾಮದ ಮಾರುತಿ ದೇವರ ಆಶೀರ್ವಾದ ಪಡೆಯಲು ದೇವಸ್ಥಾನಕ್ಕೆ ತೆರಳಿದ್ದರು. ನಮ್ಮ ಸಮುದಾಯದವರಿಗೆ ದೇವಸ್ಥಾನದೊಳಗೆ ಪ್ರವೇಶವಿಲ್ಲ. ಹೀಗಾಗಿ ಅವರು ದೇವಸ್ಥಾನದ ಕೊನೆಯ ಮೆಟ್ಟಿಲನ್ನು ಸ್ಪರ್ಶಿಸಿ ನಮಿಸಿದ್ದರು ಅಷ್ಟೇ. ಇದನ್ನು ಆಕ್ಷೇಪಿಸಿ ಕೆಲವು ಸವರ್ಣೀಯರು ನಮ್ಮ ಸಮುದಾಯದ ಇಬ್ಬರು-ಮೂವರ ಮೇಲೆ ಹಲ್ಲೆ ನಡೆಸಿದ್ದು,ನಮ್ಮ ಕೆಲವು ಯುವಕರೂ ಪ್ರತಿಹಲ್ಲೆ ನಡೆಸಿದ್ದರು. ಇದರಿಂದ ಸವರ್ಣೀಯರ ಪೈಕಿ ಓರ್ವ ಹುಡುಗನಿಗೆ ತರಚು ಗಾಯವಾಗಿತ್ತು, ಮಾತಂಗ ಸಮುದಾಯದ ಹಿರಿಯರು ಕ್ಷಮೆ ಕೋರಿ,ಮರುದಿನ ಮದುವೆಯೊಂದು ನಡೆಯಲಿದೆ ಎಂದು ವಿನಂತಿಸಿಕೊಂಡಿದ್ದರು. ಮೇ 10ರಂದು ಈ ಬಗ್ಗೆ ಸಭೆಯೊಂದನ್ನು ನಡೆಸಲು ಉಭಯ ಗುಂಪುಗಳು ನಿರ್ಧರಿಸಿದ್ದವು. ಆದರೆ ಅಂದು ಸಭೆ ನಡೆಯುವ ಬದಲು ಸವರ್ಣೀಯರು ನಮ್ಮ ಸಮುದಾಯದವರ ಮನೆಗಳಿಗೆ ನುಗ್ಗಿ ಹಲ್ಲೆ ನಡೆಸಿ ಮನೆಗಳಿಗೆ ಹಾನಿಯನ್ನುಂಟು ಮಾಡಿದ್ದರು. ನಾವು ತಕ್ಷಣವೇ ವಾಧ್ವಾನಾ ಪೊಲಿಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದರೂ ಪೊಲೀಸರು ಸ್ವೀಕರಿಸಿರಲಿಲ್ಲ. ನಾವು ಪೊಲೀಸ್ ಠಾಣೆಯ ಎದುರು ಧರಣಿ ಕುಳಿತ ಬಳಿಕವೇ ಅವರು ಮೇ 11ರಂದು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಹಲವು ದಿನಗಳ ವರೆಗೆ ಒಬ್ಬರನ್ನೂ ಅವರು ಬಂಧಿಸಿರಲಿಲ್ಲ” ಎಂದು ಕಳೆದ ಮೂರು ವರ್ಷಗಳಿಂದ ಗ್ರಾಮದ ಸರಪಂಚರಾಗಿರುವ ಶಾಲುಬಾಯಿ ಶಿಂಧೆ ತಿಳಿಸಿದರು.

ಎಸ್‌ಸಿ ಕುಟುಂಬಗಳು 23 ಜನರ ವಿರುದ್ಧ ದೂರು ದಾಖಲಿಸಿದ್ದು,ಮೇ 19ರವರೆಗೆ ಒಬ್ಬೊಬ್ಬರನ್ನಾಗಿ ಒಟ್ಟು 16 ಜನರನ್ನು ನಾವು ಬಂಧಿಸಿದ್ದೇವೆ. ಉಳಿದವರು ತಲೆ ಮರೆಸಿಕೊಂಡಿದ್ದಾರೆ ಎಂದು ಡಿಎಸ್‌ಪಿ ಶ್ರೀಧರ ಪವಾರ್ ತಿಳಿಸಿದರು.

ಬಂಧಿತರು ಜೂನ್ 7ರಂದು ಜಾಮೀನಿನಲ್ಲಿ ಬಿಡುಗಡೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News