ಜಾರ್ಖಂಡ್‌ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಮಹಿಳೆಯರಿಗೆ ಬಲವಂತದಿಂದ ಮೂತ್ರ ಕುಡಿಸಲಾಗಿತ್ತು: ಪೊಲೀಸರು

Update: 2018-06-23 18:11 GMT

ರಾಂಚಿ,ಜೂ.23: ಮಂಗಳವಾರ ಖುಂಠಿ ಜಿಲ್ಲೆಯಲ್ಲಿ ಬೀದಿ ನಾಟಕ ಪ್ರದರ್ಶನ ನೀಡುತ್ತಿದ್ದ,20ರಿಂದ 35 ವರ್ಷ ವಯೋಮಾನದ ಐವರು ಮಹಿಳೆಯರನ್ನು ಅಪಹರಿಸಿ ಅವರ ಮೇಲೆ ಸಾಮೂಹಿಕ ಅತ್ಯಾಚಾರವನ್ನು ನಡೆಸಿದ್ದ ಆರು ದುಷ್ಕರ್ಮಿಗಳನ್ನು ಗುರುತಿಸಲಾಗಿದ್ದು,ಈ ಪೈಕಿ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತರು ದಂಡಾಧಿಕಾರಿಗಳ ಮುಂದೆ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಆರ್.ಕೆ.ಮಲಿಕ್ ಅವರು ಶನಿವಾರ ತಿಳಿಸಿದ್ದಾರೆ.

ಬುಡಕಟ್ಟು ಜನರ ಪ್ರಾಬಲ್ಯದ ಖುಂಠಿ ಜಿಲ್ಲೆಯ ಶಾಲೆಯೊಂದರಲ್ಲಿ ಜಾಗ್ರತಿ ಅಭಿಯಾನಕ್ಕಾಗಿ ತೆರಳಿದ್ದ ಐವರು ಮಹಿಳೆಯರಿದ್ದ 11 ಜನರ ಗುಂಪನ್ನು ದುಷ್ಕರ್ಮಿಗಳು ಅಪಹರಿಸಿ ದಟ್ಟಾರಣ್ಯಕ್ಕೆ ಒಯ್ದು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದರು. ಬಳಿಕ ಮಹಿಳೆಯರಿಗೆ ಚಿತ್ರಹಿಂಸೆ ನೀಡಿದ್ದ ಗುಂಪು ಅವರಿಗೆ ಬಲವಂತದಿಂದ ಮೂತ್ರವನ್ನು ಕುಡಿಸಿತ್ತು ಎಂದು ಅವರು ತಿಳಿಸಿದರು.

ಇದು ಕಾಮತೃಪ್ತಿಗಾಗಿ ನಡೆಸಿದ ಕೃತ್ಯವಲ್ಲ. ಸರಕಾರ ವಿರೋಧಿ ಸ್ವಯಂ ಆಡಳಿತ ಚಳುವಳಿಯಾಗಿರುವ ‘ಪಥಾಲಗಡಿ’ ವಿರುದ್ಧ ಜನಜಾಗ್ರತಿ ಮೂಡಿಸಲು ಸ್ಥಳೀಯ ಅಧಿಕಾರಿಗಳು ಇಂತಹ ಬೀದಿ ನಾಟಕ ಗುಂಪುಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇದು ಅವರಿಗೆ ಪಾಠ ಕಲಿಸಲು ಚಳವಳಿಯ ಬೆಂಬಲಿಗರು ನಡೆಸಿರುವ ಕೃತ್ಯವಾಗಿದೆ ಎಂದು ಮಲಿಕ್ ವಿವರಿಸಿದರು.

 ದುಷ್ಕರ್ಮಿಗಳಿಂದ ಬಿಡುಗಡೆಗೊಂಡ ಗುಂಪು ಶಾಲೆಗೆ ವಾಪಸಾದಾಗ ಸಾಮೂಹಿಕ ಅತ್ಯಾಚಾರದ ವಿರುದ್ಧ ಪೊಲೀಸ್ ದೂರು ದಾಖಲಿಸದಂತೆ ಶಾಲೆಯನ್ನು ನಡೆಸುತ್ತಿರುವ ಫಾ.ಅಲ್ಫಾನ್ಸೊ ಅಲಿನ್ ಅವರು ಸೂಚಿಸಿದ್ದರು. ಗುಂಪಿನ ನಾಯಕ ಸಂಜಯ ಶರ್ಮಾ ಸಲ್ಲಿಸಿರುವ ದೂರಿನಂತೆ ಅಪಹರಣವನ್ನು ವರದಿ ಮಾಡದ್ದಕ್ಕಾಗಿ ಮತ್ತು ಅಪರಾಧವನ್ನು ಮುಚ್ಚಿಟ್ಟಿದ್ದಕ್ಕಾಗಿ ಅಲಿನ್‌ರನ್ನೂ ಪೊಲೀಸರು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News