ವಿಶ್ವಕಪ್: ದಕ್ಷಿಣ ಕೊರಿಯಾವನ್ನು ಕೆಡವಿದ ವೆುಕ್ಸಿಕೊ

Update: 2018-06-23 18:03 GMT

ರಾಸ್ಟಾವ್ ಆನ್ ಡಾನ್,ಜೂ.23: ಕಾರ್ಲೊಸ್ ವೆಲಾ ಹಾಗೂ ಜೇವಿಯರ್ ಹೆರ್ನಾಂಡೆಝ್ ದಾಖಲಿಸಿದ ತಲಾ ಒಂದು ಗೋಲು ಬೆಂಬಲದಿಂದ ಮೆಕ್ಸಿಕೊ ತಂಡ ವಿಶ್ವಕಪ್‌ನ ‘ಎಫ್’ ಗುಂಪಿನ ಪಂದ್ಯದಲ್ಲಿ ದಕ್ಷಿಣ ಕೊರಿಯಾವನ್ನು 2-1 ಅಂತರದಿಂದ ಸೋಲಿಸಿದೆ. ಈ ಮೂಲಕ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ.

 ಕಾರ್ಲೊಸ್ 26ನೇ ನಿಮಿಷದಲ್ಲಿ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿ ಮೆಕ್ಸಿಕೊಗೆ 1-0 ಮುನ್ನಡೆ ಒದಗಿಸಿಕೊಟ್ಟರು. ಹೆರ್ನಾಂಡೆಝ್ 66ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡಕ್ಕೆ 2-0 ಮುನ್ನಡೆ ಒದಗಿಸಿಕೊಟ್ಟರು. ಹೆರ್ನಾಂಡೆಝ್ 50ನೇ ಅಂತರ್‌ರಾಷ್ಟ್ರೀಯ ಗೋಲು ಬಾರಿಸಿ ಗಮನ ಸೆಳೆದರು. ಮಾತ್ರವಲ್ಲ ವಿಶ್ವಕಪ್‌ನಲ್ಲಿ 4ನೇ ಗೋಲು ದಾಖಲಿಸಿ ಮೆಕ್ಸಿಕೊದ ಸಾರ್ವಕಾಲಿಕ ಶ್ರೇಷ್ಠ ಗೋಲ್ ಸ್ಕೋರರ್ ಲೂಯಿಸ್ ಹೆರ್ನಾಂಡೆಝ್ ದಾಖಲೆ ಸರಿಗಟ್ಟಿದರು.

ಸನ್ ಹಿಯುಂಗ್ 93ನೇ ನಿಮಿಷದಲ್ಲಿ ಗೋಲು ಬಾರಿಸಿ ಕೊರಿಯಾದ ಸೋಲಿನ ಅಂತರ ಕಡಿತಗೊಳಿಸಿದರು. ಈ ಗೆಲುವಿನೊಂದಿಗೆ ಮೆಕ್ಸಿಕೊ ‘ಎಫ್’ ಗುಂಪಿನಲ್ಲಿ ಆರು ಅಂಕ ಗಳಿಸಿ ಅಗ್ರ ಸ್ಥಾನದಲ್ಲಿದೆ. ಸತತ 2ನೇ ಸೋಲು ಕಂಡಿರುವ ಕೊರಿಯಾ ಸ್ಪರ್ಧೆಯಿಂದ ಬಹುತೇಕ ಹೊರ ನಡೆದಿದೆ.

ಮೊದಲಾರ್ಧದಲ್ಲಿ ಒಂದು ಗೋಲು ಬಿಟ್ಟುಕೊಟ್ಟ ಹೊರತಾಗಿಯೂ ಕೊರಿಯಾ ತಿರುಗೇಟು ನೀಡಲು ಪ್ರಯತ್ನ ನಡೆಸಿತು. ಆದರೆ, ಅದೃಷ್ಟ ಕೈಕೊಟ್ಟಿತು. ಸನ್ ಕೊನೆಯ ಕ್ಷಣದಲ್ಲಿ ಗೋಲು ಬಾರಿಸಿದರೂ ತಂಡವನ್ನು ಸೋಲಿನಿಂದ ಪಾರಾಗಿಸಲು ಸಾಧ್ಯವಾಗಲಿಲ್ಲ. ಇದೀಗ 20 ವರ್ಷಗಳ ಬಳಿಕ ಗ್ರೂಪ್ ಹಂತದಲ್ಲೇ ಕೂಟದಿಂದ ಹೊರನಡೆಯುವ ಭೀತಿಯಲ್ಲಿದೆ. 1998ರಲ್ಲಿ ಫ್ರಾನ್ಸ್‌ನಲ್ಲಿ ವಿಶ್ವಕಪ್‌ನ ಗ್ರೂಪ್ ಹಂತದಲ್ಲೇ ಕೊರಿಯಾ ನಿರ್ಗಮಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News