ಪ್ರಭುತ್ವವನ್ನು ಪ್ರಶ್ನೆ ಮಾಡಲು ಕಲಿಸಿದರು ಪ್ರಕಾಶ್ ರೈ

Update: 2018-06-23 18:32 GMT

ದೇಶದಾದ್ಯಂತ ಎಷ್ಟೋ ಯುವಜನರು ಪ್ರಕಾಶ್ ರೈ ಅವರ ಜಸ್ಟ್ ಆಸ್ಕಿಂಗ್ ಅಭಿಯಾನವನ್ನು ಬೆಂಬಲಿಸುತ್ತಿದ್ದಾರೆ. ತಾನು ಪ್ರಶ್ನೆ ಮಾಡಿಯೇ ನಮ್ಮಲ್ಲಿ ಪ್ರಶ್ನೆ ಮಾಡಿ ಎನ್ನುತ್ತಿದ್ದಾರೆ ಪ್ರಕಾಶ್ ರೈ. ಅವರಿಂದ ಈ ಕಾಲಘಟ್ಟ ಪಡೆದುಕೊಂಡ ಮಹತ್ವದ ಕೊಡುಗೆಯೆಂದರೆ ಪ್ರಶ್ನೆ ಮಾಡುವ ಸ್ವಾತಂತ್ರ್ಯದ ಬಳಕೆ ಮತ್ತು ಅದಕ್ಕೋಸ್ಕರ ನಾವೇ ಸೃಷ್ಟಿಸಿಕೊಳ್ಳಬೇಕಾದ ಒಂದು ಸ್ಪೇಸ್. ಮುಂದಿನ ತಲೆಮಾರು ಖಂಡಿತವಾಗಿಯೂ ಪ್ರಶ್ನೆ ಮಾಡುವುದನ್ನು ಶುರು ಮಾಡುತ್ತದೆ. ಈಗಾಗಲೇ ಪ್ರಶ್ನೆ ಶುರುವಾಗಿದೆ. ಇಂದು ಪ್ರಕಾಶ್ ರೈಯವರನ್ನು ವಿರೋಧಿಸುತ್ತಿರುವವರು ಕೂಡಾ ಮುಂದೊಮ್ಮೆ ಅವರನ್ನು ಅರಿತು ತಾವು ಮಾಡಿದ ಅಟ್ಟಹಾಸಕ್ಕೆ, ಅಪಹಾಸ್ಯಕ್ಕೆ ಪಶ್ಚಾತ್ತಾಪ ಪಡುವ ಕಾಲ ದೂರವಿಲ್ಲ.

ಬಲು ದೊಡ್ಡ ಬದಲಾವಣೆಯ ತಂಗಾಳಿಯೊಂದು ಕರ್ನಾಟಕದಿಂದ ಆರಂಭಗೊಂಡು ಭಾರತದೆಲ್ಲೆಡೆ ಬೀಸಿದೆ. ಸಾಮಾಜಿಕ ಜಾಲತಾಣಗಳು ದುರ್ಬಳಕೆಯಾಗುವುದಕ್ಕಿಂತ ಹೆಚ್ಚಾಗಿ ಚರ್ಚೆಯ ತಾಣವಾಗಿ ಪರಿವರ್ತನೆಗೊಳ್ಳುತ್ತಿವೆ. ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಕುರಿತು, ಮಾಧ್ಯಮಗಳು ಹಬ್ಬಿಸುತ್ತಿರುವ ವದಂತಿಗಳ ಬಗ್ಗೆ, ಸಾಮಾಜಿಕ ಜಾಲತಾಣಗಳಲ್ಲೇ ಹಬ್ಬುತ್ತಿರುವ ಸುಳ್ಳು ಸುದ್ದಿಗಳ ಬಗ್ಗೆ, ಊಸರವಳ್ಳಿ ಚಾನೆಲ್, ಪತ್ರಿಕೆಗಳ ಬಗ್ಗೆ ಹಲವಾರು ಮಜಲುಗಳಲ್ಲಿ ಚರ್ಚೆ ನಡೆಯುತ್ತಿದೆ. ಜಗಳ ನಡೆಯುತ್ತದೆ. ಪ್ರಶ್ನೆ, ಉತ್ತರ, ಪ್ರತ್ಯುತ್ತರಗಳಲ್ಲಿ ಕಾಣಬಹುದಾದ ಸೂಕ್ಷ್ಮತೆ ನಿಖರತೆ ಮತ್ತು ಸತ್ಯಾಸತ್ಯತೆ ಜನರು ಎಷ್ಟೊಂದು ಬದಲಾಗಿದ್ದಾರೆ ಎನ್ನುವುದನ್ನು ತಿಳಿ ಸುತ್ತದೆ. ಬರೀ ಸಾಮಾಜಿಕ ಜಾಲತಾಣ ಗಳಷ್ಟೇ ಅಲ್ಲ, ಕಾಲೇಜು ಕ್ಯಾಂಪಸ್, ಅಂಗಡಿ ಮುಂಗಟ್ಟು ಎಲ್ಲಾ ಕಡೆಗಳಲ್ಲೂ ಆರೋಗ್ಯಕರ ಚರ್ಚೆಯ ವಾತಾವರಣ ಸೃಷ್ಟಿಗೊಂಡಿದೆ. ಐದಾರು ತಿಂಗಳುಗಳ ಹಿಂದೆ ಎಲ್ಲದಕ್ಕೂ ಒಂದು ರೀತಿಯ ಹಿಂಜರಿಕೆ, ಭಯ ಇತ್ತು. ಮಾತನಾಡುವುದಕ್ಕೆ ಭಯ. ವಿಶೇಷವಾಗಿ ಪ್ರಧಾನಿ ಮೋದಿಯವರ ಹೆಸರೆತ್ತಿದರೆ ಸಾಕು ನಾಲ್ಕು ಜನರ ಕತ್ತು ನಮ್ಮತ್ತ ತಿರುಗಿ ಕಣ್ಣು ದೊಡ್ಡಗಾಗುತ್ತಿದ್ದವು. ಈಗಲೂ ಇದಕ್ಕೇನೂ ಕಮ್ಮಿಯಿಲ್ಲ. ಆದರೆ ಮೊದಲಿದ್ದ ಭಯವಂತೂ ಜನರಲ್ಲಿ ಬಹಳಷ್ಟು ಕಮ್ಮಿಯಾಗಿದೆ. ಇಂದು ಜನಸಾಮಾನ್ಯರು ಮೋದಿಯವರನ್ನು ನೇರವಾಗಿ ಪ್ರಶ್ನೆ ಮಾಡುತ್ತಿದ್ದಾರೆ. ಫೇಸ್‌ಬುಕ್ ತೆರೆದರೆ ಸಾಕು ಒಂದು ದಿನದಲ್ಲಿ ಬರುವ ಪೋಸ್ಟ್ ಗಳಲ್ಲಿ ತೊಂಬತ್ತು ಶೇಕಡಾ ರಾಜಕೀಯಕ್ಕೆ ಸಂಬಂಧಿಸಿದ್ದೇ ಆಗಿರುತ್ತದೆ. ಪ್ರಧಾನಿಯನ್ನು ಪ್ರಶ್ನೆ ಮಾಡುವುದು ಮಹಾಪಾಪ ಎಂದು ಭಾವಿಸಿಕೊಂಡಿದ್ದ ಜನರಿಗೆ ಇಂದು ಮೂಗಿನ ಮೇಲೆ ಬೆರಳಿಟ್ಟು ನೋಡುವಷ್ಟು ಪ್ರಶ್ನೆಗಳು ರಾಜಕೀಯದ ಅಂಗಳದಲ್ಲಿ ರಾಶಿ ಬಿದ್ದಿವೆ. ಇದು ಬದಲಾವೆಯ ತಂಗಾಳಿಯಲ್ಲದೆ ಮತ್ತಿನ್ನೇನು ?

ಪ್ರತಿಭಾವಂತ ಕಲಾವಿದ ಸಮಾಜವನ್ನು ಗ್ರಹಿಸುವ ರೀತಿ ಜನಸಾಮಾನ್ಯರಿಗಿಂತ ಮತ್ತು ಇತರರಿಗಿಂತ ತೀರಾ ಭಿನ್ನವಾಗಿರುತ್ತದೆ. ಇತ್ತೀಚೆಗೆ ಪ್ರಧಾನಿಯವರನ್ನು ಪ್ರಶ್ನೆ ಮಾಡಿ, ಹೀಗೂ ಪ್ರಶ್ನೆ ಮಾಡಬಹದು ಎನ್ನುವುದನ್ನು ದೇಶದ ಜನತೆಗೆ ತೋರಿಸಿಕೊಟ್ಟ ಕನ್ನಡದ ಸಂಪತ್ತು, ಬಹುಭಾಷಾ ಪ್ರತಿಭಾವಂತ ನಟ ಪ್ರಕಾಶ್ ರೈ ಇದಕ್ಕೆ ಸೂಕ್ತ ಉದಾಹರಣೆ. ಅವರ ಧ್ವನಿಯಲ್ಲಿ ಮೂಡಿ ಬಂದ ಪ್ರಶ್ನೆಗಳಿಗೆ ಉತ್ತರ ನೀಡಲಾಗದೆ ತತ್ತರಿಸಿತು ಕೇಂದ್ರ ಸರಕಾರ. ಅಲ್ಲಿಯವರೆಗೆ, ಜನರು ಪ್ರಶ್ನೆ ಮಾಡುವುದೇ ಇಲ್ಲ, ಆದ್ದರಿಂದ ಮರುಳು ಮಾತಿನ ಮೂಲಕ ಜನರನ್ನು ಗೆಲ್ಲುವ ಪ್ರಯತ್ನ ಹೊಂದಿದ್ದ ಕೇಂದ್ರಕ್ಕೆ ಪ್ರಕಾಶ್ ರೈ ಧ್ವನಿ ಉಂಟುಮಾಡಿದ ಸಮಸ್ಯೆ ಅಷ್ಟಿಷ್ಟಲ್ಲ. ಮೋದಿ-ಅಮಿತ್ ಶಾ ‘ಅಚ್ಛೇ ದಿನ್’ನ ಹೆಸರಿನಲ್ಲಿ ಕಾಣುತ್ತಿದ್ದ ಕೆಟ್ಟ ಕನಸು ಪ್ರಕಾಶ್ ರೈ ಪ್ರಶ್ನೆಗಳ ನಡುವೆ ಕೊಚ್ಚಿ ಹೋಯಿತು. ಆದರೂ ಅವರ ನಂಬಿಕೆ ಇನ್ನೂ ಉಳಿದಿದೆ. ಇದಕ್ಕೆ ಅವರನ್ನು ನಂಬಿ ಕೂತ ಭಕ್ತಾದಿಗಳು ಕಾರಣ. ಈ ಉನ್ಮಾದ ಹೊಸತಲ್ಲ. ಇದೆಂತಹ ಭಕ್ತಿಯೆಂದರೆ ಮೋದಿ ತನ್ನ ದಿನನಿತ್ಯದ ಬದುಕಿನ ಒಂದು ಭಾಗ ಎನ್ನುವಷ್ಟು ಭಕ್ತಿ. ಕರ್ನಾಟಕ ಚುನಾವಣಾ ಪ್ರಚಾರ ದಲ್ಲಿ ಮೋದಿಯವರು ಬಂದು ಮಾತನಾಡಿದ ಕನ್ನಡವನ್ನು ಸಂಗೀತದಂತೆ ಆಲಿಸುತ್ತಾ ಕೂತ ಭಕ್ತಕೂಟ ‘ಮೋದಿ ಮೋದಿ’ ಎಂದು ಭಜನೆ ಶುರುಮಾಡಿದಾಗ ನಿಜಕ್ಕೂ ರಾಜ್ ಕುಮಾರ್ ಹಿರಾನಿಯವರ ‘ಪಿಕೆ’ ಚಿತ್ರದ ನೆನಪಾಯ್ತು. ಭಕ್ತಿಯ ಸಾಗರದಲ್ಲಿ ಏನನ್ನು ತೇಲಿಬಿಟ್ಟರೂ ನಡೆಯುತ್ತದೆ ಎಂಬುದನ್ನು ಮೋದಿ-ಅಮಿತ್ ಶಾ ಜೋಡಿ ಚೆನ್ನಾಗಿ ಅರಿತುಕೊಂಡು ಬಳಸಿದೆ, ಬಳಸುತ್ತಿದೆ. ವಾಸ್ತವದಲ್ಲಿ ಮೋದಿ ಆರಾಧನೆಯಲ್ಲಿ ತೊಡಗಿರುವ ಕನ್ನಡದ ಕೆಲವು ಪತ್ರಿಕೆಗಳು, ಟಿವಿ ಚಾನೆಲ್ಗಳು ಮೋದಿ ‘ಮಾತಿನ ಮೋಡಿ’ ಎಂದು ಬಣ್ಣಿಸುವುದು ಇದನ್ನೇ ಆಗಿದೆ. ಇಂದಿರಾ ಗಾಂಧಿಯವರ ಕಾಲದಲ್ಲೂ ಈ ರೀತಿಯ ಉನ್ಮಾದವಿತ್ತು. ಆದರೆ ಅದಕ್ಕೂ ಈಗಿನ ಉನ್ಮಾದಕ್ಕೂ ವ್ಯತ್ಯಾಸವಿದೆ. ಆ ವ್ಯತ್ಯಾಸವೇ ಇಂದಿನ ಉನ್ಮಾದ ಎಷ್ಟೊಂದು ಅಪಾಯಕಾರಿ ಎನ್ನುವುದನ್ನು ತಿಳಿಸುತ್ತಿದೆ. ಜನರ ಭಾವನೆಗಳನ್ನು, ನಂಬಿಕೆಗಳನ್ನು, ಸಮಾಜದ ದೌರ್ಬಲ್ಯಗಳನ್ನು ಅಸ್ತ್ರವಾಗಿ ಬಳಸಿ ರಾಜಕೀಯ ನಡೆಸುವುದೆಂದರೆ ಇದಕ್ಕಿಂತ ದೊಡ್ಡ ದುರಂತ ಇನ್ನೊಂದಿಲ್ಲ. ಪತ್ರಿಕಾಗೋಷ್ಠಿ ನಡೆಸದೆ ರೇಡಿಯೋ ಮೂಲಕ ಜನರನ್ನು ತಲುಪುತ್ತೇನೆ ಎನ್ನುವ ಪ್ರಧಾನಿಯವರ ’ಮನ್ ಕೀ ಬಾತ್’ ಗೆ ಪ್ರಶ್ನೆ ಕೇಳುವುದಾದರೂ ಹೇಗೆ? ಭಾಷಣ ಮಾಡುತ್ತಾ ಹೋಗುವುದಲ್ಲದೆ ಇವರ ಮಾತಿನ ಮರ್ಮವೇನು ಎನ್ನುವುದನ್ನು ಅರ್ಥಮಾಡಿಕೊಡುವವರಿಲ್ಲ. ಇದಕ್ಕಿಂತ ಒಳ್ಳೆಯ ಭಾಷಣ ವಿದ್ಯಾರ್ಥಿಗಳು ಅದೇ ರೇಡಿಯೊದಲ್ಲಿ ರಾತ್ರಿ 8 ಗಂಟೆಗೆ ಯುವವಾಣಿ ಕಾರ್ಯಕ್ರಮದಲ್ಲಿ ಬಹಳ ಚೆನ್ನಾಗಿ ಮಾಡುತ್ತಾರೆ. ಭಾಷಣ ಮಾಡಲು ಪ್ರಧಾನಿಯೇ ಆಗಬೇಕೆಂದೇನಿಲ್ಲ. ಇರಲಿ.
ಪ್ರಕಾಶ್ ರೈ ಪ್ರಶ್ನೆ ಮಾಡಿದ್ದು, ವಿರೋಧಿಸಿದ್ದು ನಿರ್ದಿಷ್ಟ ವಾಗಿ ಒಂದು ರಾಜಕೀಯ ಸಿದ್ಧಾಂತವನ್ನೇ ಹೊಂದಿರದ ಒಂದು ಪಕ್ಷವನ್ನು. ಒಬ್ಬ ಸಾಮಾನ್ಯ ಪ್ರಜೆ ಇದನ್ನು ನೇರವಾಗಿ ಒಪ್ಪುವುದರಲ್ಲಿ ತೊಡಕು ಇದ್ದಂತೆ ಅನಿಸಬಹುದು. ಆದರೆ ಪ್ರಕಾಶ್ ರೈಯವರ ವಿರೋಧ ಹಂತ ಹಂತವಾಗಿ ಗಟ್ಟಿಯಾಗುತ್ತಾ ಬರುವುದಕ್ಕೆ ಇದ್ದ ಕಾರಣಗಳನ್ನು ಗಮನಿಸಿದರೆ ಇದೊಂದು ಮುಂದುವರಿಕೆಯಾಗಿ ಕಾಣುತ್ತದೆ. ಮೊದಲ ಬಾರಿ ಗೌರಿ ಲಂಕೇಶರ ಹತ್ಯೆಯ ವಿಚಾರವಾಗಿ ರೈ ಪ್ರಶ್ನೆ ಮಾಡಿದಾಗ ಅವರ ಧ್ವನಿ ಇಂದಿಗಿಂತ ಬಹಳ ಮೆತ್ತಗಿತ್ತು. ಇದಕ್ಕೂ ಮೊದಲು ಗೌರಿ ಹತ್ಯೆಯಾಗಲೀ ಇತರ ಸಂಗತಿಗಳೇ ಆಗಲಿ ಉಳಿದ ಸಾಹಿತಿಗಳು, ಚಿಂತಕರು ಪ್ರಶ್ನೆ ಮಾಡಿ ದಾಗ ಅರೆಬೆಂದ ಅಂಕಣಕಾರರು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಭಕ್ತರು ಎರಗುತ್ತಿದ್ದ ರೀತಿ ಪ್ರಶ್ನೆಯ ಧ್ವನಿಯನ್ನು ಯಶಸ್ವಿಯಾಗಿ ಅಡಗಿಸುತ್ತಿದ್ದವು. ಈ ಎರಗುವಿಕೆಗೆ ಸುಮ್ಮನಾಗುತ್ತಿದ್ದರು ಪ್ರಶ್ನೆ ಮಾಡುವವರು. ಆದರೆ ಪ್ರಕಾಶ್ ರೈ ಸುಮ್ಮನಾಗಲಿಲ್ಲ. ತಾನೇನೂ ತಪ್ಪು ಮಾಡಿಲ್ಲ, ಬರೀ ಒಂದು ಪ್ರಶ್ನೆ ಕೇಳಿದೆ ಅದಕ್ಕೆ ಈ ಮಟ್ಟದಲ್ಲಿ ವಿರೋಧ, ಅಪಹಾಸ್ಯ, ನಿಂದನೆ ಶುರುವಾಗಿದ್ದು ಅವರಿಗೆ ಬೂದಿ ಮುಚ್ಚಿದ್ದ ಕೆಂಡದ ಪರಿಚಯ ಮಾಡಿಸಿತು. ಪ್ರಕಾಶ್ ರೈ ಧ್ವನಿ ನಂತರದಲ್ಲಿ ಏರುತ್ತಾ ಹೊೀಗಿದ್ದರ ಹಿನ್ನೆಲೆಯಿರುವುದು ಹೀಗೆ.
 ಪ್ರಶ್ನೆ ಮಾಡುವ ಅವಕಾಶ ಹಿಂದಿನ ಸರಕಾರದ ಅವಧಿಯಲ್ಲಿ ಇರಲಿಲ್ಲವೇ ಎಂದು ಗಮನಿಸಿದರೆ ನಿಜಕ್ಕೂ ಇತ್ತು ಎನ್ನುವುದು ನಮ್ಮ ಗಮನಕ್ಕೆ ಬರುತ್ತದೆ. ಆದರೆ ಅಲ್ಲಿ ಹೆಚ್ಚಿನ ಸಂದರ್ಭಗಳು ಹೀಗಿರಲಿಲ್ಲ. ಪ್ರತಿ ವಿಚಾರದಲ್ಲೂ ಪ್ರಶ್ನೆ ಹುಟ್ಟುಹಾಕುವಂಥದ್ದಿರಲಿಲ್ಲ. ಇಂದು ಪ್ರತಿಯೊಂದನ್ನೂ ಪ್ರಶ್ನೆ ಮಾಡಬೇಕಾಗಿ ಬಂದಿದೆ. ಆಡಳಿತದ ರೀತಿಯೇ ಬುಡಮೇಲಾಗಿದೆ. ಇಲ್ಲಿ ಎಲ್ಲವೂ ಅನಿರೀಕ್ಷಿತವಾಗಿ ಮಧ್ಯರಾತ್ರಿಯಿಂದ ಪ್ರಾರಂಭಗೊಳ್ಳುತ್ತದೆ. ಏನೂ ಅರ್ಥವಾಗದ ಜನಸಾಮಾನ್ಯರು ತತ್ತರಿಸುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಗಮನಿಸಬೇಕಾದದ್ದು ಮೋದಿಗೆ ಮಾರಿಕೊಂಡ ಮಾಧ್ಯಮಗಳ ಬಗ್ಗೆ ಮತ್ತು ಅವರನ್ನು ಆರಾಧಿಸುತ್ತಾ ಪ್ರಶ್ನೆ ಮಾಡುವುದನ್ನು ಪಾಪವೆನ್ನುವಂತೆ ಭಯ ಸೃಷ್ಟಿಸುತ್ತಾ ಬಂದ ಭಕ್ತರ ಬಗ್ಗೆ. ಈ ಭಯ ಹಿಂದಿನ ಸರಕಾರದ ಅವಧಿಯಲ್ಲಿ ಇರಲಿಲ್ಲವಲ್ಲ. ಅಂದು ನಾವೆಲ್ಲರೂ ಸೇರಿ ಮನಮೋಹನ್ ಸಿಂಗ್‌ರನ್ನು ತಮಾಷೆ ಮಾಡುತ್ತಿದ್ದೆವು, ವ್ಯಂಗ್ಯವಾಡುತ್ತಿದ್ದೆವು ಮುಕ್ತವಾಗಿಯೇ ಭಯವಿಲ್ಲದೆ ಅವರ ಹೆಸರನ್ನು ಜೋರಾಗಿಯೇ ಹೇಳುತ್ತಿದ್ದೆವು. ಈ ಬಾಗಿಲು ಹೇಗೆ ಮುಚ್ಚಿ ಹೋಯಿತು ಇಂದು ? ಭಕ್ತರಿಂದ, ಮಾರಾಟವಾದ ಪತ್ರಿಕೆ, ಪತ್ರಕರ್ತ, ಮಾಧ್ಯಮಗಳಿಂದ ಮುಚ್ಚಲ್ಪಟ್ಟಿದ್ದ ಬಾಗಿಲನ್ನು ತೆರೆದದ್ದು ಪ್ರಕಾಶ್ ರೈ. ಉಸಿರು ಕಟ್ಟಿ ಸಾಯುತ್ತಿದ್ದ ಪ್ರಶ್ನೆಗಳು ಇಂದು ಸಾಮಾಜಿಕ ಜಾಲತಾಣಗಳಲ್ಲಿ ನಿರ್ಭೀತಿಯಿಂದ ಉಸಿರಾಡುತ್ತಿವೆ. ಜನಸಾಮಾನ್ಯರು ಮಾತ್ರವಲ್ಲ, ಪ್ರಧಾನಿಯನ್ನು ಪ್ರಶ್ನೆ ಮಾಡದೆ ಸುಮ್ಮನೆ ಕೂತವರಲ್ಲಿ ಹಲವು ರಾಜ್ಯಗಳ ಮುಖ್ಯಮಂತ್ರಿಗಳೂ ಇದ್ದಾರೆ. ಆಗ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಪ್ರಧಾನಿಯವರ ಯಾವ ಸುಳ್ಳು ಟೀಕೆಗಳಿಗೂ ತಲೆತಗ್ಗಿಸದೆ ನೇರವಾಗಿ ಪ್ರಶ್ನೆ ಮಾಡಿದ್ದಲ್ಲದೆ ವ್ಯಂಗ್ಯವೂ ಮಾಡಿಬಿಟ್ಟರು. ಇದರಿಂದಲೇ ತಾನೆ ಮೋದಿಯವರು ಕರ್ನಾಟಕಕ್ಕೆ ಪ್ರಚಾರಕ್ಕಾಗಿ ಆಗಾಗ ಭೇಟಿ ಕೊಟ್ಟು ವೇದಿಕೆಯಲ್ಲಿ ಕುಣಿದಾಡಿ ಹೋಗಬೇಕಾದ ಪರಿಸ್ಥಿತಿ ಬಂದಿದ್ದು. ವ್ಯಂಗ್ಯಕ್ಕೆ ಎಡೆಯಿಲ್ಲದ ರಾಜಕೀಯ ಸಂದರ್ಭಕ್ಕಿಂತ ಸಂಕಷ್ಟದ ಸಂದರ್ಭ ಇರಲಿಕ್ಕಿಲ್ಲ. ಇಂತಹ ಸನ್ನಿವೇಶ ಎದುರಾದರೆ ವ್ಯಂಗ್ಯಚಿತ್ರಕಾರರ ಗತಿಯೇನು? ಇಲ್ಲೂ ಒಂದು ವಿಚಾರ ಹೇಳಬೇಕು. ಎಲ್ಲಾ ರಾಜಕೀಯ ಪಕ್ಷಗಳ ನೇತಾರರನ್ನೂ, ಹುಳುಕುಗಳನ್ನೂ ತಮ್ಮ ರೇಖೆಗಳ ಮೂಲಕ ವ್ಯಂಗ್ಯವಾಗಿ ತೋರಿಸುವವರು ಕಾರ್ಟೂನಿಸ್ಟರು. ಖ್ಯಾತ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಮೋದಿ ಕುರಿತು ಕಾರ್ಟೂನ್ ಮಾಡಿದ್ದಕ್ಕೆ ಅವರನ್ನು ಕೂಡಾ ಇತರ ವ್ಯಕ್ತಿಗಳನ್ನು ಟೀಕಿಸಿದಂತೆ ಮೋದಿ ವಿರೋಧಿ ಎಂದು ಅವರ ಮೇಲೆ ಎರಗಿದ್ದರು ಭಕ್ತರು. ಆದರೆ ಅವರು ಅಷ್ಟಕ್ಕೆ ಮುದುರಿಕೊಂಡು ಸುಮ್ಮನಿರುವ ನೆಲದವರಲ್ಲ. ಅವರು ಬೇಕೆಂದೇ ಮತ್ತಷ್ಟು ಕಾರ್ಟೂನ್‌ಗಳನ್ನು ಅರ್ಪಿಸಿದರು. ಗಟ್ಟಿಯಾಗಿ ಎದುರಿಸಿದರು. ಇಂತಹ ಅಭಿವ್ಯಕ್ತಿಯನ್ನು ಹತ್ತಿಕ್ಕುವ ಪ್ರಯತ್ನಗಳನ್ನು ಗಮನಿಸದೇ ಹೋದರೆ ಅಪಾಯವಿದೆ.
 ಪ್ರಕಾಶ್ ರೈ ನಮಗೆ ಮುಖ್ಯರಾಗುವುದು ಅವರು ಪ್ರಶ್ನೆ ಮಾಡಿರುವುದರಿಂದಲೇ. ಅವರು ಹಿಂದೇನು ಮಾಡುತ್ತಿದ್ದರು ಮುಂದೇನು ಮಾಡುತ್ತಾರೆ ಎನ್ನುವುದನ್ನು ನೋಡುತ್ತಾ ಕೂರುವುದು ಸರಿಯಲ್ಲ. ಅವರೇ ಪ್ರಶ್ನೆ ಮಾಡಬೇಕು ಎಂದು ಕಾಯುವುದಕ್ಕಿಂತ ದೊಡ್ಡ ದಡ್ಡತನ ಇನ್ನೊಂದಿಲ್ಲ. ದೇಶದಾದ್ಯಂತ ಎಷ್ಟೋ ಯುವಜನರು ಪ್ರಕಾಶ್ ರೈ ಅವರ ಜಸ್ಟ್ ಆಸ್ಕಿಂಗ್ ಅಭಿಯಾನವನ್ನು ಬೆಂಬಲಿಸುತ್ತಿದ್ದಾರೆ. ತಾನು ಪ್ರಶ್ನೆ ಮಾಡಿಯೇ ನಮ್ಮಲ್ಲಿ ಪ್ರಶ್ನೆ ಮಾಡಿ ಎನ್ನುತ್ತಿದ್ದಾರೆ ಪ್ರಕಾಶ್ ರೈ. ಅವರಿಂದ ಈ ಕಾಲಘಟ್ಟ ಪಡೆದುಕೊಂಡ ಮಹತ್ವದ ಕೊಡುಗೆಯೆಂದರೆ ಪ್ರಶ್ನೆ ಮಾಡುವ ಸ್ವಾತಂತ್ರ್ಯದ ಬಳಕೆ ಮತ್ತು ಅದಕ್ಕೋಸ್ಕರ ನಾವೇ ಸೃಷ್ಟಿಸಿಕೊಳ್ಳಬೇಕಾದ ಒಂದು ಸ್ಪೇಸ್. ಮುಂದಿನ ತಲೆಮಾರು ಖಂಡಿತವಾಗಿಯೂ ಪ್ರಶ್ನೆ ಮಾಡುವುದನ್ನು ಶುರು ಮಾಡುತ್ತದೆ. ಈಗಾಗಲೇ ಪ್ರಶ್ನೆ ಶುರುವಾಗಿದೆ. ಇಂದು ಪ್ರಕಾಶ್ ರೈಯವರನ್ನು ವಿರೋಧಿಸುತ್ತಿರುವವರು ಕೂಡಾ ಮುಂದೊಮ್ಮೆ ಅವರನ್ನು ಅರಿತು ತಾವು ಮಾಡಿದ ಅಟ್ಟಹಾಸಕ್ಕೆ, ಅಪಹಾಸ್ಯಕ್ಕೆ ಪಶ್ಚಾತ್ತಾಪ ಪಡುವ ಕಾಲ ದೂರವಿಲ್ಲ.

Writer - ಮುಹಮ್ಮದ್ ಶರೀಫ್, ಕಾಡುಮಠ

contributor

Editor - ಮುಹಮ್ಮದ್ ಶರೀಫ್, ಕಾಡುಮಠ

contributor

Similar News

ಜಗದಗಲ
ಜಗ ದಗಲ