ವಾಂತಿಯಾಗಲು ಕಾರಣಗಳೇನು ? ವ್ಯೆದ್ಯರನ್ನು ಯಾವಾಗ ಸಂಪರ್ಕಿಸಬೇಕು ?

Update: 2018-06-24 11:10 GMT

ನಿಮಗೆ ಕೆಲವು ಸಂದರ್ಭಗಳಲ್ಲಿ,ವಿಶೇಷವಾಗಿ ಪ್ರಯಾಣದ ಸಮಯದಲ್ಲಿ ಅಥವಾ ಅತಿಯಾಗಿ ತಿಂದಾಗ ವಾಕರಿಕೆಯ ಅನುಭವವಾಗಿರಬಹುದು. ಆದರೆ ಪ್ರತಿ ಬಾರಿಯೂ ವಾಕರಿಕೆಯುಂಟಾದಾಗ ನೀವು ವಾಂತಿ ಮಾಡಲೇಬೇಕೆಂದಿಲ್ಲ ಮತ್ತು ವಾಕರಿಕೆಯೇ ಸದಾ ವಾಂತಿಗೆ ಕಾರಣವಾಗುವುದೂ ಇಲ್ಲ.

ಹಾಗಾದರೆ ವಾಂತಿಯಾಗಲು ನಿಖರ ಕಾರಣವೇನಾದರೂ ಏನು?ಮತ್ತು ನೀವು ವೈದ್ಯರನ್ನು ಯಾವಾಗ ಕಾಣಬೇಕು ಅಥವಾ ವಾಂತಿ ನಿರೋಧಕಗಳು ಅಥವಾ ಮನೆಮದ್ದುಗಳನ್ನು ಬಳಸುವುದು ಯಾವಾಗ ಸೂಕ್ತವಲ್ಲ? ಇದಕ್ಕೆ ಉತ್ತರಗಳು ಇಲ್ಲಿವೆ.....

ವಾಕರಿಕೆ ಮತ್ತು/ಅಥವಾ ವಾಂತಿಗೆ ಕೆಲವು ಸಾಮಾನ್ಯ ಕಾರಣಗಳಿಲ್ಲಿವೆ

ಪ್ರಯಾಣ ಅಸ್ವಸ್ಥತೆ: ಇದು ಕಾರು,ದೋಣಿ,ಬಸ್ ಅಥವಾ ಯಾವುದೇ ಚಲಿಸುವ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಕಾಣಿಸಿಕೊಳ್ಳುತ್ತದೆ.

ವಿಷಾಹಾರ ಸೇವನೆ: ಕಲಬೆರಕೆಯ ಅಥವಾ ಹಳಸಿದ ಆಹಾರ ಸೇವಿಸಿದಾಗ ವಾಕರಿಕೆ/ವಾಂತಿ ಉಂಟಾಗುತ್ತದೆ. ಜಠರ ಅಥವಾ ಕರುಳಿನ ಯಾವುದೇ ಸೋಂಕು ಕೂಡ ಇದಕ್ಕೆ ಕಾರಣವಾಗುತ್ತದೆ.

ಹೊಟ್ಟೆಯ ಸಮಸ್ಯೆಗಳು: ನೀವು ಸೇವಿಸಿದ ಆಹಾರ ಜಠರ ಅಥವಾ ಕರುಳನ್ನು ಹಾದು ಹೋಗಿರದಿದ್ದರೆ ಅಥವಾ ಅದಕ್ಕೆ ಕರುಳಿನಲ್ಲಿ ತಡೆಯುಂಟಾಗಿದ್ದರೆ ವಾಕರಿಕೆ ಅಥವಾ ವಾಂತಿಯಾಗಬಹುದು.

ಜಠರಗರುಳಿನ ಅನ್ನನಾಳದ ಕಾಯಿಲೆ: ಇದು ಅನ್ನನಾಳದ ಸ್ನಾಯುಗಳು ತಪ್ಪು ಹೊತ್ತಿನಲ್ಲಿ ಸಡಿಲಗೊಂಡು ಗ್ಯಾಸ್ಟ್ರಿಕ್ ದ್ರವಗಳನ್ನು ಮರಳಿ ಅನ್ನನಾಳಕ್ಕೆ ಕಳುಹಿಸುವ ಸ್ಥಿತಿಯಾಗಿದ್ದು, ಇದೂ ವಾಕರಿಕೆ/ವಾಂತಿಗೆ ಕಾರಣವಾಗುತ್ತದೆ.

ಅರೆ ತಲೆನೋವು: ಮೈಗ್ರೇನ್ ಅಥವಾ ಅರೆ ತಲೆನೋವಿನಿಂದ ಬಳಲುತ್ತಿರುವವರಿಗೂ ವಾಕರಿಕೆ ಅಥವಾ ವಾಂತಿಯಾಗಬಹುದು.

ಔಷಧಿಗಳು: ಕೆಲವು ಔಷಧಿಗಳು ವಾಕರಿಕೆ ಅಥವಾ ವಾಂತಿಯನ್ನುಂಟು ಮಾಡುತ್ತವೆ. ಆ್ಯಂಟಿಬಯಾಟಿಕ್‌ಗಳು,ಜನನ ನಿಯಂತ್ರಣ ಮಾತ್ರೆಗಳು,ನೋವು ನಿವಾರಕಗಳು ಮತ್ತು ಖಿನ್ನತೆ ನಿವಾರಕಗಳು ಇವುಗಳಲ್ಲಿ ಸೇರಿವೆ.

ಮದ್ಯ: ಅತಿಯಾದ ಮದ್ಯಪಾನವು ವಾಕರಿಕೆ/ವಾಂತಿಗೆ ಕಾರಣವಾಗುತ್ತದೆ.

ಗರ್ಭಾವಸ್ಥೆ: ವಾಕರಿಕೆ ಅಥವಾ ವಾಂತಿ ಮಹಿಳೆಯರು ಗರ್ಭ ಧರಿಸಿದ್ದಾರೆ ಎನ್ನುವುದಕ್ಕೆ ಸಾಮಾನ್ಯ ಸಂಕೇತಗಳಾಗಿವೆ. ಇದನ್ನು ಮಾರ್ನಿಂಗ್ ಸಿಕ್‌ನೆಸ್ ಎನ್ನುತ್ತಾರೆ.

ವೈದ್ಯರನ್ನು ಯಾವಾಗ ನೋಡಬೇಕು?

2-3 ದಿನಗಳವರೆಗೂ ವಾಕರಿಕೆಯ ಅನುಭವವಾಗುತ್ತಿದ್ದರೆ ಅಥವಾ ಈ ಲಕ್ಷಣಗಳು ತೀವ್ರಗೊಂಡಿದ್ದರೆ ಅದು ನೀವು ವೈದ್ಯರನ್ನು ತಕ್ಷಣ ಸಂಪರ್ಕಿಸಬೇಕು ಎನ್ನುವುದನ್ನು ಸೂಚಿಸುತ್ತದೆ. ಇಂತಹ ಸಂದರ್ಭಗಳಲ್ಲಿ ವಾಂತಿ ನಿವಾರಕಗಳು ಅಥವಾ ಮನೆಮದ್ದುಗಳ ಸೇವನೆ ಸೂಕ್ತವಲ್ಲ.

ಅಲ್ಲದೆ,ಎದೆ ಅಥವಾ ಹೊಟ್ಟೆನೋವು,ರಕ್ತವಾಂತಿ ಅಥವಾ ಕಾಫಿಹುಡಿಯಂತ ವಸ್ತು ವಾಂತಿಯಲ್ಲಿದ್ದರೆ,ತೀವ್ರವಾದ ಜ್ವರವಿದ್ದರೆ, ತಲೆ ನೋಯುತ್ತಿದ್ದರೆ,ಕುತ್ತಿಗೆ ಪೆಡಸಾಗಿದ್ದರೆ,ಅತಿಯಾದ ಬಳಲಿಕೆ,ಎದ್ದು ನಿಲ್ಲಲು ಕಷ್ಟವಾಗುತ್ತಿದ್ದರೆ ಮತ್ತು ನಿರ್ಜಲೀಕರಣದ ಲಕ್ಷಣಗಳು ಕಾಣಿಸಿಕೊಂಡರೂ ನೀವು ವೈದ್ಯರನ್ನು ತಕ್ಷಣವೇ ಕಾಣಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News