ಕಸ್ಟಡಿಯಲ್ಲಿರುವ ಎಲ್ಲ ಮಕ್ಕಳನ್ನು ಹೆತ್ತವರೊಂದಿಗೆ ಸೇರಿಸುತ್ತೇವೆ: ಅಮೆರಿಕ

Update: 2018-06-24 18:01 GMT

ವಾಶಿಂಗ್ಟನ್, ಜೂ. 24: ಗಡಿಯಲ್ಲಿ ಅಕ್ರಮ ವಲಸಿಗರಿಂದ ಬೇರ್ಪಡಿಸಲ್ಪಟ್ಟ ಎಲ್ಲ ಮಕ್ಕಳು ಇರುವ ಸ್ಥಳ ಅಮೆರಿಕ ಸರಕಾರಕ್ಕೆ ಗೊತ್ತಿದೆ ಹಾಗೂ ಆ ಮಕ್ಕಳನ್ನು ಹೆತ್ತವರೊಂದಿಗೆ ಸೇರಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಟ್ರಂಪ್ ಆಡಳಿತದ ಅಧಿಕಾರಿಗಳು ಹೇಳಿದ್ದಾರೆ.

ತಮ್ಮ ಮಕ್ಕಳನ್ನು ತಮ್ಮೊಂದಿಗೆ ಗಡಿಪಾರು ಮಾಡಬೇಕು ಎಂಬುದಾಗಿ ಹೆತ್ತವರು ಮನವಿ ಸಲ್ಲಿಸಬೇಕು ಎಂಬುದಾಗಿ ಆಂತರಿಕ ಭದ್ರತೆ ಇಲಾಖೆಯು ಶನಿವಾರ ರಾತ್ರಿ ಬಿಡುಗಡೆ ಮಾಡಿದ ಹೇಳಿಕೆಯೊಂದು ತಿಳಿಸಿದೆ.

  ತಮ್ಮನ್ನು ಮಕ್ಕಳಿಲ್ಲದೆ ಗಡಿಪಾರು ಮಾಡಬೇಕು ಎಂಬುದಾಗಿ ಹಿಂದೆ ಹಲವು ಹೆತ್ತವರು ಮನವಿ ಮಾಡಿದ್ದರು ಎಂದು ಇಲಾಖೆ ತಿಳಿಸಿದೆ.

  ಬಂಧನದಲ್ಲಿರುವ ಹೆತ್ತವರು ತಮ್ಮ ಮಕ್ಕಳನ್ನು ಕಾಣಲು ಅಥವಾ ಅವರೊಡನೆ ಸಂಪರ್ಕ ಸಾಧಿಸಲು ಬಯಸಿದರೆ ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಹಾಟ್‌ಲೈನ್ ಸಂಖ್ಯೆಯೊಂದಕ್ಕೆ ಕರೆ ಮಾಡುವಂತೆ ಸೂಚಿಸುವ ನೋಟಿಸೊಂದನ್ನು ವಲಸೆ ಮತ್ತು ಕಸ್ಟಮ್ಸ್ ಅನುಷ್ಠಾನ ಅಧಿಕಾರಿಗಳು ಎಲ್ಲ ಜೈಲುಗಳಲ್ಲಿ ಅಂಟಿಸಿದ್ದಾರೆ.

ಕುಟುಂಬಗಳನ್ನು ಒಗ್ಗೂಡಿಸಲು ಎಷ್ಟು ಸಮಯ ಬೇಕಾಗುತ್ತದೆ ಎಂಬ ಬಗ್ಗೆ ಹೇಳಿಕೆಯಲ್ಲಿ ವಿವರಗಳಿಲ್ಲ.

ಹೆತ್ತವರನ್ನು ಸೇರಿದ 522 ಮಕ್ಕಳು

ಅಕ್ರಮ ವಲಸಿಗರಿಂದ ಬೇರ್ಪಡಿಸಲಾದ 522 ಮಕ್ಕಳನ್ನು ಅವರ ಹೆತ್ತವರೊಂದಿಗೆ ಸೇರಿಸಲಾಗಿದೆ ಎಂದು ಅಮೆರಿಕದ ಆಂತರಿಕ ಭದ್ರತಾ ಇಲಾಖೆ ಶನಿವಾರ ರಾತ್ರಿ ತಿಳಿಸಿದೆ.

ಮುಂದಿನ 24 ಗಂಟೆಗಳಲ್ಲಿ ಇನ್ನೂ 16 ಮಕ್ಕಳನ್ನು ಅವರ ಹೆತ್ತವರ ವಶಕ್ಕೆ ಒಪ್ಪಿಸಲಾಗುವುದು ಎಂದು ಅದು ಹೇಳಿದೆ.

ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಸಂಸ್ಥೆಗಳಲ್ಲಿ ಹೆತ್ತವರಿಂದ ಬೇರ್ಪಟ್ಟ 2,053 ಅಪ್ರಾಪ್ತ ಮಕ್ಕಳು ಇದ್ದಾರೆ ಎಂದು ಆಂತರಿಕ ಭದ್ರತಾ ಇಲಾಖೆ ತಿಳಿಸಿದೆ.

ಅವರನ್ನು ಮಾದರಿ ಮರುಸೇರ್ಪಡೆ ಪ್ರಕ್ರಿಯೆ ಮೂಲಕ ಹೆತ್ತವರು ಅಥವಾ ಪೋಷಕರ ಜೊತೆ ಸೇರಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News