ಸಿರಿಯ ಬಂಡುಕೋರ ನಿಯಂತ್ರಣದ ನಗರಗಳ ಮೇಲೆ ರಶ್ಯ ಬಾಂಬ್

Update: 2018-06-24 18:06 GMT

ಬೈರೂತ್, ಜೂ. 24: ದಕ್ಷಿಣ ಸಿರಿಯದ ಬಂಡುಕೋರ ನಿಯಂತ್ರಣದ ಪ್ರದೇಶಗಳ ಮೇಲೆ ರಶ್ಯ ಶನಿವಾರ ರಾತ್ರಿ ಬಾಂಬ್ ದಾಳಿಗಳನ್ನು ನಡೆಸಿದೆ. ಅದೇ ವೇಳೆ, ಸಿರಿಯ ಸರಕಾರಿ ಸೇನೆಯು ಭೂದಾಳಿ ನಡೆಸಲು ಸಿದ್ಧತೆಗಳನ್ನು ನಡೆಸುತ್ತಿದೆ.

ರಾಜಧಾನಿ ಡಮಾಸ್ಕಸನ್ನು ಬಂಡುಕೋರರಿಂದ ಮುಕ್ತಗೊಳಿಸಿದ ಬಳಿಕ, ಸಿರಿಯ ಅಧ್ಯಕ್ಷ ಬಶರ್ ಅಲ್ ಅಸಾದ್ ದಕ್ಷಿಣದ ಪ್ರಾಂತಗಳಾದ ದರಾ ಮತ್ತು ಸ್ವೈದಗಳನ್ನು ವಶಪಡಿಸಿಕೊಳ್ಳಲು ಹೊರಟಿದ್ದಾರೆ. ಈ ಪ್ರಾಂತಗಳ ಹೆಚ್ಚಿನ ಭಾಗಗಳು ಬಂಡುಕೋರರ ನಿಯಂತ್ರಣದಲ್ಲಿವೆ.

ಹಲವು ವಾರಗಳಿಂದ ಬಂಡುಕೋರ ನಿಯಂತ್ರಣದ ಈ ಪ್ರದೇಶಗಳಿಗೆ ಹೆಚ್ಚುವರಿ ಸೇನೆಯನ್ನು ಕಳುಹಿಸಲಾಗುತ್ತಿದೆ. ಬಂಡುಕೋರರು ಶರಣಾಗುವಂತೆ ಸೂಚಿಸಿ ಕರಪತ್ರಗಳನ್ನು ಉದುರಿಸಲಾಗುತ್ತಿದೆ. ಅದೇ ವೇಳೆ, ಇತ್ತೀಚಿನ ದಿನಗಳಲ್ಲಿ ಬಾಂಬ್ ದಾಳಿಗಳನ್ನು ಹೆಚ್ಚಿಸಲಾಗುತ್ತಿದೆ.

ಶನಿವಾರ ತಡ ರಾತ್ರಿ ಸಿರಿಯದ ಮಿತ್ರದೇಶ ರಶ್ಯವು ದರಾ ಪ್ರಾಂತದಲ್ಲಿರುವ ಬಂಡುಕೋರ ನಿಯಂತ್ರಣದ ಪಟ್ಟಣಗಳ ಮೇಲೆ ಬಾಂಬ್ ದಾಳಿಗಳನ್ನು ನಡೆಸಿದೆ ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ತಿಳಿಸಿದೆ.

2017ರ ಬೇಸಿಗೆಯಲ್ಲಿ ರಶ್ಯ ಬಂಡುಕೋರರ ಮೇಲೆ ಬಾಂಬ್ ದಾಳಿಗಳನ್ನು ನಡೆಸಿತ್ತು. ಆ ಬಳಿಕ ಅದು ದಾಳಿ ನಡೆಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News