ರಾಜಕೀಯ ಹಸ್ತಕ್ಷೇಪಗಳಿಂದ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿರುವ ಉನ್ನತ ಸಂಸ್ಥೆಗಳು

Update: 2018-06-25 04:39 GMT

ಭಾರತದ ಉನ್ನತ ಸಂಸ್ಥೆಗಳ ವಿಶ್ವಸನೀಯತೆ ಕುಸಿಯತೊಡಗಿದೆಯೇ? ಇತ್ತೀಚಿನ ಹಲವು ಬೆಳವಣಿಗೆಗಳು ಇಂತಹದೊಂದು ಪ್ರಶ್ನೆಯನ್ನು ಹುಟ್ಟು ಹಾಕಿವೆ. ಉನ್ನತ ಸಂಸ್ಥೆಗಳ ಮೇಲೆ ಸರಕಾರ ನಡೆಸುತ್ತಿರುವ ಹಸ್ತಕ್ಷೇಪಗಳು ಹಂತಹಂತವಾಗಿ ಎಲ್ಲ ವಿಭಾಗಗಳ ಘನತೆಗಳನ್ನು ಪಾತಾಳಕ್ಕೆ ನೂಕುತ್ತಿದೆವೆ. ಮೋದಿ ಸರಕಾರ ತನ್ನ ರಾಜಕೀಯ ಉದ್ದೇಶಕ್ಕಾಗಿ ಸೇನೆಯನ್ನು ಬಳಸಿಕೊಂಡಾಗಲೇ ಈ ಬಗ್ಗೆ ತೀವ್ರ ಚರ್ಚೆ ನಡೆದಿತ್ತು. ಒಂದು ನಿರ್ದಿಷ್ಟ ರಾಜಕೀಯ ಪಕ್ಷ ಸೇನೆಯನ್ನು ತನ್ನ ರಾಜಕೀಯ ಲಾಭಕ್ಕಾಗಿ ದುರುಪಯೋಗ ಪಡಿಸಿಕೊಳ್ಳುವುದು, ಸೇನೆಯ ಕಾರ್ಯಾಚರಣೆಗಳಲ್ಲಿ ಮೂಗು ತೂರಿಸಿ ಸೇನಾಧಿಕಾರಿಗಳ ಮೂಲಕ ಸರಕಾರದ ಪರವಾಗಿ ಹೇಳಿಕೆಗಳನ್ನು ಕೊಡಿಸುವುದು ಭಾರತದ ಪಾಲಿಗೆ ತೀರಾ ಹೊಸತು. ಇದೇ ಸಂದರ್ಭದಲ್ಲಿ ನ್ಯಾಯಾಂಗದಲ್ಲಿ ಸರಕಾರ ನಡೆಸಿದ ಹಸ್ತಕ್ಷೇಪಗಳು ಅಂತಿಮವಾಗಿ ಮುಖ್ಯ ನ್ಯಾಯಮೂರ್ತಿಯ ವಿರುದ್ಧ ದೋಷಾರೋಪಣ ಗೊತ್ತುವಳಿ ನಡೆಸುವಷ್ಟರ ಮಟ್ಟಿಗೆ ಮುಂದುವರಿಯಿತು.

ನ್ಯಾಯ ವ್ಯವಸ್ಥೆಯೇ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡರೆ ಪ್ರಜಾಸತ್ತೆಯನ್ನು ಕಾಯುವವರಾದರೂ ಯಾರು? ದೋಷಾರೋಪಣ ಗೊತ್ತುವಳಿಯನ್ನು ಉಪರಾಷ್ಟ್ರಪತಿಯವರು ತಿರಸ್ಕರಿಸಿದ ಕ್ರಮವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾದಾಗಲೂ ಸುಪ್ರೀಂಕೋರ್ಟ್ ತನ್ನ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲಿಲ್ಲ. ಉಪರಾಷ್ಟ್ರಪತಿಯ ಕ್ರಮದ ಕಾನೂನುಸಿಂಧುತ್ವವನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಸಲ್ಲಿಸಲಾದ ಅರ್ಜಿಯು ವಿಚಾರಣೆಗೆ ಬಂದ ಸಂದರ್ಭದಲ್ಲಿ ಅರ್ಜಿದಾರರು, ಇದು ಮುಖ್ಯ ನ್ಯಾಯಾಧೀಶರಿಗೆ ನೇರವಾಗಿ ಸಂಬಂಧಿಸಿದ ಪ್ರಕರಣವಾಗಿರುವುದರಿಂದ ಅದರ ಆಲಿಕೆಯನ್ನು ನಡೆಸುವ ನ್ಯಾಯಪೀಠದ ನ್ಯಾಯಾಧೀಶರುಗಳನ್ನು ಸಿಜೆಐ ಅವರೇ ಆಯ್ಕೆ ಮಾಡಬಾರದೆಂದು ವಾದಿಸಿದ್ದರು. ಆದರೆ ನ್ಯಾಯಾಲಯವು ಈ ಬಗ್ಗೆ ವಿವರಣೆ ನೀಡಲು ನಿರಾಕರಿಸಿತ್ತು. ‘ಒಬ್ಬಾತ ತನ್ನದೇ ಪ್ರಕರಣವನ್ನು ನಿರ್ಧರಿಸಕೂಡದು’ ಎಂಬ ನ್ಯಾಯದಾನದ ಸಿದ್ಧಾಂತವನ್ನು ಸ್ವತಃ ನ್ಯಾಯಾಲಯವೇ ಅನುಸರಿಸಲು ಸಿದ್ಧವಿರಲಿಲ್ಲ. ಹೀಗಾಗಿ, ಅರ್ಜಿಯನ್ನು ವಾಪಸ್ ಪಡೆಯಲಾಗಿತ್ತು.

ಸಂವಿಧಾನವನ್ನು ನ್ಯಾಯಯುತವಾಗಿ ಜಾರಿಗೆ ತರುವ ಸರ್ವೋಚ್ಚ ನ್ಯಾಯಾಲಯದ ಸಾಮರ್ಥ್ಯದ ಮೇಲೆ ಇದು ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದ್ದು, ದೇಶದ ಪ್ರಜಾಪ್ರಭುತ್ವಕ್ಕೆ ಹಾನಿಯುಂಟಾಗಿದೆ. ಇದರಿಂದಾಗಿ ನ್ಯಾಯಾಂಗದ ಮೇಲೆ ವಿಶ್ವಾಸವನ್ನು ಮೂಡಿಸುವಲ್ಲಿ ಸುಪ್ರೀಂಕೋರ್ಟ್ ವಿಫಲವಾಗಿದೆ ಮಾತ್ರವಲ್ಲ, ಭಾರತದ ಸಂಸತ್ ಕೂಡಾ ತುರ್ತು ಸಾರ್ವಜನಿಕ ಅವಶ್ಯಕತೆಯ ವಿಷಯಗಳ ಬಗ್ಗೆ ಚರ್ಚಿಸಲು, ಸಂವಾದನಡೆಸಲು ಹಾಗೂ ಅವುಗಳಿಗೆ ಸಂಬಂಧಿಸಿದ ಶಾಸನಗಳನ್ನು ಜಾರಿಗೆ ತರುವಲ್ಲಿ ವಿಫಲವಾಗಿದೆ. ಉದಾಹರಣೆಗೆ, ಇತ್ತೀಚಿನ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಲೋಕಸಭೆಯು 28 ದಿನಗಳಲ್ಲಿ ಕೇವಲ 33.6 ತಾಸುಗಳ ಕಾಲ ಮಾತ್ರ ಕಾರ್ಯನಿರ್ವಹಿಸಿದ್ದು, 14 ನಿಮಿಷಗಳ ಅವಧಿಯಲ್ಲಿ ಎರಡು ವಿಧೇಯಕಗಳನ್ನು ಮಾತ್ರ ಅದು ಅಂಗೀಕರಿಸಿತ್ತು. 2018-19ನೇ ಸಾಲಿನ ಬಜೆಟನ್ನು ಅದು ಯಾವುದೇ ಚರ್ಚೆಯಿಲ್ಲದೆ ಅಂಗೀಕರಿಸಿತ್ತು ಹಾಗೂ ಸರಕಾರದ ವಿರುದ್ಧ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯವನ್ನು ಮಂಡಿಸುವುದಕ್ಕೆ ಸ್ಪೀಕರ್ ಅನುಮತಿ ನಿರಾಕರಿಸಿದ್ದರು.

ತನ್ನ ಸಂಪುಟದ ನೆರವಿನೊಂದಿಗೆ ಸಂಸತ್ ಕಲಾಪಗಳನ್ನು ಮುನ್ನಡೆಸುವುದು ಪ್ರಧಾನಿಯ ಕರ್ತವ್ಯವಾಗಿದೆ. ಆದರೆ ಅವರು ಸಂಸತ್ ಕಲಾಪಗಳಿಗೆ ಪ್ರತಿಪಕ್ಷಗಳು ತಡೆಯೊಡ್ಡುತ್ತಿರುವುದನ್ನು ವಿರೋಧಿಸಿ, ತನ್ನ ಸಂಪುಟ ಸಹೋದ್ಯೋಗಿಗಳೊಂದಿಗೆ ಒಂದು ದಿನದ ನಿರಶನ ನಡೆಸಿದ್ದರು. ಒಂದು ರೀತಿಯಲ್ಲಿ ತನ್ನ ವಿರುದ್ಧವೇ ತಾನು ಪ್ರತಿಭಟನೆ ನಡೆಸಿದಂತೆ. ತನ್ನ ಸರ್ವಾಧಿಕಾರಿ ನಿಲುವುಗಳನ್ನು ಪ್ರತಿಭಟಿಸಿದ ವಿರೋಧ ಪಕ್ಷಗಳ ಬಾಯಿ ಮುಚ್ಚಿಸಲು ಮಾಡಿದ ಪ್ರಹಸನ ಇದಾಗಿತ್ತು. ಇನ್ನು ಭಾರತೀಯ ರಿಸರ್ವ್ ಬ್ಯಾಂಕ್‌ನ ಸ್ಥಿತಿಯನ್ನು ತೆಗೆದುಕೊಳ್ಳೋಣ. ಇಂದು ಬಿಜೆಪಿಯ ಚಿಂತಕರೇ, ದೇಶದಲ್ಲಿ ಅರ್ಥ ಸಚಿವರೇ ಇಲ್ಲದ ಸನ್ನಿವೇಶ ನಿರ್ಮಾಣವಾಗಿದೆ ಎಂದು ಆರೋಪಿಸುತ್ತಿದ್ದಾರೆ.

ಈ ದೇಶದ ಆರ್ಥಿಕ ನೀತಿಯನ್ನು ರೂಪಿಸುತ್ತಿರುವವರು ಯಾರು ಎನ್ನುವುದೇ ಸದ್ಯದ ಗೊಂದಲವಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ದೇಶದ ಆರ್ಥಿಕ ನೀತಿಯನ್ನು ರೂಪಿಸುತ್ತದೆ. ಆದರೆ ನಗದು ಅಮಾನ್ಯತೆಯ ಹಿಂದಿನ ವೈಚಾರಿಕತೆಯ ಬಗ್ಗೆ ಸ್ವಲ್ಪವೂ ಯೋಚಿಸದೆ ಅದು, 500 ರೂ. ಮತ್ತು 1 ಸಾವಿರ ರೂ.ಮುಖಬೆಲೆಯ ನೋಟುಗಳನ್ನು ನಿಷೇಧಿಸುವ ಕೇಂದ್ರದ ನಿರ್ಧಾರಕ್ಕೆ ಕೇವಲ ಒಂದೇ ದಿನದಲ್ಲಿ ಅನುಮೋದನೆ ನೀಡಿತು. ತರುವಾಯ, ಶೇ.99ರಷ್ಟು ಕರೆನ್ಸಿ ನೋಟುಗಳು ವಾಪಸ್ ಬಂದಿದ್ದವು ಹಾಗೂ ಸುಮಾರು ನೂರು ಮಂದಿ ನೋಟು ನಿಷೇಧದ ಹಿನ್ನೆಲೆಯ ವಿವಿಧ ಘಟನೆಗಳಲ್ಲಿ ಸಾವನ್ನಪ್ಪಿದ್ದರು. ನಗದು ಅಮಾನ್ಯತೆಯು ನಗದು ಅವಲಂಭಿತ ವ್ಯವಸ್ಥೆಯಲ್ಲಿ ಕರೆನ್ಸಿ ನೋಟಿನ ಅಲಭ್ಯತೆಯ ಕಾರಣದಿಂದಾಗಿ ಆರ್ಥಿಕತೆಯು ಕುಂಠಿತಗೊಂಡಿದ್ದರಿಂದ ದೇಶಕ್ಕೆ ಅಗಾಧವಾದ ನಷ್ಟವಾಗಿದೆ.

ಪ್ರಜಾಪ್ರಭುತ್ವವು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕಾದರೆ, ಚುನಾವಣಾ ಆಯೋಗವು ಯಾವುದೇ ರೀತಿ  ು ನಿಂದನೆ, ಆರೋಪಗಳಿಗೆ ಅತೀತವಾಗಿ ಕಾರ್ಯನಿರ್ವಹಿಸಬೇಕಾಗಿದೆ. ಆದಾಗ್ಯೂ, ಗುಜರಾತ್ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸಂಪ್ರದಾಯಕ್ಕೆ ವಿರುದ್ಧವಾಗಿ ಚುನಾವಣಾ ದಿನಾಂಕದ ಪ್ರಕಟನೆಯನ್ನು ಮುಂದೂಡುವ ಮೂಲಕ ಹಾಗೂ ಎಎಪಿ ಶಾಸಕರನ್ನು, ಅವರ ಅಹವಾಲನ್ನು ಆಲಿಸದೆಯೇ ವಿಧಾನಸಭಾ ಸದಸ್ಯತ್ವದಿಂದ ಅನರ್ಹಗೊಳಿಸುವ ಮೂಲಕ ತನ್ನ ವರ್ಚಸ್ಸಿಗೆ ಮಸಿ ಬಳಿದುಕೊಂಡಿದೆ. ಎಎಪಿ ಶಾಸಕರ ಅನರ್ಹತೆ ಪ್ರಕರಣದಲ್ಲಿ ಚುನಾವಣಾ ಆಯೋಗವನ್ನು ದಿಲ್ಲಿ ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತಲ್ಲದೆ, ಅದರ ನಿರ್ಧಾರವನ್ನು ರದ್ದುಪಡಿಸಿತ್ತು.

ಸ್ವತಂತ್ರ ಅಧಿಕಾರದ ಸಂಸ್ಥೆಗಳ ಅದಕ್ಷತೆಯು ಉನ್ನತಮಟ್ಟದಿಂದ ಹಿಡಿದು ಕೆಳಮಟ್ಟದವರೆಗೂ ಗೊಂದಲಮಯ ವಾತಾವರಣವನ್ನು ಸೃಷ್ಟಿಸಿದೆ. ಉದಾಹರಣೆಗೆ, ತಮಿಳುನಾಡಿನ 18 ಶಾಸಕರ ಅನರ್ಹತೆ ಪ್ರಕರಣವನ್ನು ಚೆನ್ನೈ ಹೈಕೋರ್ಟ್‌ಗೆ ಐದು ತಿಂಗಳುಗಳವರೆಗೂ ನಿರ್ಧರಿಸಲು ಸಾಧ್ಯವಾಗದಿದ್ದುದ್ದರಿಂದ, ಅಷ್ಟು ತಿಂಗಳುಗಳವರೆಗೆ ರಾಜ್ಯ ಸರಕಾರವು ಅಕ್ರಮವಾಗಿ ಕಾರ್ಯನಿರ್ವಹಿಸುವಂತಾಗಿತ್ತು. ಅಂತಿಮವಾಗಿ ಚೆನ್ನೈ ಹೈಕೋರ್ಟ್‌ನ ನ್ಯಾಯಪೀಠವು ವಿಭಜಿತ ತೀರ್ಪು ನೀಡಿದ್ದರಿಂದ ಈ ಪ್ರಕರಣವು ಅನಿರ್ದಿಷ್ಟಾವಧಿಯವರೆಗೆ ನನೆಗುದಿಯಲ್ಲಿ ಬಿದ್ದಿದೆ. ಪ್ರಜಾತಾಂತ್ರಿಕ ಸಮಾಜದಲ್ಲಿ ನ್ಯಾಯಾಂಗ ಸಂಸ್ಥೆಗಳು ನ್ಯಾಯಕ್ಕಾಗಿ ಮೊರೆಹೋಗುವ ಅಂತಿಮ ತಾಣವಾಗಿವೆ. ತುರ್ತು ಪರಿಸ್ಥಿತಿಯ ಸಂದರ್ಭ ಹೊರತು ಪಡಿಸಿದರೆ ನ್ಯಾಯಾಂಗವೂ ಸೇರಿದಂತೆ ಉನ್ನತ ಸಂಸ್ಥೆಗಳು ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿರುವುದು ಇದೇ ಮೊದಲಾಗಿದೆ. ಅಂದರೆ ಭಾರತ ಅಘೋಷಿತ ತುರ್ತುಪರಿಸ್ಥಿತಿಯನ್ನು ಎದುರಿಸುತ್ತಿದೆ ಎನ್ನುವುದನ್ನು ಈ ಬೆಳವಣಿಗೆಗಳು ಹೇಳುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News