ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾ.ಚೆಲಮೇಶ್ವರರನ್ನು ತರಾಟೆಗೆತ್ತಿಕೊಂಡ ಭಾರತೀಯ ವಕೀಲರ ಮಂಡಳಿ

Update: 2018-06-25 17:55 GMT

ಹೊಸದಿಲ್ಲಿ,ಜೂ.25: ಶುಕ್ರವಾರವಷ್ಟೇ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಹುದ್ದೆಯಿಂದ ನಿವೃತ್ತರಾಗಿರುವ ಜೆ.ಚೆಲಮೇಶ್ವರ ಅವರನ್ನು ಭಾರತೀಯ ವಕೀಲರ ಮಂಡಳಿ(ಬಿಸಿಐ)ಯು ಸೋಮವಾರ ತೀವ್ರ ತರಾಟೆಗೆತ್ತಿಕೊಂಡಿದೆ. ಮಾಧ್ಯಮಗಳಿಗೆ ನೀಡಿರುವ ಸಂದರ್ಶನಗಳಿಗಾಗಿ ಅವರನ್ನು ಕಟುವಾಗಿ ಟೀಕಿಸಿರುವ ಬಿಸಿಐ, ಅವರು ಸರ್ವೋಚ್ಚ ನ್ಯಾಯಾಲಯದ ಘನತೆಗೆ ಹಾನಿಯನ್ನುಂಟು ಮಾಡಿದ್ದನ್ನು ಖಂಡಿಸಿದೆ.

ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಲ್ಲಿ ಆತ್ಮಸಂಯಮ ಕಳೆದು ಹೋಗುತ್ತಿರುವಂತಿದೆ. ಯಾವುದೇ ಹೇಳಿಕೆಗಳನ್ನು ನೀಡುವ ಮುನ್ನ ಅವು ಉಂಟು ಮಾಡುವ ಪರಿಣಾಮಗಳ ಬಗ್ಗೆ ಅವರು ಯೋಚಿಸಬೇಕಿದೆ. ನ್ಯಾ.ಚೆಲಮೇಶ್ವರ ಅವರು ತನ್ನ ನಿವೃತ್ತಿಯ ಬೆನ್ನಲ್ಲೇ ಮಾಧ್ಯಮಗಳಿಗೆ ವಿವಾದಾತ್ಮಕ ಮತ್ತು ಅಸಂಗತ ಹೇಳಿಕೆಗಳನ್ನು ನೀಡಿರುವ ರೀತಿಯನ್ನು ಅಂತಹ ದೊಡ್ಡ ಹುದ್ದೆಯಲ್ಲಿದ್ದ ವ್ಯಕ್ತಿಯಿಂದ ಖಂಡಿತ ನಿರೀಕ್ಷಿಸಿರಲಿಲ್ಲ. ವಾಸ್ತವದಲ್ಲಿ ಅವರ ನಡವಳಿಕೆಯು ಅವರು ಹೊಂದಿದ್ದ ಹುದ್ದೆಯ ಘನತೆಗೆ ವಿರುದ್ಧವಾಗಿದೆ. ಇಂತಹ ಹೇಳಿಕೆಗಳು ಮತ್ತು ಟೀಕೆಗಳನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ವಕೀಲರು ಸೇರಿದಂತೆ ದೇಶದ ಯಾರೇ ಆದರೂ ಇಂತಹ ಹೇಳಿಕೆಗಳನ್ನು ಸಹಿಸಿಕೊಳ್ಳಲು,ಒಪ್ಪಿಕೊಳ್ಳಲು ಅಥವಾ ಅರಗಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಬಿಸಿಐ ಮಾಧ್ಯಮಗಳಿಗೆ ಬಿಡುಗಡೆಗೊಳಿಸಿರುವ ಹೇಳಿಕೆಯಲ್ಲಿ ತಿಳಿಸಿದೆ.

ನ್ಯಾ.ಚೆಲಮೇಶ್ವರ ಅವರು ‘ಬೆಂಚ್ ಫಿಕ್ಸಿಂಗ್’ನಂತಹ ವಿವಾದಾತ್ಮಕ ಶಬ್ದಗಳನ್ನು ತನ್ನ ಹೇಳಿಕೆಗಳಲ್ಲಿ ಬಳಸಿದ್ದಾರೆ. ಅಂದರೆ ಸರ್ವೋಚ್ಚ ನ್ಯಾಯಾಲಯದ ಕೆಲವು ವಕೀಲರು ತಮ್ಮ ಪ್ರಕರಣಗಳು ನ್ಯಾ.ಚೆಲಮೇಶ್ವರ ಮತ್ತು ತಮ್ಮ ಆಯ್ಕೆಯ ಇತರ ನ್ಯಾಯಾಧೀಶರ ಮುಂದೆ ವಿಚಾರಣೆಗೆ ಬರುವಂತೆ ಮಾಡಲು ಪ್ರಯತ್ನಿಸಿದ್ದರೆ ಅದು ಕೂಡ ಬೆಂಚ್ ಫಿಕ್ಸಿಂಗ್ ಆಗುತ್ತದೆ. ಇಂತಹ ಘಟನೆಗಳು 2-3 ಬಾರಿ ನಡೆದಿವೆ. ಆಗ ನ್ಯಾ.ಚೆಲಮೇಶ್ವರ ಅವರು ಇದಕ್ಕೆ ಆಕ್ಷೇಪವೆತ್ತಬೇಕಾಗಿತ್ತು. ಆದರೆ ಅವರು ಹಾಗೆ ಮಾಡಿರಲಿಲ್ಲ. ವಾಸ್ತವದಲ್ಲಿ ಅವರು ಅಂತಹ ಕೆಲವು ಪ್ರಕರಣಗಳ ವಿಚಾರಣೆಗೆ ಒಪ್ಪಿಕೊಂಡಿದ್ದರು ಮತ್ತು ಇದು ಕೆಟ್ಟ ಪರಿಪಾಠಕ್ಕೆ ನಾಂದಿ ಹಾಡಿತ್ತು. ಇಂತಹ ಅಕ್ರಮಗಳನ್ನು ನಿವಾರಿಸುವಂತೆ ಮುಖ್ಯ ನ್ಯಾಯಮೂರ್ತಿಗಳನ್ನು ಇಥವಾ ಇತರ ನ್ಯಾಯಮೂರ್ತಿಗಳನ್ನು ಕೋರಿದ್ದರೆ ಯಾವುದೇ ಹಾನಿಯಾಗುತ್ತಿರಲಿಲ್ಲ ಎಂದು ಬಿಸಿಐ ತಿಳಿಸಿದೆ.

 ನ್ಯಾಯಾಧೀಶರು ರಾಜಕಾರಣಿಗಳನ್ನು ಭೇಟಿಯಾಗುವುದಕ್ಕೆ ಸಂಬಂಧಿಸಿದಂತೆ ಯಾವುದೇ ಹೇಳಿಕೆಗಳನ್ನು ನೀಡುವ ಮುನ್ನ ನ್ಯಾ.ಚೆಲಮೇಶ್ವರ ಅವರು ಆತ್ಮಪರೀಕ್ಷೆ ಮಾಡಿಕೊಳ್ಳಬೇಕಿತ್ತು ಎಂದಿರುವ ಬಿಸಿಐ,ವಾಸ್ತವದಲ್ಲಿ ಅವರು ತನ್ನ ಸುದ್ದಿಗೋಷ್ಠಿಯ ಬೆನ್ನಲ್ಲೇ ಸಿಪಿಐ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಡಿ.ರಾಜು ಅವರನ್ನು ಭೇಟಿಯಾಗಿದ್ದರು. ಇದು ಅವರ ವಿವಾದಾತ್ಮಕ ಹೇಳಿಕೆಗಳ ಹಿಂದಿನ ನಿಗೂಢತೆ ಮತ್ತು ಉದ್ದೇಶವನ್ನು ಬಯಲುಗೊಳಿಸಿದೆ ಎಂದಿದೆ.

ಕಳೆದ ಜನವರಿಯಿಂದ ಸರ್ವೋಚ್ಚ ನ್ಯಾಯಾಲಯದ ಘಡತೆಗೆ ಆಗಿರುವ ಹಾನಿಯು ಸರಿಯಾಗಲು ತುಂಬ ಸಮಯ ಬೇಕಾಗುತ್ತದೆ. ಆದರೆ ದೇಶದ ವಕೀಲರು,ವಿಶೇಷವಾಗಿ ಯುವವಕೀಲರು ಇಂತಹ ಹೇಳಿಕೆಗಳನ್ನು ಬಯಸುವುದಿಲ್ಲ ಮತ್ತು ಈ ದೇಶದ ಅತ್ಯುನ್ನತ ನ್ಯಾಯಾಲಯದ ಘನತೆಯನ್ನು ಎತ್ತಿ ಹಿಡಿಯಲು ತಮ್ಮ ಅತ್ಯುತ್ತಮ ಪ್ರಯತ್ನಗಳನ್ನು ಮಾಡುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ನಮಗಿದೆ ಎಂದು ಬಿಸಿಐ ಹೇಳಿಕೆಯಲ್ಲಿ ತಿಳಿಸಿದೆ.

ಕೆಲವು ರಾಜಕಾರಣಿಗಳು ಮಾತ್ರವಲ್ಲ,ಕೆಲವು ವಕೀಲರು ಮತ್ತು ವಾಸ್ತವದಲ್ಲಿ ಕೆಲವು ನ್ಯಾಯಾಧೀಶರು ಕೂಡ ತಮ್ಮ ಸ್ವಾರ್ಥ ಮತ್ತು ಪಟ್ಟಭದ್ರ ಹಿತಾಸಕ್ತಿಗಳಿಗಾಗಿ ಸರ್ವೋಚ್ಚ ನ್ಯಾಯಾಲಯವನ್ನು ದುರ್ಬಳಕೆ ಮಾಡಿಕೊಳ್ಳಲು ಮತ್ತು ಅದಕ್ಕೆ ಕಳಂಕ ಹಚ್ಚಲು ಪ್ರಯತ್ನಿಸಿದ್ದರಾದರೂ ದಯನೀಯವಾಗಿ ವಿಫಲರಾಗಿದ್ದಾರೆ. ಅಂತಹವರು ತಮ ಪ್ರತಿ ಹೆಜ್ಜೆಯಲ್ಲಿಯೂ ಹಿನ್ನಡೆ ಕಂಡಿದ್ದಾರೆ. ಈ ನೆಲದ ನ್ಯಾಯಾಂಗವು ಅತ್ಯಂತ ಪವಿತ್ರ ಮತ್ತು ಅತ್ಯಂತ ಶಕ್ತಿಶಾಲಿಯಾಗಿದ್ದು,ಪ್ರತಿಯೊಬ್ಬ ಪ್ರಜೆಯೂ ಅದರಲ್ಲಿ ಸಂಪೂರ್ಣ ವಿಶ್ವಾಸವನ್ನು ಹೊಂದಿದ್ದಾನೆ ಎಂದು ಬಿಸಿಐ ಅಧ್ಯಕ್ಷ ಮನನ್ ಕುಮಾರ ಮಿಶ್ರಾ ಮತ್ತು ಇತರ ಪದಾಧಿಕಾರಿಗಳು ಹೊರಡಿಸಿರುವ ಹೇಳಿಕೆಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News