ಮೋದಿ ಸರಕಾರದ ಆಡಳಿತದಲ್ಲಿ 70 ಸಾವಿರ ಕೋಟಿ ರೂ. ಬ್ಯಾಂಕ್ ವಂಚನೆ: ಕಾಂಗ್ರೆಸ್ ಆರೋಪ

Update: 2018-06-26 13:45 GMT

ಹೊಸದಿಲ್ಲಿ, ಜೂ.26: ದೇಶದ ಅರ್ಥವ್ಯವಸ್ಥೆಯ ಅಸಮರ್ಪಕ ನಿರ್ವಹಣೆಯಿಂದಾಗಿ "ಆರ್ಥಿಕ ಅರಾಜಕತೆ''ಯತ್ತ ಕೇಂದ್ರದ ನರೇಂದ್ರ ಮೋದಿ ಸರಕಾರ  ದೇಶವನ್ನು ದೂಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಸರಕಾರದ ಈ ನೀತಿಯಿಂದಾಗಿ ದೇಶದಲ್ಲಿ 70,000 ಕೋಟಿ ರೂ. ಮೊತ್ತದ ಬ್ಯಾಂಕ್ ವಂಚನೆ  ನಡೆದು ಇದೀಗ ತನ್ನ ವೈಫಲ್ಯಗಳನ್ನು ಮರೆಮಾಚಲು ಮುಳುಗುತ್ತಿರುವ ಐಡಿಬಿಐ ಬ್ಯಾಂಕ್ ಅನ್ನು ಖರೀದಿಸಲು ಎಲ್‍ಐಸಿ ಮೇಲೆ ಸರಕಾರ ಒತ್ತಡ ಹೇರುತ್ತಿದೆ ಎಂದು ಕಾಂಗ್ರೆಸ್  ಆಪಾದಿಸಿದೆ.

ಐಡಿಬಿಐ ಬ್ಯಾಂಕ್ ನ ನಾಲ್ಕನೇ ತ್ರೈಮಾಸಿಕ ನಷ್ಟ ಪ್ರಮಾಣ 5,663 ಕೋಟಿ ರೂ.ಗಳಷ್ಟಾಗಿದ್ದು, ಬ್ಯಾಂಕಿನ ಅನುತ್ಪಾದಕ ಸಾಲದ ಪ್ರಮಾಣ ಶೇ 28ರಷ್ಟಿದೆ. ಇದೀಗ ಇಂತಹ ಬ್ಯಾಂಕನ್ನು ಖರೀದಿಸಲು ಎಲ್‍ಐಸಿ ಮೇಲೆ ಒತ್ತಡ ಹೇರಿ 38 ಕೋಟಿ ಎಲ್‍ಐಸಿ ಪಾಲಿಸಿದಾರರ ಹಣವನ್ನು ಅಪಾಯಕ್ಕೊಡ್ಡಿದೆ. ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದ್ದಾರೆ. 'ಮೋದಿನೋಮಿಕ್ಸ್' ಹಾಗೂ 'ಜೇಟ್ಲೀನಾಮಿಕ್ಸ್' ವೈಫಲ್ಯಗಳನ್ನು ಮುಚ್ಚಲು  ಈ ರೀತಿ ಮಾಡಲಾಗುತ್ತಿದೆ ಎಂದು ಅವರು ದೂರಿದ್ದಾರೆ.

ಫರೀದಾಬಾದ್ ಮೂಲದ ಎಸ್‍ಆರ್ ಎಸ್ ಗ್ರೂಪ್ ನೂರಾರು ಶೆಲ್ ಕಂಪೆನಿಗಳನ್ನು ಸ್ಥಾಪಿಸಿ 17 ಬ್ಯಾಂಕುಗಳಿಗೆ ವಂಚನೆಗೈದಿದೆ. ಆದರೂ ರಿಸರ್ವ್ ಬ್ಯಾಂಕ್ ಸಹಿತ ಎಲ್ಲಾ ತನಿಖಾ ಏಜನ್ಸಿಗಳೂ ಈ ಬಗ್ಗೆ ಹಲವು ದೂರುಗಳಿದ್ದರೂ ಮೌನವಾಗಿವೆ ಎಂದು ಅವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News