ಸುಷ್ಮಾ ಸ್ವರಾಜ್ ಟ್ವೀಟ್ ಬಳಿಕ ಲಭಿಸಿದ್ದ ಪಾಸ್ ಪೋರ್ಟ್ ರದ್ದಾಗುವ ಭೀತಿಯಲ್ಲಿ ಅಂತರ್-ಧರ್ಮೀಯ ದಂಪತಿ

Update: 2018-06-27 08:36 GMT

ಲಕ್ನೋ,  ಜೂ.27: ಇಲ್ಲಿನ ಪಾಸ್ ಪೋರ್ಟ್ ಅಧಿಕಾರಿ ತಮಗೆ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡಿ ಮರುದಿನವೇ ತಮ್ಮ ಪಾಸ್ ಪೋರ್ಟ್ ಪಡೆದಿದ್ದ ಅಂತರ್-ಧರ್ಮೀಯ ದಂಪತಿಯ ಪ್ರಕರಣ ಇದೀಗ ಇನ್ನಷ್ಟು ಗೋಜಲಾಗಿದೆ.

ಮಂಗಳವಾರ ಲಕ್ನೋದ ಪೊಲೀಸರು ದಂಪತಿ ವಿರುದ್ಧ ವ್ಯತಿರಿಕ್ತ ವರದಿ ಸಲ್ಲಿಸಿದ್ದಾರೆ. ದಂಪತಿ ತಮ್ಮ ಪಾಸ್ ಪೋರ್ಟ್ ಅರ್ಜಿಯಲ್ಲಿ ತಪ್ಪು ಡಿಕ್ಲರೇಶನ್ ನೀಡಿದ್ದಾರೆ ಹಾಗೂ ಅವರ ಈಗಿನ ನಿವಾಸದ ಬಗ್ಗೆಯೂ ತಪ್ಪು ಮಾಹಿತಿ ನೀಡಿದ್ದಾರೆಂದು ವರದಿ ಹೇಳಿದೆ.

ಪಾಸ್ ಪೋರ್ಟ್ ಅಧಿಕಾರಿ ತಮ್ಮ ಧರ್ಮವನ್ನು ನಿಂದಿಸಿದ್ದಾರೆಂದು ಆರೋಪಿಸಿದ್ದ ಈ ದಂಪತಿ ಇದೀಗ ಪಾಸ್ ಪೋರ್ಟ್ ರದ್ದತಿ ಭಯವನ್ನು ಎದುರಿಸುತ್ತಿದ್ದಾರೆ.  ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಅವರಿಗೆ ರೂ 5,000 ತನಕ ದಂಡ ವಿಧಿಸುವ ಸಾಧ್ಯತೆಯೂ ಇದೆ.

ಲಕ್ನೋ ಪೊಲೀಸರ ಗುಪ್ತಚರ  ವಿಭಾಗ ಸಲ್ಲಿಸಿರುವ ಒಂದು ಪುಟದ ವರದಿಯಲ್ಲಿ ಅವರ ಅರ್ಜಿ ಪರಿಶೀಲನೆ ವೇಳೆ ಎರಡು  ತಪ್ಪುಗಳು ಕಂಡು ಬಂದಿದ್ದವು ಎಂದು ತಿಳಿಸಲಾಗಿದೆ. ಪಾಸ್ ಪೋರ್ಟ್ ಅರ್ಜಿದಾರೆಯ ಹೆಸರು ತನ್ವಿ ಸೇಠ್ ಎಂದು ಅರ್ಜಿಯಲ್ಲಿ ಬರೆಯಲಾಗಿದ್ದರೆ, ವಿವಾಹ ಪ್ರಮಾಣಪತ್ರದಲ್ಲಿ ಸದಿಯಾ ಅನಸ್ ಎಂದು ಬರೆಯಲಾಗಿತ್ತು. ಅರ್ಜಿದಾರೆ  ಬಿ ಟಿ ಗ್ಲೋಬಲ್ ಬಿಸಿನೆಸ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್, ನೊಯ್ಡಾ ಇಲ್ಲಿ ಕೆಲಸ ಮಾಡುತ್ತಿದ್ದು ಜೆ ಎಂ ಅರ್ಚಿತ್ ಅಪಾರ್ಟ್ ಮೆಂಟ್ ಬಿ 604, ನೊಯ್ಡಾ ಇಲ್ಲಿ ಬಾಡಿಗೆ ನಿವಾಸದಲ್ಲಿ ಆಕೆ  ವಾಸಿಸುತ್ತಿದ್ದಾರಾದರೂ ಈ ವಿಳಾಸ ಆಕೆಯ ಪಾಸ್ ಪೋರ್ಟ್ ಅರ್ಜಿಯಲ್ಲಿ ನಮೂದಿತವಾಗಿಲ್ಲ.

ಪಾಸ್ ಪೋರ್ಟ್ ಅರ್ಜಿಯಲ್ಲಿ ನೀಡಲಾಗಿದ್ದ ಲಕ್ನೋ ವಿಳಾಸದಲ್ಲೂ ದಂಪತಿ ವಾಸಿಸುತ್ತಿರುವ ಪುರಾವೆ ದೊರಕಿಲ್ಲ. ಅಲ್ಲಿ ತನ್ವಿಯ ಅತ್ತೆ ಮಾತ್ರ ವಾಸಿಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವರದಿಯನ್ನು ಪರಿಶೀಲಿಸಲಾಗುತ್ತಿದ್ದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು  ಪ್ರಾದೇಶಿಕ ಪಾಸ್ ಪೋರ್ಟ್ ಅಧಿಕಾರಿ ಪಿಯೂಶ್ ಶರ್ಮ ಹೇಳಿದ್ದಾರೆ. ಸೇವೆಯಿಂದ ವಜಾಗೊಂಡಿರುವ  ವಿಕಾಸ್ ಮಿಶ್ರಾ ಅವರ ವಜಾ ಆದೇಶ ವಾಪಸ್ ಪಡೆಯಲಾಗಿದೆ ಎಂಬ ವರದಿಗಳನ್ನೂ ಅವರು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News