ನಿಮ್ಮ ಗಂಟಲು ಒಣಗುತ್ತದೆಯೇ? ಅದಕ್ಕೆ ಕಾರಣಗಳಿಲ್ಲಿವೆ....

Update: 2018-06-27 11:47 GMT

ಕೆಲವರಿಗೆ ಗಂಟಲು ಆಗಾಗ್ಗೆ ಒಣಗುತ್ತಿರುತ್ತದೆ. ಅದು ಕಿರಿಕಿರಿಯನ್ನುಂಟು ಮಾಡುವ ಜೊತೆಗೆ ಕೆಲವೊಮ್ಮೆ ನೋವನ್ನೂ ಉಂಟು ಮಾಡುತ್ತದೆ. ಸಾಮಾನ್ಯವಾಗಿ ಒಣ ಗಂಟಲು ಯಾವುದೇ ಗಂಭೀರ ಕಾಯಿಲೆಯ ಲಕ್ಷಣವಾಗಿರುವುದಿಲ್ಲ. ಆದರೆ ಅದನ್ನು ಲಘುವಾಗಿ ಪರಿಗಣಿಸುವಂತಿಲ್ಲ ಮತ್ತು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಹಲವಾರು ಕಾರಣಗಳಿಂದ ಗಂಟಲು ಒಣಗುತ್ತದೆ. ಅವುಗಳನ್ನು ತಿಳಿದುಕೊಂಡರೆ ಗಂಟಲು ಒಣಗುವುದನ್ನು ನಿವಾರಿಸಬಹುದು.

► ಬಾಯಿ ತೆರೆದು ನಿದ್ರಿಸುವುದು

ಇದು ಅತ್ಯಂತ ಕಡೆಗಣಿಸಲ್ಪಟ್ಟ,ಆದರೆ ಒಣ ಗಂಟಲಿಗೆ ಅತ್ಯಂತ ಸಾಮಾನ್ಯ ಕಾರಣವಾಗಿದೆ. ಮುಂದಿನ ಪರಿಣಾಮಗಳ ಅರಿವಿಲ್ಲದೆ ನಾವು ಹೆಚ್ಚಿನ ಬಾರಿ ಬಾಯಿ ತೆರೆದಿಟ್ಟುಕೊಂಡು ನಿದ್ರೆ ಮಾಡುತ್ತೇವೆ ಮತ್ತು ಇದು ಗಂಟಲು ಒಣಗಲು ಕಾರಣವಾಗುತ್ತದೆ. ನಾವು ನಿದ್ರೆಯಲ್ಲಿರುವಾಗ ಹೊರಗಿನ ಗಾಳಿಯು ನಮ್ಮ ಬಾಯಲ್ಲಿಯ ಜೊಲ್ಲನ್ನು ಒಣಗಿಸುತ್ತದೆ ಮತ್ತು ಬೆಳಿಗ್ಗೆ ಏಳುವಾಗಿ ಗಂಟಲು ಒಣಗಿರುತ್ತದೆ.

► ಫ್ಲೂ

ಫ್ಲೂ ಉಸಿರಾಟದ ತೊಂದರೆಯ ಕಾಯಿಲೆಯಾಗಿದ್ದು,ಅದು ಬಾಧಿಸಿದಾಗ ಗಂಟಲು ಒಣಗಬಹುದು ಅಥವಾ ಗಂಟಲಿನ ಕೆರೆತವುಂಟಾಗಬಹುದು. ಆದರೆ ಗಂಟಲು ಒಣಗುವುದು ಫ್ಲೂ ಜ್ವರದ ಏಕೈಕ ಲಕ್ಷಣವಲ್ಲ. ಫ್ಲೂ ಗಂಭೀರವಾದ ಲಕ್ಷಣಗಳನ್ನೂ ಹೊಂದಿಲ್ಲ,ಆದರೆ ಒಣ ಗಂಟಲು ಖಂಡಿತವಾಗಿಯೂ ಫ್ಲೂದ ಲಕ್ಷಣಗಳಲ್ಲೊಂದಾಗಿದೆ.

►ಮೊನೊನ್ಯುಕ್ಲಿಯೊಸಿಸ್ ಕಾಯಿಲೆ

 ಗಂಟಲನ್ನು ಒಣಗಿಸುವ ಈ ಕಾಯಿಲೆಯ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಸಾಮಾನ್ಯವಾಗಿ ಮೊನೊ ಎಂದು ಕರೆಯಲಾಗುವ ಇದು ಸೋಂಕು ರೋಗವಾಗಿದ್ದು,ಕೆಲವು ಗ್ರಂಥಿಗಳು ಊದಿಕೊಳ್ಳುತ್ತವೆ. ಜೊತೆಗೆ ವ್ಯಕ್ತಿ ಜ್ವರ ಮತ್ತು ಗಂಟಲಿನ ಕಿರಿಕಿರಿಯನ್ನೂ ಅನುಭವಿಸುತ್ತಾನೆ. ಇದು ಜೊಲ್ಲಿನ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಗಂಟಲು ಒಣಗುವುದು ಈ ರೋಗದ ಅತ್ಯಂತ ಸಾಮಾನ್ಯ ಲಕ್ಷಣಗಳಲ್ಲೊಂದಾಗಿದೆ.

► ಅಲರ್ಜಿಗಳು

ಕೆಲವೊಮ್ಮೆ ನಮ್ಮ ಸುತ್ತಲಿನ ನಿಸರ್ಗವು ನಮಗೆ ಕೆಲವು ಬಗೆಯ ಅಲರ್ಜಿಗಳನ್ನುಂಟು ಮಾಡುತ್ತದೆ. ನಮ್ಮ ಸುತ್ತಲಿನ ಪರಿಸರದಲ್ಲಿನ ಯಾವುದಾದರೂ ಹುಲ್ಲು ಅಥವಾ ಹೂವಿನ ಪರಾಗದಂತಹ ವಸ್ತುಗಳ ವಿರುದ್ಧ ನಮ್ಮ ಶರೀರದ ರೋಗ ನಿರೋಧಕ ಶಕ್ತಿಯ ಅತಿಯಾದ ಪ್ರತಿವರ್ತನೆ ಅಲರ್ಜಿಗೆ ಕಾರಣವಾಗುತ್ತದೆ. ಸೀನು,ಕಣ್ಣುಗಳಲ್ಲಿ ಉರಿಯ ಜೊತೆಗೆ ಗಂಟಲಿನ ಕೆರೆತವನ್ನೂ ಈ ಅಲರ್ಜಿ ಉಂಟು ಮಾಡುತ್ತದೆ.

► ನಿರ್ಜಲೀಕರಣ

ಗಂಟಲು ಒಣಗುವುದಕ್ಕೆ ಮತ್ತು ಕಿರಿಕಿರಿಗೆ ನಿರ್ಜಲೀಕರಣವು ಅತ್ಯಂತ ಸಾಮಾನ್ಯ ಕಾರಣಗಳಲ್ಲೊಂದಾಗಿದೆ. ನಮ್ಮ ಶರೀರದಲ್ಲಿ ನೀರಿನ ಅಂಶ ಕಡಿಮೆಯಾಗಿದೆ ಎಂದ ಮಾತ್ರಕ್ಕೇ ಗಂಟಲು ಒಣಗಬಹುದು. ಶರೀರವು ನಿರ್ಜಲೀಕರಣಗೊಂಡಾಗ ಅದು ಸಾಕಷ್ಟು ಜೊಲ್ಲನ್ನು ಉತ್ಪತ್ತಿ ಮಾಡುವುದಿಲ್ಲ.

► ಶೀತ

ಶೀತವು ಅತ್ಯಂತ ಸಾಮಾನ್ಯ ಸೋಂಕು ಆಗಿದ್ದು,ಹೆಚ್ಚಿನ ಜನರನ್ನು ಆಗಾಗ್ಗೆ ಬಾಧಿಸುತ್ತಿರುತ್ತದೆ. ನಿಮ್ಮನ್ನು ಕಾಡುತ್ತಿರುವ ಶೀತವು ಗಂಟಲು ಒಣಗುವುದಕ್ಕೆ ಸರಳ ಕಾರಣವಾಗಿರಬಹುದು. ಇದು ಗಂಟಲನ್ನು ಒಣಗಿಸುವ ಜೊತೆಗೆ ಕೆರೆತವನ್ನೂ ಉಂಟು ಮಾಡುತ್ತದೆ.

► ಸ್ಟ್ರೆಪ್ ಥ್ರೋಟ್

ಇದು ನಿರ್ದಿಷ್ಟ ಬ್ಯಾಕ್ಟೀರಿಯಾ ಉಂಟು ಮಾಡುವ ಸೋಂಕು ಆಗಿದೆ. ಸಾಮಾನ್ಯವಾಗಿ ಈ ಸೋಂಕು ಉಂಟಾದಾಗ ಗಂಟಲಿನಲ್ಲಿ ತೀವ್ರ ಕೆರೆತ ಉಂಟಾಗುತ್ತದೆ ಮತ್ತು ಕೆಲವೊಮ್ಮೆ ಗಂಟಲು ಒಣಗಲೂ ಕಾರಣವಾಗುತ್ತದೆ.

 ► ಗಂಟಲಗ್ರಂಥಿಯ ಉರಿಯೂತ

ಟಾನ್ಸಿಲಿಟಿಸ್ ಅಥವಾ ಗಂಟಲಗ್ರಂಥಿಯ ಉರಿಯೂತವನ್ನು ಸಾಮಾನ್ಯವಾಗಿ ಟಾನ್ಸಲ್ ಬಾಧೆ ಎಂದು ಕರೆಯಲಾಗುತ್ತದೆ. ಗಂಟಲಿನ ಹಿಂಭಾಗದಲ್ಲಿರುವ ಎರಡು ಮೃದುವಾದ ಗ್ರಂಥಿಗಳು ಶರೀರದಲ್ಲಿನ ಸೋಂಕುಗಳ ವಿರುದ್ಧ ಹೋರಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇವುಗಳನ್ನೇ ನಾವು ಸಾಮಾನ್ಯವಾಗಿ ಟಾನ್ಸಿಲ್‌ಗಳೆಂದು ಕರೆಯುತ್ತೇವೆ. ಬ್ಯಾಕ್ಟೀರಿಯಾ ಅಥವಾ ವೈರಸ್‌ನಿಂದಾಗಿ ಉಂಟಾಗುವ ಸೋಂಕು ಗಂಟಲಗಂ್ರಥಿಯ ಉರಿಯೂತಕ್ಕೆ ಕಾರಣವಾಗುತ್ತದೆ ಮತ್ತು ಇದು ಗಂಟಲನ್ನು ಒಣಗಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News