ಗೂಗಲ್‌ನಲ್ಲಿ ಆರೋಗ್ಯ ಮಾಹಿತಿಗಳನ್ನು ಹುಡುಕುತ್ತೀರಾ? ಈ ಎಚ್ಚರಿಕೆಗಳು ನಿಮ್ಮ ಗಮನದಲ್ಲಿರಲಿ

Update: 2018-06-27 12:14 GMT

ಇಂದಿನ ಅಂತರ್ಜಾಲ ಯುಗದಲ್ಲಿ ಸರ್ಚ್ ಇಂಜಿನ್ ಗೂಗಲ್ ನಮ್ಮ ಅತ್ಯುತ್ತಮ ಸ್ನೇಹಿತನಾಗಿಬಿಟ್ಟಿದೆ. ಪ್ರತಿಯೊಂದು ಮಾಹಿತಿಗೂ ನಾವು ಗೂಗಲ್‌ನ್ನೇ ಮೊರೆ ಹೋಗುತ್ತಿದ್ದೇವೆ. ಈ ಜಗತ್ತಿನಲ್ಲಿಯ ಎಲ್ಲ ಮಾಹಿತಿಗಳೂ ಅಂತರ್ಜಾಲದಲ್ಲಿ ದೊರೆಯುತ್ತವೆ. ಅನಾರೋಗ್ಯವಾಗಿದೆ ಎಂದು ಭಾವಿಸಿದಾಗ ಹೆಚ್ಚಿನವರು ಲಕ್ಷಣಗಳನ್ನು ತಿಳಿದುಕೊಳ್ಳಲು ಮೊದಲು ಗೂಗಲ್‌ನ್ನೇ ಪ್ರಶ್ನಿಸುತ್ತಾರೆ. ಗೂಗಲ್‌ನಲ್ಲಿ ಕೀ ವರ್ಡ್‌ಗಳನ್ನು ನಾವು ಟೈಪಿಸಿದ ತಕ್ಷಣ ನಾವು ತಿಳಿಯಬಯಸಿರುವ ಕಾಯಿಲೆಗಳ ಕುರಿತು ಮಾಹಿತಿಗಳಿರುವ ನೂರಾರು ಪುಟಗಳನ್ನೇ ಅದು ನಮ್ಮೆದುರಿಗಿಡುತ್ತದೆ. ಜೊತೆಗೆ ಈ ಮಾಹಿತಿಗಳೊಂದಿಗೆ ಸಂಬಂಧಿತ ಇತರ ಮಾಹಿತಿಗಳನ್ನೂ ಒದಗಿಸುತ್ತದೆ. ಆದರೆ ಆರೋಗ್ಯ ಲಕ್ಷಣಗಳ ಕುರಿತು ಅಂತರ್ಜಾಲವನ್ನು ಜಾಲಾಡುವಾಗ ಕೆಲವು ಮಾಹಿತಿಗಳು ನಕಾರಾತ್ಮಕ ಪರಿಣಾಮವನ್ನುಂಟು ಮಾಡುವ ಅಪಾಯವಿರುವುದರಿಂದ ನಾವು ವಹಿಸಬೇಕಾದ ಎಚ್ಚರಿಕೆಗಳೂ ಸಾಕಷ್ಟಿವೆ.

► ಅಧಿಕೃತತೆಯನ್ನು ಖಚಿತಪಡಿಸಿಕೊಳ್ಳಿ

ನಾವು ಕಾಯಿಲೆಯ ಪುಟ್ಟ ಲಕ್ಷಣವೊಂದನ್ನು ಗೂಗಲ್‌ನಲ್ಲಿ ಟೈಪಿಸಿದಾಗ ಅದರೊಂದಿಗೆ ಗುರುತಿಸಿಕೊಂಡಿರುವ ಹಲವಾರು ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಇದರ ಜೊತೆಗೆ ಅಂತರ್ಜಾಲದಲ್ಲಿ ಹಲವಾರು ಅನಧಿಕೃತ ಜಾಲತಾಣಗಳಿದ್ದು,ಇವು ನೀವು ತಿಳಿಯಲು ಬಯಸಿರುವ ಕಾಯಿಲೆಯ ಕುರಿತು ತಪ್ಪು ಲಕ್ಷಣಗಳು ಮತ್ತು ಸುಳ್ಳು ಮಾಹಿತಿಗಳನ್ನು ಒದಗಿಸಬಹುದು. ಹೀಗಾಗಿ ನೀವು ಭೇಟಿ ನೀಡುವ ಜಾಲತಾಣದ ಅಧಿಕೃತತೆಯನ್ನು ಖಚಿತಪಡಿಸಿಕೊಳ್ಳುವುದು ಮುಖ್ಯವಾಗುತ್ತದೆ.

► ನೀವು ಓದುವ ಎಲ್ಲವನ್ನೂ ನಂಬಬೇಡಿ

ಕಾಯಿಲೆಗಳಿಗೆ ಪರಿಹಾರಗಳ ಕುರಿತಂತೆ ಗೂಗಲ್ ಮಾಹಿತಿಗಳ ಕಣಜವನ್ನೇ ಒದಗಿಸುತ್ತದೆ. ಆದರೆ ಅಲ್ಲಿ ಲಭ್ಯವಾಗುವ ಎಲ್ಲ ಟಿಪ್‌ಗಳನ್ನೂ ನಂಬಬೇಕಿಲ್ಲ. ಕೇವಲ ಮನೆಮದ್ದುಗಳ ಮೂಲಕ ಕೆಲವೇ ದಿನಗಳಲ್ಲಿ ನಿಮ್ಮ ಕಾಯಿಲೆಗಳನ್ನು ಗುಣಪಡಿಸುವ ಭರವಸೆ ನೀಡುವ ಹಲವಾರು ಮಾಹಿತಿಗಳು ಅಂತರ್ಜಾಲದಲ್ಲಿ ಲಭ್ಯವಿವೆ. ಆದರೆ ಹೆಚ್ಚಿನ ಸಲ ಈ ಮದ್ದುಗಳು ಯಾವುದೇ ಪ್ರಯೋಜನವನ್ನು ನೀಡುವುದಿಲ್ಲ ಅಥವಾ ಅಡ್ಡ ಪರಿಣಾಮಗಳನ್ನುಂಟು ಮಾಡುವ ಮೂಲಕ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಲೂಬಹುದು. ಹೀಗಾಗಿ ಯಾವುದೇ ಮಾಹಿತಿಯನ್ನು ನಂಬಲರ್ಹವೇ ಎನ್ನುವುದನ್ನು ಇತರ ಮೂಲಗಳಿಂದ ಖಚಿತಪಡಿಸಿಕೊಳ್ಳಿ.

► ‘ನೊಸೆಬೊ’ ಎಫೆಕ್ಟ್‌ಗೆ ಬಲಿಯಾಗಬೇಡಿ

ಜನರು ಅನಾರೋಗ್ಯ ಲಕ್ಷಣಗಳಿಗಾಗಿ ಗೂಗಲ್ ಮಾಡುತ್ತಿರುವಾಗ ಅವರ ಕಾಯಿಲೆಗೆ ಸಂಬಂಧಿಸಿದ, ಆದರೆ ಅವರು ಹೊಂದಿಲ್ಲದಿರಬಹುದಾದ ಲಕ್ಷಣಗಳನ್ನು ಅದು ತೋರಿಸಬಹುದು. ಇದನ್ನು ಓದಿದ ಬಳಿಕ ಅವರು ಮಾನಸಿಕವಾಗಿ ಆ ಲಕ್ಷಣಗಳನ್ನು ಅನುಭವಿಸಲು ಆರಂಭಿಸಬಹುದು. ತಾವು ಇದನ್ನು ಗೂಗಲ್‌ನಲ್ಲಿ ಓದಿದ್ದೇವೆ ಎನ್ನುವುದೇ ಇದಕ್ಕೆ ಕಾರಣವಾಗಿರುತ್ತದೆ. ಇದನ್ನು ನೊಸೆಬೋ ಎಫೆಕ್ಟ್ ಎಂದು ಕರೆಯಲಾಗುತ್ತದೆ. ಉದಾಹರಣೆಗೆ ನೀವು ಫ್ಲೂ ಲಕ್ಷಣಗಳಿಗಾಗಿ ಗೂಗಲ್ ಮಾಡುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಆಗ ವಾಕರಿಕೆಯು ಫ್ಲೂದ ಲಕ್ಷಣ ಎನ್ನುವುದನ್ನು ಓದಬಹುದು ಮತ್ತು ನಿಮಗೆ ವಾಕರಿಕೆಯ ಲಕ್ಷಣವಿರದಿದ್ದರೂ ನಿಮಗೆ ವಾಕರಿಕೆಯ ಭಾವನೆ ಉಂಟಾಗುತ್ತದೆ ಮತ್ತು ಇದು ನಿಮ್ಮ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು.

► ‘ಅಬೌಟ್ ಅಸ್’ವಿಭಾಗವನ್ನು ಓದಲು ಮರೆಯಬೇಡಿ

ಆರೋಗ್ಯದ ಕುರಿತು ಮಾಹಿತಿಗಳು ಅಥವಾ ನಿರ್ದಿಷ್ಟ ಕಾಯಿಲೆಗೆ ಚಿಕಿತ್ಸೆಯ ಬಗ್ಗೆ ಗೂಗಲ್‌ನಲ್ಲಿ ಜಾಲತಾಣವೊಂದಕ್ಕೆ ಭೇಟಿ ನೀಡಿದ್ದರೆ ಮೊದಲು ‘ಅಬೌಟ್ ಅಸ್(ನಮ್ಮ ಬಗ್ಗೆ)’ ವಿಭಾಗವನ್ನು ಪರಿಶೀಲಿಸಿ. ಇದರಿಂದ ಆ ಆರೋಗ್ಯ ತಾಣವು ಸಾಕಷ್ಟು ಸಮಯದಿಂದ ಅಸ್ತಿತ್ವದಲ್ಲಿದೆಯೇ ಮತ್ತು ಅದು ಮಾಹಿತಿಗಳನ್ನು ಅಧಿಕೃತ ಮೂಲಗಳಿಂದ ಸಂಗ್ರಹಿಸುತ್ತದೆಯೇ ಎನ್ನುವುದನ್ನು ತಿಳಿಯಬಹುದಾಗಿದೆ ಮತ್ತು ನೀವು ಬಯಸಿರುವ ಮಾಹಿತಿಗೆ ಸಂಬಂಧಿಸಿದಂತೆ ಅದರ ವಿಶ್ವಾಸಾರ್ಹತೆಯನ್ನು ಖಚಿತ ಪಡಿಸಿಕೊಳ್ಳಬಹುದು.

► ಮೊದಲಿನಿಂದಲೂ ಇತರ ಕಾಯಿಲೆಗಳಿದ್ದರೆ ಟಿಪ್‌ಗಳನ್ನು ಅನುಸರಿಸಬೇಡಿ.

ಆರೋಗ್ಯ ಜಾಲತಾಣಗಳಲ್ಲಿ ನೀಡಲಾಗಿರುವ ಹೆಚ್ಚಿನ ಮಾಹಿತಿಗಳು ಜೆನರಿಕ್ ಆಗಿರುತ್ತವೆ ಮತ್ತು ನಿರ್ದಿಷ್ಟ ಕಾಯಿಲೆಗಳಿಗೆ ಚಿಕಿತ್ಸೆ ನೀಡಲೆಂದೇ ರೂಪುಗೊಂಡಿರುತ್ತವೆ. ನಿಮಗೆ ಈಗಾಗಲೇ ಕಾಯಿಲೆಯೊಂದಿದೆ ಮತ್ತು ಹೊಸದಾಗಿ ಕಾಣಿಸಿಕೊಂಡಿರುವ ಇನ್ನೊಂದು ಕಾಯಿಲೆಯ ಕುರಿತು ಮಾಹಿತಿಗಳಿಗಾಗಿ ತಡಕಾಡುತ್ತಿದ್ದೀರಿ ಎಂದಿಟ್ಟುಕೊಳ್ಳೋಣ. ಹೀಗಿರುವಾಗ ನೀವು ವೈದ್ಯರೊಂದಿಗೆ ಸಮಾಲೋಚಿಸಿದ ಬಳಿಕವೇ ಗೂಗಲ್ ಟಿಪ್‌ಗಳನ್ನು ಅನುಸರಿಸುವುದು ಸುರಕ್ಷಿತವಾಗಿರುತ್ತದೆ. ಉದಾಹರಣೆಗೆ ಕಡಿಮೆ ರಕ್ತದೊತ್ತಡಕ್ಕಾಗಿ ಕೆಲವು ಅಂತರ್ಜಾಲ ತಾಣಗಳಲ್ಲಿರುವ ಮನೆಮದ್ದುಗಳಲ್ಲಿ ಆಗಾಗ್ಗೆ ಗ್ಲುಕೋಸ್ ನೀರನ್ನು ಸೇವಿಸುವುದು ಸೇರಿರುತ್ತದೆ. ಆದರೆ ನೀವು ಈಗಾಗಲೇ ಮಧುಮೇಹದಿಂದ ಬಳಲುತ್ತಿದ್ದರೆ ಗ್ಲುಕೋಸ್ ನೀರು ನಿಮಗೆ ಒಳ್ಳೆಯದಲ್ಲ.

► ಭಯ ಪಟ್ಟುಕೊಳ್ಳಬೇಕಿಲ್ಲ

ಕೆಲವೊಮ್ಮೆ ಜನರು ತಮಗಿದೆ ಎಂದು ಭಾವಿಸಿರುವ ಕಾಯಿಲೆಯ ಲಕ್ಷಣಗಳ ಕುರಿತು ಗೂಗಲ್‌ನಲ್ಲಿ ಓದುತ್ತಾರೆ ಮತ್ತು ಅವರಲ್ಲಿಯ ಲಕ್ಷಣಗಳು ಗಭೀರ ಕಾಯಿಲೆಗೆ ಸಂಬಂಧಿಸಿವೆ ಎಂದು ಗೂಗಲ್ ಸೂಚಿಸಿದಾಗ ಭಯಗೊಳ್ಳಲು ಆರಂಭಿಸುತ್ತಾರೆ. ಗೂಗಲ್ ಬಹಳಷ್ಟು ಮಾಹಿತಿಗಳನ್ನು ಒದಗಿಸುವುದರಿಂದ ಸಣ್ಣ ತಲೆನೋವು ಕೂಡ ಮಿದುಳಿನ ಟ್ಯೂಮರ್‌ನ ಲಕ್ಷಣವಾಗಿರಬಹುದೇನೋ ಎಂದು ಅವರು ಆತಂಕಗೊಳ್ಳುತ್ತಾರೆ. ಇದು ಅವರಲ್ಲಿ ಮಾನಸಿಕ ಉದ್ವೇಗಕ್ಕೂ ಕಾರಣವಾಗುತ್ತದೆ. ಹೀಗಾಗಿ ಇಂತಹ ಸಂದರ್ಭಗಳಲ್ಲಿ ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ವೈದ್ಯರೊಂದಿಗೆ ಸಮಾಲೋಚಿಸುವುದು ಬುದ್ಧಿವಂತಿಕೆಯಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News