ಬಿಜೆಪಿ ಮೈತ್ರಿ ಮುರಿದು ಲಾಲೂ ಜೊತೆ ಕೈಜೋಡಿಸಲಿದ್ದಾರೆಯೇ ನಿತೀಶ್ ಕುಮಾರ್?

Update: 2018-06-27 17:29 GMT

ಹೊಸದಿಲ್ಲಿ, ಜೂ.27: 'ಗಂಭೀರ ಭ್ರಷ್ಟಾಚಾರ ಆರೋಪ'ಗಳ ಹಿನ್ನೆಲೆಯಲ್ಲಿ ಬಿಹಾರದ ಮಹಾಘಟಬಂಧನವನ್ನು ತೊರೆದು, ಬಿಜೆಪಿ ಜೊತೆ ಕೈ ಜೋಡಿಸಿದ್ದ ನಿತೀಶ್ ಕುಮಾರ್ ಇದೀಗ ಮತ್ತೊಮ್ಮೆ ಆರ್ ಜೆಡಿಯತ್ತ ಮುಖ ಮಾಡಿದ್ದಾರೆ ಎಂದು theprint.in ವರದಿ ಮಾಡಿದೆ.

ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ತನ್ನ ಪ್ರತಿನಿಧಿಗಳನ್ನು ಮಾತುಕತೆಗಾಗಿ ಈಗಾಗಲೇ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹಾಗು ಇತರ ವಿಪಕ್ಷ ನಾಯಕರ ಜೊತೆ ಮಾತುಕತೆಗಾಗಿ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಲಾಲೂ ಹಾಗು ನಿತೀಶ್ ಸಹವರ್ತಿಗಳ ನಡುವೆ ಕನಿಷ್ಟ ಒಂದು ಬಾರಿಯಾದರೂ ಮಾತುಕತೆ ನಡೆದಿದೆ ಎನ್ನಲಾಗಿದೆ. ಕಳೆದ ತಿಂಗಳು ಮುಂಬೈಯಲ್ಲಿ ನಡೆದ ಇಫ್ತಾರ್ ಕೂಟದ ವೇಳೆ ಮೈತ್ರಿಯ ಬಗ್ಗೆ ಮಾತುಕತೆಗಳು ನಡೆದಿತ್ತು ಎನ್ನಲಾಗಿದೆ.

ಬಿಜೆಪಿ ಜೊತೆಗೆ ಮೈತ್ರಿ ಕಡಿದುಕೊಳ್ಳುವ ವಿಚಾರದಲ್ಲೂ ಈ ಸಂದರ್ಭ ಮಾತುಕತೆ ನಡೆದಿತ್ತು ಎಂದು ತಿಳಿದುಬಂದಿದೆ. ಕಾಂಗ್ರೆಸ್ ಜೊತೆಗೆ ಮಾತುಕತೆಗೂ ನಾವು ಮುಕ್ತರಾಗಿದ್ದೇವೆ ಎಂದು ನಿತೀಶ್ ಪ್ರತಿನಿಧಿಗಳು ಆರ್ ಜೆಡಿ ನಾಯಕರಿಗೆ ಸೂಚನೆಗಳನ್ನೂ ನೀಡಿದ್ದಾರೆ ಎನ್ನಲಾಗಿದೆ.

"ಹೌದು. ಮಾತುಕತೆಗಳು ನಡೆದಿವೆ. ಆದರೆ ಯಾವುದೇ ಚರ್ಚೆಗಳಾಗಿಲ್ಲ. ಇಂತಹ ಪ್ರಮುಖ ನಿರ್ಧಾರಗಳನ್ನು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹಲವು ಚರ್ಚೆಗಳಾಗಬೇಕು. ಎಲ್ಲಾ ಕಡೆಯಿಂದಲೂ ಒಪ್ಪಿಗೆ ವ್ಯಕ್ತವಾದ ನಂತರವಷ್ಟೇ ಮುಂದುವರಿಯಲು ಸಾಧ್ಯವಾಗಲಿದೆ. ಆದರೆ ಕೆಲವು ಚರ್ಚೆಗಳು ನಡೆದಿವೆ ಎನ್ನುವುದನ್ನು ಮಾತ್ರ ನಾನು ಖಚಿತಪಡಿಸಬಲ್ಲೆ" ಎಂದು ನಿತೀಶ್ ಕುಮಾರ್ ರ ಸಮೀಪವರ್ತಿಯೊಬ್ಬರು ಮಾಹಿತಿ ನೀಡಿದ್ದಾಗಿ theprint.in ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News