ಅವ್ಯವಸ್ಥೆಗೆ ಕೊನೆ ಎಂದು?

Update: 2018-06-27 18:32 GMT

ಮಾನ್ಯರೇ,

ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ಸೌಲಭ್ಯಗಳ ಕೊರತೆಯ ಪರಿಣಾಮವಾಗಿ ಗ್ರಾಮೀಣ ಪ್ರದೇಶಗಳಲ್ಲಿ ರೋಗಿಗಳ ಪ್ರಮಾಣ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ವೈದ್ಯರ ಕೊರತೆ ಎಲ್ಲೆಡೆ ಕಾಡುತ್ತಿದೆ. ಪ್ರತಿಯೊಂದು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಹಲವಾರು ಸರಕಾರಿ ಆಸ್ಪತ್ರೆಗಳಿವೆಯೇ ಹೊರತು ಅಲ್ಲಿ ಸರಿಯಾದ ಆರೋಗ್ಯ ಸೌಲಭ್ಯಗಳು ಸಿಗುತ್ತಿಲ್ಲ. ರೋಗಿಗಳನ್ನು ಗಮನಿಸಲು ವೈದ್ಯರ ಸಂಖ್ಯೆ ಕಡಿಮೆ ಇದೆ. ಇದರಿಂದಾಗಿ ಕೆಲವೆಡೆ ಸಕಾಲದಲ್ಲಿ ಚಿಕಿತ್ಸೆ ಸಿಗದ ರೋಗಿಗಳು ಸಾವನ್ನಪ್ಪುತ್ತಿದ್ದಾರೆ.

ಮುಂದುವರಿದ ರಾಜ್ಯವಾದ ಕರ್ನಾಟಕದಲ್ಲಿ ವೈದ್ಯರ ಕೊರತೆಯ ಸಮಸ್ಯೆ ಹೆಚ್ಚಿರುವುದು ಆಶ್ಚರ್ಯಪಡುವಂತಹ ಸಂಗತಿಯಾಗಿದೆ. ಕರ್ನಾಟಕದಲ್ಲಿ 1 ಲಕ್ಷಕ್ಕೂ ಅಧಿಕ ವೈದ್ಯರಿದ್ದರೂ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಸಂಖ್ಯೆ ತೀರ ಕಡಿಮೆ ಇದೆ. ಪ್ರತಿಯೊಂದು ಗ್ರಾಮ ಮತ್ತು ನಗರದ ಸರಕಾರಿ ಆಸ್ಪತ್ರೆಗಳಲ್ಲಿ ಸರಾಸರಿ 13,556 ರೋಗಿಗಳಿಗೆ ಒಬ್ಬ ವೈದ್ಯರಿರುವುದು ರಾಷ್ಟ್ರೀಯ ವೈದ್ಯ ಹಾಗೂ ರೋಗಿಗಳ ಸರಾಸರಿಗಿಂತ ಹೆಚ್ಚು ಎಂಬುದು ತಿಳಿದು ಬರುತ್ತದೆ. ದಕ್ಷಿಣ ಭಾಗದ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಪ್ರಮಾಣ ತೀರ ಕಡಿಮೆ ಇದೆ. ಇದಕ್ಕೆಲ್ಲ ಪ್ರಮುಖ ಕಾರಣ ಖಾಸಗಿ ಆಸ್ಪತ್ರೆಗಳಾಗಿವೆ. ರಾಜ್ಯದ ವೈದ್ಯರು ಹೆಚ್ಚಿನ ಹಣದ ಆಸೆಗಾಗಿ ಖಾಸಗಿ ಆಸ್ಪತ್ರೆಗಳತ್ತ ತಮ್ಮ ಒಲವನ್ನು ತೋರುತ್ತಿರುವುದಾಗಿದೆ.

ಕರ್ನಾಟಕದಲ್ಲಿ ಒಟ್ಟು 1,04,794 ನೋಂದಾಯಿತ ವೈದ್ಯರು ಇದ್ದಾರೆ. ಇಷ್ಟು ಮಂದಿ ಇದ್ದರೂ ನಗರ ಪ್ರದೇಶದಲ್ಲಿ ಸಿಗುವ ಆರ್ಥಿಕ ಮತ್ತು ಇತರ ಸವಲತ್ತಿನಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವುದಕ್ಕೆ ವೈದ್ಯರು ಹಿಂಜರಿಯುತ್ತಿದ್ದಾರೆ. ಕರ್ನಾಟಕ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 2,136 ವೈದ್ಯರು ಇದ್ದರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೇವಲ 498 ತಜ್ಞ ವೈದ್ಯರಿದ್ದಾರೆ. ಒಟ್ಟಾರೆಯಾಗಿ ಕರ್ನಾಟಕದ 6 ಕೋಟಿ ಜನಸಂಖ್ಯೆಗೆ 80 ಸಾವಿರ ವೈದ್ಯರು ಬೇಕಾಗುತ್ತದೆ. ಆದರೆ ಔಷಧಿಯ ಕೊರತೆಯಂತೆ ವೈದ್ಯರ ಸಂಖ್ಯೆಯೂ ಕಡಿಮೆ ಆಗುತ್ತಲೇ ಇವೆ.

ಈ ಕಾರಣದಿಂದಾಗಿ ಸರಕಾರಿ ಆಸ್ಪತ್ರೆಗಳಲ್ಲಿ ಸರಿಯಾದಂತಹ ಆರೋಗ್ಯ ಸೌಲಭ್ಯಗಳು ಹಾಗೂ ಫಲಕಾರಿಯಾಗುವಂತಹ ಚಿಕಿತ್ಸೆ ಸಿಗದೆ ರೋಗಿಗಳು ವಂಚಿತರಾಗಿದ್ದಾರೆ. ಪರಿಣಾಮವಾಗಿ ರೋಗಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಹಣ ವ್ಯಯ ಮಾಡಬೇಕಾಗಿದೆ. ಬಡರೋಗಿಗಳ ಇಂತಹ ಸಮಸ್ಯೆಗಳಿಗೆ ರಾಜ್ಯದಲ್ಲಿ ಮುಕ್ತಿ ಎಂದು? 

Writer - ರಾಮು ಎಲ್.ಪಿ., ಲಕ್ಕವಳ್ಳಿ

contributor

Editor - ರಾಮು ಎಲ್.ಪಿ., ಲಕ್ಕವಳ್ಳಿ

contributor

Similar News