ವ್ಯಾಟ್ಸ್ ಆ್ಯಪ್ ಸಂದೇಶಕ್ಕೆ ಮತ್ತೋರ್ವ ಬಲಿ: ಮಕ್ಕಳ ಅಪಹರಣಕಾರನೆಂದು ಥಳಿಸಿ ಹತ್ಯೆ
ತ್ರಿಪುರಾ, ಜೂ. 28: ಮಕ್ಕಳ ಅಪಹರಣಕಾರರು ಎಂದು ಶಂಕಿಸಿ ವ್ಯಕ್ತಿಯೋರ್ವನನ್ನು ಗುಂಪೊಂದು ಥಳಿಸಿ ಹತ್ಯೆಗೈದ ಘಟನೆ ತ್ರಿಪುರಾದಲ್ಲಿ ಗುರುವಾರ ಸಂಭವಿಸಿದೆ. ಗುಂಪಿನಿಂದ ಥಳಿತಕ್ಕೊಳಗಾದ ಝಹೀರ್ ಖಾನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡಿರುವ ಗುಲ್ಜಾರ್ ಹಾಗೂ ಖುರ್ಷಿದ್ ಖಾನ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಇವರೆಲ್ಲರೂ ಉತ್ತರಪ್ರದೇಶದವರು. ವ್ಯಾಟ್ಸ್ ಆ್ಯಪ್‌ನಲ್ಲಿ ಹರಡಿದ ನಕಲಿ ಸುದ್ದಿಯ ಕಾರಣಕ್ಕಾಗಿ ದೇಶದಲ್ಲಿ ಕಳೆದ ಒಂದು ವರ್ಷದಲ್ಲಿ 23 ಮಂದಿಯ ಹತ್ಯೆ ನಡೆದಿದೆ. ಇದು 24ನೆಯದ್ದು. ಐದು ದಿನಗಳ ಹಿಂದೆ ಚತ್ತೀಸ್‌ಗಢ ಹಾಗೂ ಗುಜರಾತ್‌ನಲ್ಲಿ ಮಕ್ಕಳ ಅಪಹರಣಕಾರರು ಎಂದು ಶಂಕಿಸಿ ಇಬ್ಬರನ್ನು ಹತ್ಯೆಗೈಯಲಾಗಿತ್ತು.
ತ್ರಿಪುರಾದಲ್ಲಿ ಮಂಗಳವಾರ ರಾತ್ರಿ 11 ವರ್ಷದ ಬಾಲಕನ ಮೃತದೇಹ ಪತ್ತೆಯಾದ ಬಳಿಕ ಅಂಗಕ್ಕಾಗಿ ಮಕ್ಕಳನ್ನು ಅಪಹರಿಸುವ ತಂಡ ಸಕ್ರಿಯವಾಗಿದೆ ಎಂಬ ವದಂತಿ ಹರಡಿತ್ತು. 4ನೇ ತರಗತಿ ವಿದ್ಯಾರ್ಥಿ ಪುರ್ನಾ ಬಿಸ್ವಾಸ್‌ನ ಮೃತದೇಹ ಆತನ ನಿವಾಸದ ಸಮೀಪ ಪತ್ತೆಯಾಗಿತ್ತು. ಬಾಲಕನ ಮೃತದೇಹದಲ್ಲಿ ಎಲ್ಲ ಅಂಗಗಳು ಇರುವುದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಬಾಲಕನ ಕಿಡ್ನಿ ಕಾಣೆಯಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.