ವೈಫಲ್ಯ ಮುಚ್ಚಿಕೊಳ್ಳಲು ತುರ್ತು ಪರಿಸ್ಥಿತಿಯ ನೆನಪು

Update: 2018-06-29 05:14 GMT

43 ವರ್ಷಗಳ ಹಿಂದೆ ಇಂದಿರಾಗಾಂಧಿ ಪ್ರಧಾನಿ ಆಗಿದ್ದಾಗ ದೇಶದ ಮೇಲೆ ಹೇರಿದ ತುರ್ತು ಪರಿಸ್ಥಿತಿಯ ಬಗ್ಗೆ ಈಗ ಮತ್ತೆ ಚರ್ಚೆ ನಡೆದಿದೆ. ಈ ನಾಲ್ಕೂವರೆ ದಶಕಗಳಲ್ಲಿ ದೇಶ ಅಪಾರ ಬದಲಾವಣೆಗಳನ್ನು ಕಂಡಿದೆ. ಕರಾಳ ಎಂದು ವರ್ಣಿಸಲಾಗಿರುವ ತುರ್ತು ಪರಿಸ್ಥಿತಿಯ ಆ ದಿನಗಳಲ್ಲಿ ಬದುಕಿದ್ದ ಅನೇಕರು ಈಗ ಇಲ್ಲ. ಆನಂತರ ಬಂದ ಹೊಸ ಪೀಳಿಗೆಗೆ ಆ ದಿನಗಳ ಅನುಭವ ಇಲ್ಲ. ವಾಸ್ತವಾಂಶ ಹೀಗಿರುವಾಗ ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ ಒಮ್ಮೆಲೆ ಜ್ಞಾನೋದಯವಾದಂತೆ ತುರ್ತು ಪರಿಸ್ಥಿತಿಯ ದಿನಗಳ ಬಗ್ಗೆ ನೆನಪು ಮಾಡಿಕೊಂಡಿದ್ದಾರೆ. ಇದು ಇತಿಹಾಸದಲ್ಲಿ ಕಪ್ಪು ಚುಕ್ಕೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಅರುಣ್ ಜೇಟ್ಲಿಯವರು ಇಂದಿರಾ ಗಾಂಧಿಯನ್ನು ಜರ್ಮನಿಯ ಫ್ಯಾಶಿಸ್ಟ್ ಸರ್ವಾಧಿಕಾರಿಯಾಗಿದ್ದ ಹಿಟ್ಲರ್‌ಗೆ ಹೋಲಿಸಿದ್ದಾರೆ. ಈಗ ನಮ್ಮ ನಡುವೆ ಬದುಕಿಲ್ಲದವರ ಬಗ್ಗೆ ಈ ರೀತಿ ಟೀಕಿಸುವುದು, ನಿಂದಿಸುವುದು ಸೌಜನ್ಯವಲ್ಲ ಎಂಬ ಅರಿವು ಇವರಿಗೆ ಇದ್ದಂತಿಲ್ಲ.

ಮೋದಿ, ಜೇಟ್ಲಿ ಮಾತ್ರವಲ್ಲ ಬಿಜೆಪಿಯ ಅನೇಕ ನಾಯಕರು ತುರ್ತು ಪರಿಸ್ಥಿತಿಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಆಗ ಪ್ರಜಾಪ್ರಭುತ್ವದ ಹಕ್ಕುಗಳನ್ನು ದಮನ ಮಾಡಲಾಗಿತ್ತು ಎಂದು ಹೇಳುತ್ತಿದ್ದಾರೆ. ತಮ್ಮ ಆಡಳಿತದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಭೂತಕಾಲದ ಗೋರಿಯನ್ನು ಅಗೆದು ಅಸ್ಥಿಪಂಜರಗಳನ್ನು ಹೊರಗೆ ತೆಗೆಯುತ್ತಿದ್ದಾರೆ. ದೇಶದ ಜನತೆ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಉದ್ದೇಶಪೂರ್ವಕವಾಗಿ ಹಳೆಯ ದಿನಗಳನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ. ಇಂದಿರಾ ಗಾಂಧಿ ಹೇರಿದ ತುರ್ತು ಪರಿಸ್ಥಿತಿ ಬಗ್ಗೆ ಈ ದೇಶ ಹಲವು ಬಾರಿ ವಿಮರ್ಶೆ ಮಾಡಿಕೊಂಡಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ನೀಡಿದೆ. ತಪ್ಪು ಮಾಡಿದವರನ್ನು ಕ್ಷಮಿಸಿ ನಂತರದ ಚುನಾವಣೆಯಲ್ಲಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ಮತ್ತೆ ಅಧಿಕಾರ ನೀಡಿದೆ. ಇದು ಎಲ್ಲರಿಗೂ ಗೊತ್ತಿರುವ ಸಂಗತಿ. ಇಂದಿರಾ ಗಾಂಧಿ ತುರ್ತು ಪರಿಸ್ಥಿತಿಯನ್ನು ತಾವೇ ಹೇರಿ ತಾವೇ ವಾಪಸ್ ಪಡೆದರು. ಮತ್ತೆ ಜನಾದೇಶ ಪಡೆಯಲು ಮುಂದಾದರು. ಇದು ಈ ದೇಶದ ಚರಿತ್ರೆ. ಇಂತಹವರನ್ನು ಫ್ಯಾಶಿಸ್ಟ್ ಹಿಟ್ಲರ್‌ಗೆ ಹೋಲಿಸುವುದು ಅರುಣ್ ಜೇಟ್ಲಿ ಅವರ ಬೌದ್ಧಿಕ ದಾರಿದ್ರವನ್ನು ತೋರಿಸುತ್ತದೆ. ಹಿಟ್ಲರ್‌ನ ಫ್ಯಾಶಿಸ್ಟ್ ಸಿದ್ಧಾಂತವನ್ನು ಎರವಲು ಪಡೆದು ಹಿಂದುತ್ವ ಸಿದ್ಧಾಂತವನ್ನು ರೂಪಿಸಿದ ಸಾವರ್ಕರ್ ಹಾಗೂ ಗೋಳ್ವಲ್ಕರ್ ಅವರ ಶಿಷ್ಯರಾದ ಮೋದಿ ಮತ್ತು ಜೇಟ್ಲಿ, ತಮ್ಮ ಪರಿವಾರ ನಡೆದು ಬಂದ ದಾರಿಯತ್ತ ಒಮ್ಮೆ ಹೊರಳಿ ನೋಡಲಿ. ಆನಂತರ ಇನ್ನೊಬ್ಬರನ್ನು ಹಿಟ್ಲರ್ ಎಂದು ಮೂದಲಿಸಲಿ.

 ವಾಸ್ತವವಾಗಿ ಈಗ ನಡೆಯಬೇಕಾಗಿರುವುದು 43 ವರ್ಷಗಳ ಹಿಂದಿನ ತುರ್ತು ಪರಿಸ್ಥಿತಿಯ ವಿಮರ್ಶೆ ಅಲ್ಲ. ಬದಲಾಗಿ ಕಳೆದ ನಾಲ್ಕು ವರ್ಷಗಳ ಕಾಲಾವಧಿಯಲ್ಲಿನ ಮೋದಿ ನೇತೃತ್ವದ ಬಿಜೆಪಿ ಸರಕಾರದ ಆಡಳಿತದ ಬಗ್ಗೆ ವಿಮರ್ಶೆ. ಹಿಂದಿನ ಲೋಕಸಭಾ ಚುನಾವಣೆಗೆ ಮುನ್ನ ಮೋದಿ ನೇತೃತ್ವದ ಬಿಜೆಪಿ ಜನತೆಗೆ ನೀಡಿದ ಆಶ್ವಾಸನೆ ಯಾವುದು ? ಈ ಆಶ್ವಾಸನೆ ಜಾರಿಗೆ ಬಂದಿದೆಯೇ ? ಎಂದು ಪರಾಮರ್ಶೆ ನಡೆಸಬೇಕಾಗಿದೆ. ಮೋದಿ ಅಧಿಕಾರಕ್ಕೆ ಬಂದ ತಕ್ಷಣ ದೇಶಕ್ಕೆ ಒಳ್ಳೆಯ ದಿನಗಳು ಬಂದವು ಎಂದು ನಂಬಿಸಲಾಯಿತು. ಆದರೆ, ವಾಸ್ತವವಾಗಿ ಆಗಿದ್ದೇನು?. ನವ ಉದಾರವಾದಿ ಆರ್ಥಿಕ ಧೋರಣೆಯ ಜಾರಿಯ ಪರಿಣಾಮವಾಗಿ ಜನ ಸಾಮಾನ್ಯರ ಬದುಕು ಯಾತನಾಮಯವಾಗಿದೆ. ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ವರ್ಷಕ್ಕೆ 2 ಕೋಟಿ ಉದ್ಯೋಗಗಳನ್ನು ಸೃಷ್ಟಿ ಮಾಡುವುದಾಗಿ ನೀಡಿದ್ದ ಭರವಸೆ ಹುಸಿಯಾಗಿದೆ.

ವಿದೇಶದಿಂದ ಕಪ್ಪು ಹಣವನ್ನು ವಾಪಸ್ ತರುವುದಾಗಿ ನೀಡಿದ್ದ ಆಶ್ವಾಸನೆ ಜಾರಿಗೆ ಬಂದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದ ಅಂಚಿಗೆ ಬಂದು ನಿಂತಿದೆ. ಸಂವಿಧಾನಾತ್ಮಕ ಸಂಸ್ಥೆಗಳ ಮೇಲೆ ನಿರಂತರವಾಗಿ ದಾಳಿ ಮಾಡಲಾಗುತ್ತಿದೆ. ನೋಟು ಅಮಾನ್ಯೀಕರಣದ ಪರಿಣಾಮವಾಗಿ ಜನ ಸಾಮಾನ್ಯರ ಬದುಕು ಕಷ್ಟಕರವಾಗಿದೆ. ಜಿಎಸ್‌ಟಿ ಜಾರಿಯಿಂದ ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ತೊಂದರೆ ಆಗಿದೆ. ನೀರವ್ ಮೋದಿ ಮತ್ತು ವಿಜಯ ಮಲ್ಯರಂತಹವರು ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಾವಿರಾರು ಕೋಟಿ ರೂ. ದೋಚಿಕೊಂಡು ಹೋದ ಪರಿಣಾಮವಾಗಿ ಬ್ಯಾಂಕಿಂಗ್ ಕ್ಷೇತ್ರ ದಿವಾಳಿ ಅಂಚಿಗೆ ಬಂದಿದೆ. ಕೃಷಿ ಬಿಕ್ಕಟ್ಟು ಹೆಚ್ಚಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಗೋರಕ್ಷಕರೆಂಬ ಗೂಂಡಾಗಳು ಹಾದಿ ಬೀದಿಯಲ್ಲಿ ಅಮಾಯಕರನ್ನು ಕೊಂದು ಹಾಕುತ್ತಿದ್ದಾರೆ. ವಿಶ್ವವಿದ್ಯಾನಿಲಯಗಳ ಕ್ಯಾಂಪಸ್‌ಗಳು ಅಶಾಂತಿಯ ತಾಣಗಳಾಗಿವೆ. ಅಲ್ಲಿ ಎಬಿವಿಪಿಯ ಗೂಂಡಾಗಳು ಪ್ರಾಧ್ಯಾಪಕರ ಮುಖಕ್ಕೆ ಮಸಿ ಬಳಿದು ಮೆರವಣಿಗೆ ಮಾಡುತ್ತಿದ್ದಾರೆ. ಸ್ವಾಯತ್ತ ಸಂಸ್ಥೆಗಳಾದ ಚುನಾವಣಾ ಆಯೋಗ, ಸಿಬಿಐ, ಜಾರಿ ನಿರ್ದೇಶನಾಲಯ ಇವುಗಳಲ್ಲಿ ಸರಕಾರ ಹಸ್ತಕ್ಷೇಪ ಮಾಡುತ್ತಿದೆ. ಸರ್ವೋಚ್ಚ ನ್ಯಾಯಾಲಯದಲ್ಲೂ ರಾಜಕೀಯ ಕೈವಾಡದ ಹೆಜ್ಜೆ ಎದ್ದು ಕಾಣುತ್ತಿದೆ. ಇವೆೆಲ್ಲದರ ಪರಿಣಾಮ ದೇಶದಲ್ಲಿ ಒಂದು ವಿಧದ ಸಾಂಸ್ಕೃತಿಕ ತುರ್ತು ಪರಿಸ್ಥಿತಿ ಜಾರಿಯಾಗಿದೆ ಏನೋ ಎಂಬ ಸಂದೇಹ ಬರುತ್ತಿದೆ.

ನರೇಂದ್ರ ಮೋದಿ ಸರಕಾರ ಒಕ್ಕೂಟ ವ್ಯವಸ್ಥೆಯ ಮೂಲಭೂತ ತತ್ವಗಳಿಗೆ ಧಕ್ಕೆ ತರುತ್ತಿದೆ. ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅಲ್ಲಿನ ಸರಕಾರಗಳನ್ನು ಬುಡಮೇಲು ಮಾಡಲು ಹುನ್ನಾರ ನಡೆಸುತ್ತಿದೆ. ಉದಾಹರಣೆಗೆ ರಾಜಧಾನಿ ದಿಲ್ಲಿಯಲ್ಲಿರುವ ಆಮ್ ಆದ್ಮಿ ಸರಕಾರವನ್ನು ಬುಡಮೇಲು ಮಾಡಲು ಐಎಎಸ್ ಅಧಿಕಾರಿಗಳಿಗೆ ಪ್ರಚೋದನೆ ನೀಡುತ್ತಿದೆ. ಅಲ್ಲಿಯ ಲೆಫ್ಟಿನೆಂಟ್ ಗವರ್ನರ್ ಅವರನ್ನು ಬಳಸಿಕೊಂಡು ಸರಕಾರಕ್ಕೆ ಕಿರುಕುಳ ನೀಡಲಾಗುತ್ತಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮ್ಮ ರಾಜ್ಯದ ಸಮಸ್ಯೆಗಳ ಬಗ್ಗೆ ಪ್ರಧಾನಿ ಮಂತ್ರಿಗಳ ಜೊತೆ ಚರ್ಚಿಸಲು ಕಳೆದ ಮೂರು ವರ್ಷಗಳಿಂದ ಅವರ ಭೇಟಿಗೆ ಅವಕಾಶವನ್ನು ಕೋರುತ್ತಿದ್ದಾರೆ. ಮೂರು ಬಾರಿ ಮನವಿ ಮಾಡಿಕೊಂಡರೂ ಭೇಟಿಯ ಅವಕಾಶ ನಿರಾಕರಿಸಲಾಗಿದೆ.

ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೂಡ ಪ್ರಧಾನಿ ಭೇಟಿಗೆ ಮನವಿ ಮಾಡಿಕೊಂಡರೂ ಅವಕಾಶ ನೀಡಲಿಲ್ಲ. ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿಗೆ ಪ್ರಧಾನಿ ಭೇಟಿಗೆ ಅವಕಾಶ ನೀಡಿದರು. ಇದು ಕರ್ನಾಟಕದ ಮೇಲಿನ ಅಥವಾ ಕುಮಾರ ಸ್ವಾಮಿ ಮೇಲಿನ ಗೌರವಕ್ಕೆ ನೀಡಿದ ಅವಕಾಶ ಅಲ್ಲ. ರಾಜ್ಯದ ಸಮ್ಮಿಶ್ರ ಸರಕಾರವನ್ನು ಅಸ್ಥಿರಗೊಳಿಸುವ ಉದ್ದೇಶ ಇರಿಸಿಕೊಂಡು ಅವರು ಕುಮಾರ ಸ್ವಾಮಿಯನ್ನು ಭೇಟಿ ಮಾಡಿದರು. ಪಿಣರಾಯಿ ವಿಜಯನ್ ಹಾಗೂ ಚಂದ್ರಬಾಬು ನಾಯ್ಡು ತಮ್ಮ ಸ್ವಂತ ಕೆಲಸಕ್ಕೆ ಪ್ರಧಾನಿ ಭೇಟಿಗೆ ಅವಕಾಶ ಕೋರಿರಲಿಲ್ಲ. ತಮ್ಮ ರಾಜ್ಯಗಳನ್ನು ಬಾಧಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಲು ತಮ್ಮ ರಾಜ್ಯಗಳ ಸರ್ವಪಕ್ಷದ ನಾಯಕರ ನಿಯೋಗದೊಂದಿಗೆ ಪ್ರಧಾನಿಯನ್ನು ಭೇಟಿ ಮಾಡಲು ದಿಲ್ಲಿಗೆ ಹೋಗಿದ್ದರು. ಆದರೆ, ಅವರಿಗೆ ಭೇಟಿಯನ್ನು ನಿರಾಕರಿಸಲಾಯಿತು. ಪ್ರಧಾನಿಯ ಈ ವರ್ತನೆ ಒಕ್ಕೂಟ ವ್ಯವಸ್ಥೆಯ ಮೂಲಭೂತ ತತ್ವಗಳಿಗೆ ಎಸಗಿದ ಅಪಚಾರವಾಗಿದೆ. ಈ ಸರ್ವಾಧಿಕಾರಿ ವರ್ತನೆ ಪ್ರಜಾಪ್ರಭುತ್ವಕ್ಕೆ ಶೋಭಿತವಾಗುವುದಿಲ್ಲ. ತಮ್ಮ ರಾಜ್ಯದ ಪಡಿತರ ಸಮಸ್ಯೆ ಹಾಗೂ ಸಹಕಾರಿ ರಂಗದ ಕೆಲ ಸಮಸ್ಯೆಗಳ ಬಗ್ಗೆ ಹಾಗೂ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳ ಬಗ್ಗೆ ಪ್ರಧಾನಿಯನ್ನು ಭೇಟಿ ಮಾಡಲು ಪಿಣರಾಯಿ ವಿಜಯನ್ ಪ್ರಯತ್ನಿಸಿದ್ದರು.

ದೇಶದ ಇಂದಿನ ಪರಿಸ್ಥಿತಿ ಹೇಗಿದೆ ಎಂದರೆ, ಸಂಘ ಪರಿವಾರದ ಭಕ್ತ ಮಂಡಳಿಯನ್ನು ಹೊರತುಪಡಿಸಿ ಈ ದೇಶದಲ್ಲಿ ಯಾರೂ ನೆಮ್ಮದಿಯಿಂದ ಇಲ್ಲ. ಈ ದೇಶದ ಅನೇಕ ಚಿಂತಕರು ತಮ್ಮ ವಿಚಾರ ಪ್ರತಿಪಾದನೆಗಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಮಾಹಿತಿ ಹಕ್ಕು ಕಾರ್ಯಕರ್ತರ ಮೇಲೆ ಎಲ್ಲ ಕಡೆ ದೌರ್ಜನ್ಯ ನಡೆದಿದೆ. ಈ ದೇಶದ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಬದುಕು ಚಿಂತಾಜನಕವಾಗಿದೆ. ನಿತ್ಯವೂ ಭಯದ ನೆರಳಲ್ಲಿ ಅವರು ಜೀವಿಸುತ್ತಿದ್ದಾರೆ. ಜಾತ್ಯತೀತ ಭಾರತವನ್ನು ಮನುವಾದಿ ರಾಷ್ಟ್ರವನ್ನಾಗಿ ಮಾಡಲು ಆಳುವ ಪಕ್ಷ ಹುನ್ನಾರ ನಡೆಸಿದೆ. ಇದರ ಭಾಗವಾಗಿ ಜನತಂತ್ರದ ಆಧಾರ ಸ್ತಂಭಗಳನ್ನೆಲ್ಲ ನಾಶ ಮಾಡಲಾಗುತ್ತಿವೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನರ ಮುಂದೆ ಹೇಳಲು ಈ ಸರಕಾರದ ಬಳಿ ಯಾವ ವಿಚಾರಗಳೂ ಇಲ್ಲ. ಅದಕ್ಕಾಗಿ 40 ವರ್ಷಗಳ ಹಿಂದಿನ ತುರ್ತು ಪರಿಸ್ಥಿತಿಯ ನೆನಪು ತೆಗೆದು ಜನ ದಾರಿ ತಪ್ಪಿಸಲು ಯತ್ನಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News