40 ವರ್ಷಗಳಲ್ಲಿ ಮೊದಲ ವಿಶ್ವಕಪ್ ಪಂದ್ಯ ಜಯಿಸಿದ ಟ್ಯುನೇಶಿಯಾ

Update: 2018-06-29 03:56 GMT

ಸಾರ್ಸನಿಕ್ (ರಷ್ಯಾ), ಜೂ. 29: ದ್ವಿತೀಯಾರ್ಧದಲ್ಲಿ ಫಕ್ರುದ್ದೀನ್ ಬೆನ್ ಯೂಸುಫ್ ಮತ್ತು ವಹ್ಬಿ ಖಝ್ರಿ ಗಳಿಸಿದ ಗೋಲುಗಳ ನೆರವಿನಿಂದ ಮೊದಲ ಬಾರಿ ವಿಶ್ವಕಪ್ ಟೂರ್ನಿಗೆ ಪ್ರವೇಶ ಪಡೆದ ಪನಾಮಾ ವಿರುದ್ಧ ಜಿ ಗುಂಪಿನ ಅಂತಿಮ ಪಂದ್ಯದಲ್ಲಿ ಟ್ಯುನೇಶಿಯಾ 2-1 ಗೋಲುಗಳ ಜಯ ಸಾಧಿಸಿತು.

ಈ ಮೂಲಕ ಉತ್ತರ ಆಫ್ರಿಕನ್ ತಂಡ ಕಳೆದ 40 ವರ್ಷಗಳಲ್ಲಿ ವಿಶ್ವಕಪ್ ಟೂರ್ನಿಯ ಮೊದಲ ಜಯದ ದಾಖಲೆ ಬರೆಯಿತು.

ಸರಾಗ ಹಾಗೂ ಸಂಯೋಜಿತ ಪ್ರದರ್ಶನ ನೀಡಿದ ಟ್ಯುನೇಶಿಯಾ ಪಂದ್ಯದುದ್ದಕ್ಕೂ ಪ್ರಾಬಲ್ಯ ಹೊಂದಿದ್ದರೂ, ವಿರಾಮದ ವೇಳೆಗೆ 0-1 ಗೋಲುಗಳಿಂದ ಹಿಂದಿತ್ತು. ಪನಾಮಾದ ಜೋಸ್ ಲೂಯಿಸ್ ರಾಡ್ರಿಗ್ಸ್, ಟ್ಯುನೇಶಿಯಾದ ರಕ್ಷಣಾ ಆಟಗಾರ ಯಾಸಿನ್ ಮೆರಿಚ್ ಅವರನ್ನು ವಂಚಿಸಿ 33ನೇ ನಿಮಿಷದಲ್ಲಿ ಗೋಲು ಗಳಿಸಿ ತಮ್ಮ ತಂಡಕ್ಕೆ ಮುನ್ನಡೆ ಗಳಿಸಿಕೊಟ್ಟರು.

ಮೊದಲಾರ್ಧದಲ್ಲಿ ಹಲವು ಗೋಲು ಗಳಿಸುವ ಅವಕಾಶಗಳನ್ನು ವ್ಯರ್ಥಪಡಿಸಿಕೊಂಡ ಟ್ಯುನೇಶಿಯಾ, ದ್ವಿತೀಯಾರ್ಧದಲ್ಲಿ ತಿರುಗೇಟು ನೀಡಿತು. 66ನೇ ನಿಮಿಷದಲ್ಲಿ ಖಝ್ರಿ ಅದ್ಭುತ ಗೋಲು ಬಾರಿಸಿ ಸಮಬಲಕ್ಕೆ ಕಾರಣರಾದರು. ಟ್ಯುನೇಶಿಯಾಗೆ ಹಲವು ಆತಂಕದ ಕ್ಷಣಗಳನ್ನು ತಂದೊಡ್ಡಿದ ಪನಾಮಾ ಕೊನೆಕ್ಷಣದಲ್ಲಿ ಎಡವಿತು. ಇಂಗ್ಲೆಂಡ್ ಹಾಗೂ ಬೆಲ್ಜಿಯಂ ವಿರುದ್ಧ ಸೋತ ಉಭಯ ತಂಡಗಳು ಟೂರ್ನಿಯಿಂದ ನಿರ್ಗಮಿಸಿದ್ದು, ಈ ಪಂದ್ಯ ಔಪಚಾರಿಕವಾಗಿತ್ತು. ಆದರೂ 37 ಸಾವಿರ ಅಭಿಮಾನಿಗಳಿಂದ ಭರ್ತಿಯಾಗಿದ್ದ ಕ್ರೀಡಾಂಗಣ ಇದು ಮಹತ್ವದ ಪಂದ್ಯ ಎನ್ನುವುದನ್ನು ಸಾರಿ ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News