ಪುಸ್ತಕದ ಜೊತೆಗೆ ಪರೀಕ್ಷೆ: ಕ್ರಾಂತಿಕಾರಕ ಪ್ರಸ್ತಾವ

Update: 2018-06-30 05:16 GMT

ಪ್ರಾಥಮಿಕ ಶಿಕ್ಷಣದಲ್ಲಿ ಮಕ್ಕಳು ಪಠ್ಯ ಪುಸ್ತಕ ನೋಡಿ ಪರೀಕ್ಷೆ ಬರೆಯುವ ವ್ಯವಸ್ಥೆಯನ್ನು ಜಾರಿಗೆ ತರುವ ಇಂಗಿತವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ್ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಶಿಕ್ಷಣದ ಆಮೂಲಾಗ್ರ ಬದಲಾವಣೆಯೆಂದರೆ ಕೇವಲ ಪಠ್ಯ ಪುಸ್ತಕ ವಿಷಯಗಳಲ್ಲಿ ಬದಲಾವಣೆ ಎಂಬ ನಂಬಿಕೆ ಗಾಢವಾಗಿದೆ. ತಮ್ಮ ಚಿಂತನೆಗಳನ್ನು ತುರುಕುವ ಮೂಲಕ ಶಿಕ್ಷಣದಲ್ಲಿ ಅನಗತ್ಯ ಹಸ್ತಕ್ಷೇಪ ಮಾಡಲು ಎಲ್ಲ ರಾಜಕೀಯ ಪಕ್ಷಗಳು ತುದಿಗಾಲಲ್ಲಿ ನಿಂತಿರುತ್ತವೆ. ಆದರೆ ಕಲಿಸುವ ಕ್ರಮದಲ್ಲಿ ಮಾಡಬೇಕಾದ ಬದಲಾವಣೆಗಳನ್ನು ತರಲು ಯಾರೂ ಆಸಕ್ತಿ ತೋರಿಸುತ್ತಿಲ್ಲ. ಈ ಕಾರಣದಿಂದಲೇ, ಕಲಿಕೆಯೆನ್ನುವುದು ಉರು ಹೊಡೆಯುವ ಒಂದು ವಿಧಾನವಾಗಿ ಮಾರ್ಪಟ್ಟಿದೆ. ಶಾಲೆಗಳಲ್ಲಿ ಕಲಿಕೆಯು ಪ್ರಶ್ನೆ ಪತ್ರಿಕೆಗಳನ್ನು ಗುರಿ ಮಾಡಿಕೊಂಡಿರುತ್ತದೆ. ಹೆಚ್ಚಿನ ಶಾಲೆಗಳು ಹಲವು ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಜೋಡಿಸಿ, ಅದರ ಆಧಾರದಲ್ಲೇ ಮಕ್ಕಳಿಗೆ ಉತ್ತರಗಳನ್ನು ಬಾಯಿ ಪಾಠ ಮಾಡಲು ಆದೇಶಿಸುತ್ತವೆ.

ಅಂತಿಮವಾಗಿ ಒಂದು ಶಾಲೆಯ ಹಿರಿಮೆಯನ್ನು ಅಲ್ಲಿನ ವಿದ್ಯಾರ್ಥಿಗಳು ಸಂಗ್ರಹಿಸುವ ಅಂಕಗಳೇ ಸಾರುತ್ತವೆಯಾದುದರಿಂದ, ಅತಿ ಹೆಚ್ಚು ಅಂಕಗಳನ್ನು ಪಡೆಯುವ ವಿಧಾನಗಳನ್ನು ಶಾಲೆಗಳು ಕಲಿಸಿಕೊಡುತ್ತವೆ. ಇದರಿಂದ ಭವಿಷ್ಯದಲ್ಲಿ ಮಕ್ಕಳಿಗೆ ಆಗುವ ಪ್ರಯೋಜನಗಳೇನು ಎನ್ನುವುದನ್ನು ಯಾರು ಒಂದು ಬಾರಿಯೂ ಆಲೋಚಿಸುವುದಿಲ್ಲ. ಇಡೀ ವರ್ಷ ಕಲಿತುದನ್ನು ಮೂರುಗಂಟೆಯೊಳಗೆ ವಾಂತಿ ಮಾಡಬೇಕು. ಅಂದರೆ ಯಾರು ಅತಿ ಹೆಚ್ಚು ಸ್ಮರಣ ಶಕ್ತಿಯನ್ನು ಹೊಂದಿದ್ದಾನೆಯೋ ಅವನೇ ಕಲಿಕೆಯಲ್ಲಿ ಮುಂದಿರುತ್ತಾನೆ. ಅಂದರೆ ಶಾಲೆಯ ವಾರ್ಷಿಕ ಪರೀಕ್ಷೆಯೆನ್ನುವುದು ವಿದ್ಯಾರ್ಥಿಯ ತಿಳುವಳಿಕೆಯ ಪರೀಕ್ಷೆಯಾಗಿರದೆ ಸ್ಮರಣ ಶಕ್ತಿಯ ಪರೀಕ್ಷೆಯಾಗಿ ಮಾರ್ಪಟ್ಟಿದೆ. ಈ ನಿಟ್ಟಿನಲ್ಲಿ ಸಚಿವರು ಪ್ರಸಾಪಿಸಿದ ‘ಪುಸ್ತಕದ ಜೊತೆಗೆ ಪರೀಕ್ಷೆ’ ನಿಜಕ್ಕೂ ಒಂದು ಕ್ರಾಂತಿಕಾರಕ ಆಲೋಚನೆಯಾಗಿದೆ. ಇಂತಹ ಪರೀಕ್ಷೆಗಳು ಶಾಲೆಯಲ್ಲಿ ಕಲಿಕೆಯ ವಿಧಾನವನ್ನೇ ಬದಲಾಯಿಸುವುದರಲ್ಲಿ ಸಂಶಯವಿಲ್ಲ. ಆದುದರಿಂದ ಪರೀಕ್ಷೆಯ ಜೊತೆ ಜೊತೆಗೆ ಕಲಿಕೆಯ ವಿಧಾನವನ್ನು ಅಂಕಪಟ್ಟಿಗೆ ಸೀಮಿತಗೊಳಿಸದೆ, ಜ್ಞಾನ, ಅರಿವಿನ ಕಡೆಗೆ ವಿಸ್ತರಿಸಲು ಯಾವ ರೀತಿಯ ಕ್ರಮ ತೆಗೆದುಕೊಳ್ಳಬಹುದು ಎನ್ನುವುದರ ಕುರಿತಂತೆಯೂ ಚರ್ಚೆಗಳು ನಡೆಯಬೇಕಾಗಿದೆ. ಸಚಿವ ಮಹೇಶ್ ಈ ಪ್ರಸ್ತಾಪವಿಟ್ಟಾಗ ಹಲವರು ಅದನ್ನು ತಮಾಷೆಯಾಗಿ ಸ್ವೀಕರಿಸಿದರು. ‘ಪುಸ್ತಕಗಳನ್ನು ಕೈಗೆ ನೀಡಿದ ಬಳಿಕ ಅದನ್ನು ಪರೀಕ್ಷೆ ಎಂದು ಕರೆಯುವುದು ಹೇಗೆ?’ ಎಂದೂ ಕೆಲವರು ಪ್ರಶ್ನೆಯಿಟ್ಟರು. ಆದರೆ ಮೊತ್ತ ಮೊದಲಾಗಿ ನಾವು ಒಂದು ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಈ ದೇಶದಲ್ಲಿ ಪ್ರತಿ ವರ್ಷ ಪರೀಕ್ಷೆಯ ಒತ್ತಡಗಳಿಂದ ನೂರಕ್ಕೂ ಅಧಿಕ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ಸಾವಿರಾರು ಮಕ್ಕಳು ಮಾನಸಿಕ ಕಾಯಿಲೆಗಳಿಗೆ ಗುರಿಯಾಗುತ್ತಿದ್ದಾರೆ. ಖಿನ್ನತೆ, ಆತಂಕಗಳಿಗೆ ಬಲಿಯಾಗುತ್ತಿದ್ದಾರೆ. ರೈತರ ಆತ್ಮಹತ್ಯೆ ಚರ್ಚೆಯಾದಷ್ಟು ಈ ಎಳೆಮಕ್ಕಳ ಆತ್ಮಹತ್ಯೆಗಳನ್ನು ಸರಕಾರ ಗಂಭೀರವಾಗಿ ತೆಗೆದುಕೊಂಡಿಲ್ಲ. ಮುಖ್ಯವಾಗಿ ಈ ಮಕ್ಕಳ ಆತ್ಮಹತ್ಯೆಯಲ್ಲಿ ಶಿಕ್ಷಣವ್ಯವಸ್ಥೆ, ಶಿಕ್ಷಣ ಸಂಸ್ಥೆಯ ಜೊತೆಗೆ ಪಾಲಕರೂ ಪಾಲುದಾರರಾಗಿದ್ದಾರೆ. ಈ ಕಾರಣದಿಂದ ‘‘ಪರೀಕ್ಷೆಯಲ್ಲಿ ಅನುತ್ತೀರ್ಣ: ವಿದ್ಯಾರ್ಥಿ ಆತ್ಮಹತ್ಯೆ’’ ಎಂಬ ಎರಡು ಸಾಲುಗಳಲ್ಲಿ ಪ್ರಕರಣ ಮುಗಿದು ಹೋಗುತ್ತದೆ. ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿರುವುದು ಹುಡುಗನ ವೈಫಲ್ಯವಾಗಿ ಬಿಂಬಿತವಾಗುತ್ತದೆ. ಆದರೆ ಆತನನ್ನು ಆತ್ಮಹತ್ಯೆಗೆ ಪ್ರೇರೇಪಿಸಿದವರು ಯಾರು? ಅವರ ಮೇಲೆ ಯಾಕೆ ಪ್ರಕರಣ ದಾಖಲಾಗುವುದಿಲ್ಲ? ಒಬ್ಬ ಎಳೆ ಬಾಲಕನಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಸನ್ನಿವೇಶಗಳನ್ನು ನಿರ್ಮಾಣ ಮಾಡುವುದು ಸರಿಯೇ? ಶಿಕ್ಷಣವೆನ್ನುವುದು ವಿದ್ಯಾರ್ಥಿಬದುಕನ್ನು ಅರಳಿಸುವ ಬದಲಿಗೆ ಮುರುಟಿಸುವ ಕೆಲಸವನ್ನು ಯಾಕೆ ಮಾಡುತ್ತಿದೆ? ಸರಿ. ಇಷ್ಟೆಲ್ಲ ಒತ್ತಡಗಳನ್ನು ಎದುರಿಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿಯೂ ದೇಶದ ಲಕ್ಷಾಂತರ ಪದವೀಧರರು ಯಾಕೆ ನಿಷ್ಪ್ರಯೋಜಕರಾಗಿ, ನಿರುದ್ಯೋಗಿಗಳಾಗಿ ಅಲೆಯುತ್ತಿದ್ದಾರೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ನಮಗೆ ಸಚಿವ ಮಹೇಶ್ ಮುಂದಿಟ್ಟಿರುವ ಪ್ರಸ್ತಾವ ಒಂದು ನೆಪವಾಗಬೇಕಾಗಿದೆ. ಇಂದು ಒಬ್ಬ, ತನ್ನ ವೈದ್ಯ ವೃತ್ತಿಯ ಸಂದರ್ಭದಲ್ಲಿ ವೈದ್ಯಕೀಯ ಪುಸ್ತಕಗಳನ್ನು ಅಧ್ಯಯನ ಮಾಡಿಯೇ ರೋಗಿಗಳನ್ನು ಗಮನಿಸುತ್ತಾನೆ.

ಅನುಮಾನ ಬಂದರೆ ಬೇರೆ ಬೇರೆ ಪುಸ್ತಕಗಳನ್ನು ಬಿಡಿಸುತ್ತಾನೆ. ವಕೀಲರುಗಳು ಉರು ಹೊಡೆದುಕೊಂಡು ಕೋರ್ಟ್‌ನಲ್ಲಿ ವಾದಿಸುವುದಿಲ್ಲ. ಅಥವಾ ತಾನು ಪರೀಕ್ಷೆಯಲ್ಲಿ ಉರು ಹೊಡೆದ ಉತ್ತರಗಳನ್ನೇ ನಂಬಿಕೊಂಡು ವಾದ ಮಾಡುವುದಿಲ್ಲ. ಆತನೂ ವಾದಿಸುವ ಸಂದರ್ಭದಲ್ಲಿ ಪುಸ್ತಕಗಳನ್ನು ಮುಂದಿಡುತ್ತಾನೆ. ನಿಜ ಬದುಕಿನಲ್ಲಿ ಉರು ಹೊಡೆದ ಯಾವ ವಿಷಯಗಳೂ ಅಗತ್ಯಕ್ಕೆ ಬರುವುದಿಲ್ಲ. ಹೀಗಿರುವಾಗ, ಕಲಿಕೆಯ ವಿಷಯ, ವಿಧಾನಗಳನ್ನು ಬದಲಿಸುತ್ತಾ, ಪರೀಕ್ಷೆಯ ವಿಧಾನಗಳನ್ನೂ ಬದಲಿಸಬೇಕಾಗಿದೆ. ಇದರಿಂದ ವಿದ್ಯಾರ್ಥಿಗಳು ಪರೀಕ್ಷೆಯ ಒತ್ತಡಗಳಿಗೆ ಸಿಲುಕುವುದು ತಪ್ಪುತ್ತದೆ. ಆತಂಕ, ಖಿನ್ನತೆಯಿಂದ ನರಳುವುದೂ ತಪ್ಪುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಆತ್ಮಹತ್ಯೆಗಳಿಗೂ ಇದು ತಡೆಯಾಗುತ್ತದೆ. ಪಠ್ಯದಲ್ಲಿ ಏನಿದೆಯೋ ಅದನ್ನು ಉರು ಹೊಡೆಸದೇ, ವಿದ್ಯಾರ್ಥಿಗಳು ಆ ಪಠ್ಯದ ಮೂಲಕ ಸ್ವತಂತ್ರವಾಗಿ ಯೋಚಿಸುವುದನ್ನು ಅಧ್ಯಾಪಕರು ಕಲಿಸಬೇಕಾಗಿದೆ. ‘ಕುವೆಂಪು’ ಬಗ್ಗೆಯೇ ಪಠ್ಯವೊಂದು ಇದೆ ಎಂದು ಕೊಳ್ಳೋಣ. ‘ಕುವೆಂಪು ಎಲ್ಲಿ ಹುಟ್ಟಿದರು?’ ಎನ್ನುವುದು ಮಾಹಿತಿ. ಅದನ್ನು ನೆನಪಿನಲ್ಲಿಡಬೇಕಾಗುತ್ತದೆ. ಆದರೆ ‘ಕುವೆಂಪು ಪದ್ಯದಿಂದ ನೀನು ಕಲಿತ ನೀತಿಯೇನು?’ ಎಂಬ ಪ್ರಶ್ನೆಯನ್ನು ಕೇಳಿದಾಗ ವಿದ್ಯಾರ್ಥಿ ಯೋಚಿಸಿ ಉತ್ತರಿಸಬೇಕಾಗುತ್ತದೆ. ಪಠ್ಯ ಪುಸ್ತಕ ಜೊತೆಗಿಟ್ಟಾಕ್ಷಣ ಆತ ಉತ್ತರಿಸಲು ಸಾಧ್ಯವಾಗುತ್ತದೆ ಎಂದು ಹೇಳಲಾಗುವುದಿಲ್ಲ. ಆತ ಸ್ವತಂತ್ರವಾಗಿ ಪಠ್ಯ ಪುಸ್ತಕದಾಚೆಗೆ ಆಲೋಚಿಸಬೇಕು ಮತ್ತು ಆಲೋಚಿಸಿದ್ದನ್ನು, ತಿಳಿದುದನ್ನು ಬರೆಯಬೇಕು. ಹೀಗೆ ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ಸ್ವತಂತ್ರವಾಗಿ ಯೋಚಿಸುವುದನ್ನು ಕಲಿಸಬೇಕು. ಅತನೊಳಗಿರುವ ನಿಜವಾದ ತಿಳುವಳಿಕೆಯನ್ನು ಹೊರಗೆಳೆಯಬೇಕು. ಮಾಹಿತಿಗಳು ಈ ಇಂಟರ್‌ನೆಟ್ ಕಾಲದಲ್ಲಿ ಸುಲಭವಾಗಿ ಸಿಗುತ್ತವೆ. ಆದುದರಿಂದ ನಮಗೆ ವಿದ್ಯಾರ್ಥಿಗಳು ಮಾಹಿತಿಗಳನ್ನು ಸಂಗ್ರಹಿಸಿಟ್ಟುಕೊಂಡಿರುವ ಕಂಪ್ಯೂಟರ್ ಆಗುವ ಅಗತ್ಯವಿಲ್ಲ. ಬದಲಿಗೆ ಜ್ಞಾನ, ತಿಳುವಳಿಕೆಯನ್ನು ಹೊಂದಿರುವ ಸ್ವತಂತ್ರ ಚಿಂತಕನಾಗಿ ಆತ ರೂಪುಗೊಳ್ಳಬೇಕು. ಇದು ಎಲ್ಲ ಕ್ಷೇತ್ರಗಳಿಗೂ ಅನ್ವಯಿಸುತ್ತದೆ.

ಈ ನಿಟ್ಟಿನಲ್ಲಿ ಮಹೇಶ್ ಒಂದು ಪ್ರಸ್ತಾವವನ್ನಷ್ಟೇ ನಾಡಿನ ಮುಂದೆ ಇಟ್ಟಿದ್ದಾರೆ. ಇದನ್ನು ಶಿಕ್ಷಣ ತಜ್ಞರು ಗಂಭೀರವಾಗಿ ತೆಗೆದುಕೊಂಡು ಹೇಗೆ ಅನುಷ್ಠಾನಗೊಳಿಸಬಹುದು ಎನ್ನುವ ಬಗ್ಗೆ ಚರ್ಚೆ ನಡೆಸಬೇಕು. ಇಂತಹದೊಂದು ಪ್ರಯೋಗಕ್ಕೆ ಶಿಕ್ಷಣ ಕ್ಷೇತ್ರವನ್ನು ಒಡ್ಡುವ ಮೊದಲು ಅದಕ್ಕೆ ಪೂರಕವಾಗಿ ಶಿಕ್ಷಕರನ್ನು ಕೂಡ ತಯಾರಿಸಬೇಕಾಗಿದೆ. ಸ್ವತಂತ್ರವಾಗಿ ಆಲೋಚಿಸುವ ಶಕ್ತಿಯಿರುವ ಶಿಕ್ಷಕರ ಕೊರತೆಯೇ ನಮ್ಮ ಮುಂದಿರುವ ದೊಡ್ಡ ಸವಾಲಾಗಿದೆ. ಮೊದಲು ಆ ಕೊರತೆಯನ್ನು ತುಂಬಿಕೊಂಡು, ಬಳಿಕ ಇಡೀ ಶಿಕ್ಷಣ ವ್ಯವಸ್ಥೆಯನ್ನು ಬದಲಿಸುವ ಕಡೆಗೆ ಸರಕಾರ ಮನ ಮಾಡಬೇಕು. ಮೊದಲು ಸಣ್ಣ ಹಂತದಲ್ಲಿ ಇದನ್ನು ಆರಂಭಿಸಿ, ಬಳಿಕ ಅದನ್ನು ಎಲ್ಲ ಹಂತಗಳಿಗೂ ವಿಸ್ತರಿಸಬೇಕು. ಇದು ಯಶಸ್ವಿಯಾಗಿ ಜಾರಿಗೊಂಡರೆ, ನಕಲು ಮಾಡಿದರು ಎಂದು ವಿದ್ಯಾರ್ಥಿಗಳನ್ನು ಶಿಕ್ಷಿಸುವ ಅಗತ್ಯವಿರುವುದಿಲ್ಲ. ವಿದ್ಯಾರ್ಥಿಗಳು ಅದೇನೋ ಮಹಾಪರಾಧ ಮಾಡಿದವರಂತೆ ಡಿಬಾರ್ ಆಗುವ ಸಂದರ್ಭ ಎದುರಾಗುವುದಿಲ್ಲ. ಆತ್ಮಹತ್ಯೆಯಂತಹ ಪ್ರಯತ್ನಗಳಿಗೂ ತಡೆಯಾಗಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಶಾಲೆಯೆನ್ನುವುದು ನಾಲ್ಕು ಗೋಡೆಗಳಾಚೆಗೆ ತೆರೆದುಕೊಳ್ಳುತ್ತದೆ. ಜ್ಞಾನವೆನ್ನುವುದು ತೆರೆದ ಪುಸ್ತಕವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News