ಉನ್ನತ ಶಿಕ್ಷಣ: ಕೇಂದ್ರೀಕರಣ, ಖಾಸಗೀಕರಣ ಮತ್ತು ಮತೀಯವಾದೀಕರಣ

Update: 2018-06-29 19:03 GMT

ಭಾಗ-2

2016ರಲ್ಲಿ ಬಿಜೆಪಿ ಸರಕಾರವು ಆರೆಸ್ಸೆಸ್ ಪ್ರೇರಿತ, ಬಂಡವಾಳಶಾಹಿ ಪರವಾದ ಹೊಸ ಶಿಕ್ಷಣ ನೀತಿಯನ್ನು (ಎನ್‌ಇಪಿ 2016) ಪ್ರಕಟಿಸಿತ್ತು. ಆದರೆ ಈ ಎನ್‌ಇಪಿ 2016 ಆರೆಸ್ಸೆಸ್‌ನ ಹಿಂದುತ್ವ ಸಿದ್ಧಾಂತಗಳನ್ನು ಸಂಪೂರ್ಣವಾಗಿ ಒಳಗೊಂಡಿರದ ಕಾರಣ ಮೋದಿ ಸರಕಾರ ಈ ಹೊಸ ಶಿಕ್ಷಣ ನೀತಿಯನ್ನು ಅನುಮೋದಿಸಲಿಲ್ಲ. ಆದರೆ ಇದನ್ನು ದಾಖಲೆಯಾಗಿಟ್ಟುಕೊಂಡು ಹೊಸ ಶಿಕ್ಷಣ ನೀತಿಯನ್ನು ರೂಪಿಸಲು ಕಸ್ತೂರಿ ರಂಗನ್ ನೇತೃತ್ವದಲ್ಲಿ ಹೊಸ ಸಮಿತಿಯನ್ನು ರಚಿಸಿದೆ. ಇದರ ವರದಿ ಇನ್ನೂ ಪ್ರಕಟಗೊಂಡಿಲ್ಲ

ಇಂಡಿಯಾದಲ್ಲಿ ಶಿಕ್ಷಣದ ಖಾಸಗೀಕರಣದ ಕುರಿತಾದ ಸಮಿತಿಗಳು:

1. ಪುನನ್ಯ ಕಮಿಟಿ-1992-93

ನವ ಉದಾರೀಕರಣದ ನಂತರ ಬಿಡುಗಡೆಗೊಂಡ ಯುಜಿಸಿ ರಚಿಸಿದ ಪುನನ್ಯ ಸಮಿತಿಯು ಉನ್ನತ ಶಿಕ್ಷಣದಲ್ಲಿ ಕೇಂದ್ರ, ರಾಜ್ಯ ಸರಕಾರಗಳು ಹಣಕಾಸಿನ ನೆರವನ್ನು ಕೊಡುವುದನ್ನು ಮುಂದುವರಿಸಬೇಕು ಎಂದು ಶಿಫಾರಸು ಮಾಡುತ್ತದೆಯಾದರೂ ವಿಶ್ವವಿದ್ಯಾನಿಲಯಗಳು ಹಣಕಾಸಿನ ವ್ಯವಸ್ಥೆಯನ್ನು ಸ್ವತಃ ತಾವೇ ಮಾಡಿಕೊಳ್ಳಬೇಕು, ಅವಶ್ಯಕತೆ ಉಂಟಾದರೆ ತನ್ನ ಸ್ಥಳವನ್ನು, ಸಭಾಂಗಣವನ್ನು, ತರಗತಿ ಕೊಠಡಿಗಳನ್ನು, ಆಟದ ಮೈದಾನವನ್ನು, ಕಂಪ್ಯೂಟರ್ ಸೇವೆಯನ್ನು, ಅತಿಥಿ ಗೃಹವನ್ನು, ಹಾಸ್ಟೆಲ್‌ಗಳನ್ನು ಬಾಡಿಗೆ ಕೊಡಬೇಕು ಮತ್ತು ಆ ಮೂಲಕ ಸಂಚಯಗೊಂಡ ಹಣವನ್ನು ಉನ್ನತ ಶಿಕ್ಷಣಕ್ಕೆ ಬಳಸಬೇಕು ಎಂದು ಪ್ರಸ್ತಾಪಿಸುತ್ತದೆ. ಜೊತೆಗೆ ನಿಯಮಿತವಾಗಿ ಬೋಧನಾ ಶುಲ್ಕ ಮತ್ತು ಇತರೇ ಶುಲ್ಕವನ್ನು ಹೆಚ್ಚಿಸಬೇಕು ಎಂದೂ ಹೇಳುತ್ತದೆ. 

2. ಡಾ. ಸ್ವಾಮಿನಾಥನ್ ಕಮಿಟಿ-1992

ಉನ್ನತ ಶಿಕ್ಷಣಕ್ಕೆ ವಿವಿಧ ಮೂಲಗಳಿಂದ ಹಣಕಾಸನ್ನು ಕ್ರೋಡೀಕರಿಸಬೇಕೆಂದು ಹೇಳುತ್ತದೆ. ಉದ್ಯಮಗಳಿಂದ ಮತ್ತು ಇತರ ಸಂಸ್ಥೆಗಳಿಂದ ಶಿಕ್ಷಣ ಸೆಸ್ ತೆರಿಗೆ ಮೂಲಕ ಆರ್ಥಿಕ ಸಂಪನ್ಮೂಲ ಪಡೆದುಕೊಳ್ಳಬೇಕು ಎಂದು ಹೇಳುತ್ತದೆ

3. ಬಿರ್ಲಾ-ಅಂಬಾನಿ ಕಮಿಟಿ-2001

ಬಂಡವಾಳಶಾಹಿಗಳಾದ ಮುಕೇಶ್ ಅಂಬಾನಿ ಮತ್ತು ಕುಮಾರಮಂಗಲಂ ಬಿರ್ಲಾ ಅವರು ಎಪ್ರಿಲ್ 2001ರಂದು ಉನ್ನತ ಶಿಕ್ಷಣದ ಕುರಿತು ತಮ್ಮ ವರದಿ ಸಲ್ಲಿಸಿದರು. ಆ ವರದಿಯಲ್ಲಿ ಶಿಕ್ಷಣವು ಒಂದು ಲಾಭದಾಯಕ ಉದ್ಯಮ ಎಂದು ಹೇಳುತ್ತಾರೆ. ಉನ್ನತ ಶಿಕ್ಷಣವನ್ನು ಸಂಪೂರ್ಣ ಖಾಸಗೀಕರಣಗೊಳಿಸಬೇಕು ಆ ಮೂಲಕ ಲಾಭದಾಯಕ ಮಾರುಕಟ್ಟೆಯನ್ನು ಸೃಷ್ಟಿಸಬೇಕು, ಈ ವಲಯವನ್ನು ಕಾರ್ಪೊರೇಟ್ ಸಂಸ್ಥೆಗಳು ನಿಯಂತ್ರಿಸಬೇಕು. ಬಳಕೆದಾರನೇ ಪಾವತಿದಾರ ಎನ್ನುವ ನೀತಿಯಡಿ ವಿದ್ಯಾರ್ಥಿಗಳಿಂದಲೇ ಶಿಕ್ಷಣದ ಸಂಪೂರ್ಣ ಶುಲ್ಕವನ್ನು ಭರಿಸಬೇಕು ಎಂದು ಹೇಳುತ್ತದೆ. ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ನೀಡಲು ಸಾಲದ ವ್ಯವಸ್ಥೆಯನ್ನು ಕಲ್ಪಿಸಬೇಕು ಖಾಸಗಿ ವಿಶ್ವ ವಿದ್ಯಾನಿಲಯ ಮಸೂದೆಯನ್ನು ಅನುಮೋದಿಸಬೇಕು ಎಂದು ಶಿಫಾರಸು ಮಾಡುತ್ತದೆ

ಮೋದಿ ಸರಕಾರ ಜಾರಿಗೊಳಿಸಲು ಮುಂದಾಗಿರುವ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಇತರ ಮಸೂದೆಗಳು

ಕೇಂದ್ರೀಯ ವಿಶ್ವವಿದ್ಯಾನಿಲಯಗಳ (ಆ್ಯಕ್ಟ್ 2009ರ) ತಿದ್ದುಪಡಿ ಮಸೂದೆ-2015

ಈ ತಿದ್ದುಪಡಿಗೊಂಡ ಮಸೂದೆಯಲ್ಲಿ ಎಲ್ಲಾ ಕೇಂದ್ರೀಯ ವಿವಿಗಳು ಏಕರೂಪವಾದ ಸಾಮಾನ್ಯ ಪ್ರವೇಶ ನೀತಿಗಳನ್ನು ಹೊಂದಿರಬೇಕು, ಸಾಮಾನ್ಯವಾದ, ಏಕರೂಪದ ಪಠ್ಯಕ್ರಮವನ್ನು ((common syllabus)) ಹೊಂದಿರಬೇಕು ಎಂದು ತಿದ್ದುಪಡಿ ಮಾಡಲಾಗಿದೆ. ಈ ಪರಿಷ್ಕೃತ-2015 ಮಸೂದೆಯ ಅನುಸಾರ ಅಧ್ಯಾಪಕರನ್ನು ದೇಶದ ಯಾವುದೇ ರಾಜ್ಯದಲ್ಲಿರುವ ಇತರೇ ಕೇಂದ್ರೀಯ ವಿವಿಗೆ ವರ್ಗಾಯಿಸಬಹುದೆಂದು ತಿದ್ದುಪಡಿ ಮಾಡಲಾಗಿದೆ. 40 ಸದಸ್ಯರ ವಿದ್ಯಾರ್ಥಿ ಕೌನ್ಸಿಲ್‌ಗೆ 20 ವಿದ್ಯಾರ್ಥಿಗಳನ್ನು ಅಕಡಮಿಕ್ ಕೌನ್ಸಿಲ್‌ನ ಮೂಲಕ ನೇಮಿಸಬೇಕು ಎಂದು ತಿದ್ದುಪಡಿ ಮಾಡಲಾಗಿದೆ.

ಇದುವರೆಗೂ ಈ ಕೇಂದ್ರೀಯ ವಿವಿಗಳು ವೈವಿಧ್ಯ ಸಂಸ್ಕೃತಿಯ, ಬಹುರೂಪಿಯಾದ, ಸ್ಥಳೀಯ ಸಾಂಸ್ಕೃತಿಕ ವೈವಿಧ್ಯತೆಯನ್ನು ಒಳಗೊಂಡ ಶಿಕ್ಷಣವನ್ನು ಬೋಧಿಸುವ ಕೇಂದ್ರಗಳಾಗಿದ್ದವು ಅಥವಾ ಆ ಮಾದರಿಯನ್ನು ಬಯಸಲಾಗಿತ್ತು. ಅವುಗಳ ಆಡಳಿತವು ವಿಕೇಂದ್ರೀಕರಣವಾಗಿರಬೇಕೆಂದು ಶಿಕ್ಷಣ ತಜ್ಞರ ಆಶಯವಾಗಿತ್ತು. ಆದರೆ ಈ ಮೋದಿ ಸರಕಾರದ ಪರಿಷ್ಕರಿಸಿದ ಮಸೂದೆಯ ಅನುಸಾರ ಕೇಂದ್ರೀಯ ವಿವಿಗಳಲ್ಲಿ ಕೇಂದ್ರೀಕೃತಗೊಂಡ ಆಡಳಿತಕ್ಕೆ ಅನುಗುಣವಾಗಿ, ಏಕಸಂಸ್ಕೃತಿಯ, ಸಜಾತೀಯ ಮಾದರಿಯ ಶಿಕ್ಷಣ ನೀತಿಯನ್ನು ರೂಪಿಸಲಾಗುತ್ತಿದೆ. ಇದರಿಂದ ಸ್ಥಳೀಯವಾದ, ಪ್ರಾದೇಶಿಕ ವೈವಿಧ್ಯತೆಯನ್ನೊಳಗೊಂಡ ಶಿಕ್ಷಣ ತನ್ನ ಕೊನೆ ಉಸಿರೆಳೆಯುತ್ತದೆ. ಪ್ರೊ.ಜೋಯಾ ಹಸನ್ ಅವರು ‘‘ಪ್ರತಿಯೊಂದು ಕೇಂದ್ರೀಯ ವಿವಿಯು ತನ್ನದೇ ಆದ ವೈವಿಧ್ಯತೆಯನ್ನು, ಅನನ್ಯತೆಯನ್ನು ಕಳೆದುಕೊಳ್ಳುತ್ತದೆ. ಉದಾಹರಣೆಗೆ ದಿಲ್ಲಿ ವಿವಿ ಆ್ಯಕ್ಟ್ (1922) ಹೊಸ ಚಿಂತನೆ, ಮಾದರಿಯ ಭಾರತದ ಶಿಕ್ಷಣದ ಅವಶ್ಯಕತೆಗಳ ಆಶಯವನ್ನು ಹೊಂದಿತ್ತು ಮತ್ತು ವಿಶಾಲವಾದ ಕಾಲೇಜುಗಳ ನೆಟ್‌ವರ್ಕ ಅನ್ನು ಒಳಗೊಂಡಿತ್ತು. ಜೆಎನ್‌ಯು ವಿವಿ ಆ್ಯಕ್ಟ್ (1966) ರಾಷ್ಟ್ರೀಯ ಐಕ್ಯತೆ, ವೈಜ್ಞಾನಿಕ ಮನೋಭಾವ, ಮಾನವೀಯತೆಯ ಆಶಯಗಳನ್ನು ಒಳಗೊಂಡಿತ್ತು. ಈ ಆ್ಯಕ್ಟ್ಟ್‌ಗಳು ಅವರ ವಿವಿ ಪಠ್ಯಪುಸಕ್ತಗಳನ್ನು, ಬೋಧನಾ ಕ್ರಮವನ್ನು, ಅಕಡಮಿಕ್ ನೈತಿಕತೆಯನ್ನು, ಸಂಶೋಧನೆಯನ್ನು ರೂಪಿಸಿದ್ದವು ಎಂದು ವಿವರಿಸುತ್ತಾರೆ. ಪ್ರೊ. ಅಜಯ್ ಪಟ್ನಾಯಕ್ ಅವರು ‘‘ಅಧ್ಯಾಪಕರನ್ನು ಬೇರೆ ಯಾವುದೇ ಕೇಂದ್ರೀಯ ವಿವಿಗೆ ವರ್ಗಾವಣೆ ಮಾಡಲು ಅನುಕೂಲ ಕಲ್ಪಿಸುವ ಈ ತಿದ್ದುಪಡಿ ಆ ಮೂಲಕ ಅಧ್ಯಾಪಕರ ಸಾಂಸ್ಕೃತಿಕ ಚಟುವಟಿಕೆಗಳನ್ನು ನಿಯಂತ್ರಿಸಲು ಹೊರಟಿದೆ ಮತ್ತು ಮುಖ್ಯವಾಗಿ ವರ್ಗಾವಣೆ ದಂಧೆಯನ್ನು ಉದ್ಘಾಟಿಸುತ್ತದೆ’’ ಎಂದು ಹೇಳುತ್ತಾರೆ. ಡಾ.ವಿಕ್ರಮ್ ಅವರು ಈ ವರ್ಗಾವಣೆ ಸಂಬಂಧಿತ ತಿದ್ದುಪಡಿಯು ಭಿನ್ನಮತದ ಧ್ವನಿಯನ್ನು ಮೌನಗೊಳಿಸುತ್ತದೆ, ಶಿಕ್ಷೆಯನ್ನಾಗಿಯೂ ಬಳಸಿಕೊಳ್ಳಲಾಗುತ್ತದೆ.’’ ಎಂದು ಹೇಳುತ್ತಾರೆ.

 ಎಲ್ಲಾ ಕೇಂದ್ರೀಯ ವಿವಿಗಳಲ್ಲಿ ಏಕರೂಪದ, ಸಾಮಾನ್ಯ ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳನ್ನು ರೂಪಿಸಬೇಕು ಎನ್ನುವ ತಿದ್ದುಪಡಿಯಂತೂ ಸ್ಥಳೀಯ ಸಾಂಸ್ಕೃತಿಕ ವೈವಿಧ್ಯತೆಯನ್ನು ನಾಶಪಡಿಸುತ್ತದೆ. ಈ ಸ್ಥಳೀಯ ವೈವಿಧ್ಯತೆಯನ್ನೊಳಗೊಂಡ ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳು, ವಿಷಯಗಳು ಆಯಾ ಕಾಲಕ್ಕೆ ಅನುಗುಣವಾಗುವಂತೆ ಹೊಸ ನುಡಿಕಟ್ಟುಗಳನ್ನು ಕಟ್ಟುತ್ತಿದ್ದವು. ಅನ್ವೇಷಣಾತ್ಮಕವಾದ ಸಂಶೋಧನೆಗಳಿಗೆ ವೇದಿಕೆಯಾಗುತ್ತಿದ್ದವು. ಆದರೆ ಈ ತಿದ್ದುಪಡಿಯ ಮೂಲ ಸಾಮಾನ್ಯ ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳ ರಚನೆಯೂ ಬದಲಾಗುತ್ತದೆ. ಆಗ ಪಠ್ಯಗಳಲ್ಲಿ ಜಾಗತಿಕ ಮಟ್ಟದ ಹೊಸ ಮಾರುಕಟ್ಟೆ ಯುಗದ ತಂತ್ರಗಳನ್ನು, ಮ್ಯಾನೇಜ್‌ಮೆಂಟ್ ಕಸರತ್ತುಗಳನ್ನು, ತಂತ್ರಜ್ಞಾನದ ಕುಶಲತೆಯನ್ನು ಮಾತ್ರ ಬೋಧಿಸಲಾಗುತ್ತದೆ. ಬಹುತ್ವದ ಮಾನವೀಯ ಮೌಲ್ಯಗಳಿಗೆ ಕೊಡಲಿಯೇಟು ಕೊಡುತ್ತದೆ. ವಿದ್ಯಾರ್ಥಿಯ ಆಯ್ಕೆಯ ಸ್ವಾತಂತ್ರ ಮೊಟಕುಗೊಳ್ಳುತ್ತದೆ.

ಈ ತಿದ್ದುಪಡಿ ಮಸೂದೆಯು ಮಾನವ ಸಂಪನ್ಮೂಲ ಮಂತ್ರಿಗಳ ನೇತೃತ್ವದಲ್ಲಿ ಉಪಕುಲಪತಿಗಳ ಕೌನ್ಸಿಲ್ ಅನ್ನು ಸ್ಥಾಪಿಸಬೇಕೆಂದು ಶಿಫಾರಸು ಮಾಡಿದೆ. ಇದು ಮತ್ತೊಮ್ಮೆ ಆಡಳಿತ ಸ್ವರೂಪವನ್ನು ಕೇಂದ್ರೀಕರಣಗೊಳಿಸುತ್ತದೆ ಮತ್ತು ಅಕಡಮಿಕ್ ಸ್ವಾತಂತ್ರಕ್ಕೆ ಧಕ್ಕೆ ತರುತ್ತದೆ. ಸ್ವಾಯುತ್ತತೆಯ ಆಶಯಗಳನ್ನು ನಾಶಗೊಳಿಸುತ್ತದೆ. ಇಂಡಿಯನ್ ಇನ್ಸಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ((IIM)) ಮಸೂದೆ-2015

ಪ್ರೊ. ಬೆಹರೂಜ್ ನಾರಿಮನ್ ಅವರು ‘‘ಅವಶ್ಯಕತೆಯ ಆಧಾರದ ಮೇಲೆ ಬದಲಾವಣೆಯನ್ನು ತಂದರೆ ಅದು ಸಹಜವೆನಿಸಿಕೊಳ್ಳುತ್ತದೆ. ಆದರೆ ವ್ಯಕ್ತಿ ಅಥವಾ ಸರಕಾರ ತನ್ನಲ್ಲಿ ಅಧಿಕಾರವಿದೆ ಅದನ್ನು ಚಲಾಯಿಸಲು ಬದಲಾವಣೆ ತರುತ್ತೇನೆ ಎಂದು ಹೊರಟರೆ ಅದು ಅಪಾಯಕಾರಿ ನಡೆಯಾಗುತ್ತದೆ. ಜಾಗತಿಕ ಮಟ್ಟದ ಶಿಕ್ಷಣ ಸಂಸ್ಥೆಗಳನ್ನು ರಾಜಕಾರಣಿಗಳ ವೈಯುಕ್ತಿಕ ನಿರ್ಧಾರದ ಮೇಲೆ ಕಟ್ಟುವುದಿಲ್ಲ, ಬದಲಾಗಿ ಜೀವಮಾನವಿಡಿ ಸಂಸ್ಥೆಯೊಳಗಿನ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವ್ಯಕ್ತಿಗಳು ತಮ್ಮ ಈ ಸಂಸ್ಥೆಯನ್ನು ರೂಪಿಸಲು ತೆಗೆದುಕೊಂಡ ನಿರ್ಧಾರಗಳಿಂದ, ಅವರ ನಿಸ್ವಾರ್ಥ ಸೇವೆಯಿಂದ ವಿಶ್ವ ಮಟ್ಟದ ಸಂಸ್ಥೆಗಳು ಕಟ್ಟಲ್ಪಡುತ್ತವೆ. ಆದರೆ ಎನ್‌ಡಿಎ ಸರಕಾರದ ಈ ಐಐಎಂ-2015 ಮಸೂದೆ ತನ್ನ ಈಗಿನ ಸ್ವರೂಪದಲ್ಲಿ ಇದೇ ಸಂಸ್ಥೆಯನ್ನು ಕಟ್ಟಿದ ವ್ಯಕ್ತಿಗಳು ಮತ್ತು ತಂಡದಿಂದ ಸ್ವಾಯತ್ತತೆಯ ಅಧಿಕಾರವನ್ನು ಕಿತ್ತುಕೊಂಡು ತನ್ನ ಬಳಿ ಕೇಂದ್ರೀಕರಿಸುತ್ತದೆ’’ ಎಂದು ಹೇಳುತ್ತಾರೆ.

ಋಣಾತ್ಮಕ ಬದಲಾವಣೆಗಾಗಿ, ಹೊಸ ಸಂವೇದನೆಗಳಿಗಾಗಿ, ತಾತ್ವಿಕವಾಗಿ ಈ ಮಸೂದೆಯನ್ನು ತಂದಂತಿಲ್ಲ. ಆರ್ಥಿಕವಾಗಿ, ಶೈಕ್ಷಣಿಕವಾಗಿ, ಆಡಳಿತಾತ್ಮಕವಾಗಿ ಸ್ವಾಯತ್ತತೆಯ ಸಂಸ್ಥೆಯಾದ ಐಐಎಂ ಅನ್ನು ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆಯ ಅಧೀನಕ್ಕೆ ಒಳಪಡಿಸುವುದು ಮೋದಿ ಸರಕಾರದ ಮೂಲ ಉದ್ದೇಶ. ಉದಾಹರಣೆಗೆ ಐಐಎಂ ಸಂಸ್ಥೆಯಿಂದ ತೇರ್ಗಡೆ ಹೊಂದಿದ ವಿದ್ಯಾರ್ಥಿಗೆ ‘ಸ್ನಾತಕೋತ್ತರ ಡಿಪ್ಲೊಮಾ ಪದವಿ’ ನೀಡಲಾಗುತ್ತಿದೆ. ಈ ಹೊಸ ಮಸೂದೆಯ ಅನುಸಾರ ಐಐಎಂ-ಎಂಬಿಎ ಪದವಿಯನ್ನು ಕೊಡಲಾಗುತ್ತದೆ. ಅಂದರೆ ಈ ಮಸೂದೆಯು ಐಐಎಂ-ಎಂಬಿಎ ಅಧ್ಯಯನವನ್ನು ಸ್ನಾತಕೋತ್ತರ ((Post Graduate)) ಎಂದು ಮಾನ್ಯ ಮಾಡುವುದಿಲ್ಲ. ಇದರ ಉದ್ದೇಶವೂ ಸ್ಪಷ್ಟವಾಗಿಲ್ಲ. ತನ್ನಲ್ಲಿ ಅಧಿಕಾರವಿದೆ ಅದಕ್ಕೋಸ್ಕರ ಬದಲಾವಣೆ ಎನ್ನುವ ಸರ್ವಾಧಿಕಾರದ ಧೋರಣೆ ಇಲ್ಲಿ ಸ್ಪಷ್ಟವಾಗಿ ಕಂಡುಬರುತ್ತಿದೆ.

  ಒಮ್ಮೆ ಈ ಐಐಎಂ ಮಸೂದೆ-2015 ಅನುಮೋದನೆಗೊಂಡರೆ ಐಐಎಂ ಸಂಸ್ಥೆಗೆ ಛೇರ್ಮನ್, ನಿರ್ದೇಶಕರು, ಪ್ರಾಧ್ಯಾಪಕರ ನೇಮಕ, ವೇತನ ನಿಗದಿ, ಮೂಲ ಭೂತ ಸೌಲಭ್ಯಗಳು ಕುರಿತಾಗಿ ಬೋರ್ಡ್ ಆಫ್ ಗವರ್ನರ್ಸ್‌ಗಳು ಇನ್ನು ಮುಂದೆ ಮಾನವ ಸಂಪನ್ಮೂಲ ಇಲಾಖೆಯ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ. ಈ ಮಸೂದೆಯ ಕಲಮು 17 (2)ರಲ್ಲಿ ‘‘ನಿರ್ದೇಶಕರನ್ನು ಸಂದರ್ಶಕರ (ರಾಷ್ಟ್ರಪತಿಗಳು) ಅನುಮೋದನೆಯ ನಂತರ ಕೇಂದ್ರ ಸರಕಾರವು ನೇಮಿಸುತ್ತದೆ ಮತ್ತು ಈ ನೇಮಕಾತಿಯು ಕರಾರು ಮತ್ತು ಶರತ್ತುಗಳನ್ನು ಒಳಗೊಂಡಿರುತ್ತದೆ’’. ಕಲಮು 21 (1,2) ರಲ್ಲಿ ‘‘ಈ ಮಸೂದೆಯ ಸಮರ್ಥ ಕಾರ್ಯನಿರ್ವಹಣೆಗಾಗಿ ಕೇಂದ್ರ ಸರಕಾರದ ನಿರ್ಧಾರವು ಅಂತಿಮವಾಗಿರುತ್ತದೆ.’’ ಇದು ಸ್ವತಂತ್ರವಾಗಿ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಐಐಎಂ ಸಂಸ್ಥೆಯನ್ನು ಕೇಂದ್ರ ಸರಕಾರವು ತನ್ನ ಅಧಿಕಾರದ ವ್ಯಾಪ್ತಿಯೊಳಗೆ ತರಲು ಬಯಸುತ್ತಿದೆ. ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಕೇಂದ್ರೀಕರಣಗೊಳಿಸುತ್ತಿದೆ. ಇದುವರೆಗೂ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳುವ, ಸ್ವತಂತ್ರವಾಗಿ, ಆಡಳಿತಾತ್ಮಕವಾಗಿ ಕಾರ್ಯ ನಿರ್ವಹಿಸುವ ಅಧಿಕಾರವನ್ನು ಹೊಂದಿದ್ದ ಬೋರ್ಡ್ ಆಫ್ ಗವರ್ನರ್‌ಗಳು ಈ ಮಸೂದೆ ಅನುಮೋದನೆಗೊಂಡರೆ ಕೇಂದ್ರ ಸರಕಾರದ ಆದೇಶಗಳನ್ನು ಜಾರಿಗೊಳಿಸುವ ಯಾಂತ್ರಿಕ ಕಾರ್ಯಕ್ಕೆ ಮಾತ್ರ ಸೀಮಿತಗೊಳ್ಳುತ್ತಾರೆ ಮತ್ತು ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ರಬ್ಬರ್ ಸ್ಟಾಂಪ್ ಆಗಿ ಕಾರ್ಯ ನಿರ್ವಹಿಸಬೇಕಾಗುವ ಪರಿಸ್ಥಿತಿ ಉಂಟಾಗುತ್ತದೆ.

ಈ ಮಸೂದೆಯು ಕೇಂದ್ರ ಸರಕಾರ ಮತ್ತು ಐಐಎಂ ಸಂಸ್ಥೆಯ ನಡುವೆ ಒಂದು ಸಂಯೋಜಕ ಸಮಿತಿಯನ್ನು ನೇಮಿಸಲು ಶಿಫಾರಸು ಮಾಡಿದೆ. ಇದು ನೇರವಾಗಿ ಅಧಿಕಾರಶಾಹಿಗಳ ಕಸರತ್ತಿನ ಶಕ್ತಿ ಕೇಂದ್ರಕ್ಕೆ ದಾರಿ ಮಾಡಿಕೊಡುತ್ತದೆ. ನಂತರ ಪ್ರತಿಯೊಂದು ಸಂಗತಿಯನ್ನು ‘ಪಾಲಿಸಿಗೆ ಸಂಬಂಧಪಟ್ಟಿದ್ದು’ ಎನ್ನುವ ಶರಾಗೆ ಒಳಪಡಿಸಿ ಎಲ್ಲ ಪ್ರಮುಖ ನಿರ್ಧಾರಗಳ ಜವಾಬ್ದಾರಿಯನ್ನು ಕೇಂದ್ರಕ್ಕೆ ದಾಟಿಸಲಾಗುತ್ತದೆ.

ಇದಕ್ಕೆ ಹಿನ್ನೆಲೆ ಇದೆ. ಡಿಸೆಂಬರ್ 2015ರಂದು ನೈರೋಬಿಯಲ್ಲಿ ನಡೆಯಲಿರುವ ಡಬ್ಲೂಟಿಒನ ವಿಶ್ವ ಸಮ್ಮೇಳನದಲ್ಲಿ ಅದರ ಸದಸ್ಯ ರಾಷ್ಟ್ರವಾಗಿರುವ ಭಾರತವು ಭಾಗವಹಿಸಲಿದೆ. ಗ್ಯಾಟ್ಸ್ (ಜನರಲ್ ಅಗ್ರಿಮೆಂಟ್ ಆನ್ ಟ್ರೇಡ್ ಇನ್ ಸರ್ವಿಸಸ್) ಎನ್ನುವ ಒಡಂಬಡಿಕೆಗೆ ಸಹಿ ಹಾಕಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿತ್ತು. ಇದರಲ್ಲಿ ಶಿಕ್ಷಣ ಕ್ಷೇತ್ರವೂ ಸಹ ಸೇರಿದೆ. ಒಮ್ಮೆ ಈ ಒಡಂಬಡಿಕೆಗೆ ಸಮ್ಮತಿ ಸೂಚಿಸಿದ ನಂತರ ಇಲ್ಲಿನ ಸ್ವಾಯತ್ತ ಸಂಸ್ಥೆಗಳು, ವಿದ್ಯಾನಿಲಯಗಳು, ವಿಶ್ವ ವಿದ್ಯಾನಿಲಯಗಳು ತಮ್ಮ ಸ್ವತಂತ್ರ, ವಿಕೇಂದ್ರೀಕೃತ ಸ್ವರೂಪವನ್ನು ಕಳೆದುಕೊಂಡು ಜಾಗತಿಕ ಮಾರುಕಟ್ಟೆಯ ತಂತ್ರಗಳ ವಿಧಿ ವಿಧಾನಗಳಿಗೆ ಒಳಪಡಬೇಕಾಗುತ್ತದೆ. ಆ ಮೂಲಕ ಕಲೋನಿಯಲ್ ಶಕ್ತಿಗಳಿಗೆ ಭಾರತದ ಬಾಗಿಲು ಮುಕ್ತವಾಗಿ ತೆರೆಯಲ್ಪಡುತ್ತದೆ. ಈ ಜಾಗತಿಕ ಬಂಡವಾಳಶಾಹಿಗಳಿಗೆ ಮುಕ್ತವಾದ ವೇದಿಕೆಗಳನ್ನು, ಅವಕಾಶಗಳನ್ನು ಕಲ್ಪಿಸಲು ಮೋದಿ ನೇತೃತ್ವದ ಕೇಂದ್ರ ಸರಕಾರ ಎಲ್ಲಾ ಸ್ವಾಯತ್ತ ಶಿಕ್ಷಣ ಸಂಸ್ಥೆಗಳನ್ನು ಕೇಂದ್ರೀಕರಣಗೊಳಿಸಿ ತನ್ನ ಹಿಡಿತಕ್ಕೆ ಬಂದ ನಂತರ ಈ ಕಲೋನಿಯಲ್ ವಿದೇಶಿ ಸಂಸ್ಥೆಗಳಿಗೆ ಪರಭಾರೆ ಮಾಡಿಕೊಡುವ ತಂತ್ರವೂ ಅಡಗಿದೆ. ಈ ಗುಪ್ತ ಕಾರ್ಯಸೂಚಿಯ ಭಾಗವಾಗಿಯೇ ಐಐಎಂ ಅನ್ನು ಕೇಂದ್ರೀಕರಣಗೊಳಿಸುವುದಕ್ಕೆ ಈ ‘ಐಐಎಂ ಮಸೂದೆ-2015’ಯನ್ನು ತರಾತುರಿಯಲ್ಲಿ ಅನುಮೋದನೆ ಪಡೆಯಲು ಷಡ್ಯಂತ್ರಗಳನ್ನು ರಚಿಸಿದ್ದಾರೆ. ಒಮ್ಮೆ ಅನುಮೋದನೆಗೊಂಡ ನಂತರ ಐಐಎಂ ಮೂಲಕ ಪಡೆಯುವ ಜ್ಞಾನವು ಒಂದು ಜಾಗತಿಕ ಮಾರುಕಟ್ಟೆಯ ಸರಕಾಗುತ್ತದೆ. ಮೋದಿ ನೇತೃತ್ವದ ಭಾರತ ಸರಕಾರಕ್ಕೆ ಬಂಡವಾಳಶಾಹಿಗಳ ಕೃಪಾಕಟಾಕ್ಷದ ನೆರವು ಹರಿದು ಬರುತ್ತದೆ. ಅದರ ಖುಣ ತೀರಿಸಲು ಮತ್ತಷ್ಟು ಉನ್ನತ ಶಿಕ್ಷಣ ಸಂಸ್ಥೆಗಳನ್ನು ಖಾಸಗೀಕರಣ ಗೊಳಿಸಿ ಕಲೋನಿಯಲ್ ಶಕ್ತಿಗಳಿಗೆ ಉಡುಗೊರೆಯಾಗಿ ಕೊಡಲಾಗುತ್ತದೆ. ಮತ್ತೊಂದೆಡೆ ಮೋದಿ ಸರಕಾರದ ಈ ಏಕಪಕ್ಷೀಯ ಕ್ರಮಗಳು ಆರೆಸ್ಸೆಸ್‌ನ ಹಿಂದುತ್ವ ರಾಷ್ಟ್ರೀಯತೆ ಸಿದ್ಧಾಂತವನ್ನು, ರಾಷ್ಟ್ರಪ್ರೇಮದ ಹೆಸರಿನಲ್ಲಿ ತನ್ನ ಸನಾತನವಾದಿ ಬ್ರಾಹ್ಮಣಶಾಹಿ ಅಜೆಂಡಾಗಳನ್ನು ಉನ್ನತ ಶಿಕ್ಷಣದೊಳಗೆ ಸಂಪೂರ್ಣವಾಗಿ ಹರಡಲು ಸಹಕಾರಿಯಾಗಲಿವೆ. 1920-40ರಲ್ಲಿ ಇಟಲಿಯ ಮಸಲೋನಿ ಮತ್ತು ಜರ್ಮನಿಯ ಹಿಟ್ಲರ್‌ನ ಫ್ಯಾಶಿಸ್ಟ್ ಆಡಳಿತ ಉನ್ನತ ಶಿಕ್ಷಣವನ್ನು ಬಳಸಿಕೊಂಡು ತಮ್ಮ ರಾಷ್ಟ್ರೀಯವಾದ, ನಾಜೀವಾದವನ್ನು ಶಾಶ್ವತವಾಗಿ ಜಾರಿಗೊಳಿಸಿದವು. ಆರೆಸ್ಸೆಸ್ ಇಂದು ಅದೇ ಮಾದರಿಯನ್ನು ಅಳವಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಇದಕ್ಕೆ ಪೂರಕವಾಗಿ ಮೋದಿ ಸರಕಾರವು ಇಂಡಿಯಾದ ಶಿಕ್ಷಣದ ಫೆಡರಲ್ ವ್ಯವಸ್ಥೆಯನ್ನು ನಾಶಗೊಳಿಸಿ ಹಿಂದುತ್ವ ಸಿದ್ಧ್ದಾಂತದ ಮೂಲಕ ಸಂಪೂರ್ಣ ಮತೀಯವಾದಗೊಳಿಸಲು ಅವಸರದಲ್ಲಿದೆ. ಶಿಕ್ಷಣ ಇಲಾಖೆಯ ಮುಖ್ಯ ಆಯಕಟ್ಟಿನ ಸ್ಥಳಗಳಲ್ಲಿ ಆರೆಸ್ಸೆಸ್‌ನ್ನು ನೇಮಿಸುತ್ತಿದೆ.

ಆದರೆ ಎಲ್ಲವೂ ಅಂದುಕೊಂಡಷ್ಟು ಸರಳವೂ ಇಲ್ಲ. ಇಲ್ಲಿನ ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಜನಪರ ಸಂಘಟನೆಗಳು ಆರೆಸ್ಸೆಸ್‌ನ ಈ ಫ್ಯಾಶಿಸಂ ಸಿದ್ಧಾಂತಗಳನ್ನು ಜಾರಿಗೊಳಿಸಲು ಅವಕಾಶ ಕೊಡುವುದಿಲ್ಲ ಎನ್ನುವ ಆಶಾವಾದ ಇನ್ನೂ ಜೀವಂತವಾಗಿದೆ.

Writer - ಬಿ. ಶ್ರೀಪಾದ ಭಟ್

contributor

Editor - ಬಿ. ಶ್ರೀಪಾದ ಭಟ್

contributor

Similar News