ಒತ್ತಡದಿಂದ ನಿಮ್ಮ ಶರೀರದ ಮೇಲೆ ಉಂಟಾಗುವ ಪರಿಣಾಮಗಳು ಗೊತ್ತೇ....?

Update: 2018-06-30 12:20 GMT

ಒತ್ತಡ,ಅದು ಎಲ್ಲ ಕಡೆಯೂ ಇದೆ. ಒಂದು ಅಂದಾಜಿನಂತೆ ವಿಶ್ವದಲ್ಲಿಯ ಶೇ.80ರಷ್ಟು ಜನರು ದಿನದಲ್ಲಿ ಒಂದಲ್ಲ ಒಂದು ಸಂದರ್ಭದಲ್ಲಿ ಒತ್ತಡವನ್ನು ಅನುಭವಿಸುತ್ತಿರುತ್ತಾರೆ..

15ರಿಂದ 25ರ ವಯೋಗುಂಪಿನಲ್ಲಿಯ ಹಲವರಿಗೆ ಒತ್ತಡವನ್ನು ಎದುರಿಸಲು ನೆರವಿನ ಅಗತ್ಯವಿರುತ್ತದೆ. ಈ ವಯಸ್ಸಿನಲ್ಲಿ ಒತ್ತಡವನ್ನು ನಿಭಾಯಿಸುವುದನ್ನು ಅವರು ಕಲಿತುಕೊಳ್ಳದಿದ್ದರೆ ಮುಂದೆ ಅದು ಕಠಿಣವಾಗುತ್ತದೆ.

ಜನರು ಹೆಚ್ಚಾಗಿ ಕೆಲಸದ ಸ್ಥಳಗಳಲ್ಲಿ ಒತ್ತಡಕ್ಕೆ ಸಿಲುಕುತ್ತಾರೆ. ಯುವಜನರೇ ಹೆಚ್ಚಾಗಿ ಒತ್ತಡಗಳಿಗೆ ಬಲಿಪಶುಗಳಾಗುತ್ತಾರೆ. ಒತ್ತಡವು ಸಾಂಕ್ರಾಮಿಕವೂ ಆಗಿದೆ! ಹೌದು,ನೀವು ಸರಿಯಾಗಿಯೇ ಓದಿದ್ದೀರಿ. ನೀವು ಒತ್ತಡಕ್ಕೊಳಗಾದ ವ್ಯಕ್ತಿಯ ಜೊತೆಯಲ್ಲಿದ್ದಾಗ ನಿಮ್ಮ ನರಕೋಶಗಳೂ ಅವರದೇ ವರ್ತನೆಯನ್ನು ಪ್ರತಿಫಲಿಸುತ್ತವೆ.

ಒತ್ತಡ ಎಂದರೇನು? ಅದು ಜೀವನದ ಅನುಭವಗಳು,ಅಪಾಯ ಮತ್ತು ಬೆದರಿಕೆಗಳಿಗೆ ಸ್ಪಂದಿಸುವ ಮತ್ತು ನಮ್ಮನ್ನು ರಕ್ಷಿಸುವ ನಮ್ಮ ಶರೀರದ ವಿಧಾನವಾಗಿದೆ. ಒತ್ತಡವು ಆರೋಗ್ಯಕರ ಮಟ್ಟದಲ್ಲಿದ್ದಾಗ ಅದು ಸವಾಲುಗಳನ್ನು ಎದುರಿಸಲು, ಏಕಾಗ್ರತೆ ಮತ್ತು ಎಚ್ಚರಿಕೆಯಿಂದಿರಲು ಮತ್ತು ನಮ್ಮಲ್ಲಿ ಶಕ್ತಿ ಕುಂದದಂತೆ ಮಾಡುವಲ್ಲಿ ನೆರವಾಗುತ್ತದೆ.

ಆದರೆ ಒಂದು ಮಿತಿಯನ್ನು ದಾಟಿದರೆ ಒತ್ತಡವು ನಮ್ಮಲ್ಲಿ ಉದ್ವೇಗ, ತಳಮಳ,ತಲೆನೋವು,ಎದೆನೋವು,ಖಿನ್ನತೆ,ಲೈಂಗಿಕ ಬಯಕೆಯ ನಷ್ಟ, ಬಳಲಿಕೆ, ಸಿಟ್ಟು ಇತ್ಯಾದಿಗಳಿಗೆ ಕಾರಣವಾಗುತ್ತದೆ. ಒತ್ತಡ ಮ್ಮ ಶರೀರದಲ್ಲಿನ ಪ್ರತಿಯೊಂದೂ ವ್ಯವಸ್ಥೆಯ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ. ಈ ಬಗ್ಗೆ ಮಾಹಿತಿಗಳಿಲ್ಲಿವೆ.......

► ರೋಗ ನಿರೋಧಕ ಶಕ್ತಿ

ಒತ್ತಡವು ನಮ್ಮ ಶರೀರದ ನಿರೋಧಕ ಶಕ್ತಿಯಿಂದ ತುರ್ತು ಕ್ರಿಯೆಯನ್ನು ಪ್ರಚೋದಿಸುತ್ತದೆ. ತುರ್ತು ಕ್ರಮ ಅಗತ್ಯವಾಗಿರುವ ಸೋಂಕುಗಳು ಮತ್ತು ತೆರೆದ ಗಾಯಗಳ ಪ್ರಕರಣಗಳಲ್ಲಿ ಇದು ನೆರವಾಗಬಹುದು. ಆದರೆ ಶರೀರವು ದೀರ್ಘ ಕಾಲ ಒತ್ತಡದಲ್ಲಿದ್ದರೆ ಈ ಪರಿಣಾಮವು ತಿರುವುಮುರುವಾಗಬಹುದು. ನಿರಂತರವಾಗಿ ಒತ್ತಡದಲ್ಲಿರುವವರು ಸಾಮಾನ್ಯ ಶೀತ ಮತ್ತು ಫ್ಲೂಗೆ ತುಂಬ ಸುಲಭವಾಗಿ ಗುರಿಯಾಗುತ್ತಾರೆ. ಒತ್ತಡದ ಹಾರ್ಮೋನ್‌ಗಳು ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತವೆ ಮತ್ತು ಪ್ರತಿವರ್ತನೆಯ ಸಾಮರ್ಥ್ಯವನ್ನೂ ತಗ್ಗಿಸುತ್ತವೆ. ಅನಾರೋಗ್ಯದಿಂದ ಚೇತರಿಸಿಕೊಳ್ಳಲು ಶರೀರವು ಹೆಚ್ಚಿನ ಸಮಯವನ್ನು ಮತ್ತು ಶಕ್ತಿಯನ್ನು ತೆಗೆದುಕೊಳ್ಳುತ್ತದೆ.

► ಸ್ನಾಯುಗಳ ವ್ಯವಸ್ಥೆ

ನಾವು ಒತ್ತಡಕ್ಕೆ ಸಿಲುಕಿದಾಗ ನಮ್ಮ ಸ್ನಾಯುಗಳು ಬಿಗಿತಕ್ಕೊಳಗಾಗುತ್ತವೆ. ನಾವು ಒತ್ತಡಮುಕ್ತರಾದಾಗ ಅವು ಮೊದಲಿನ ಸ್ಥಿತಿಗೆ ಬರುತ್ತವೆ. ಹೀಗಾಗಿ ಒತ್ತಡವು ನಿರಂತರವಾಗಿದ್ದರೆ ಏನಾಗುತ್ತದೆ ಎನ್ನುವುದನ್ನು ಊಹಿಸಿಕೊಳ್ಳಿ. ಹಾಗಾದಾಗ ಸ್ನಾಯುಗಳು ನಿರಂತರ ಒತ್ತಡದ ಸ್ಥಿತಿಯಲ್ಲಿರುವುದರಿಂದ ತಲೆನೋವು,ಸಂದು ಗಾಯಗಳು,ಸ್ನಾಯು ಸೆಳೆತ,ಬೆನ್ನುನೋವು,ಭುಜದ ನೋವು ಅಥವಾ ಇಡೀ ಶರೀರದಲ್ಲಿ ನೋವಿಗೆ ಕಾರಣವಾಗುತ್ತದೆ.ಇಂತಹ ಸ್ಥಿತಿಯಲ್ಲಿ ವ್ಯಾಯಾಮ ಮಾಡಲು ಕೂಡ ಸಾಧ್ಯವಾಗುವುದಿಲ್ಲ ಮತ್ತು ವೈದ್ಯಕೀಯ ನೆರವು ಅಗತ್ಯವಾಗುತ್ತದೆ.

► ಜೀರ್ಣಾಂಗ ವ್ಯವಸ್ಥೆ

 ಒತ್ತಡವು ಆಹಾರವು ನಮ್ಮ ಶರೀರದಲ್ಲಿ ಹೇಗೆ ಸಾಗುತ್ತದೆ ಎನ್ನುವುದರ ಮೇಲೆ ಪರಿಣಾಮವನ್ನು ಬೀರುತ್ತದೆ ಮತ್ತು ಮಲಬದ್ಧತೆ, ಅತಿಸಾರ, ವಾಂತಿ, ಹೊಟ್ಟೆನೋವು, ವಾಕರಿಕೆ ಇತ್ಯಾದಿಗಳಿಗೆ ಕಾರಣವಾಗುತ್ತದೆ. ನಾವು ಒತ್ತಡದಲ್ಲಿದ್ದಾಗ ನಮ್ಮ ಶರೀರದ ಶಕ್ತಿಯ ಅಗತ್ಯಕ್ಕನುಗುಣವಾಗಿ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಹೆಚ್ಚಿಸಲು ಯಕೃತ್ತು ಹೆಚ್ಚಿನ ಸಕ್ಕರೆಯನ್ನು ವಿಭಜಿಸುತ್ತದೆ. ಇದು ಒಂದು ನಿರ್ದಿಷ್ಟ ಮಿತಿಯನ್ನು ದಾಟಿದರೆ ಅದು ಮಧುಮೇಹಕ್ಕೆ ಆಹ್ವಾನ ನೀಡುತ್ತದೆ. ತ್ವರಿತ ಉಸಿರಾಟ,ಹೆಚ್ಚಿದ ಎದೆಬಡಿತ ಮತ್ತು ಹಾರ್ಮೋನ್‌ಗಳ ಸ್ರವಿಸುವಿಕೆಯಲ್ಲಿ ಹೆಚ್ಚಳ ಇವೆಲ್ಲವೂ ಜೀರ್ಣರಸಗಳ ಉತ್ಪಾದನೆಗೆ ವ್ಯತ್ಯಯವನ್ನುಂಟು ಮಾಡುತ್ತವೆ ಮತ್ತು ತನ್ಮೂಲಕ ಎದೆಯುರಿ ಮತ್ತು ಆಮ್ಲೀಯತೆಯ ಸಾಧ್ಯತೆಯನ್ನು ಹೆಚ್ಚಿಸುತ್ತವೆ.

► ಹೃದಯರಕ್ತನಾಳದ ವ್ಯವಸ್ಥೆ

 ನಾವು ಒತ್ತಡದಲ್ಲಿದ್ದಾಗ ನಮ್ಮ ಹೃದಯ ಬಡಿತ ಹೆಚ್ಚುತ್ತದೆ. ಹೀಗಾದಾಗ ಸ್ನಾಯುಗಳು ಮತ್ತು ಮಿದುಳು ಸೇರಿದಂತೆ ಶರೀರದ ಜೀವಕೋಶಗಳು ಹೆಚ್ಚಿನ ಆಮ್ಲಜನಕವನ್ನು ಕೇಳುತ್ತವೆ ಮತ್ತು ಅದಕ್ಕಾಗಿ ಹೃದಯವು ಹೆಚ್ಚಿನ ರಕ್ತವನ್ನು ಪಂಪ್ ಮಾಡುತ್ತದೆ. ಇದು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಅಧಿಕ ರಕ್ತದೊತ್ತಡವು ಆಘಾತಕ್ಕೆ ಗುರಿಯಾಗುವ ಅಪಾಯವನ್ನು ಹೆಚ್ಚಿಸುತ್ತದೆ.

► ಉಸಿರಾಟ ವ್ಯವಸ್ಥೆ

ಒತ್ತಡದ ಹಾರ್ಮೋನ್‌ಗಳು ನಮ್ಮ ಉಸಿರಾಟ ವ್ಯವಸ್ಥೆಯಲ್ಲಿ ಹಾವಳಿಯನ್ನೇ ಸೃಷ್ಟಿಸುತ್ತವೆ. ಹೆಚ್ಚು ಆಮ್ಲಜನಕಯುಕ್ತ ರಕ್ತವು ಶರೀರದಾದ್ಯಂತ ಪೂರೈಕೆಯಾಗಬೇಕಾದ್ದರಿಂದ ಉಸಿರಾಟವು ತೀವ್ರಗೊಳ್ಳುತ್ತದೆ.  ವ್ಯಕ್ತಿ ಮೊದಲೇ ಉಸಿರಾಟದ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಇದು ಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ.

► ಕೇಂದ್ರ ನರಮಂಡಲ ವ್ಯವಸ್ಥೆ

ಇದು ನಮ್ಮ ಶರೀರದಲ್ಲಿನ ಎಲ್ಲ ವ್ಯವಸ್ಥೆಗಳಲ್ಲಿ ಪ್ರಮುಖವಾಗಿದೆ. ಶರೀರಕ್ಕೆ ಒತ್ತಡದ ಅನುಭವವಾದಾಗ ಅದು ಹೇಗೆ ವರ್ತಿಸಬೇಕು ಎನ್ನುವುದನ್ನು ಕೇಂದ್ರ ನರಮಂಡಲವು ನಿರ್ದೇಶಿಸುತ್ತದೆ. ಕಾರ್ಟಿಸಾಲ್ ಮತ್ತು ಅಡ್ರೆನಲಿನ್ ಎಂಬ ಒತ್ತಡದ ಹಾರ್ಮೋನ್‌ಗಳನ್ನು ಬಿಡುಗಡೆಗೊಳಿಸುವಂತೆ ಹೈಪೊಥೆಲಮಸ್ ಅಥವಾ ಮಸ್ತಿಷ್ಕ ನಿಮ್ನಾಂಗವನ್ನು ಪ್ರಚೋದಿಸುತ್ತದೆ. ಈ ಹಾರ್ಮೋನ್‌ಗಳು ಶರೀರದಾದ್ಯಂತ ಕಾರ್ಯ ನಿರ್ವಹಿಸಿ ರಕ್ತದಲ್ಲಿಯ ಹೆಚ್ಚಿನ ಆಮ್ಲಜನಕವನ್ನು ಹೀರಿಕೊಂಡು ಅದನ್ನು ಸಾಗಿಸುವ ಮೂಲಕ ತುರ್ತು ಸ್ಪಂದನವನ್ನು ಪ್ರಚೋದಿಸುತ್ತವೆ. ನಾವು ಒತ್ತಡದಿಂದ ಮುಕ್ತಗೊಂಡಾಗ ಶರೀರವು ಸಹಜ ಸ್ಥಿತಿಗೆ ಮರಳಲು ಹೈಪೊಥೆಲಮಸ್ ಮತ್ತೆ ಸಂದೇಶಗಳನ್ನು ಕಳುಹಿಸಬೇಕಾಗುತ್ತದೆ. ತೀವ್ರ ಒತ್ತಡದಲ್ಲಿದ್ದಾಗ ಕೆಲವೊಮ್ಮೆ ಅದರ ಈ ಸಾಮರ್ಥ್ಯವು ಕ್ಷೀಣಿಸಿರುತ್ತದೆ ಮತ್ತು ಇದು ಇಡೀ ಶರೀರಕ್ಕೆ ಹಾನಿಯನ್ನುಂಟು ಮಾಡಬಹುದು. ತೀವ್ರ ಒತ್ತಡದಲ್ಲಿದ್ದಾಗ ಅತಿಯಾಗಿ ತಿನ್ನುವಿಕೆ,ಮದ್ಯಪಾನ,ಮಾದಕ ದ್ರವ್ಯ ಸೇವನೆ,ಸಾಕಷ್ಟು ಆಹಾರ ಸೇವಿಸದಿರುವ ಮತ್ತು ಸಮಾಜದಿಂದ ವಿಮುಖತೆ ಇತ್ಯಾದಿ ಅಭ್ಯಾಸಗಳು ಇಲ್ಲಿಂದ ಆರಂಭಗೊಳ್ಳುತ್ತವೆ.

► ಸಂತಾನೋತ್ಪತ್ತಿ ವ್ಯವಸ್ಥೆ

 ಪುರುಷರು ಒತ್ತಡದಲ್ಲಿದ್ದಾಗ ಟೆಸ್ಟೋಸ್ಟರೋನ್ ಹಾರ್ಮೋನ್ ಅಧಿಕ ಪ್ರಮಾಣದಲ್ಲಿ ಸ್ರವಿಸಲ್ಪಡುತ್ತದೆ. ಆದರೆ ಅದು ಅಲ್ಲಿಗೇ ನಿಲುವುದಿಲ್ಲ,ಅಂದರೆ ವ್ಯಕ್ತಿಯು ಕಾಮನೆಗಳನ್ನು ಕಳೆದುಕೊಳ್ಳುತ್ತಾನೆ. ಒತ್ತಡದಲ್ಲಿರುವ ಶರೀರವು ಸದಾ ಬಳಲಿರುವುದು ಮತ್ತು ಶಕ್ತಿಯ ಕೊರತೆಯಾಗಿರುವುದು ಸಹ ಇದಕ್ಕೆ ಕಾರಣವಾಗಿರುತ್ತದೆ. ಹೆಚ್ಚು ಗಂಭೀರ ಸ್ಥಿತಿಯಲ್ಲಿ ಇದು ನಿಮಿರು ದೌರ್ಬಲ್ಯಕ್ಕೂ ಕಾರಣವಾಗಬಹುದು. ಮಹಿಳೆಯರು ಒತ್ತಡದಲ್ಲಿದ್ದಾಗ ಅದು ಅನಿಯಮಿತ ಋತುಚಕ್ರಕ್ಕೆ ಕಾರಣವಾಗುವ ಜೊತೆಗೆ ಹೆಚ್ಚಿನ ನೋವನ್ನು ಅನುಭವಿಸುವಂತೆ ಮಾಡುತ್ತದೆ. ಅಲ್ಲದೇ ಅವರಲ್ಲಿ ಬಯಕೆಗಳು ನಷ್ಟವಾಗುತ್ತವೆ.

 ಕೆಲವು ಸರಳ ಮಾರ್ಗಗಳನ್ನು ಅನುಸರಿಸುವ ಮೂಲಕ ಒತ್ತಡವನ್ನು ತಗ್ಗಿಸಿಕೊಳ್ಳಬಹುದು. ಕನಿಷ್ಠ ಐದು ನಿಮಿಷಗಳ ಕಾಲ ಧ್ಯಾನ ಮತ್ತು ಆಳವಾದ ಉಸಿರಾಟ,ಒತ್ತಡದ ಸಮಯದಲ್ಲಿ ಶಾಂತಚಿತ್ತವನ್ನು ಕಾಯ್ದಕೊಳ್ಳುವುದು, ಅಗತ್ಯವಿದ್ದರೆ ಆಪ್ತ ಸಮಾಲೋಚಕರು ಅಥವಾ ಪ್ರೀತಿಪಾತ್ರರ ಭೇಟಿ,ಶರೀರದ ಅಗತ್ಯಗಳನ್ನು ತಿಳಿದುಕೊಳ್ಳುವುದು ಇವು ಈ ಕೆಲವು ಸರಳ ಪರಿಹಾರಗಳಾಗಿವೆ. ನಮಗೆ ಏನು ಸಿಕ್ಕಿದೆಯೋ ಅದರಲ್ಲಿ ತೃಪ್ತಿ ಪಟ್ಟುಕೊಳ್ಳುವದರಿಂದ ಮತ್ತು ಹೆಚ್ಚಿನದರ ಹಿಂದೆ ಬೀಳದಿರುವುದರಿಂದ ಅನಗತ್ಯ ಒತ್ತಡವನ್ನು ದೂರವಿಡಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News