ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು: ನಿರ್ಮಲಾನಂದ ಸ್ವಾಮೀಜಿ

Update: 2018-06-30 13:58 GMT

ಬೆಂಗಳೂರು, ಜೂ. 30: ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ಸಿಗುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿ ಕೊಳ್ಳಬೇಕೆಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಕರೆ ನೀಡಿದರು .

ಶನಿವಾರ ಜಯನಗರದ ಚಂದ್ರಗುಪ್ತ ಮೌರ್ಯ ಆಟದ ಮೈದಾನದಲ್ಲಿ ರಕ್ಷಾ ಫೌಂಡೇಶನ್‌ವತಿಯಿಂದ ಆಯೋಜಿಸಿದ್ದ ‘ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗೆ ಬಡತನ ಅಡ್ಡಿಯಾಗುವುದಿಲ್ಲ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರಿಗೆ ಒಂದು ಹೊತ್ತಿನ ಊಟಕ್ಕೂ ಗತಿ ಇರಲಿಲ್ಲ, ಹೀಗಿದ್ದರೂ ಅವರು ಮಹಾನ್ ವಿಜ್ಞಾನಿ, ರಾಷ್ಟ್ರಪತಿಯಾಗಿ ಆಡಳಿತ ನಡೆಸಿದರು. ಇಂತಹ ಮಹಾನ್ ಸಾಧಕರ ಜೀವನ ಮೌಲ್ಯಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಬೆಂಗಳೂರು ಆಧ್ಯಾತ್ಮಿಕ ಹಾಗೂ ಆಧುನಿಕತೆಗೆ ಹೆಸರುವಾಸಿಯಾಗಿದ್ದು, ಇದನ್ನು ಮುಂದುವರೆಸಲು ರಕ್ಷಾ ಫೌಂಡೇಶನ್ ಶ್ರಮಿಸುತ್ತಿದೆ. ಈ ಫೌಂಡೇಶನ್ ನೀಡುತ್ತಿರುವ ನೆರವನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕೆಂದರು.

ನಮ್ಮ ದೇಶದ ಮಕ್ಕಳಿಗೆ ಉತ್ತಮ ಭವಿಷ್ಯ ಇದೆ ಎಂದು ಅಮೆರಿಕ ಮಾಜಿ ಅಧ್ಯಕ್ಷ ಒಬಾಮಾ ಭಾರತದ ಮಕ್ಕಳ ಬುದ್ಧಿವಂತಿಕೆಯನ್ನು ಮೆಚ್ಚಿಕೊಂಡಿದ್ದರು ಎಂದ ಅವರು, ವಿದ್ಯಾರ್ಥಿಗಳು ತಮ್ಮ ಬೌದ್ಧಿಕ ಮಟ್ಟವನ್ನು ಹೆಚ್ಚಿಸಿಕೊಂಡು ದೇಶದ ಕೀರ್ತಿ ಪತಾಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿಯಬೇಕೆಂದು ನುಡಿದರು.

ಶಾಸಕ ಆರ್.ಅಶೋಕ್ ಮಾತನಾಡಿ, ಶಾಲಾ ವಿದ್ಯಾರ್ಥಿಗಳು ಶ್ರದ್ಧೆಯಿಂದ ವ್ಯಾಸಂಗ ಮಾಡಿ, ಐಎಎಸ್, ಐಪಿಎಸ್‌ನಂತಹ ಹುದ್ದೆಗಳಲ್ಲಿ ಸೇವೆ ಸಲ್ಲಿಸಬೇಕು. ಕಳೆದ 7 ವರ್ಷಗಳಿಂದ ರಕ್ಷಾ ಫೌಂಡೇಶನ್ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ಬುಕ್‌ಗಳನ್ನು ವಿತರಿಸುತ್ತಿದೆ. ಇದರಿಂದ ಈ ಭಾಗದ ಶಾಲಾ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನಂತಕುಮಾರ್, ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧ, ಬಿಬಿಎಂಪಿ ಸದಸ್ಯೆ ಎಚ್.ಸಿ.ನಾಗರತ್ನ, ರಕ್ಷಾ ಫೌಂಡೇಶನ್ ಸಂಸ್ಥಾಪಕ ಸಿ.ಕೆ. ರಾಮಮೂರ್ತಿ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News